ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನನಗೀಗ ಅನಿಸುತಿದೆ…
ಅವ್ವನoತಾಗುವುದು
ಬಲುಕಷ್ಟವೆಂದು

ಹಿತ್ತಲಲಿ ಒಣ ಹಾಕಿದ
ಟವೆಲ್ಲನ್ನು ಸೀರೆಯಂತೆ ಸುತ್ತಿಕೊಂಡು
ಜಾತ್ರೆಯಲಿ ಖರೀದಿಸಿದ ಆಟದ
ಅಡುಗೆ ಸಾಮಾನುಗಳಿಂದ
ಅಡುಗೆಯಾಟ ಆಡಿದಷ್ಟು ಸುಲಭವಲ್ಲ
ಈಗ ಅಡುಗೆ ಮಾಡಿ ಎಲ್ಲರ
ಹೊಟ್ಟೆ ತುಂಬಿಸುವುದು ಎಂದು
ನನಗೀಗ ಅನಿಸುತಿದೆ

ಅನ್ನ ಸಾರು ಬೇಯಿಸಿ ಬಡಿಸುವುದಕ್ಕೆ
ತಿಣುಕುತ್ತಿರುವ ನನಗೆ
ಹೊತ್ತಾರೆ ಎದ್ದು ಒಲೆಯುರಿಸಿ
ಪಡಿಹಿಟ್ಟಿನ ರೊಟ್ಟಿ ಬಡಿದು
ತರಾವರಿ ಅಡುಗೆ ಮಾಡಿ
ಮನೆಮಂದಿಗೆಲ್ಲ ಹೊಟ್ಟೆ ತುಂಬಿಸುತ್ತಿದ್ದ
ಅವ್ವನ ಕೈರುಚಿ ನೆನಪಾದಾಗಲೆಲ್ಲ
ಅನಿಸುತಿದೆ ಅವ್ವನoತಾಗುವುದು
ಬಲುಕಷ್ಟವೆಂದು

ಪ್ರತಿ ಹಬ್ಬಕ್ಕೂ ಹೊಸಬಟ್ಟೆಬೇಕೆಂದು
ಹಠಹಿಡಿದಾಗ ಗದರುತ್ತಿದ್ದ
ಅವ್ವನ ಮೇಲೆ ವಿಪರೀತ ಕೋಪ ನನಗೆ
ಆನ್ ಲೈನ್ ನಲ್ಲೀಗ ದಿನಕ್ಕೊಂದು
ಆರ್ಡರ್ ಮಾಡುವ ಮಕ್ಕಳ ಮೇಲೆ
ಉಕ್ಕಿ ಬರುವ ಕೋಪವನ್ನು ಅತಿಮೋಹಕ್ಕೊಳಗಾಗಿ
ಅದುಮಿಟ್ಟುಕೊಳ್ಳುವ
ನನ್ನ ಅಸಹಾಯಕ ಸ್ಥಿತಿ ಕಂಡು
ನನಗೀಗ ಅನಿಸುತಿದೆ
ಅವ್ವನoತಾಗುವುದು
ಬಲುಕಷ್ಟವೆಂದು

ಸಿವುಡು ಕೊತಂಬರಿ ಸೊಪ್ಪಿಗೆ
ತಾಸುಗಟ್ಟಲೆ ಚೌಕಾಸಿ ಮಾಡುವ
ಅವ್ವನ ವರ್ತನೆಗೆ ಬೇಸರಪಡುತ್ತಿದ್ದೆ ನಾನು
ಅದೇ ಚೌಕಾಸಿ ದುಡ್ದು ಕೂಡಿಸಿ
ನನ್ನ ಮದುವೆಗೆ ಕಾಸಿನಸರ ಮಾಡಿಸಿದಾಗ
ಕಾಸಗಲ ಕಣ್ಣು ಅಗಲಿಸಿ ಕುಣಿದಿದ್ದೆ

ತಿಂಗಳ ಖರ್ಚುನ್ನು ಅಚ್ಚುಕಟ್ಟಾಗಿ ತೂಗಿಸಿ
ಅಪ್ಪನಿಗೆ ಖರ್ಚಿನ ಹೊರೆಯಾಗದಂತೆ
ಮನೆಗೆ ಬಂದು ಹೋಗುವ
ಬಂಧುಗಳ ಉಪಚರಿಸುತ್ತಿದ್ದ
ಅವಳ ಜಾಣತನ ಕಣ್ಮುಂದೆ ಸುಳಿದಾಗಲೆಲ್ಲ
ಅನಿಸುತಿದೆ ನನಗೀಗ
ಅವ್ವನoತಾಗುವುದು
ಬಲುಕಷ್ಟವೆಂದು

ಬದುಕಿನುದ್ದಕ್ಕೂ ಅಪಾರ ಸಹನೆಯಿಂದ
ಅಣ್ಣ ತಮ್ಮ ಅಕ್ಕ ತಂಗಿಯರ
ಮದುವೆ ಬಾಣoತನ
ಬೀಗರು ಬಳಗದ ಬೇಡಿಕೆ ತಣಿಸಲು
ಸದ್ದಿಲ್ಲದೇ ಮೌನವಾಗಿ ಹೆಣಗಿ ಸೈಯೆನಿಸಿಕೊಂಡು
ಮನೆತನ ಕಟ್ಟಿದ ಅವ್ವನ ಗಟ್ಟಿತನ ನೆನೆದಾಗಲೆಲ್ಲ
ನನಗೀಗ ಅನಿಸುತ್ತಿದೆ
ಅವ್ವನoತಾಗುವುದು
ಬಲುಕಷ್ಟವೆಂದು

ಅವ್ವನಿಗೀಗ ವಯಸ್ಸಾಗಿದೆ
ಕಣ್ಣು ಮಂಜಾಗಿವೆ ಮರೆವೆಯೂ ಆಗುತ್ತಿದೆ
ಅವಳ ಮನಸ್ಸಿಗಾಗಲಿ ಅವಳ ಕೈರುಚಿಗಾಗಲಿ
ಇದಾವುದು ಆಗಿಲ್ಲ
ಮೊಮ್ಮಕ್ಕಳಿಗೂ ಈಗಲೂ
ಅವಳ ಕೈಯಾರೇ
ಅಡುಗೆ ಮಾಡಿ ತಿನಿಸಬೇಕು
ಬೇಡವೆಂದರೆ ಅವಳಿಗೆಲ್ಲಿಲ್ಲದ ಕೋಪ
ನಿವೃತ್ತಿಯೇ ನನಗೆ ಬೇಡವೆಂಬ ಹಠ

ನಿತ್ಯ ಕಾಯಕಯೋಗಿಯಾಗಿರುವ ಇವಳಿಗೆ
ಕಾಯಕದಿಂದ ಜೀವನಮುಕ್ತಿ
ಬದ್ಧತೆಯ ಬದುಕಿಗೆ ಗಂಧವಾದ
ಇವಳ ರೂಪು ಕಣ್ಮುಂದೆ ಸುಳಿದಾಗಲೆಲ್ಲ

ನಾವೆಲ್ಲ ಪುಸ್ತಕದ ಹುಳುಗಳು
ಕಾಯಕದ ಕುರಿತು ತಾಸುಗಟ್ಟಲೆ
ಭಾಷಣ ಬಿಗಿಯುವ ಗೋಸುಂಬೆಗಳು
So called sofesticated
Modern mummy ಗಳು
ನಮ್ಮ ನಾಟಕಿಯತೆ ನಮ್ಮ ಕಣ್ಮುಂದೆ ಸುಳಿದಾಗ
ಅನಿಸುತಿದೆ ನನಗೀಗ
ಅಮ್ಮನoತಾಗುವುದು
ಬಲುಕಷ್ಟವೆಂದು

ಮನೆತನಕ್ಕಾಗಿ ಜೀವತೇಯ್ದ ಅವ್ವ
ಕರ್ತಾರನ ಕಮ್ಮಟದ ನಾಣ್ಯ
ಅಲ್ಲಿ ಇಲ್ಲಿ ಎಲ್ಲೆಲ್ಲಿಯೂ ಸಲ್ಲುವ ನಾಣ್ಯ
ಕಲ್ಲಾಗಿ ಕಲ್ಲುಸಕ್ಕರೆಯಾಗಿ
ಎಲ್ಲರೊಳಗೊಂದಾದ
ಅವ್ವನoತಾಗುವುದು
ಬಲುಕಷ್ಟ

ನನಗೀಗ ಅನಿಸುತಿದೆ
ಅವ್ವನoತಾಗುವುದು
ಬಲುಕಷ್ಟವೆಂದು…..


About The Author

9 thoughts on “ಡಾ. ಪುಷ್ಪಾವತಿ ಶಲವಡಿಮಠ ಅವರ ಕವಿತೆ ‘ಬಲುಕಷ್ಟ ಅವ್ವನoತಾಗುವುದು’”

  1. ತಾಯಿಯ ಬಗ್ಗೆ ಬರೆದ ಕವಿತೆ ತುಂಬಾ ಚನ್ನಾಗಿ ಮೂಡಿಬಂದಿದೆ ಮೇಡಮ್ ಹಿಂದಿನ ದಿನಮಾನಸವನ್ನು ಮತ್ತೊಮ್ಮೆ ನೆನಪಿಗೆ ತರಿಸುವಂತಿದೆ ಅನಂತ್ ಧನ್ಯವಾದಗಳು

    1. ಅವ್ವನ ಕುರಿತು ಎಷ್ಟು ಹೇಳಿದರು ಸಾಲದು.
      ಕಾಲಾನುಕ್ರಮವಾಗಿ ನಾವು ಆ ಸ್ಥಾನದಲ್ಲಿ ಬಂದಾಗಲೇ ಗೊತ್ತಾಗುವುದು. ನಮ್ಮ ಅಪ್ಪ ಅವ್ವ ಎಷ್ಡು ಕಷ್ಟಾ ಪಟ್ಟು ಬೆಳೆಸಿದರೆಂಬುವುದು.

  2. क्या बताऊ माँ तो माँ होती है,
    धन्यवाद मैडम आपको बहुत बढ़िया कविता है

Leave a Reply

You cannot copy content of this page

Scroll to Top