ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೊನ್ನೆ ಶ್ರಾವಣ ಸಂಜೆಯ ದಿವಸ ಜಿಟಿಜಿಟಿ ಮಳೆ ಹತ್ತಿತ್ತು. ವಯಸ್ಸಿನ ಹಂಗು ತೊರೆದು ಮನೆಯ ಮುಂದಣದ ಅಂಗಣದಿ ಮಳೆಯಲ್ಲಿ ತೊಯ್ದು ತಪ್ಪೆಯಾಗುವಾಸೆ ಚಿಗುರೊಡೆಯಿತು, ಮತ್ತೇಕೆ ತಡ..? ಮಳೆಗೆ ಮೈಯೊಡ್ಡಿಕೊಂಡು ನಿಂತೆ. ಎಂತಹ ಹಿತಾನುಭವ ಕ್ಷಣಮಾತ್ರದಲ್ಲಿ ನನ್ನನ್ನೇ ನಾ ಮರೆತಿರುವಾಗ ಅಮ್ಮನ ಗದರು ಕೇಳಿ ಎಚ್ಚೆತ್ತೆ..! ಮಳೆಯಲ್ಲಿ ತಲೆ ನೆನಿಸಕೋ ಬೇಡ್ವೆ..! ಶೀತ ಆಗಿ ಜ್ವರಬಂದು ಮಲಗಿದರೆ ಏನ್ ಗತಿ ಅಂತೀನಿ..? ಮೊದಲೇ ಕರೋನಾ ಕರೋನಾ ಅಂತ ಜನಾ ಸಾಯ್ತಾ ಇದ್ದಾರೆ ನೆಗಡಿ-ಜ್ವರ ಅಂದರೆ ಸಾಕು ಮಾರುದೂರ ಸರಿತಾರೆ ಸುಮ್ಮನೆ ಒಳಗೆ ಬಾ ಅಂತ ಗದರಿದರು.
ಒಲ್ಲದ ಮನಸ್ಸಿನಿಂದ ಮನೆಯೊಳಗೆ ಹೋಗಬೇಕೆನ್ನುವಷ್ಟರಲ್ಲಿ ರಾಮಕುಂಡಾಡಿ ಬಂದ. ರಾಮಕುಂಡಾಡಿ ಅಂದರೆ ನಿಮಗೆ ಗೊತ್ತಿದೆಯೋ ಇಲ್ಲವೋ..? ನನಗೆ ಗೊತ್ತಿಲ್ಲ. ರಾಮಕುಂಡಾಡಿ ಅಂದರೆ..? ಸಾಮಾನ್ಯವಾಗಿ ಸಿದ್ಧ ಜನಾಂಗದವರು, ತ್ರೇತಾಯುಗದ ರಾಮ, ದ್ವಾಪಾರದ ಕೃಷ್ಣನ ಭಕ್ತರು. ರಾಮ-ಕೃಷ್ಣ ನನ್ನು ತಮ್ಮ ಆರಾಧ್ಯ ದೈವವೆಂದು ನಂಬಿದ ವರು, ಬಲ ಹೇಳುತ್ತ ಬದುಕು ಕಟ್ಟಿಕೊಂಡವರು. ನಮ್ಮ ಹಳ್ಳಿ ಜನರು ರಾಮಕುಂಡಾಡಿ ಎಂದು ಕರೆಯುವುದು ವಾಡಿಕೆ.
ಅಮ್ಮ ನಾ ನಿಮ್ಮ ಬಲ ಹೇಳತಿನಿ ಕೇಳಿ ಅಂದಾ.., ಮುಂದುವರೆದು ನಿಮಗೆ ಚಲೋ ಯೋಗ ಬಂದತಿ ಅಂದಾ..! ಬಲ ಇಲ್ದಾಗ ನೆಲ ಎದ್ದು ಬಡಿತು ಅಂತ ಗಾದೇನೆ ಇದೆ, ಇಡೀ ಜಗತ್ತಿಗೆ ಕೇಡುಗಾಲ ಒದಗಿ ಬಂದೈತಿ, ಲಕ್ಷ ಲಕ್ಷ ಜನರು ಸಾಯ್ತಾ ಇದ್ದಾರೆ, ಇನ್ನು ನನ್ನ ಬಲ ಕಟ್ಟಿಕೊಂಡು ಏನ್ಮಾಡಲಿ ಬೇಡ ಹೋಗಪ್ಪಾ ಅಂದೆ.., ಅಮ್ಮಾ..! ಅಂಗನ್ನಬ್ಯಾಡಿ ನಾವು ಬಲ ಹೇಳಕೊಂಡು ಬದುಕಿದವರು, ನಮ್ಮ ಹೊಟ್ಟೆ ಮೇಲೆ ಹೊಡಿಬೇಡಿ ಅಂದ..! ಬಲ ಹೇಳೋದು ಏನು ಬೇಡ ಈ ಐದು ರೂಪಾಯಿ ತಗೊಂಡು ಹೋಗಿ ಎಂದು ದುಡ್ಡು ಕೊಡು ವಷ್ಟರಲ್ಲಿ ಅಣ್ಣ ಬಂದಾ, ನಾವು ದುಡ್ಡು ಸುಮ್ಮನೆ ತಗೊಳ್ಳ, ಅದಕ್ಕೆ ನಮ್ಮ ವೃತ್ತಿಧರ್ಮ ಒಪ್ಪಲ್ಲ, ಅಣ್ಣನದು ಬಲ ಹೇಳತೀನಿ ಅಂತ ಕರಿದಾರ ಕಟ್ಟಬ್ಯಾಡ, ಕರಿವಸ್ತ್ರ ತೊಡಬ್ಯಾಡ, ಯಾರಿಗೂ ಕೈ ತೋರಿಸಬ್ಯಾಡ ಎಂದು ಶುರುವಿಟ್ಟುಕೊಂಡ, ನಾನು ಸುಮ್ಮನೆ ಒಳನಡೆದೆ.
ಅಮ್ಮ ಚಳಿ-ಮಳೆಯ ಕಾಲಕ್ಕೆ ಹೇಳಿ ಮಾಡಿಸಿದ ಕುರುಕುಲು ಪದಾರ್ಥ (ಸ್ಯ್ನಾಕ್ಸ್) ಚುಡಾ-ಚಹಾ ಮಾಡಿದ್ದಳು, ತಿಂದು ಚಹಾ ಕುಡಿದೆ, ರಾಮಕುಂಡಾಡಿ ನೆನಪಾದ..! ಕೂಡಲೇ ಅವನು ಹೇಳಿದ ಮಾತು  ಕರಿದಾರ ಕಟ್ಟಬ್ಯಾಡ, ಕರಿವಸ್ತ್ರ ತೊಡಬ್ಯಾಡ ಮತ್ತೆ ಮತ್ತೆ ನೆನ ಪಾ ಯ್ತು, ಅಮ್ಮನನ್ನು ಕೇಳಿದೆ, ಅಪ್ಪನನ್ನು ಕೇಳಿದೆ ಯಾಕೆ ಕರಿದಾರ ಕಟ್ಟಬಾರದು..? ಕರಿವಸ್ತ್ರ ಯಾಕೆ ತೊಡ ಬಾರದು..? ಅಂತ..! ಏನೋ ನಮಗೆ ಗೊತ್ತಿಲ್ಲಮ್ಮ ಮೊದಲಿಂದಲೂ ಹಿರಿಯರು ಅದನ್ನೇ ಹೇಳಿಕೊಂಡು ಬಂದಿದ್ದಾರೆ ಕಟ್ಟಬಾರದು, ತೊಡಬಾರದು, ಕೈ ತೋರಿಸಿ ಅಪಶಕುನ ಅಂತ ಅನಿಸಿಕೊಳ್ಳಬಾರದು ಅಷ್ಟೇ ಅಂದರು. ಮೊದಲಿನ ಎರಡು ಮಾತಿಗೆ ಸಮರ್ಪಕ ಉತ್ತರ ದೊರೆಯದೇ ಮನಸ್ಸು ಚಡಪಡಿಸಿತು, ಎಲ್ಲರ ಸಾಮಾನ್ಯ ತಿಳಿವಳಿಕೆ ಯಂತೆ ಕಪ್ಪು ಅಂದರೆ ಅಜ್ಞಾನನದ ಸಂಕೇತ, ಕೆಟ್ಟದ್ದು ಎಂಬರ್ಥದಲ್ಲಿ ಕಟ್ಟಬಾರದು ಅಂತಿರಬಹುದು..! ಆ ಬಗ್ಗೆ ಇನ್ನಷ್ಟು ಹೊಳ ಹೊಕ್ಕು ನೋಡಿದಾಗ ಹೊಳೆದದ್ದಿಷ್ಟು :

ಕಂದಗಲ್ಲ ಹನುಮಂತರಾರಯ ಕುರುಕ್ಷೇತ್ರ ನಾಟಕದ ಒಂದು ಸಂದರ್ಭದಿ ಈ ಬಗ್ಗೆ ಸ್ಪಷ್ಟೀಕರಣ ಸಿಗುತ್ತದೆ.
ಪಾಂಡವರು-ಕೌರವರ ನಡುವೆ ನಡೆಯಬಹುದಾದ ಕುರುಕ್ಷೇತ್ರ ಮಹಾ ಕದನ ವನ್ನು ತಡೆಯಲು ಸ್ವತಃ ಶ್ರೀಕೃಷ್ಣನು ಪಾಂಡ ವರಿಗೆ ಪಂಚಪುರಗಳನ್ನು ನೀಡುವುದ ರೊಂದಿಗೆ ಸಂಧಿಯನ್ನು ಸಾಧಿಸುವುದಕ್ಕಾಗಿ ಪಾಂಡವರ ರಾಯಭಾರಿಯಾಗಿ ಹಸ್ತಿನಾವತಿಗೆ ಆಮಗಮಿ ಸುವ ಪ್ರಸಂಗ ; ಇತ್ತ ದುರ್ಯೋಧನ ಶಕುನಿ ಮಾವನವರ ಕಿವಿಮಾತಿಗೆ ಓಗೊಟ್ಟು ಸ್ವಾಗತ ಸಮಾರಂಭವನ್ನು ಏರ್ಪಡಿಸದೇ, ಯಾರೂ ಕೂಡ ಕೃಷ್ಣನನ್ನು ಸ್ವಾಗತಿಸದಿರುವಂತೆ ಢಂಗುರ ಸಾರುತ್ತಾನೆ. ಅಂತೆಯೇ ಕೃಷ್ಣನು ಹಸ್ತಿನಾವತಿಗೆ ಆಗಮಿಸಿ, ಕೇರಿಯ ದಾರಿಹಿಡಿದು ಊರೊಳಗೆ ಪ್ರವೇಶಿಸಬೇಕಾದರೆ, ಕೃಷ್ಣನನ್ನು ಯಾರೂ ಕೂಡ ಎದುರುಗೊಳ್ಳದಿರುವುದನ್ನು ಗಮನಿಸಿದ ಕಾಲಿಯಾ ತಮ್ಮ ಕೇರಿಯ ಜನರನ್ನು ಹರ್ಷೋದ್ಗಾರದಿ ಏ ಕನಕಾ..! ಏ ಭಂಡಾರಿ..! ಎಂದು ಕೂಗಿ ಕರೆದು ಮೂರುಲೋಕದ ಮದೇವ ಮನಸ್ಯಾ ಆಗಿ ಬಂದಾನ, ಆ ನಮ್ಮಪ್ಪನ ಪಾದಕ್ಕೆ ಬಿದ್ದು ನಮ್ಮ ಉದ್ದಾರ ಮಾಡಿಕೊಳ್ಳೊಣ ಬನ್ನಿರೋ ಎಂದು ಎಲ್ಲರೂ ಮುಂದಾಗಿ ಕೃಷ್ಣನ ಕೊರಳಿಗೆ ಹೂಮಾಲೆಯನ್ನು ಹಾಕಿ ನಮಸ್ಕರಿಸಿ ತಮ್ಮಅಹವಾಲನ್ನು ಆತನೆದಿರು ತೋಡಿಕೊಳ್ಳುತ್ತ..,

ಸ್ವಾಗತ ಮಾಳ್ಪೆವು ಕೃಷ್ಣಯ್ಯಾ | ಮೊರೆಯ ಕೇಳಯ್ಯ ಕೃಷ್ಣಯ್ಯ, ಊರಬಿಟ್ಟು ಬಹುದೂರ ಬಹುದೂರ ಇಟ್ಟಿರುವರು | ಕೇರೆ ನಮ್ಮದು ಬೇರೆ ಕಾಣಯ್ಯ ಊರಾಗ ಬರಗೊಡರು ದಾರ್ಯಾಗ ನಿಲಗೊಡರು | ಎಷ್ಟೆಂತ ಹೇಳಲಿ ಬವಣಿಯಾ ||1||

ಪ್ರಾಣಿ ಸತ್ತರ ಪ್ರೇತವಯ್ಯರೆಂಬೋರು |
ಕೀಳಾದ ಕಾರ್ಯಕ್ಕೆ ಬಾ ಅಂಬೋರು..!
ಮದುವಿ ಹಬ್ಬಗಳಲ್ಲಿ ಉಂಡು ತ್ಯೇಗಿದಮ್ಯಾಗ |
ಉಳಿದ ಎಂಜಲನ್ನು ನೀಡುವರಯ್ಯಾ ||2||

ನಾಯಿ ನರಿಗಳ ಮಮತಿಲೆ ಸಾಕಿ |
ಪರಿಪರಿಯಿಂದ ಸಲಹುವರು |
ನಾಯಿನರಿಗಿಂತ ಕಡಿಮಾಡಿ ನೋಳ್ಪರು..!
ಏಸು ಜನ್ಮದ ಘನಪಾಪ ಹೇಳಯ್ಯ ||3||

ಊರಾಗಿನವರಂತೆ ಕೇರ್ಯಾಗಿನವರು |
ತಮ್ಮ ತಾಯಿಗಳ ಹೊಟ್ಟೆಲೆ ಹುಟ್ಟಿದರು |
ರಕ್ತ ಮಾಂಸದಿಂದ ತುಂಬಿತೆಲ್ಲರ ದೇಹ |
ಪಂಚ ತತ್ತ್ವದ ಮೂಲ ಒಂದಯ್ಯಾ ||4||
-ಕಾಲಿಯಾ

ಕಾಲಿಯಾನ ಕುರಿತಾದ ಕೃಷ್ಣನ ಮಾತು ಗಮನಿಸುವಂತದ್ದು, ಇವನು ತ್ರೇತಾಯುಗದ ಹೊಲೆಯನೇ..? ಛೇ..! ಬಾ ಗೆಳೆಯನೇ ಎಂದು ಆಲಂಗಿಸಿ ಕಾಲಿಯಾ..! ಬರುವ ಕಲಿಯುಗದಲ್ಲಿ ಪರಮ ಪಾವನೆಯಾದ ಭೀಮರಥಿಯೊಡನೆ ಪ್ರವಹಿಸುತ್ತಿರುವ ಚಂದ್ರಭಾಗ ನದಿಯ ತೀರದಲ್ಲಿ ವಿಠ್ಠಲ  ಎಂಬ ನಾಮದಿಂದ ನೆಲೆಸುವ ನೀನು ಅಂತ್ಯಜ ಕುಲದಲ್ಲಿ ‘ಚೋಕಾಮಿಳ’ ನೆಂಬ ಹೆಸರಿನಲ್ಲಿ ಪ್ರಖ್ಯಾತನಾಗಿ ನನ್ನ ಭಕ್ತರತ್ನ ಮಾಲಿಕೆಯಲ್ಲಿ ದಿವ್ಯಕೌಸ್ತುಭ ವಾಗಿ ಕಂಗೊಳಿಸು ಕಾಲಿಯಾ ಎಂಬುದಾಗಿ ಆಶೀರ್ವದಿಸುತ್ತ, ಬಹೂದೂರದಿಂದ ಬಂದಿರುವೆ ಏನಾದರೂ ಕೊಡು ಎಂದಾಗ ಕಾಲಿಯಾ : ದೇವಾ ನಿನಗೋಸ್ಕರ ಕೆನೆಮೊಸರು ಕಡೆದು ಬೆಣ್ಣೆ ತೆಗೆಯದೆ ಮಜ್ಜಿಗೆಯನ್ನು ತಂದಿರುವೆ ದೇವಾ ಸ್ವೀಕರಿಸು ಎಂದು ಮತ್ತೇನನ್ನೋ ಧ್ಯೇನಿಸುತ್ತ ದೇವಾ..! ಬಂಗಾರದ ಪಾತ್ರೆಯಲ್ಲಿ ನೊರೆವಾಲು ಸಕ್ಕರಿಯನ್ನು ಕುಡಿಯುವ ನೀನು, ನೀನು ಈ ಮಣ್ಣಿನ ಮಡಿಕೆಯೊಳಗಿನ ಮಜ್ಜಿಗೆಯನ್ನು.., ಅಂದಾಗ


ಮಣ್ಣಿನಿಂದಲೇ ಸಕಲ ವಿಶ್ವ |
ಮಣ್ಣಿನೋಳಿಹದು ಜಗಜ್ಜನನಿ ಮಾತೃಭಾವಾ ||
ಮುನ್ನಿದನು ಮನದಿ ಭಾವಿಸು |
ಮಣ‍್ಣಲ್ಲಿಹದು ಅಖಿಲ ಬ್ರಹ್ಮಾಂಡ ಮೂಲತತ್ತ್ವ ||1||

ಎಂದು ಹೇಳುತ್ತಾ.., ಕಾಲಿಯಾ ಸಾಕ್ಷಾತ್ ನಂದಗೋಪನ ಮನೆಯ ಮಜ್ಜಿಗೆಯನ್ನು ಕುಡಿದಂತಾಯ್ತು, ಕಾಲಿಯಾ ನಿನ್ನ ಕೊರಳಲ್ಲಿ ಕಟ್ಟಿದ ಕರಿದಾರವನ್ನು, ತಲೆಗೆ ಸುತ್ತಿದ ವಸ್ತ್ರವನ್ನು ಹಾಗೂ ಹೊದ್ದುಕೊಂಡು ಬಟ್ಟೆಯನ್ನು ಕೊಡುವೆಯಾ..? ಎಂದು ಕೇಳಿ ಪಡೆದು ಈ ವಜ್ರಕಂಕಣವನ್ನು ನಿನ್ನ ಸಮಾಜಕ್ಕೆ ಕೊಡು, ಮುಂದೆ ಬರಲಿರುವ ಕಲಿಯುಗದಲ್ಲಿ ಕಾಣುವ ದರಿದ್ರ ನಾರಾಯಣನ ವಸ್ತ್ರಗಳೇ ಇವು


ಚೀರ ವಸ್ತ್ರವನ್ನುಟ್ಟು ವಿರುತದಿ |
ಛಿದ್ರಿಬಟ್ಟೆಯ ಹೊದ್ದು ಸರಸದಿ |
ಬರುವ ಕಲಿಯುಗದಿರದೆ ಬರುವನು ಬುದ್ಧರೂಪದಲ್ಲಿ | ಗುರುತು ಜಗಕಿದು ಬುದ್ಧರೂಪದ ಪೊರೆಯುವನು ತದಕುಲವಸದಮಲ ನಿರುತ ಹರಿಜನರೆಂದು ಕರೆಯಲಿ ನಿಮಗೆ ಲೋಕದಲಿ ||1||

ಎಂದು ಹಾರೈಸುತ್ತಾನೆ, ಅಂತೆಯೇ ಕರಿದಾರ, ಕರಿವಸ್ತ್ರ ದರಿದ್ರ ನಾರಾಯಣ ಸಂಕೇತವೆಂದು, ಕರಿ ದಾರ ಕಟ್ಟುವುದರಿಂದ, ಕರಿವಸ್ತ್ರ ತೊಡುವುದರಿಂದ ದಾರಿದ್ರ್ಯ ತಲೆ ಏರುತ್ತದೆ ಎಂಬ ಭಯ ಜನರಲ್ಲಿ ಮನೆ ಮಾಡಿದೆ ಆದ್ದರಿಂದಲೇ ಕರಿದಾರ ಕಟ್ಟಬ್ಯಾಡ, ಕರಿವಸ್ತ್ರ ತೊಡಬ್ಯಾಡ ಎಂದು ಹೇಳುವ ಪರಿಪಾಠ ಬೆಳೆದುಕೊಂಡು ಬಂದಿದೆ. ಮುಂದುವರೆದು ಪೂರ್ಣ ಪಾಠವನ್ನು ಮುಂಬರುವ ಕಂದಗಲ್ಲರ ಸಮಗ್ರ ನಾಟಕ ಸಂಪುಟ ಭಾಗ – ರಲ್ಲಿ ನೋಡ ಬಹುದಾಗಿದೆ.
———————————-

About The Author

2 thoughts on “‘ಕರಿದಾರ ಕಟ್ಟಬ್ಯಾಡ, ಕರಿವಸ್ತ್ರ ತೊಡಬ್ಯಾಡ’ವಿಮರ್ಶಾ ಲೇಖನ-ಡಾ.ಯಲ್ಲಮ್ಮ ಕೆ”

Leave a Reply

You cannot copy content of this page

Scroll to Top