ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಡಾ ಅನ್ನಪೂರ್ಣಾ ಹಿರೇಮಠ-

ಸಾರ್ಥಕತೆಯ ನಗೆ ಚೆಲ್ಲು

ಇಲ್ಲಿರುವ ಸತ್ಯಗಳ ತಿಳಿದು ಬದುಕುವುದ ಕಲಿ ಮನವೇ
ನಿಸ್ವಾರ್ಥ ತೃಪ್ತಿಯಲಿ ಸಾರ್ಥಕತೆಯ ನೆಗೆಯ ಚೆಲ್ಲಿ//ಪ//

ಉರಿಯೊ ಬೆಂಕಿಯ ಸಹಿಸಿ ಮೃದುವಾಗೊ ಮೇನದಂತೆ
ಕೆಸರಲ್ಲಿದ್ದರೂ ಕುಸಿಯದಾ ಕಮಲದೊಳು ಮನವನಿಟ್ಟು
ಸುಡುತಲ್ಲಿದ್ದರೂ ಬೆಳಕ ಚೆಲ್ಲೊ ದೀಪದೊಳಗೊಂದಾಗು
ಉಸಿರು ಕೊಡುತ ಸೊರಗದೆ ಸೃಷ್ಟಿ ಚೆಲುವಲೊಂದಾಗಿ
ನಳನಳಿಸಿ ಹೆಮ್ಮರವಾಗಿ ನೆರಳ ತಂಪು ನೀಡಿ
ನಗುತ ಬಾಳೊ ಮರದಂತೆ ಬದುಕು ಸವೆಸು//

ತನ್ನದಲ್ಲದ ಭ್ರೂಣಕೆ ಜೀವಕೊಟ್ಟು ಗುಟುಕನಿಟ್ಟು
ಮಡಿಲ ಹಾಸಿ ಮಮತೆ ಸುರಿಸಿ ಸೆರಗೊದಿಸಿ
ಸಲುಹಿ ರೆಕ್ಕೆ ಬಲಿಸಿ ಹಾರಿ ಬಿಡುವ ಕಾಗೆಯ
ಭೇದವರಿಯದಾ ಗುಣವ ಮನದಲಿಡು
ಸುಡುವ ಬಿಸಿಲ ದಗೆಗೆ ಕಮರದೆ ಆವಿಯಾಗಿ
ಮೋಡಗೊಂಡು ಗುಡುಗು ಸಿಡಿಲೊಂದಿಗೆ
ನೀರ ಸುರಿದು ಜಗತಣಿಸೊ ಮಳೆಯಂತೆ ನೀನಾಗು//

ಜಟಿಲ ಕುಟಿಲ ದಾರಿಯುದ್ದಕೂ ಬರುವ ಗುಡ್ಡಬೆಟ್ಟ
ಬಂಡೆಗಳ ಸೀಳುತ ಗುರಿಸೇರೋ ತೊರೆಯಂತೆ ಬದುಕಿ ತೋರು
ಶಕ್ತಿ ಯುಕ್ತಿಗೆ ಮೇಲು ಕಾಡರಾಜನೆಂದು ಅಮಲು
ಎಲ್ಲ ಪ್ರಾಣಿಗೂ ಮಿಗಿಲಿದ್ದರೂ ತನ್ನ ಪಾಡಿಗೆ ತಾನುಂಡು
ಹಸಿವನಷ್ಟೆ ಹಿಂಗಿಸಿಕೊಂಡು ಘರ್ಜಿಸಿ ನಿರಾಳ ನಿದಿರೆಯಲಿ
ತೃಪ್ತಿಹೊಂದುವ ಸಿಂಹವಾ ನೋಡಿ ಬದುಕುವುದಕಲಿ ಮನವೇ//

ಸಿಹಿಯ ಮೈ ನನ್ನದೆಂದು ಬೀಗಿ ಸೆಟೆಯದೆ
ಗಾನದ ಗಾಳಕ್ಕೆ ಸಿಕ್ಕರೂ ನರಳದೆ ನಲುಗದೆ
ಎಲ್ಲ ಸಹಿಸಿ ರಸಪಾಕವಾಗಿ ತೃಪ್ತಿ ನೀಡೊ ಕಬ್ಬಂತಿರು
ಮಣ್ಣಲಿ ಹೂತಿಟ್ಟರೂ ಕಾಳು ಕಳೆಗುಂದಿ ಕೊಳೆಯದೆ
ಛಲದಿ ನೆಲವನೆ ಸೀಳಿ ಚಿಗುರಿ ಫಲ ಕೊಡುವಂತೆ
ಕದ್ದು ತಿನ್ನುವವರೆಂಬರಿವಿಲ್ಲದೆ ಸಾವಿರ ಸಾವಿರೂಗಳ
ಪರಿಮಳ ಬಿಡದೆ ಹೀರಿ ತಂದು ಜೇನಾಗಿಸಿ
ಪ್ರತಿಫಲವ ಬಯಸದೆ ನಿತ್ಯ ದುಡಿವ
ಜೇನು ಹುಳುವಂತೆ ಬಾಳುತಿರು ಸುಮ್ಮನೆ ನೀನು//

ಎಲೆ ಮೆದ್ದು ಎಳೆಗಳ ಹೊಸೆ ಹೊಸೆದು ಗೂಡಾಗಿಸಿ
ಗುಟ್ಟಿಲ್ಲದೆ ಗರ್ವಪಡದೆ ಚಿಟ್ಟೆಯಾಗಿ ಹಾರಿಬಿಡುವ
ಪುಟ್ಟ ಹುಳುವಿನ ವೈಶಾಲ್ಯತೆಯಲಿ ಮನವನಿಡು
ಕಸಕಡ್ಡಿ ಆಯ್ದು ಜಾನ್ಮೆ ಶ್ರದ್ಧೆ ಮೆರೆದು
ಆಸರೆಯ ಗೂಡೆಣೆದು ಪುಟ್ಟಹಕ್ಕಿಗೆ ಬದುಕಲಿಂಬು ಕೊಡುವ
ಗಿಜಗನೋ ನಿಸ್ವಾರ್ಥ ಬರಲಿ ನಿನ್ನ ಮನಕೆ
ತಿಂದ ಕಸವೆಲ್ಲ ರಸವಾಗಿಸಿ ಹಾಲೋಗರವನೇ
ಸುರಿವ ಕಾಮದೇನುವಿನ ಕರುಣದೊಡಲ ನೆನೆದೊಮ್ಮೆ
ಎಲ್ಲ ಪೆಟ್ಟು ಸಹಿಸಿ ಶಿಲ್ಪವಾಗಿ ಕಣ್ಮನ ತನಿಸೊ
ಕಲ್ಲುಗಳ ನೆನೆದೊಮ್ಮೆ ಬಾಳಿ ಬಿಡು ಮನವೇ
ಬರುವುದೆಲ್ಲವ ಸಹಿಸಿ ಸಾರ್ಥಕತೆಯ ಗುಟ್ಟನರಿತು//


ಡಾ ಅನ್ನಪೂರ್ಣಾ ಹಿರೇಮಠ

About The Author

Leave a Reply

You cannot copy content of this page

Scroll to Top