ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕನ್ನಡ ಭಾಷೆ ಎಂದಕೂಡಲೇ ನಮ್ಮಲ್ಲಿ ಮಾತೃತ್ವ ಭಾವನೆಯು ಮೂಡುತ್ತದೆ. ಕನ್ನಡಿಗರ ಮನೆ-ಮನದಲ್ಲಿ ಹಾಸುಹೊಕ್ಕಾಗಿ ಬೆಸೆದುಕೊಂಡಿದೆ. ಇನ್ನು ಕನ್ನಡ ಭಾಷಾ ಪ್ರಾಚೀನತೆಯ ಬಗ್ಗೆ ಹೇಳುವುದಾದರೆ ಸಂಸ್ಕೃತ ಮತ್ತು ಗ್ರೀಕ್ ಭಾಷೆಯ ನಂತರ ವಿಶ್ವದಲ್ಲಿ ಕನ್ನಡ ಮೂರನೆಯ ಪುರಾತನ ಭಾಷೆಯಾಗಿದೆ. ಕನ್ನಡ ಭಾಷೆಯು ಸ್ವತಂತ್ರವಾದ ಲಿಪಿಯನ್ನು ಹೊಂದಿದ್ದು, ಮಾತನಾಡುವುದನ್ನೇ ಬರೆಯುವ, ಬರೆಯುವುದನ್ನೇ ಓದುವ ಭಾಷೆ ಎಂದರೆ ಕನ್ನಡ ಮಾತ್ರವೆ. ಉತ್ಕೃಷ್ಟವಾದ ಭಾಷೆಯ ಕುರಿತಾಗಿ ವಿಶ್ವ ಲಿಪಿಗಳ ರಾಣಿ ಕನ್ನಡ ಭಾಷೆ ಎಂದು ಆಚಾರ್ಯ ವಿನೋಭಾಬಾವೆ ರವರು ಕರೆದಿರುವುದು ಉಚಿತವಾಗಿದೆ. ಕವಿರಾಜಮಾರ್ಗಕಾರ ಶ್ರೀವಿಜಯನಿಂದ್ಹಿಡಿದು ಮಂಜೇಶ್ವರ ಗೋವಿಂದ ಪೈ, ಕುವೆಂಪು, ಕಾರಂತ, ಬೇಂದ್ರೆ, ಮಾಸ್ತಿ, ಕಾರ್ನಾಡ್, ಕಂಬಾರರವರೆಗೆ ಹಲವರು ಕನ್ನಡ ಸಾರಸ್ವತ ಲೋಕಕ್ಕೆ ಅನರ್ಘ್ಯ ಕೃತಿರತ್ನಗಳನ್ನು ನೀಡಿ ಶ್ರೀಮಂತಗೊಳಿಸಿದ್ದಾರೆ. ಶಾಸ್ತ್ರೀಯ ಸ್ಥಾನಮಾನವನ್ನು ಹೊಂದಿದ ಕನ್ನಡ ಭಾಷೆಗೆ ಕನ್ನಡ ನಾಡಿನಲ್ಲೇ ಅಳಿವು-ಉಳಿವಿನ ಪ್ರಶ್ನೆ ಎದಿರಾಗಿರುವುದು ವಿಷಾದನೀಯ ಸಂಗತಿ.
ಇಂತಹ ಪ್ರಾಚೀನತಮ ಸುದೀರ್ಘ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಸ್ವಾತಂತ್ರ್ಯದ ನಂತರದ ಕಾಲಘಟ್ಟದಲ್ಲಾದ ಗುರುತರವಾದ ಬದಲಾವಣೆಗಳಲ್ಲಿ ಒಂದಾದ ಭಾಷಾವಾರು ಪ್ರಾಂತ್ಯಗಳ ರಚನೆಯು ಕನ್ನಡ ಭಾಷಾ ಅಭ್ಯುದಯಕ್ಕೆ ಬಿದ್ದ ಮೊದಲ ಕೊಡಲಿಪೆಟ್ಟು ಎನ್ನಬಹುದು. ಆಯಾ ರಾಜ್ಯಗಳ ಜನತೆಯ ಮೇಲೆ ಬೌದ್ಧಿಕ ಮಿತಿಯನ್ನು ಹೇರಿದಂತಾಯಿತು. ಯಾವುದೇ ಒಂದು ಭಾಷೆ-ಉಪಭಾಷೆಗಳನ್ನು ಪ್ರಾದೇಶಿಕ ಚೌಕಟ್ಟಿನಲ್ಲಿ ಮಿತಿಗೊಳಿಸುವುದು, ಜಾಗತಿಕ ಮಟ್ಟದಲ್ಲಿ ಬೆಳೆಯುವಲ್ಲಿ ತೊಡಕಾಗಿದೆ.
ಹಳಗನ್ನಡ, ನಡುಗನ್ನಡ, ಹೊಸಗನ್ನಡದ ಕಾಲಘಟ್ಟಗಳಲ್ಲಿ ನವೋದಯ, ನವ್ಯ, ಪ್ರಗತಿಶಿಲ, ದಲಿತ ಮತ್ತು ಬಂಡಾಯ, ಸ್ತ್ರೀ ವಾದಿ ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ಕನ್ನಡ ಸಾಹಿತ್ಯ ಕೃಷಿ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಭಾಷಾ ಅಭಿವೃದ್ಧಿಯಂತಹ ಈ ಗುರುತರವಾದ ಜವಾಬ್ದಾರಿಯನ್ನು ಹೊತ್ತಿರುವ ಘನ ಸರ್ಕಾರ, ಕನ್ನಡ ಭಾಷಾಂತರ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪುಸ್ತಕ ಪ್ರಾಧಿಕಾರ, ನಾಟಕ ಅಕಾಡಮಿ ಹೀಗೆ ಹಲವು ಸರ್ಕಾರಿ-ಸರ್ಕಾರೇತರ ಸಂಘ-ಸಂಸ್ಥೆಗಳಿಗೆ ಉತ್ತೇಜನ ನೀಡುವಲ್ಲಿ ಬಹಳಷ್ಟು ಶ್ರಮಿಸಿದೆ. ಎಲ್ಲೆಲ್ಲೂ ಮನೆಮಾಡಿದ ಸ್ವಾರ್ಥ, ಅಸೂಯೆ, ಹಣ-ಅಧಿಕಾರದ ದಾಹ, ಭ್ರಷ್ಟಾಚಾರದಿಂದಾಗಿ ನಿರೀಕ್ಷಿತ ಮಟ್ಟದ ಯಶಸ್ಸು ಕಂಡಿಲ್ಲ ಎನ್ನಬಹುದು.
ಕನ್ನಡ ಭಾಷಾ ಅಭ್ಯುದಯಕ್ಕೆ ಯುವ ಜನಾಂಗದ ಪಾತ್ರ ಬಹುಮುಖ್ಯ ಅಂಶಗಳಲ್ಲೊಂದು. ಇಂದಿನ ಸ್ಪರ್ಧಾತ್ಮಕ ಯುಗದ ಜೀವನದಲ್ಲಿ ಭದ್ರತೆ ಹೊಂದುವ ಭರದಲ್ಲಿ ಸಾಹಿತ್ಯ, ಸಂಗೀತ, ಕಲೆ ಮತ್ತು ವಾಸ್ತಶಿಲ್ಪಗಳ ಬಗ್ಗೆ ಒಲವು, ಓದುವ ವರ್ಗ ಕಡಿಮೆಯಾಗಿದೆ ಎಂಬ ಅಪವಾದ ಕೇಳಿಬರುತ್ತಿದೆ. ಮಾಹಿತಿ ಮತ್ತು ಸಂವಹನ ಕ್ಷೇತ್ರದಲ್ಲಾದ ಗಣನೀಯ ಅಭಿವೃದ್ಧಿ, ಸಾಮಾಜಿಕ ಜಾಲತಾಣಗಳಾದ ದೂರದರ್ಶನ, ಮೊಬೈಲ್, ಫೇಸ್‌ಬುಕ್, ವ್ಯಾಟ್ಸ್ಆಪ್, ಬಳಕೆಯಿಂದಾಗಿ ಸಾಹಿತ್ಯ ಓದುವ ಅಭಿರುಚಿ ಕಡಿಮೆಯಾಗಿದೆ.  ಮಹಕಾವ್ಯ, ಸುದೀರ್ಘ ಕಾದಂಬರಿ, ಕಥೆ-ಕವನಗಳನ್ನು ಓದುವ ತಾಳ್ಮೆ ಯಾರಿಗಿದೆ ಹೇಳಿ..? ಎಲ್ಲ ಕಾಲಕ್ಕೂ ಒಂದು ಓದವ ವರ್ಗ ಇದ್ದೇ ಇದೆ, ಅವರನ್ನು ಸೆಳೆಯುವ ಕಾರ‍್ಯವಾಗಬೇಕಿದೆ. ಓದುಗ ದುಬಾರಿ ಬೆಲೆ ತೆತ್ತು ಪುಸ್ತಕಗಳನ್ನು ಕೊಂಡು-ಓದುವುದರಲ್ಲಿ  ಹಿಂದೇಟು ಹಾಕುತ್ತಿದ್ದಾನೆ. ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಕನ್ನಡ ಪುಸ್ತಕಗಳು ದೊರೆಯುವಂತಾಗಬೇಕು. ಸಾಹಿತ್ಯಿಕ- ಸಾಂಸ್ಕೃತಿಕ ಚಟುವಟಿಕೆಗಳು ಜನ-ಮನಸೂರೆಗೊಳ್ಳುವಂತಾಗಬೇಕು. ಅಂದಾಗ ಮಾತ್ರ ಓದುಗ ಸಾಹಿತ್ಯ ಓದುವುದರ ಮೂಲಕ ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಾನೆ.
ಹಿಂದಣ ಸಾಹಿತ್ಯದಲ್ಲಿ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸ್ಥಿತಿ-ಗತಿಗಳನ್ನು ಅರಿಯಲು ಸಂಪ್ರದಾಯ ಆಚಾರ-ವಿಚಾರಗಳ ಒಳ-ಹೊರ ಮುಖಗಳನ್ನು ಅಧ್ಯಯನ ಮಾಡಿ ಮುಂದಣ ಜಗತ್ತಿಗೆ ವಿಭಿನ್ನ ಆಯಾಮಗಳಲ್ಲಿ ಕನ್ನಡ ಸಾಹಿತ್ಯವನ್ನು ಕಟ್ಟಿಕೊಡಬೇಕಾದ ಜವಾಬ್ದಾರಿ ಇಂದಿನ ಯುವ ಉದಯೋನ್ಮುಖ ಸಾಹಿತಿಗಳ ಮೇಲಿದೆ. ಎಷ್ಟೋ ಅದ್ಭುತ ಪ್ರತಿಭೆಗಳು ತಮ್ಮ ವೃತ್ತಿ ಬದುಕು ಮತ್ತು ಸಾಂಸಾರಿಕ ಜಂಜಾಟದಲ್ಲಿ ಮುಳುಗಿಬಿಟ್ಟಿದ್ದಾರೆ. ಅವರುಗಳು ಸಾಹಿತ್ಯದ ಕಡೆ ಮುಖಮಾಡಿದರೆ ಉತ್ತಮೋತ್ತಮ ಸಾಹಿತ್ಯ ಹೊರಹೊಮ್ಮುವುದರಲ್ಲಿ ಎರಡು ಮಾತಿಲ್ಲ. ಸಹಿತವಾದದ್ದು, ಸರ್ವರ ಹಿತವನ್ನು ಬಯಸುವುದೇ ನಿಜವಾದ ಸಾಹಿತ್ಯವೆನಿಸುತ್ತದೆ. ಅಂತೆಯೇ ಅನುಭವಿಸಿ ಹೇಳಿದ್ದೆಲ್ಲವೂ ಸಾಹಿತ್ಯ, ಉಳಿದುದೆಲ್ಲ ವರದಿ ಎಂಬ ಕುವೆಂಪು ರವರ  ಮಾತು ಎಷ್ಟೊಂದು ಅರ್ಥಪೂರ್ಣ ಅಲ್ಲವೆ..? ಅನುಭವ ಶೂನ್ಯರಿಂದ ಸಾಹಿತ್ಯ ಸೃಷ್ಟಿಯಾಗುವುದಿಲ್ಲ, ಜೀವನಾನುಭವವೇ ಸಾಹಿತ್ಯದ ಜೀವಾಳ.  ಇಂತಹ ಸಾಹಿತ್ಯ ಹೊರಹೊಮ್ಮುವಲ್ಲಿ ಯುವಜನಾಂಗದ ಪಾತ್ರ ಬಹುಮುಖ್ಯ. ಸಾಹಿತ್ಯದ ಕಡೆ ಮುಖ ಮಾಡುವುದರಿಂದ ಕಾರ‍್ಯ ಸಾಧ್ಯವಾಗಲಿದೆ ಎಂಬುದು ನನ್ನ ಖಚಿತ ಅಭಿಪ್ರಾಯವಾಗಿದೆ.

————————————-

About The Author

1 thought on “‘ಕನ್ನಡ ಭಾಷಾ ಅಭ್ಯುದಯಕ್ಕೆ ಯುವ ಜನಾಂಗದ ಪಾತ್ರ’ ಡಾ.ಯಲ್ಲಮ್ಮ ಕೆ. ಅವರವಿಶೇಷ ಲೇಖನ”

Leave a Reply

You cannot copy content of this page

Scroll to Top