ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಚನ ಸಂಗಾತಿ

ಪ್ರೊ. ಜಿ ಎ. ತಿಗಡಿ.

ಅರಿವಿನ ಮಾರಿತಂದೆಯ ವಚನ-ವಿಶ್ಲೇಷಣೆ

ಹಾಲು ಬತ್ತಿದ ಹಸುವಿಂಗೆ ಕರುವ ಬಿಟ್ಟಡೆ
ಒದೆಯುವುದಲ್ಲದೆ ಉಣಲೀಸುವುದೆ?
ಅರಿವು ನಷ್ಟವಾದವ ಕ್ರೀಯ ಬಲ್ಲನೆ?
ಕ್ರೀಯೆಂಬುದೆ ಹಸು, ಅರಿವೆಂಬುದೆ ಹಾಲು, ಬಯಕೆಯೆಂಬುದೆ ಕರು.
ಇಂತೀ ತ್ರಿವಿಧವನರಿದಲ್ಲಿ ಸದಾಶಿವಮೂರ್ತಿಲಿಂಗವು ತಾನೆ.

   ಮೊಲೆ ಹಾಲು ಬತ್ತಿ ಹೋದ ಆಕಳ ಹತ್ತಿರ, ಹಾಲು ಕುಡಿಯಲೆಂದು ಅದರ ಕರುವನ್ನು ಬಿಟ್ಟರೆ, ಅದು ಒದೆಯುತ್ತದೆಯೇ ವಿನಃ ಅದಕ್ಕೆ ಹಾಲು ಕುಡಿಸುವುದಿಲ್ಲ.   ಅದರಂತೆ ಅರಿವನ್ನು ಕಳೆದುಕೊಂಡವನು ಯಾವುದೇ  ಕೆಲಸವನ್ನು ಮಾಡಲು ಅಸಮರ್ಥನಾಗುತ್ತಾನೆ.   ಇಲ್ಲಿ ಬಳಸಿದ ಉಪಮೆಯಲ್ಲಿ,   ಹಸು ಎಂಬುದು ‘ಕ್ರಿಯೆ ‘ ಅಥವಾ ಕರ್ಮವಾಗಿದೆ.   ಹಾಲು  ಎಂಬುದು ‘ಅರಿವು ‘ ಆಗಿದೆ.  ಮನದ ಬಯಕೆ  ಎಂಬುದು ‘ಕರು ‘ ವಾಗಿದೆ.    ಹೀಗೆ ಅರಿವು – ಕ್ರಿಯೆ – ಬಯಕೆಗಳೆಂಬ ತ್ರಿವಿಧಗಳನ್ನು  ಅರಿತ ಶರಣನೆ ಸದಾಶಿವಮೂರ್ತಿಲಿಂಗವೆನಿಸಿಕೊಳ್ಳುತ್ತಾನೆಂದು ಅರಿವಿನ ಮಾರಿತಂದೆ ಶರಣರು ಹೇಳುತ್ತಾರೆ.

   ಅರಿವು ಕ್ರಿಯೆ ಮತ್ತು ಬಯಕೆಗಳೆಂಬ ತ್ರಿವಿಧವನ್ನು ಹೇಗೆ ಅರಿಯಬೇಕೆಂದು ಅರಿವಿನ ಮಾರಿತಂದೆಯವರು ಈ ವಚನದಲ್ಲಿ ವಿವರಿಸಿದ್ದಾರೆ.   ಈ ವಚನದಲ್ಲಿ ಬರುವ ಹಾಲುಬತ್ತಿದ ಹಸು ಎಂದರೆ ಅರಿವು(ಜ್ಞಾನ) ಇಲ್ಲದ ಕ್ರಿಯೆ.   ಅರಿವೆಂದರೆ ಜ್ಞಾನ ತಿಳುವಳಿಕೆಗಳು.   ಪ್ರತಿಯೊಂದು ಕ್ರಿಯೆ ಅಥವಾ ಕಾರ್ಯ ಯಶಸ್ವಿಯಾಗಿ ಜರುಗಲು ಆ ಕ್ರಿಯೆಯ ಬಗೆಗಿನ ನಿಖರವಾದ ಮೂಲ ಜ್ಞಾನ ಅವಶ್ಯಕ.
 ಈ ಜ್ಞಾನ ತಿಳುವಳಿಕೆಗಳ ನೆಲೆಗಟ್ಟಿನ ಮೇಲೆಯೇ ಕೆಲಸದ ರೂಪರೇಷೆಗಳನ್ನು ನಿರ್ಧರಿಸಬೇಕಾಗುತ್ತದೆ.  ಅರಿವು ಇಲ್ಲದೆ ಆಚಾರವಿಲ್ಲ.  ಅರಿವಿನ ಮೂಲಕ ಹೀಗೆ ಕ್ರಿಯೆ ಜರುಗುವಲ್ಲಿ ಅದಕ್ಕೆ ಪ್ರೇರಣೆಯಾಗಿ ಆಸೆ, ಬಯಕೆ, ಕೋರಿಕೆಗಳು ಬಹು ಮುಖ್ಯ.   ಅಂದರೆ ಸಕಾರಣವಿಲ್ಲದೆ ಯಾವುದೇ ಕ್ರಿಯೆಯು ಜರುಗಲಾರದು.   ಇಲ್ಲಿನ ಬಯಕೆ ವ್ಯಕ್ತಿ ಮೂಲವಾಗಿರದೆ ಸಮಷ್ಟಿಮೂಲವಾಗಿರಬೇಕು.   ಅಂದರೆ ಜ್ಞಾನದ ಮೂಲಕ ನಡೆಯುವ ಕ್ರಿಯೆ ಜಂಗಮವಾಗಿ ಸಮಾಜಮುಖಿಯಾಗಬೇಕೆಂಬುದು ಮಾರಿತಂದೆಗಳ  ಅಭಿಮತವಾಗಿದೆ.

   ಹಾಲು ‘ಲಿಂಗ’ ವನ್ನು ಹಸು ‘ಕ್ರಿಯೆ’ ಯನ್ನು,ಕರು ‘ಜಂಗಮ’ ವನ್ನು ಸೂಚಿಸುವಂತಿವೆ.   ಅಂದರೆ ಗುರು-ಲಿಂಗ-ಜಂಗಮಗಳು ಕಾರ್ಯರೂಪಕ್ಕೆ ಇಳಿಯುವಲ್ಲಿ ಅರಿವು, ಆಚಾರ, ಅನುಭವಗಳಾಗುತ್ತವೆ.   ಕ್ರಿಯೆಗೆ ಮೂಲ ಜ್ಞಾನ, ಜ್ಞಾನವಿಲ್ಲದೆ ಕ್ರಿಯೆಯಿಲ್ಲ.  ಕ್ರಿಯೆ ಮತ್ತು ಜ್ಞಾನದ ಅದ್ಭುತ ವ್ಯಾಖ್ಯಾನವನ್ನು ಚನ್ನಬಸವಣ್ಣನವರು ವಚನದ ಮೂಲಕ ನೀಡಿದ್ದಾರೆ.

ಕ್ರಿಯೆಯೆ ಜ್ಞಾನ, ಆ ಜ್ಞಾನವೆ ಕ್ರಿಯೆ.
ಜ್ಞಾನವೆಂದಡೆ ತಿಳಿಯುವುದು,
ಕ್ರಿಯೆಯೆಂದಡೆ ತಿಳಿದಂತೆ ಮಾಡುವುದು
ಪರಸ್ತ್ರೀಯ ಭೋಗಿಸಬಾರದೆಂಬುದೆ ಜ್ಞಾನ;
ಅದರಂತೆ ಆಚರಿಸುವುದೆ ಕ್ರಿಯೆ.
ಅಂತು ಆಚರಿಸದಿದ್ದಡೆ ಅದೆ ಅಜ್ಞಾನ ನೋಡಾ,
ಕೂಡಲಚೆನ್ನಸಂಗಮದೇವಾ.

   ಹೀಗೆ ಜ್ಞಾನ ಕ್ರಿಯೆಗಳು ಒಂದೇ ನಾಣ್ಯದ ಎರಡು ಮುಖಗಳಾದರೆ ಬಯಕೆ ಎಂಬುದು ಈ ಎರಡರ ಕೂಡುವಿಕೆಯಿಂದ ಹೊರಹೊಮ್ಮುವ ಪ್ರತಿಫಲವಾಗಿದೆ ಇಂಥ ಇಂತಹ ಪ್ರತಿಫಲದ ಹಕ್ಕುದಾರ ವ್ಯಕ್ತಿಯೂ ಆಗಿರಬಹುದು ಸಮಷ್ಟಿಯೂ (ಸಮಾಜವೂ) ಆಗಿರಬಹುದು.  ಒಟ್ಟಿನಲ್ಲಿ ಅದು ಜಂಗಮರೂಪಿಯಾಗಿ ಸಮಾಜಸೇವೆಗೈಯ್ಯುತ್ತದೆ.   ಈ ಮೂರರ ನಿಜದ ನೆಲೆಯನ್ನರಿತು ಕಾರ್ಯಪ್ರವರ್ತನಾದವನೆ ಸದಾಶಿವಲಿಂಗಮೂರ್ತಿಯಾಗುತ್ತಾನೆಂದು ಅರಿವಿನ ಮಾರಿತಂದೆಗಳು ಹೇಳುತ್ತಾರೆ.
——————————–

ಪ್ರೊ. ಜಿ ಎ. ತಿಗಡಿ.

About The Author

Leave a Reply

You cannot copy content of this page

Scroll to Top