ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನನ್ನೊಲವಿನ ರಂಗು,

ನನ್ನ ಪುಟ್ಟ ಎದೆಯಂಗಳದಲ್ಲಿ ನೀನು ಹಚ್ಚಿಟ್ಟ ಪ್ರೀತಿಯ ಹಣತೆ ಈ ಜೀವದಲ್ಲಿ ಕೊನೆಯ ಉಸಿರಿರುವವರೆಗೂ ದೇಹ ಪೂರ್ಣ ತಣ್ಣಗಾಗುವವರೆಗೂ ಎಂಥ ಬಿರುಗಾಳಿ ಬೀಸಿದರೂ ನಂದಲಾರದು. ಇದು ನಿನಗೂ ಗೊತ್ತು ಹಾಗಿದ್ದರೂ ದೂರ ಸರಿದಿರುವೆ.

ಗೆಳೆಯ, ಈ ನೆನಪುಗಳೇ ಹಾಗಲ್ಲವೇ? ನೆನಪು ಹಾರಬೇಕೆಂದಷ್ಟು ಬೇಡ ಬೇಡವೆಂದರೂ ಪುನಃ ಪುನಃ ಮನದಂಗಳದಲ್ಲಿ ಬಂದು ನಿಂತು ತಕಧಿಮಿತ ಶುರು ಹಚ್ಚಿಕೊಳ್ಳುತ್ತವೆ. ಮರೆಯಬೇಕೆಂದು ಅದೆಷ್ಟು ಪ್ರಯತ್ನಿಸಿದಾಗಲೂ  ನಿನ್ನೊಂದಿಗೆ ಕಳೆದ ಸವಿ ಗಳಿಗೆಗಳ ನೆನಪು ಒಂದರ ಹಿಂದೆ ಒಂದು ಸಾಲಿನಲ್ಲಿ ನಿಂತುಕೊಳ್ಳುತ್ತವೆ. ಬಾಡಿದ ನನ್ನ ಮೊಗದಲ್ಲಿ ಮತ್ತೆ ಮುಗಳ್ನಗೆ ಚೆಲ್ಲಿಸುತ್ತವೆ. ಚಿಗುರು ಮೀಸೆಯಡಿಯಲ್ಲಿ ನೀನು ನಗುವ ಪರಿಯ ಮರೆಯಬೇಕೆಂದು ಅಂದುಕೊಂಡಷ್ಟು ಸಾರಿ ನೆನಪಿಗೆ ಬರುತ್ತದೆ.

ಗೆಳತಿಯರ ಜೊತೆ ನಾನಿರುವಾಗ ನೀನು ಕದ್ದು ನೋಡುತ್ತ  ಕಣ್ಣಲ್ಲೇ  ನನ್ನನ್ನು ಬರಸೆಳೆದು ಅಪ್ಪಿಕೊಳ್ಳುವಂತಿದ್ದ  ರೀತಿ ಬಿಡದೇ ಕಾಡುತ್ತಿದೆ.ನನ್ನ ಸೌಂದರ್ಯ ರಾಶಿಗೆ ಮರುಳಾಗಿ ಲೆಕ್ಕವಿಲ್ಲದಷ್ಟು ಹುಡುಗರು ಲವ್ ಅಪ್ಲಿಕೇಷನ್ ಹಾಕಿದರೂ ಕ್ಯಾರೆ ಅನ್ನದ ಹುಡುಗಿ ನಾನು ಎನ್ನುವುದು ನಿನಗೆ ಚೆನ್ನಾಗಿ ಗೊತ್ತಿದೆ. ಅದ್ಹೇಗೋ ಕಾಣೆ ನಾ ನಿನ್ನ ಬಲೆಗೆ ಪ್ರಥಮ ನೋಟದಲ್ಲೇ ಬಿದ್ದೆ. ಅಂದು ಬಿದ್ದವಳು ಇನ್ನೂ ಎದ್ದಿಲ್ಲ ಏಳಲು ಬಯಸುವದೂ ಇಲ್ಲ.

ಸನಿಹ ನೀನಿಲ್ಲವಾದಾಗಿಂದ ಹಗಲು ರಾತ್ರಿ ತಿಳಿಯುತ್ತಿಲ್ಲ ಊಟ ತಿಂಡಿ ಸೇರುತ್ತಿಲ್ಲ. ನಿನ್ನ ಹೆಸರನ್ನೇ ಕನವರಿಸುತ್ತ ನೀನು ಸಿಗುತ್ತಿಯೋ ಇಲ್ಲವೋ ಎಂಬ ಆತಂಕದಲ್ಲಿ ಬಿದ್ದು ಹೊರಳಾಡುತ್ತಿದ್ದೇನೆ. ನನ್ನ ಈ ತೊಳಲಾಟ ನಿನಗೆ ಖುಷಿ ನೀಡುತ್ತಿದೆಯೇ? ಇನ್ನೊಬ್ಬರ ತೊಳಲಾಟ ಕಂಡು ಖುಷಿ ಪಡುವಷ್ಟು ಕ್ರೂರಿ ನೀನಲ್ಲ. ನಡೆಯುವಾಗ ಸಣ್ಣ ಇರುವೆ ನಡುವೆ ಬಂದರೆ ಅದಕ್ಕೂ ಹಿಂಸಿಸುವನಲ್ಲ ನೀನು. ನನ್ನ ಅಪರೂಪದ ರೂಪಕ್ಕೆ ಮರಳಾಗಿ ಪ್ರೀತಿಸಿದವನು ನೀನಲ್ಲ. ರೂಪ ಗೌಣ. ಸದ್ಗುಣವೇ ರೂಪ ಎನ್ನುವ ಗುಣದವನು ನೀನು.

 ನೀನಿಲ್ಲದೇ ನಾನು ಬೆಳದಿಂಗಳಿಲ್ಲದ ಪೂರ್ಣಿಮೆಯಂತಾಗಿರುವೆ ಮಳೆ ಕಾಣದ ಇಳೆಯಂತಾಗಿರುವೆ. ನೀನೇ ನನ್ನ ನೀನೇ ನನ್ನ ತುಂಬಾ ತುಂಬಾ ಪ್ರೀತಿ ಮಾಡೋದು  ಅಂತ ನಿನಗೂ ಗೊತ್ತು.

ದಿನ ರಾತ್ರಿ ಕನಸಲ್ಲಿ‌‌ ಹಾಜರಿ ಹಾಕಿ ಕೆನ್ನೆಗೆ ಅದರ ಮುದ್ರೆಯೊತ್ತುವ‌, ಮುಂಗುರಳ ಜೊತೆ ಆಡುವ, ಬೆರಳ ಸಂದುಗಳಲಿ ಬೆರಳು ತೂರಿಸಿ ಹಿಂದಿನಿಂದ ಬಿಗಿದಪ್ಪಿ ಮುದ್ದಾಡುವ ನೀನು ಹಗಲಲ್ಲಿ ಅದೆಲ್ಲಿ‌ ಮಾಯವಾಗುವೆ? ಇಲ್ಲೆ ಎಲ್ಲೋ ಅವಿತುಕೊಂಡಿರುವೆ ಎಂದು ಚಡಪಡುತಿದೆ ಈ ಹೆಣ್ಣು ಜೀವದ ಮೈ ಮನ.
ಜೀವನ ಪೂರ್ತಿ ನೀನೇ ಬೇಕೆಂದು ರಚ್ಚೆ ಹಿಡಿದಿದೆ ಮನ.  ನಿನ್ನ ತೋಳ ಬಂಧಿಯಾಗಿ ಪ್ರಣಯಲೋಕದಿ ತೇಲಿಸೆಂದು   ಪಿಸುಗುಡುತಿದೆ ಯೌವನ.
ಚೆಂದ ಚೆಂದದ‌ ನೂರಾರು ಕನಸು ಕಣ್ಣಲ್ಲಿ ಬಿತ್ತಿದ ಮಾಯಗಾರ ಅದೆಲ್ಲಿ
ಮಾಯವಾಗಿರುವೆ? “ನೀನೆ ನನ್ನ ಸವಿಗನಸು ಬೇಗ ಬಂದು ಉಪಚರಿಸು”

ನನ್ನ ಬಿಟ್ಟು ನೀ ಬಾಳಲಾರೆ ಎಂಬುದು ನನಗೆ ಚೆನ್ನಾಗಿ ಗೊತ್ತು.ಒಲಿದ ಮನಕೆ ಹೀಗೆ ವಿರಹ ನೀಡುವುದು ಒಳ್ಳೆಯದೆ? ಕೈ ಕೈ ಹಿಡಿದು ಗಲ್ಲಿ ಗಲ್ಲಿ ಸುತ್ತಿದ ನೆನಪಿನ ಅಲೆಗಳು ಮಾನಸ ಸರೋವರದಲ್ಲಿ ಗಲಭೆ ಎಬ್ಬಿಸಿವೆ. ದಿನದಿಂದ ದಿನಕ್ಕೆ ನಾಜೂಕಾಗುತ್ತಿದೆಹೃದಯದ ಸ್ಥಿತಿ.ಆದಾಗ್ಯೂ ನಿನಗೆಂದೇ ಹಟ ಮಾಡಿ ಬದುಕುತಿರುವೆ. ನಾ ನನ್ನಲ್ಲಿ ಇಲ್ಲ ಈಗ ನಿನ್ನಲ್ಲಿ ಕಳೆದು ಹೋಗಿರುವೆ.

ಕಣ್ಣಲ್ಲಿ ಯಾಮಾರಿಸಿ ದೂರ ಸರಿದರೆ ಬಿಡಲಾರೆ ಅಷ್ಟು ಸಲೀಸಾಗಿ ನಾನು.
ಹಟ ಬಿಟ್ಟು ನನ್ನನ್ನು ಮನ್ನಿಸಲು ಬೇಗ ಬಂದು ಬಿಡು ಗೆಳೆಯ,
ನಿನಗಾಗಿ ತಯಾರಾಗಿ ತುದಿಗಾಲಲಿ ನಿಂತಿರುವೆ.
ಶಬರಿಯಂತೆ ಕಾಯುತಿರುವೆ
.

 ಮೊಗೆ ಮೊಗೆದು ಪ್ರೀತಿಯನು ಧಾರೆಯೆರೆವೆ. ಸೇರಿ ಬಿಡು  ಜೀವದ ಸೆಲೆಗೆ. ಸ್ನೇಹದ ಸಿಂಚನದಲ್ಲಿ ಅರಳಿದ ಒಲವಿನ ಕುಸುಮ ನೀನು. ನನ್ನದೆಯ ಒಲವನೆಲ್ಲ ನನ್ನದೆಲ್ಲವನ್ನು ನಿನಗೆ ನೀಡುವೆ. ಇಣುಕುವ ಚಂದಿರನು ನಾಚಿ ನಗಬೇಕು ಹಾಗೆ  ಸೇರುವೆ ನಿನ್ನ ತೋಳಿಗೆ..ಪೂರಾ ಪೂರಾ ನನ್ನನ್ನೇ ನಿನಗರ್ಪಿಸುವೆ. ಬಾ ಸನಿಹಕೆ. ಬಾ ನನ್ನ ಉಸಿರೆ. ನಿನಗೆ ಜೀವ ಸಖಿಯಾಗುವೆ  ನಿನ್ನೊಲವಿನಲ್ಲಿಯೇ ಮಾಗುವೆ.

ಹಾಗೆ ನೋಡಿದರೆ ಇನ್ನು ನಿನ್ನ ಜೊತೆ ನನ್ನ ಕತೆ  ಶುರುವಾಗಬೇಕಿದೆ.
ಪ್ರೀತಿಯ ಮೊದಲ ಮಳೆಯನು ಸುರಿಸಲು ಬಂದು ಬಿಡು ಇನಿಯ.
ಬಾಕಿ ಇರುವ ಪ್ರೀತಿ ಸಾಲ ದಿನ ರಾತ್ರಿ ತುಸು ತುಸು ಬೆವರ ಮಳೆಯಲ್ಲಿ ತೀರಿಸು
.

ಪ್ರೇಮದ ರಂಗು ಹೆಚ್ಚಿಸಲು ಬಂದು ಬಿಡು ರಂಗು

ನಿನ್ನ ಗುಂಗಲ್ಲಿರುವ
ಗಂಗು


About The Author

1 thought on “ಜಯಶ್ರೀ.ಜೆ. ಅಬ್ಬಿಗೇರಿ ಅವರಲಹರಿ-‘ಬೇಗ ಬಾ ನನ್ನ ಸವಿಗನಸು’”

Leave a Reply

You cannot copy content of this page

Scroll to Top