ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿ:ಸ್ವಾರ್ಥ ಜೀವನವು,
ನಿನದಲ್ಲವೆ ಚೆಲುವೆ!
ಆ ಮರಗಿಡಬಳ್ಳಿಯ ಮುಕುಟದಲಿ,
ಅರಳುತ ನಗುತಿರುವೆ.

ತರು ಲತಾ ಗುಲ್ಮದೊಳು,
ಚಿಗುರು ಒಡೆದಿದೆ ಚೆಲುವೆ.
ಮುದಗೊಳಿಸುವ ತಳಿರುನ ನಡುವೆ,
ನಿನ್ನಿರುವಿಕೆಯ ಕಾಣುವೆ.

ಮಂಜಿನ ಪದರ ಹೊತ್ತು,
ಬೀಸೊ ಮಂದ ಸಮೀರ.
ಶೋಭಿತ ನಿನ್ನ ಪಕಳೆಗಳ ಸುತ್ತ
ಭೃಂಗನಾದ ಝೇಂಕಾರ.

ಸ್ವಾಭಿಮಾನಿಯು ನೀನು,
ರಂಜಿತ ಗುಣಶೀಲನು.
ನಿಜ ನಿರ್ಮಲ, ನಿರ್ಗುಣ ಸಂಪನ್ನ.
ಅಂತೂ ಪರಾಧೀನ.

ಪೆಣ್ಗಳ ಮುಡಿಯನೇರಿ,
ಅಂದವಿಮ್ಮಡಿಗೊಳಿಸಿ,
ದೈವದ ಮುಡಿಯಿಂದ, ಅಡಿಯವರಿಗೆ,
ಭಕ್ತಿಯಿಂ ಸಿಂಗರಿಸಿ.

ಘಮಘಮ ಸುಗಂಧವನು
ಎಲ್ಲೆಡೆಗೂ ಪಸರಿಸಿ,
ಹುಟ್ಟು- ಸಾವು ಜೀವನ ಪರ್ಯಂತ,
ನೀ ಸದಾ ಸಮರ್ಪಿತ.

ಉಷೋದಯ ಕಾಲದಲಿ,
ಹೊಂಗಿರಣ ಬೆಳಕಿನಲಿ,
ಫಳಫಳಿಸುವ ನಿನ್ನ ಮುಖದ ಬಿಂಬ,
ಎನಗೆ,ನಯನಾನಂದ.


About The Author

Leave a Reply

You cannot copy content of this page

Scroll to Top