ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಾನೊಂದು ಬಂಡೆ
ತೆಪ್ಪಗೆ ಕುಳಿತ ಕರಿ ಬಂಡೆ
ಮೇಲ್ಮೈ ನಯವಿಲ್ಲ
ಒರಟೊರಟು..
ಗಾಯಗಳೂ…ಕಾಣದಷ್ಟು …!

ಸೆಳೆವ ಬೆಳ್ಳಗಿನ
ನಯಮೃದು ನವನೀತವಲ್ಲ;
ಕ್ಷಣಕ್ಷಣಕ್ಕೂ ಆಕಾರ
ಬದಲಿಸೋ ನೀರಿನ
ಕುಶಲತೆಯೂ…ಇಲ್ಲ!
ಬಣ್ಣಗಳ ಹಂಗಿಲ್ಲ ನನಗೆ
ಕಪ್ಪಗಿನ ನಾನು ಬದಲಾಗುವುದೂ ಇಲ್ಲ

ನವಿರು ಭಾವಗಳಿತ್ತು ನನ್ನಲ್ಲೂ..
ಸುಡೋ ತಾಪಕೆ ಆವಿಯಾಗಿದೆಯಷ್ಟೇ
ಇದೀಗ…
ಬಿಸಿಲು, ಮಳೆಗೆ ಮೈಯೊಡ್ಡಿ
ಗಟ್ಟಿಯಾಗಿರುವೆ ಮತ್ತಷ್ಟೂ….

ಅದೆಷ್ಟೋ ಮಂದಿ
ತಲೆ ಮೇಲೆ ಹತ್ತಿದರು;
ಮೆಟ್ಟಿದರು, ಒದ್ದರು
ಹಾವು, ಚೇಳು,ಕ್ರಿಮಿ ಕೀಟಗಳೂ
ಶಿರವೇರಿ ಕುಳಿತವು!

ಅವರಿವರ ಪಾದರಜದ
ಅವಮಾನದ ಭಾರದಲ್ಲೂ
ಮೌನಿಯಾಗಿದ್ದೇನೆ..
ಆದರೆ ಮೂಗನಲ್ಲ ನಾನು
ಕಿವುಡುತನ ಕುರುಡುತನ
ಇಲ್ಲಿಗೆ ಬಲು ಲೇಸು!

ಈಗೀಗ ಮೌನದ ಭಾರ
ಮಿತಿ ಮೀರುತ್ತಿದೆ
ನಾನೂ ಸಿಡಿಯುತ್ತೇನೆ
ಆಹುತಿ‌ ಪಡೆಯುತ್ತೇನೆ
ಮದ್ದಿಟ್ಟರೆ ಮಾತ್ರ…….!!!


About The Author

Leave a Reply

You cannot copy content of this page

Scroll to Top