ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನುವಾದ ಸಂಗಾತಿ

ಐದನೇ ತರಗತಿ ‘ಎ’ ವಿಭಾಗ

ತಮಿಳು ಮೂಲ : ಎನ್.ಮುತ್ತುಕುಮಾರ್
ತೆಲುಗು ಅನುವಾದ : ಗೌರಿ ಕೃಪಾನಂದನ್
ಕನ್ನಡಕ್ಕೆ : ಕಾ.ಹು.ಚಾನ್‌ಪಾಷ

ಮಳೆ ಬೀಳದ ದಿನಗಳಲ್ಲೂ ಸಹ
ಹಳದಿ ರಂಗಿನ ಕೊಡೆ ಹಿಡಿದು ಬರುತ್ತಿದ್ದ ತಿಲಕವತಿ ಟೀಚರ್ ತರಗತಿಮೊದಲ ದಿನ ನಮ್ಮನ್ನು ಕೇಳಿದರು“ಓದು ಮುಗಿದ ಮೇಲೆ ನೀವು ಏನಾಗಬಯಸುವಿರಿ?”

ಮೊದಲ ಬೆಂಚನ್ನಾರಿಗೂ ಬಿಡದ ಕವಿತ, ವನಿತ ಒಕ್ಕೊರಳಲಿ “ಡಾಕ್ಟರ್” ಅಂದರು

ಇಂದು; ಮದುವೆಯಾಗಿ ಮಕ್ಕಳ ಹಡೆದು ರೇಷನ್ ಅಂಗಡಿಯ ಸರತಿಯಲ್ಲಿ ನಿಂತ ಕವಿತಳನ್ನ,ಮುಡಿಯಲ್ಲಿ ಬಾಚಣಿಗೆ ಸಿಕ್ಕಿಸಿಮಕ್ಕಳನ್ನು ಶಾಲೆಗೆ ಅಟ್ಟುತ್ತಿರುವ ವನಿತಳನ್ನ ಆಗಾಗ ನೋಡುತ್ತಿರುತ್ತೇನೆ

ಇಂಜಿನಿಯರ್ ಆಗುತ್ತೇನೆಂದು ಹೇಳಿದ ಎಲ್.ಸುರೇಶ್ ಕುಮಾರ್
ಮಧ್ಯೆದಲ್ಲೇ ಶಾಲೆಬಿಟ್ಟು ಮಗ್ಗ ನೇಯಲು ಹೊರಟುಹೋದ

“ಅಪ್ಪನ ಗುಜರಿ ಅಂಗಡಿ ನೋಡಿಕೊಳ್ಳುವೆ”
ಎಂದು ಕೊನೆಯ ಬೆಂಚಿನ ಸಿ.ಎನ್.ರಾಜೇಶ್ ಹೇಳಿದಾಗ ಎಲ್ಲರೂ ಕಿಸಕ್ಕನೆ ನಕ್ಕಿದರು
ಇವತ್ತು ಅವನು ನ್ಯೂಜೆರ್ಸಿಯಲ್ಲಿ ಡಾಕ್ಟರನಾಗಿ
ಮೈಕ್ರೋಬಯಾಲಜಿಯಲ್ಲಿ ಸಂಶೋಧಕನಾಗಿದ್ದಾನೆ

“ಪ್ಲೇನ್ ಓಡಿಸುವೆ” ಎಂದು ಎಲ್ಲರನ್ನು ಅಚ್ಚರಿಗೊಳಿಸಿದ ಜಸ್ಟಿನ್ ಚೆಲ್ಲಬಾಬು
ಪಬ್ಲಿಕ್ ಸರ್ವಿಸ್ ಪರೀಕ್ಷೆ ಬರೆದು ಗುಮಾಸ್ತನಾಗಿದ್ದಾನೆ

“ಅಣು ವಿಜ್ಞಾನಿಯಾಗುವೆ” ಎಂದಿದ್ದ ನಾನು ಕವಿತೆ ಬರೆಯುತ್ತಿದ್ದೇನೆ

ಬದುಕಿನ ಬಿರುಗಾಳಿ ಎಲ್ಲರ ದಿಕ್ಕು ಬದಲಿಸಿರುವಾಗ “ಶಿಕ್ಷಕನಾಗುವೆ” ಎಂದು ಹೇಳಿದ ಗುಂಡು ಸುರೇಶ್ ಮಾತ್ರನಾವು ಓದಿದ ಅದೇ ಶಾಲೆಯಲ್ಲಿ ಶಿಕ್ಷಕನಾಗಿದ್ದಾನೆ
“ಅಂದಿದ್ದ ಕೆಲಸವನ್ನೇ ಮಾಡುತ್ತಿರುವೆ,ಈಗ ಹೇಗಿದೆ?” ಎಂದು ಕೇಳಿದೆ

ಚಾಕ್ಪೀಸಿನ ಧೂಳು ಅಂಟಿಕೊಂಡಿರುವ ಬೆರಳುಗಳಿಂದ ನನ್ನ ಕೈ ಹಿಡಿದು “ಓದು ಮುಗಿದ ಮೇಲೆ ಏನಾಗುವಿರಿ? ಎಂದು ನನ್ನ ವಿದ್ಯಾರ್ಥಿಗಳಿಗೆ ಕೇಳುತ್ತಿಲ್ಲ” ಅಂದ.

ತಮಿಳು ಮೂಲ : ಎನ್.ಮುತ್ತುಕುಮಾರ್
ತೆಲುಗು ಅನುವಾದ : ಗೌರಿ ಕೃಪಾನಂದನ್
ಕನ್ನಡಕ್ಕೆ : ಕಾ.ಹು.ಚಾನ್‌ಪಾ

———————

ಮೂಲ ಮತ್ತು ಅನುವಾದಿಸಿದ ಕಥೆಗಾರರ ಕಿರುಪರಿಚಯ

ಎನ್.ಮುತ್ತುಕುಮಾರ್ :

ಎನ್.ಮುತ್ತುಕುಮಾರ್ ತಮಿಳುನಾಡಿನ ಕಾಂಚಿಪುರಂ ಹತ್ತಿರದ ಕನ್ನಿಕಾಪುರಂ ಎಂಬ ಊರಿನವರು. ಕವಿ, ಚಿತ್ರಗೀತೆ ರಚನಕಾರರಾಗಿ ಪ್ರಸಿದ್ದಹೊಂದಿರುವ ಇವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ‘ಎನ್ನೈ ಸಂದಿಕ್ಕ ಕನವಿಲ್ ವರಾದೇ’, ‘ಪಟ್ಟಾಂಪೂಚ್ಚಿ ವರ‍್ಪವನ್’, ‘ಅನಿಲಾಂಡು ಮುಂಡ್ರಿಲ್’ ಮೊದಲಾದ ಪುಸ್ತಕಗಳನ್ನು ಬರೆದಿದ್ದಾರೆ. ಇವರ ‘ತೂರ್’ ಎಂಬ ಕವಿತೆ ವಿಶೇಷವಾದ ಹೆಸರು ತಂದುಕೊಟ್ಟಿತು. ಇವರು ಉತ್ತಮಗೀತೆ ರಚನಕಾರರಾಗಿ ನಾಲ್ಕು ಬಾರಿ ತಮಿಳುನಾಡು ರಾಜ್ಯ ಪ್ರಶಸ್ತಿ ಹಾಗೂ ನಾಲ್ಕು ಫಿಲ್ಮ್ ಫೇರ್ ಅವಾರ್ಡ್ಗಳನ್ನು ಗಳಿಸಿಕೊಂಡಿದ್ದಾರೆ.

ಗೌರಿ ಕೃಪಾನಂದನ್ :

ಚೆನ್ನೈನಲ್ಲಿ ನೆಲೆಸಿರುವ ಗೌರಿ ಕೃಪಾನಂದನ್ ಅವರು ತಮಿಳು ಮತ್ತು ತೆಲುಗು ಎರಡೂ ಭಾಷೆಯಲ್ಲಿ ಹಲವಾರು ಕಥೆ, ಕವನ, ಕಾದಂಬರಿಗಳನ್ನು ಅನುವಾದ ಮಾಡಿದ್ದಾರೆ. ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಪಡೆದಿರುವ ಇವರು ‘ಪೂನಾಚ್ಚಿ ಒಕ ಮೇಕಪಿಲ್ಲ ಕಥ’, ‘ಚಿಂತಚೆಟ್ಟು ಕಥ’, ‘ತಮಿಳ ಅನುವಾದ ಕಥಲು’ ಮೊದಲಾದ ಕೃತಿಗಳನ್ನು ಅನುವಾದಿಸಿದ್ದಾರೆ.

ಕಾ.ಹು.ಚಾನ್‌ಪಾಷ :

ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಹುಟ್ಟಿ ಬೆಳೆದ ಕಾ.ಹು.ಚಾನ್‌ಪಾಷ ಅವರು ಕೋಲಾರದ ಅಲ್-ಅಮೀನ್ ಅಂಜುಮನ್ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿದ್ದಾರೆ. ಕವಿ, ನಾಟಕಕಾರ, ಅನುವಾದಕರಾದ ಇವರು ‘ಮನದ ಮಲ್ಲಿಗೆ’, ಜನ ಮರುಳೋ ಜಾತ್ರೆ ಮರುಳೋ’, ‘ಭಲೇ ಗಿಣಿರಾಮ’, ‘ಮೂರು ವರಗಳು’ ಕೃತಿಗಳನ್ನೂ ಪ್ರಕಟಿಸಿದ್ದಾರೆ. ತೆಲುಗು ಭಾಷೆಯಿಂದ ಕನ್ನಡಕ್ಕೆ ಹಲವಾರು ಕಥೆ, ಕವನ, ಕಾದಂಬರಿಗಳನ್ನು ಅನುವಾದಿಸಿರುವ ಇವರು ‘ಸಲೀಂ ಅವರ ಕಥೆಗಳು’, ‘ಫಾತಿಮಾ ಶೇಖ್-ಆಧುನಿಕ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ’ ಮೊದಲಾದ ಪುಸ್ತಕಗಳನ್ನು ಅನುವಾದಿಸಿದ್ದಾರೆ.


About The Author

2 thoughts on “ತಮಿಳು ಕಥೆ,ಅನುವಾದ ಕಾ.ಹು.ಚಾನ್‌ಪಾಷ”

  1. ನಾಗರಾಜ್ ಹರಪನಹಳ್ಳಿ

    ಅರ್ಥಪೂರ್ಣ ,ಧ್ವನಿ ಪೂರ್ಣ

Leave a Reply

You cannot copy content of this page

Scroll to Top