ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬುದ್ಧ ಕವಿತೆಯನ್ನು ಬರೆಯಲಿಲ್ಲ;
ಬದುಕೆಲ್ಲವನ್ನೂ ಕವಿತೆಯಾಗಿಸಿದ!
ಜಗದೆಲ್ಲ ಕವಿತೆಗಳನ್ನು ಬದುಕಿಸಿದ!
ಕವಿತೆಗಳಿಗೆ ಬುದ್ಧನೆಂದು ಒಲಿಯಲಿಲ್ಲ;
ಕವಿತೆಗಳೇ ಬುದ್ಧನ ತಬ್ಬಿಕೊಂಡವು! ತುಂಬಿಕೊಂಡವು!
ತಡೆದುಕೊಂಡವು!

ಬುದ್ಧ ಬರೆಯಬೇಕೆಂದಿದ್ದರೆ;
ಬದುಕಿನ ಕಾವ್ಯವಾಗಿ ಬಂದಂತ ಹೆಂಡತಿಯ ಬರೆಯುತ್ತ ಸಲಹುತ್ತಿದ್ದ!
ಬಹುಶಃ ತನ್ನ ಮೊದಲ ಜೀವಂತ ಕವಿತೆಯಾದ ಮಗನ ಬರೆಯುತ್ತಾ ಬೆಳೆಸುತ್ತಿದ್ದ!
ಅವ ನಮ್ಮಂತೆ ಕತ್ತಲ ಮಿಣುಕು ಹುಳದ ಮಿಂಚಲಿ;
ಬೆಳದಿಂಗಳ ಅಂಚಲಿ ತೇಲ್ಗಣ್ಣಲಿ ಕೂತು ಬರೆಯಲಿಲ್ಲ;
ಇರುವವರೆಗೆ ಧ್ಯಾನದಲಿ
ಹಗಲಿರುಳುಗಳ ಮಧ್ಯವ ಮಾಡಿ
ಬತ್ತದಂತ ಬೆಳಕಿನಲ್ಲಿ ನಮ್ಮಿಂದಲೇ ಬರೆಸಿದ!
ಲೋಕವನ್ನೇ ಭಾರವಿಲ್ಲದಂತ ಬುದ್ಧ ಬದ್ಧತ್ವದ ಕವಿತೆಗಳಾಗಿಸಿದ!
ಅರಮನೆಯ ಬಂಧನದ ಉದ್ಯಾನದ ಪರಿಮಳಗಳ ಬರೆಯುವುದ ಬಿಟ್ಟು;
ಪ್ರೀತಿಯ ಬೀಜಗಳ ಬಿತ್ತುತ್ತ ಕವಿತೆಗಳ ಸೌಗಂಧದ ಕಾಡನ್ನು ಬೆಳೆಸಿದ!
ಭೂಮಿಯ ಆಸೆಗಳ ಬಿಡಿಸಲು ಹೆಣಗಿ
ಅವನೇ ಒಂದು ಎಂದೆಂದೂ ತೀರದ ಮಹದಾಸೆಯ ಕವಿತೆಯಾದ!!
ಭೂಮಿಯಷ್ಟೋ ಅರಳಿಯಷ್ಟೋ ಆಯಸ್ಸಿದ್ದಿದ್ದರೆ ಕಾಡ ಕೂಸುಗಳೆಲ್ಲ ಬುದ್ಧ ಕವಿತೆಗಳಾಗುತ್ತಿದ್ದರು!
ಇರುವುದೊಂದೆ ಚೂರು ವಯಸ್ಸು
ಹಾಡಿಯ ಮಕ್ಕಳೆಲ್ಲ ಆಡಿ ಕೂಡಿ ನಿಲ್ಲದ ಕಡಲಾದರು!
ಬುದ್ಧನ ಆನಂದ ಕಾವ್ಯದ ಒಡಲಾದರು!

ಬುದ್ಧ ಸ್ವತಃ ಒಂದಷ್ಟು ಕವಿತೆಗಳ ಬರೆಯಬೇಕಿತ್ತು;
ನಮ್ಮನೆಲ್ಲ ಈ ಕಾವ್ಯದ ಉರುಳಿನಿಂದ ಕಾಪಾಡಬೇಕಿತ್ತು!
ನಮ್ಮಗೆಲ್ಲ ಅವನನ್ನ ತಿಳಿಸಬೇಕಿತ್ತು!
ನಿಮ್ಮ ನೀವು ತಿಳಿಯಿರೆಂದು ಹೇಳಿ ಹೇಳಿ
ತಡೆಯಿಲ್ಲದ ನಿಷ್ಕಲ್ಮಶ ರೋಹಿಣಿ ನದಿಯಂತೆ ಹರಿದು ಹೋದ;
ಭೂಮಂಡಲದಿ ಚೆಲ್ಲಿ ಹೋದ!
ಇನ್ನು ಯುಗ ಯುಗಗಳು ಕಳೆದರೂ
ನಮ್ಮ ನಾವು ತಿಳಿಯಲಾರೆವು;
ಅವನನ್ನಂತೂ ಎಷ್ಟು ಹಾಡಿದರೂ ಇನ್ನು ಸಿಗಲಾರನು;
ನಾವು ಸುಮ್ಮನಿರಲಾರೆವು;
ಬುದ್ಧನ ಮೇಲಿನ ಕವಿತೆಗಳ ನಿಲ್ಲಿಸಲಾರೆವು!

ಬುದ್ಧನಂತು ಕವಿತೆಯಾದ;
ಬರೆವ ನಾವೆಂದು ಬುದ್ಧನಾಗಲಿಲ್ಲ;
ಕವಿತೆಯ ಬಿಟ್ಟರೆ ಆಗಬಹುದೇನೋ!

ಹೆಂಡತಿಯಿರುವ ನಾನಂತೂ ಕವಿತೆ ಬಿಡಲಾರೆ!
ಕವಿತೆ ಬಿಡದ ನಾನಂತೂ ಸದ್ಯ ಈ ಜನ್ಮದಿ ಬುದ್ಧನಾಗಲಾರೆ!!


About The Author

1 thought on “ಟಿ.ಪಿ.ಉಮೇಶ್ಅವರ ಕವಿತೆ-ಬುದ್ಧ ಕವಿತೆಯನ್ನು ಬರೆಯಲಿಲ್ಲ”

Leave a Reply

You cannot copy content of this page

Scroll to Top