ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರೀತಿಯನರಸಿ ಅಲೆದ ದಿನಗಳನೆಂತು ಲೆಕ್ಕ ಹಾಕಲಿ
ಒಲವನರಸಿ ಸುತ್ತಿದ ಕ್ಷಣಗಳನೆಂತು ಲೆಕ್ಕ ಹಾಕಲಿ

ಹೃದಯ ಹಿಂಡೊ ಅನುಭವ ತಪ್ತತೆಯಲೇ ಈ ಜೀವ
ಸಲುಗೆಯನರಸಿ ಕಳೆದ ಗಳಿಗೆಗಳನೆಂತು ಲೆಕ್ಕ ಹಾಕಲಿ

ಸದಾ ನನ್ನೆದೆಯಲಿ ತೋಮ್ ತನನ ನಾದ ಮೃದಂಗ
ಸವಿಮಾತನರಸಿ ಸಾಗಿದ ನಿಮಿಷಗಳನೆಂತು ಲೆಕ್ಕ ಹಾಕಲಿ

ತಲ್ಲಣ ತವಕಗಳೇ ಮೇಳೈಸಿ ಮಾರ್ಧನಿಸಿ ನಡುಗಿಸಿದವು
ಸಲ್ಲಾಪವನರಸಿ, ತುಳಿದ ಹೆಜ್ಜೆಗಳನೆಂತು ಲೆಕ್ಕ ಹಾಕಲಿ

ಮಿಡಿತ ತುಡಿತದ ಭಯದಲಿ ಎದೆ ಝಲ್ಲೆಂದು ಜರ್ಜರಿತ
ಸ್ಪರ್ಶಸುಖವನರಸಿ ಬಾಳಿದ ಭರವಸೆಯನೆಂತು ಲೆಕ್ಕ ಹಾಕಲಿ

ನೆನೆದಾಗಲೆಲ್ಲ ಏರುವ ಚಳಿಜ್ವರಕೆ ಔಷಧಿ ಸಿಗಲಿಲ್ಲ ಎಂದೂ
ಆಪ್ತತೆಯನರಸಿ ಸುಳಿದ ಅಹವಾಲನೆಂತು ಲೆಕ್ಕ ಹಾಕಲಿ

ಕಣ್ಣ ಕಂಬನಿ ಹೆಪ್ಪುಗಟ್ಟಿ ಹನಿಯೊಡೆಯದೆ ಮೂಕಮೌನ
ಸರಸ ಸಲುಗೆಯನರಸಿ ಸವೆದ ಕಾಲವನೆಂತು ಲೆಕ್ಕ ಹಾಕಲಿ

ಬಿಗಿದ ಕಂಠದಲಿ ಹೂತಿಟ್ಟ ಮಾತುಗಳ ನಿಲ್ಲದ ಮೊರೆತ
ಪ್ರೇಮವನರಸಿ ತಾಳಿದ ವೇದನೆಯನೆಂತು ಲೆಕ್ಕ ಹಾಕಲಿ

ತೆರೆದ ತೋಳುಗಳು ಒಂದಾಲಿಂಗನಕೆ ಗೋಗರೆದವೆಷ್ಟೋ
ಬಿಸಿಯುಸಿರನರಸಿ ತೆರೆದ ಆತುರವನೆಂತು ಲೆಕ್ಕ ಹಾಕಲಿ

ಹಾತೊರೆವ ಅನುಳ ತುಟಿಗಳಲಿ ಹೆಪ್ಪುಗಟ್ಟಿದ ಅಮೃತಧಾರೆ
ತುಸು ತೃಪ್ತಿಯನರಸಿ ಬಡಿದ ಬಡಿತವನೆಂತು ಲೆಕ್ಕ ಹಾಕಲಿ


About The Author

1 thought on “ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್”

  1. ಅನ್ನಪೂರ್ಣ ಮೇ ಡಂ ನಿಮಗೆ ಅಭಿನಂದನೆಗಳು ತುಂಬಾ ಸೂಗಸಾದ ಮನ ಮೆಚ್ಚುವ ಬರಹಗಳು ನಿಮ್ಮದು

Leave a Reply

You cannot copy content of this page

Scroll to Top