ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಬೆಳಗಾಗುವ ಮುನ್ನ…

ಅದೊಂದು
ಬೇಸಗೆಯ ರಾತ್ರಿ
ಕಪ್ಪು ಕಪ್ಪಾಗಿ
ಹೆಪ್ಪಾಗಿ ಕಲೆತಂತೆ
ನೀರವ ರಾತ್ರಿ…

ಕಪ್ಪು ರೇಶಿಮೆಯ
ನವುರು ಒಡಲ ತುಂಬ
ಮಿನುಗಿವೆ ನಕ್ಷತ್ರಗಳು
ವಜ್ರ ಕಸೂತಿಯೊಲು
ನಿಶಾದೇವಿಗೆ ನಮಿಸಿ
ಆರುತಿ ಬೆಳಗಿದಂತೆ…

ಹಗಲು ಬಾನಿನ
ಬಿಳಿ, ನೀಲಿ, ಕೆಂಪುಗಳ
ತನ್ನ ಜೊತೆಗೇ ಒಯ್ದ
ಸಂಜೆ ತೇರಿನಲಿ
ಸೂರ್ಯ ದೇವ…!

ಆದರೇನಂತೆ..ನಾ
ಹಾಲ ಬೆಳಕನು ತಂದೆ
ಎನುತ ಮೆಲ್ಲಗೆ ಬಂದ
ಹುಣ್ಣಿಮೆಯ ಚಂದ್ರ..!
ಜೊನ್ನ ಹಾಲ್ಜೇನು
ಸವಿದ ತಾರೆಗಳೆಲ್ಲ
ಓಲಾಡಿ ತೇಲುತಿವೆ
ಮತ್ತೇರಿ ಗಗನಾಂಗಣದಿ…!

ರಜನಿಕಾಂತನ ಸಂಗ
ಸಂತಸದ ಒಡನಾಟ
ಪರವಶದ ಕ್ಷಣಗಳವು
ಧನ್ಯತೆಯ ಭಾವದಲಿ
ಪರಿಪೂರ್ಣವಾಗಿರಲು…

ತೆರೆಯುತಲಿ ಝಗ್ಗೆಂದು
ಮೂಡಣದ ಬಾಗಿಲು
ಹೊಂಬೆಳಕು ಚೆಲ್ಲಿಹುದು
ತಾರೆಗಳೆಡೆ ನಗುತ…!

ಜಗವೆಲ್ಲ ಚೇತನದಿ
ಮಿಂದು ಪುಳಕಿತವಹುದು
ಹಸಿರು ಉಸಿರಿನ ಜೀವ
ನಗುತ ಅರಳಿಹುದು…!

———————


ಹಮೀದಾ ಬೇಗಂ ದೇಸಾಯಿ

About The Author

2 thoughts on “ಹಮೀದಾ ಬೇಗಂ ದೇಸಾಯಿ-ಬೆಳಗಾಗುವ ಮುನ್ನ…”

  1. ಬೆಳದಿಂಗಳ ರಾತ್ರಿಯಲಿ ಸಂಚರಿಸಿ ಮುನ್ನೇಸರವ ವರ್ಣಿಸಿದ ರೀತಿ ಚಿತ್ತಾಕರ್ಷಕವಾಗಿ ಮೂಡಿಬಂದಿದೆ.

Leave a Reply

You cannot copy content of this page

Scroll to Top