ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅಮ್ಮು ರತನ್ ಶೆಟ್ಟಿ

ಅಂತರ್ಮುಖಿ

ಇರಬಹುದು ಸದಾ ಒಂಟಿಯಾಗಿಯೇ ಅವಳು
ಬೇಸರ ತಂದಿರಬಹುದು ಮತ್ತಾರದೋ ನೆರಳು
ಯಾರಿಗೆ ಯಾರು ಹಿತವರೋ ಬಲ್ಲವರು ಯಾರು
ಅಂತರ್ಮುಖಿಯಾಗಿ ಸಂಭಾಷಣೆ ನಡೆಸುವಳವಳು

ಯಾರ ಸಂಗದ ಅನಿವಾರ್ಯತೆ ಅವಳಿಗೆ
ಹೊತ್ತು ಹೆತ್ತವರನೇ ಬಿಟ್ಟು ತಾಳಿಗೆ ತಲೆಬಾಗಿ ನಡೆದವಳಿಗೆ
ಅವನ ಭಾವನೆಗಳಿಗೆ ತನ್ನಾಸೆಗಳ ಒತ್ತೆ ಇಡಲು ಸಾಧ್ಯವೇ
ಅಂತರ್ಮುಖಿಯಾಗಿ ಯೋಚಿಸಿದಳು ತನ್ನೊಳಗೆ ತಾನೇ

‌ಆಡಿದ ಮಾತುಗಳು ಕ್ಷಣದಲ್ಲೇ ಬದಲಾಗಬಹುದು
ನೀಡಿದ ಭಾಷೆಗಳು ಕೊಟ್ಟವರಿಗೆ ಮರೆತು ಹೋಗಬಹುದು
ಅಂತರಂಗದ ಭಾವನೆಗಳ ಮತ್ತಾರದೋ ಜೀತಕ್ಕೆ ಹೇಗೆ ಇಡಬಹುದು
ತನ್ನೊಡಲಲ್ಲಿ ಉರಿವ ಕೆಂಡವ ಅದೆಷ್ಟು ದಿನ ಬಚ್ಚಿಡಬಹುದು

ಕನಸುಗಳ ಸಾಕಾರಕ್ಕೆ ಯಾರ ಸಹಾಯವೂ ಬೇಕಿಲ್ಲ
ಹಾರುವ ಹಕ್ಕಿಗೆ ರೆಕ್ಕೆಯ ಹೊರತೂ ಮತ್ತಾರ ನಿರೀಕ್ಷೆಯಿಲ್ಲ
ಅವನ ಬಂಧನದಿ ಬಂಧಿಯಾಗಿ ಕಳೆಯಲಾಗದು ಬದುಕೆಲ್ಲಾ
ಸಾಧಿಸುವ ಮುನ್ನ ಅಡಚಣೆಗಳು ಯಾರಿಗೆ ಇರುವುದಿಲ್ಲ


ಅಮ್ಮು ರತನ್ ಶೆಟ್ಟಿ

About The Author

Leave a Reply

You cannot copy content of this page

Scroll to Top