ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂದು ನಾ ನೋವಿನಲಿ ವಿಧಿಯ ಹಳಿಯುತ
ಅದರಾಟಕೆ ಬಲಿಯಾಗಿ ನಾಚುತಲಿದ್ದೆ
ಕುರುಡು ದೈವವ ನಂಬಿ ಅದನು ಪ್ರಾರ್ಥಿಸುತ
ಹಳಿತಪ್ಪಿದಂತವನಾಗಿ ನರಳಾಡುತಿದ್ದೆ

ನನ್ನ ಜೊತೆಯವರೆಲ್ಲ ತಮ್ಮ ಬರಹಗಳಲಿ
ನಗುನಗುತ ಜಯಭೇರಿ ಬಾರಿಸುತಿರಲು
ನನ್ನ ಕವಿಮತಿಗಂದು ಗರವು ಬಡಿದಿತ್ತೇನೋ
ಮಂಕುಮಂಕಾಗಿ ಮಲಗಿತ್ತು ಮೌನವಾಗಿ

ಏಕಾಕಿ ಭಾವವೋ ಅಳುಕು ಅಂಜಿಕೆ ನೆಳಲೋ
ಅಸಹಾಯಕತೆ ಅಳಲೋ ಹೇಳಲಾರೆ
ಯತ್ನಯತ್ನಗಳಲ್ಲಿ ಸೋಲುಗಳ ವಿಕ್ರಮವು
ಗೆಲವು ಮರೀಚಿಕೆಯಾಗಿ ಓಡುತಿತ್ತು

ನಾರಣಪ್ಪನಿಗಂದು ಹರಿಯೊದಗಿ ಬಂದಂತೆ
ನೀವು ಬಂದಿರಿ ಗುರುವೆ ನನ್ನ ಬಳಿಗೆ
ನಿಮ್ಮ ನುಡಿ ಸಲಹೆಗಳು ನಿಮ್ಮ ಮಾಂತ್ರಿಕ ಸ್ಪರ್ಶ
ಪುಳಕಗೊಳಿಸಿದವೆನ್ನ ಮತಿಯ ಮಸೆದು

ನಿಮ್ಮ ನಿರ್ಮಲ ಹೃದಯದೊಂದೊಂದು ನುಡಿಯು

ಸವಿಜೇನು ಆಣಿಮುತ್ತು ಅಪರಂಜಿಯು
ನೀವಿತ್ತ ಪ್ರೋತ್ಸಾಹ ಆ ನಿಮ್ಮ ವಿಶ್ವಾಸ (
ಛಲವಾಗಿ ನನ್ನಲ್ಲಿ ಬೆಳಯುತಿಹವು

“ನಿಮ್ಮ ಜ್ಞಾನದ ಹರಹು ವಿಸ್ತಾರವಾಗಿಹುದು
ಮಂಕು ಬಡಿಯಿತೆ ನಿಮಗೆ ಏಳಿ ಮೇಲೇಳಿ
ಬರೆಯತೊಡಗಿರಿ ನೀವು ಅಳುಕುಗಳ ಬದಿಗಿಟ್ಟು
ಪೊರೆಕಳೆದ ಹಾವಂತೆ ಪುಟಿದು ನಿಲ್ಲಿ’

ಎಂದು ಬೆನ್ನನು ತಟ್ಟಿ ಹುರಿದುಂಬಿಸುತ ನನ್ನ
ಕಾವ್ಯರಂಗಕೆ ಮೆಲ್ಲನಡಿಯೆರಿಸಿದಿರಿ
ಬಾಡಿದ್ದ ಎಳಲತೆಯು ನಿರ್ಮಲದ ನೀರುಂಡು
ಚೇತನವ ಪಡೆವಂತೆ ಬೆಳೆಯಿಸಿದಿರಿ

ನಿಮ್ಮೆದೆಯ ಮಂದಿರದ ಕಾವ್ಯ ದೀವಿಗೆ ಬೆಳಕ
ನನ್ನೆದೆಗೆ ಹರಿಸುತ್ತ ಬೆಳಸಿದಿರಿ.
ಇಂದು ನಾ ಕವನ ಕುಸುಮಗಳ ಮಾಲೆಯ ಕೋದು
ಕವಿವರರ ಜೊತೆ ನಿಲುವಂತೆ ಮಾಡಿದಿರಿ.

ನಿಮ್ಮ ಈ ಋಣವನ್ನು ತೀರಿಸಲು ನಾನಿಂದು
ನೀವಿತ್ತ ದೀವಿಗೆಯ ಬೆಳಕಿನಲಿ
ಕವನಗಳ ಮಾಲೆಯನು ಬರೆದು ನಿಮಗರ್ಪಿಸುತ
ನಿಮ್ಮ ಕಾವ್ಯದ ಬೆಳಕ ಜಗಕೆಲ್ಲ ಹರಿಸುವೆನು


About The Author

Leave a Reply

You cannot copy content of this page

Scroll to Top