ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

  ನಿನ್ನೆ    ಎ.ಆರ್.ಮಣಿಕಾಂತ್ ಅವರ ಜನುಮದಿನ. ಅವರ ಅಪ್ಪ ಅಂದ್ರೆ ಆಕಾಶ, ಭಾವತೀರಯಾನ, ಗಿಪ್ಟೆಡ್, ಅಮ್ಮ ಹೇಳಿದ ಎಂಟು ಸುಳ್ಳುಗಳು,ಹಾಡು ಹುಟ್ಟಿದ ಸಮಯ ಎಲ್ಲಾ ಪುಸ್ತಕಗಳು ದಾಖಲೆಯ ಮಾರಾಟವಾಗಿವೆ.
ಪತ್ರಿಕೆಯಲ್ಲಿ ಬರೆಯುತ್ತಿದ್ದ ಈ ಗುಲಾಬಿಯು ನಿನಗಾಗಿ ಅಪಾರ ಜನಮನ್ನಣೆ ಗಳಿಸಿತ್ತು.
ನನಗೆ ಮೊದಲಿನಿಂದಲೂ ಈ ಓದು, ಸಂಗೀತ ಇವೆರೆಡು ಇದ್ದರೆ ಸ್ವಗ೯ ಬೇರೆಲ್ಲೂ ಇಲ್ಲ ನನ್ನ ಬಳಿಯೇ ಇದೆ ಎಂಬ ಭಾವ ಮೂಡುತ್ತದೆ.ಹಾಡು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ತೊಟ್ಟಿಲ ಕಂದನಿಂದ ಮುಪ್ಪಿನವರೆಗೂ ಎಲ್ಲರಿಗೂ ಇಷ್ಟವೇ.ತೊಟ್ಟಿಲಲಿ ತೂಗುವಾಗ ಲಾಲಿಹಾಡು ಕೇಳುತ್ತಾ ಬೆಳೆದ ನಮಗೆ ಸಂಗೀತ ಸಮ್ಮೋಹನಗೊಳಿಸುವ ತನ್ನ ಲೋಕಕ್ಕೆ ಕರೆದೊಯ್ಯುವ ಮಧುರ ಮಾಂತ್ರಿಕ ಶಕ್ತಿ ಇದೆ.
ಇನ್ನು ಪುಸ್ತಕದ ಬಗ್ಗೆ ಹೇಳುವುದಾದರೆ ಶೀರ್ಷಿಕೆಯೇ ಹೇಳುವಂತೆ ಹಾಡು ಹುಟ್ಟಿದ ಸಮಯ ಅದರಡಿಯಲ್ಲಿ ಕಾಡುವ ಹಾಡಿಗೊಂದು ಕನ್ನಡಿ ಎಷ್ಟು ಸುಂದರ ಸಾಲು, ಸಂಗೀತ ಲಾಂಛನ ಹೊತ್ತ ಆಕರ್ಷಕ ಮುಖಪುಟ ವಿನ್ಯಾಸ,ನೀಲಿಮಾ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ‌
ಮೊದಲೆಲ್ಲಾ ಈ ಸಮೂಹ ಸಂವಹನ ವಿದ್ಯುನ್ಮಾನ ಮಾಧ್ಯಮಗಳ ಪ್ರಭಾವಳಿ ಅಷ್ಟಿರಲಿಲ್ಲ ಆಗೆಲ್ಲ ನಾವು ಗೀತೆಗಳ ಪ್ರಸಾರವಾಗುವ ಸಮಯ ರೇಡಿಯೋ ಮುಂದೆ ಕೇಳಲು ಉತ್ಸುಕತೆಯಿಂದ ಕಾಯುತ್ತಿದ್ದೆವು.
ಆಗ ನಿಮ್ಮ ಮೆಚ್ಚಿನ ಗೀತೆ ಸಿನಿಮಾದ ಹೆಸರು, ಸಂಗೀತ ನಿರ್ದೇಶಕ, ಸಾಹಿತ್ಯ ಹೇಳಿ ಪ್ರಸಾರಮಾಡುತ್ತಿದ್ದರು.
ಆಗ ಖಂಡಿತ ಈ ಹಾಡುಗಳು ಹುಟ್ಟುವ,ಕಟ್ಟುವ ಪರಿ ಹೇಗೆ ಎಂದು ಪ್ರಶ್ನೆ ಮೂಡಿ ಸೋಜಿಗವೆನ್ನಿಸುತ್ತಿತ್ತು ಅದಕ್ಕೆಲ್ಲ ಉತ್ತರವೆಂಬಂತೆ ಈ ಪುಸ್ತಕದಲ್ಲಿದೆ.
ಹಾಡು ಹಳೆಯದಾದರೇನು ಭಾವ ನವನವೀನ ಹೌದಲ್ವಾ ಪ್ರೇಮ,ವಿರಹ,ರೋಷ, ಪ್ರಾರ್ಥನೆ, ವೇದಾಂತ…ಲಾಲಿ ಹಾಡು ಇಂಥದ್ದೇ ನೂರೆಂಟು ಭಾವಗಳ ತುಂಬಿಕೊಂಡ ಗೀತೆಗಳ ಹಿಂದಿನ ಕಥೆ, ಸಂದರ್ಭ, ಸವಾಲು,ಬರೆದವರ ಭಾವ, ಮನಸ್ಥಿತಿ ಹೇಗಿತ್ತು ಎಂಬುದರ ಸಂಪೂರ್ಣ ಚಿತ್ರಣ ಇಲ್ಲಿವೆ.
ದೇವರ ಕಣ್ಣು ಚಿತ್ರದ ಗೀತೆ ನಿನ್ನ ನೀನು ಮರೆತರೇನು ಸುಖವಿದೆ ಗೀತೆ ಚಿ.ಉದಯಶಂಕರ್ ಅವರಿಗೆ ಟಾಯ್ಲೆಟ್ ನಲ್ಲಿ ಹೊಳೆದ ಸಾಲುಗಳು ಎಂದರೆ ನೀವು ನಂಬಲೇಬೇಕು.ಆ ತರದ ಸ್ವಾರಸ್ಯಕರ ಸಂಗತಿಗಳನ್ನು ಬೆನ್ನು ಹತ್ತಿ ಹುಡುಕಿ ಕ್ರೋಡೀಕರಿಸಿ ಬರೆದಿದ್ದಾರೆ.
ಅದೆಷ್ಟೋ ಗೀತೆಗಳನ್ನು ಕೇಳಿರುತ್ತೇವೆ ಕೆಲವೊಂದು ತುಂಬಾ ಆಪ್ತವಾಗಿರುತ್ತವೆ ಆದರೆ ಸಾಹಿತ್ಯ ಅವರದಾ ಎಂದು ತಿಳಿದಾಗ ಅಚ್ಙರಿಯಾಗುವುದಿದೆ ಈ ತರದ ಅನುಭವ ನನಗಾಯಿತು.
ಬಾ ನಲ್ಲೆ ಮಧು ಚಂದ್ರಕೆ ಸಿನಿಮಾದ ಗೀತೆ ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ ದಲಿತ, ಬಂಡಾಯ ಕವಿ ಎಂದೇ ಖ್ಯಾತರಾದ ಸಿದ್ದಲಿಂಗಯ್ಯ ಅವರ ರಚನೆ.ಈ ತರದ ಮಧುರ ಗೀತೆಯನ್ನು ಬರೆಯುವರು ಎಂಬುದಕ್ಕೆ ಸಾಕ್ಷಿ ಎಂಬಂತೆ ಇದೆ.
ಒಂದಲ್ಲ ಒಂದು ಹಾಡು ನಮ್ಮ ಬದುಕಿನ ಸಂಗತಿಗಳೊಂದಿಗೆ ಮರೆಯಲಾಗದ ಬಂಧ ಬೆಸೆದಿರುತ್ತವೆ.
ಆ ಹಾಡಿನೊಂದಿಗೆ ಆ ಘಟನೆಯೂ ಕಣ್ಣಮುಂದೆ ಸುಳಿಯುತ್ತದೆ.ಸಂತಸದಲ್ಲಿದ್ದಾಗ ಸಂಗೀತ ಮೈಮರೆಸುತ್ತದೆಯಂತೆ,ಅದೇ ದುಃಖದಲ್ಲದ್ದಾಗ ಸಾಹಿತ್ಯ ಮನ ಯೋಚಿಸುವಂತೆ ಮಾಡುತ್ತವೆ.
ಹಾಡಿನ ಯಾವುದೋ ಸಾಲು ಮನ ಅರಳಿಸಿದರೆ, ಮತ್ತೊಂದು ಕಣ್ಣು ಒದ್ದೆಯಾಗುವಂತೆ ಮಾಡುತ್ತವೆ.ಮಗದೊಂದು ಅಮ್ಮನ ಜೋಗುಳದಂತೆ ತಟ್ಟಿ ಮಲಗಿಸುತ್ತದೆ.
ಈ ಹಾಡಿನ ಜಾಡು ಹಿಡಿದು ಹೊರಟು ಹೆಕ್ಕಿ ತೆಗೆದ ಮುತ್ತು,ಹವಳ, ಪಚ್ಚೆಯಂತಹ ಹಲವು ಮಾಹಿತಿಗಳ ಕಣಜ ಹಾಡು ಹುಟ್ಟಿದ ಸಮಯ ಪುಸ್ತಕ.
ಮಣಿಕಾಂತ್ ಅವರ ಮುಗ್ಧ ನಗೆಯಂತೆಯೇ ಮನ,ಹಮ್ಮಿರದ ಹೃದಯವಂತ ಪ್ರಚಾರತೆಯ ತಂಟೆಗೆ ಹೋಗದ ಅವರು ವಿಶೇಷ ವ್ಯಕ್ತಿತ್ವದಿಂದ ಗಮನ ಸೆಳೆಯುತ್ತಾರೆ ಇನ್ನಷ್ಟು ಮತ್ತಷ್ಟು ಬರೆಯುತ್ತಿರಿ ಶುಭವಾಗಲಿ ಸರ್.

—————————————————————————————

About The Author

1 thought on “ಎ.ಆರ್.ಮಣಿಕಾಂತ್ “ಹಾಡು ಹುಟ್ಟಿದ ಸಮಯ” ಬಗ್ಗೆ ಶಾರದಾಜೈರಾಂ ಬಿ.”

Leave a Reply

You cannot copy content of this page

Scroll to Top