ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅದೆಲ್ಲೋ ಹುಟ್ಟಿ, ಇನ್ನೆಲ್ಲೋ ಹರಿದು
ಗುಳೆ ಹೊರಟ ಹೊಳೆ
ಶರಧಿ ಸೇರುವ ಗಮ್ಯದ ಹಾದಿಯುದ್ದಕ್ಕೂ..
ಒಡಲಲ್ಲಿ ಹೊತ್ತೊಯ್ಯಬೇಕಾದ ಭಾರ
ತೊಳೆಯಬೇಕಾದ ಕೊಳೆ ಅಪರಿಮಿತ…

ಒಂದಿನಿತು ಕರ್ತವ್ಯ ಲೋಪವಾಗದಂತೆ
ಬಾಗಿ ಬಳುಕಿ, ನುಗ್ಗಿ ನುಸುಳಿ
ಹರಿವ ಹೊಳೆಗೀಗ..ಬಿರು ಬೇಸಿಗೆ!
ಬತ್ತಿದ್ದು ನೀರಲ್ಲ; ಕಣ್ಣೀರು!

ಹರಿವಿನುದ್ದಕ್ಕೂ…ಅಲ್ಲಲ್ಲಿ
ತಡೆಯುವ ಬಂಡೆ..
ಪ್ರತಿ ಅಪ್ಪಳಿಕೆಯಲ್ಲೂ.. ನೋವಿನಾಘಾತ!
ಆಗೆಲ್ಲ ಮನಕ್ಷೋಭೆಗೊಂಡು
ಸುಳಿಗಾಹುತಿ ಪಡೆಯಲೆತ್ನಿಸಿದರೂ..
ಮತ್ತೇ ಶಾಂತವಾಗಿ
ತನ್ನ ನಂಬಿದವರ ಬಂಜರೆದೆಗೆ
ಒಲವೂಡಿಸುತ್ತಾ ದಾಹ ತೀರಿಸುತ್ತಾ
ಸಾಗಿದರೂ..ತನ್ನೊಳಗುದಿ ಮಾತ್ರ..
ಹೆಚ್ಚುತ್ತಲೇ …ಇತ್ತು!

ತನ್ನ ಸ್ವಾದವನ್ನಷ್ಟೇ ಹಂಚಿ
ಎಸೆಯಲ್ಪಡುವ ಕರಿಬೇವಿನೆಲೆಯಂತೆ
ಒಗ್ಗರಣೆಯಲ್ಲಿ ಹುರಿಯಲ್ಪಟ್ಟು
ಸಿಡಿಯುವ ಸಾಸಿವೆಯೊಂದಿಗೂ..
ಒಂದಿನಿತೂ ಎಗರಾಡದೆ
ಉರಿಯಲ್ಲೂ ಯಾತರದ ಮೌನ?
ಮರುಕ್ಷಣ ತನ್ನ ಸಹನೆಗೆ ಸಿಡಿಮಿಡಿಗೊಂಡು
ಉಕ್ಕುತುಕ್ಕುತ ಕುದಿಯುವ ರೋಷ
ಸಾಂಬಾರಿನಂತೆ!!

ಒಲವು ಹೊಮ್ಮಿದೆಡೆಗೆ ಸೆಳೆತವಿದ್ದಾಗ
ದಿಕ್ಕು ಬದಲಿಸಲೆತ್ನಿಸಿದವರಿಗೆ
ರಭಸದಲ್ಲೇ ಉತ್ತರಿಸಿ..
ತನ್ನ ಹರಿವನ್ನೇ ದಾರಿಯಾಗಿಸಿ..
ಅಸ್ತಿತ್ವಕ್ಕೆ ಹೆಣಗಾಡುವ ಪರಿ
ಮತ್ತೇ ಸಪ್ಪೆಯೂಟಕ್ಕೆ ಉಪ್ಪಾಗಿ
ಬರುವ ಛಲವೋ…?

ಪಯಣದುದ್ದಕ್ಕೂ ಎಲ್ಲೆ ಮೀರದಂತೆ
ದಡಗಳ ಕಾವಲು!
ಎಷ್ಟು ಕಾಲ ದಡಕ್ಕೆ ಆತುಕೊಳ್ಳುವ ಬದುಕು?
ಮೀರುವ ಪ್ರಕ್ರಿಯೆಗೆ ಎದೆಯೊಳಗೆ
ಭರವಸೆಯ ಬೆಳಕು!
ಮಳೆ, ಮಿಂಚು, ಗುಡುಗು
ಬಚ್ಚಿಟ್ಟ ಕಣ್ಣ ಹನಿಗಳಿಗೀಗ
ವರ್ಷಧಾರೆಯ ರೂಪ!!

ಜುಳುಜುಳು ನಾದ ಆರ್ಭಟವಾಗಿ
ಮುಖ‌ಕಾಣುತ್ತಿದ್ದ ತಿಳಿನೀರು
ರಾಡಿಯಾಗಿ…
ರೊಚ್ವೆದ್ದ ಜಲಪ್ರಳಯಕ್ಕೆ
ದಡಗಳೇ….ಮುಳುಗಿವೆ!


About The Author

4 thoughts on “ಲೀಲಾಕುಮಾರಿ ತೊಡಿಕಾನ ಅವರ ಹೊಸ ಕವಿತೆ-‘ದಡ ಮೀರಿದ ನದಿ’”

  1. ಎಷ್ಟು ಸುಂದರ ಸಂರಚನೆ ಇದು
    ಹೊಳೆಯ ಪ್ರವಾಹ ಹಾಗೂ ಬದುಕಿನ ಪ್ರವಾಸ

  2. ತನ್ನ ಕವಿತೆಯಲ್ಲೇ, ಜಲಪ್ರಳಯ, ಜಲಮಾಲಿನ್ಯಗಳ ಅರಿವು ಮೂಡಿಸುವುದರ ಜೊತೆಗೆ ಬದುಕಿನ ಪಯಣವನ್ನು ವಿವರಿಸಿರುವುದು ಅತ್ಯುತ್ತಮವಾಗಿದೆ. ಅಭಿನಂದನೆಗಳು ಮೇಡಂ ..

Leave a Reply

You cannot copy content of this page

Scroll to Top