ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಿಶೇಷ ಲೇಖನ

ವೈದ್ಯರ ದಿನಾಚರಣೆ- ಕೆ.ವಿ.ವಾಸು

ದೇಶಾದ್ಯಂತ ಪ್ರತಿವರ್ಷದ ಜುಲೈ ಒಂದರಂದು
ವೈದ್ಯರ ದಿನಾಚರಣೆ ಆಚರಿಸುವ ಮೂಲಕ ವೈದ್ಯಕೀಯ ವೃತ್ತಿಯ ಬಗೆಗಿನ ಪಾವಿತ್ರತೆಗೆ ಬೆಳಕು  ಚೆಲ್ಲುವ ಕೆಲಸ  ಮಾಡಲಾಗುತ್ತಿದೆ. ಎಲ್ಲಾ ವೃತ್ತಿಗಳಿಗಿಂತ ವೈದ್ಯಕೀಯ ವೃತ್ತಿ ಹೆಚ್ಚು ಮಹತ್ವಪೂರ್ಣದ್ದಾಗಿದೆ. .  ಏಕೆಂದರೆ ಅನಾರೋಗ್ಯ
ಪೀಡಿತನಾದ ವ್ಯಕ್ತಿಯ ಆರೋಗ್ಯ ಸುಧಾರಣೆ ಹಾಗೂ ಕೆಲವೊಮ್ಮೆ ಸಾವಿನ ಅಂಚು ತಲುಪಿದ ವ್ಯಕ್ತಿಯನ್ನು ಕೂಡ ಬದುಕಿಸಬಹುದಾದ ಚೈತನ್ಯ
ವೈದ್ಯರದ್ದಾಗಿದೆ.ಆದ್ದರಿಂದಲೇ ವೈದ್ಯೋ ನಾರಾಯಣೋ ಹರಿ ಎಂದು ಹೇಳಲಾಗುತ್ತದೆ. ಅಂದರೆ ವೈದ್ಯರು ನಾರಾಯಣನ ಸ್ವರೂಪವೆಂದು
ಭಾವಿಸಲಾಗಿದೆ. ಆದರೆ ದಿನೇ ದಿನೇ ವೈದ್ಯಕೀಯ ವೃತ್ತಿ ವಾಣಿಜ್ಯ ಕರಣಗೊಳ್ಳುತ್ತಿರುವುದರಿಂದ ಹಾಗೂ ಕೆಲವು ವೈದ್ಯರು ದುರಾಸೆ ಪೀಡಿತರಾಗಿ
ರೋಗಿಗಳನ್ನು ಹುರಿದು ಮುಕ್ಕುತ್ತಿರುವುದರಿಂದ
ವೈದ್ಯರ ಬಗ್ಗೆ ಸಹಾ ಜನರಲ್ಲಿ ಸದ್ಭಾವನೆ ಕ್ರಮೇಣ
ಮರೆಯಾಗುತ್ತಿರುವುದನ್ನು ಕಾಣಬಹುದಾಗಿದೆ..  ಅದಾಗ್ಯೂ ಅನೇಕ ವೈದ್ಯರು ತಮ್ಮ  ಸೇವಾ
ಪರತೆ ಹಾಗೂ ವೃತ್ತಿ ಧರ್ಮಕ್ಕೆ ಚ್ಯುತಿ ಬಾರದಂತೆ
ಕಾರ್ಯ ನಿರ್ವಹಿಸುವ ಮೂಲಕ ತಮ್ಮ‌ವೃತ್ತಿಯ
ಘನತೆಯನ್ನು ಎತ್ತಿ ಹಿಡಿದಿರುವುದು ಸಂತಸದ ಸಂಗತಿ.  ತಮ್ಮ ವೈಯುಕ್ತಿಕ ತಾಪತ್ರಯಗಳನ್ನು ಬದಿಗೆ ಸರಿಸಿ; ಗ್ರಾಮೀಣ ಪ್ರದೇಶಗಳಲ್ಲಿ ರೋಗಿಗಳಿಗೆ ಉಚಿತ ಪರೀಕ್ಷೆ ಹಾಗೂ ಚಿಕಿತ್ಸೆ ನೀಡುವ ಅದೆಷ್ಟೋ ವೈದ್ಯರು ಕಾಣಸಿಗುತ್ತಾರೆ.
 ಮೈಸೂರಿನ ಖ್ಯಾತ  ವೈದ್ಯರಾಗಿದ್ದ ದಿವಂಗತ  ಡಾ ಸತೀಶ್ ರೈ ಬಡವರ ಬಂಧುವಾಗಿದ್ದರು. . ಬಡವರಿಗೆ ಅವರು ಉಚಿತ ಚಿಕಿತ್ಸೆ ನೀಡುತ್ತಿದ್ದರು.  ಅವರನ್ನು
ಎರಡು ರೂಪಾಯಿ ಡಾಕ್ಟರ್  ಎಂದೇ ಕರೆಯಲಾಗುತ್ತಿತ್ತು.  ಶಿವಮೊಗ್ಗ ಜಿಲ್ಲೆಯ ಶಂಕರಪ್ಪ
ಎಂಬ ವೈದ್ಯ ಕೂಡ ಅತ್ಯಂತ ಕಡಿಮೆ ವೆಚ್ಚದಲ್ಲಿ
ರೋಗಿಗಳಿಗೆ ಔಷದಿ ನೀಡುತ್ತಿದ್ದರು.  ಅವರನ್ನು
ಐದು ರೂಪಾಯಿ ಡಾಕ್ಟರ್ ಎಂದೇ ಕರೆಯಲಾಗುತ್ತದೆ. ಕೋವಿಡ್ ಸೋಂಕಿನ ವಿಷಮ ಪರಿಸ್ಥಿತಿಯಲ್ಲಿ  ಸಾವಿರಾರು  ವೈದ್ಯರು   ತಮ್ಮ ಜೀವದ ಮೇಲಿನ ಹಂಗನ್ನು ತೊರೆದು ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.  ಈ ಸಂಧರ್ಭದಲ್ಲಿ ಸೊಂಕಿನ ತೀವ್ರತೆಗೆ ತಾವೇ  ಗುರಿಯಾಗಿ ಹಲವಾರು ವೈದ್ಯರೇ ತಮ್ಮಾಮೂಲ್ಯ  ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಮಹಾನುಭಾವರ ಸೇವೆ ಅಮೂಲ್ಯ ಹಾಗೂ ಅದ್ವಿತೀಯವಾಗಿದೆ . ಅಂತಹ  ಮಹಾನುಭಾವರಿಗೆ ವೈದ್ಯರ ದಿನವಾದ ಇಂದು  ಶ್ರದ್ಧಾಂಜಲಿ  ಸಲ್ಲಿಸೋಣ.  ವೃತ್ತಿ ಪರ ವೈದ್ಯರ ಜೊತೆ ಜೊತೆಗೆ ಕೆಲವು ನಾಟಿ ವೈದ್ಯರು ಕೂಡ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ.  ಆದರೆ ಇವರ ಮದ್ಯೆ ನಕಲಿ
ವೈದ್ಯರೂ ಕೂಡ ಸೇವಾ ನಿರತರಾಗಿದ್ದು ಇಂತಹ
ನಕಲಿ ವೈದ್ಯರಿಂದ ರೋಗಿಗಳು ದೂರವಿರುವುದು
ಒಳ್ಳೆಯದು. ಮನುಷ್ಯನ ಜೀವನ ಶೈಲಿ ಬದಲಾಗುತ್ತಿರುವಂತೆಯೇ ಹೊಸ ಹೊಸ ಕಾಯಿಲೆಗಳು ಹುಟ್ಟಿಕೊಳ್ಳುತ್ತಿವೆ. ಗ್ರಾಮೀಣ
ಭಾಗದ ಜನ ಮೌಡ್ಯಕ್ಕೆ ಶರಣಾಗಿ ಅಸಂಪ್ರದಾಯಿಕ
ಚಿಕಿತ್ಸೆಗೆ ಶರಣಾಗಿ ತಮ್ಮ ಆರೋಗ್ಯವನ್ನು
ಮತ್ತಷ್ಟು ಹಾಳು ಮಾಡಿಕೊಳ್ಳುತ್ತಿರುವುದನ್ನು ಕಾಣಬಹುದು.  ಹೃದ್ರೋಗ; ಕಾನ್ಸರ್ ಮುಂತಾದ
ಭೀಕರ ಕಾಯಿಲೆಗಳಿಗೆ ಲಕ್ಷಾಂತರ ರೂಪಾಯಿ
ಖರ್ಚು ಮಾಡಬೇಕಾಗುತ್ತದೆ.  ಆದರೆ ಕೇಂದ್ರ ಸರ್ಕಾರ ಹಾಗೂ ಕೆಲವು ರಾಜ್ಯ ಸರ್ಕಾರಗಳು
ಆರೋಗ್ಯ ವಿಮೆ ಯೋಜನೆಯ ಮೂಲಕ ಇಂತಹ
 ಕಾಯಿಲೆಗಳ ಚಿಕಿತ್ಸಾ ವೆಚ್ಚವನ್ನು ಸಾಕಷ್ಟು
ಕಡಿಮೆ ಮಾಡಿದೆ.  ಕೇಂದ್ರ ಸರ್ಕಾರ 06  ವರ್ಷಗಳ ಹಿಂದೆ ಆರಂಬಿಸಿರುವ ” ಜನೌಷದ ಅಂಗಡಿಗಳಲ್ಲಿ ಜನರಿಗೆ ಕಡಿಮೆ ದರದಲ್ಲಿ ಔಷಧ
ನೀಡಲಾಗುತ್ತಿರುವುದು ಸಮಾಧಾನಕರ ಸಂಗತಿ.
ಆರೋಗ್ಯ ಕ್ಷೇತ್ರದಲ್ಲಿ ಇಂದು ಕ್ರಾಂತಿಕಾರಕ
ಬದಲಾವಣೆಗಳಾಗುತ್ತಿದ್ದು ವಿಶ್ವ ಆರೋಗ್ಯ ಸಂಸ್ಥೆಯ ಅನೇಕ
ಅಂಗ ಸಂಸ್ಥೆಗಳ ಪ್ರಯೋಜಕತ್ವದಲ್ಲಿ ಅನೇಕ
ದೇಶಗಳಲ್ಲಿ ವೈವಿದ್ಯಮಯ ಆರೋಗ್ಯ ಕಾರ್ಯಕ್ರಮ ಗಳನ್ಬು ರೂಪಿಸಲಾಗುತ್ತಿದೆ.  ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ್ದು ಪ್ರತಿಯೊಬ್ವ ವ್ಯಕ್ತಿಯ ಆದ್ಯ ಕರ್ತವ್ಯ.  ರೋಗಕ್ಕೆ
ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ
ತಡೆಯುವುದು ಜಾಣತನ.  ಅದೇ ರೀತಿ ಕೆಲವು
ಕಾಯಿಲೆಗಳನ್ನು ಹೊರತುಪಡಿಸಿ ಬಹುತೇಕ ಕಾಯಿಲೆಗಳಿಗೆ ನಾವು ತಿನ್ನುವ ಆಹಾರ ಹಾಗೂ
ಜೀವನ ಶೈಲಿ ಯೇ ಮುಖ್ಯವಾಗಿದೆ.  ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತನ್ನು ನಾವು ಮರೆಯಬಾರದು.

ವೈದ್ಯರ ದಿನವಾದ ಇಂದು ಎಲ್ಲಾ ವೈದ್ರರನ್ನು
ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತಾ ಹೆಚ್ಚು
ಆರೋಗ್ಯವಂತರಾಗಲು ಪ್ರಯತ್ತಿಸೋಣ.


ಕೆ.ವಿ.ವಾಸು

About The Author

Leave a Reply

You cannot copy content of this page

Scroll to Top