ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಾಲಾ ಚೆಲುವನಹಳ್ಳಿ

ಸಂಬಂಧಗಳು ಕಳಚಿಕೊಳ್ಳುತ್ತಿವೆ

ಮುದುಡಿವೆ ಮನೆ ಮನಗಳಿಂದು
ಬಂಧಗಳ ಕೊಂಡಿ ಸಡಿಲಾಗಿಹುದು
ಒಮ್ಮತಗಳಲಿದ್ದ ಸಮ್ಮತ, ಅಭಿಮತ
ಸಾಗಿಹುದು ದುರಭಿಮಾನದ ನಡೆಯತ್ತ

ಸರಳ ನಡೆನುಡಿಗಳೇ ಜಟಿಲ ಸಿಗ್ಗುಗಳಂತಾಗಿ
ಸಹಜತೆಯೇ ವಿರಳ, ವಿಪರ್ಯಾಸಕ್ಕೆಡೆಗೊಟ್ಟಿದೆ
ಅರಿಯಲಾಗುತ್ತಿಲ್ಲ ಮೊಗದ ಹಿಂದಿನ ಕರಾಳತೆ
ಹಾಸ್ಯ ಅಪಹಾಸ್ಯಗಳ ನಡುವ ಮಾರ್ಮಿಕತೆ

ಒಡಹುಟ್ಟಿದವರೊಳಗೇ ಸೆಡವಿನ ಬಡಬಾಗ್ನಿ
ಜಾಣ ಕುರುಡುತನದ ಪರಮಾವಧಿ
ಕೆಸರಿನ ಕಮಲದಂತೆ ಹೆಸರಿಗಷ್ಟೇ ಆಪ್ತತೆ
ಅಂಟಿ ಬದುಕುವುದೇ ಅಸಹನೀಯವಾಗಿದೆಯಿಲ್ಲಿ

ಬಿಂಕ ಬಡಿವಾರಕೆ ಜನ ಮನ್ನಣೆಯಿಲ್ಲಿ
ನೈತಿಕತೆಯ ಕಳಕೊಂಡವರೇ ರಾರಾಜಿಸುವ
ಅರಾಜಕತೆಯ ಬೀಡಾದ ಸಾಂಗತ್ಯಗಳಲ್ಲಿ
ನಲುಗಿ ನರಳುತಿವೆ ಭಾವನೆಗಳು ಆಂತರ್ಯದಲ್ಲಿ

ಅಂಗೈಲಿರುವ ಜಂಗಮವಾಣಿ ಅಂತರ್ಜಾಲದಿ
ಕುಂತು ನಿಂತಲ್ಲೇ
ಪ್ರಪಂಚ ಪರ್ಯಟನೆಗೈಸುತಿರಲು
ಅಂತರಂಗದ ಮೊರೆ ಕೇಳುವ ಕಿವಿಗಳಿಗೇ ಬರವಿಲ್ಲಿ
ಬೆಸುಗೆ ಸಡಿಲಾಗಿ ಸಂಬಂಧಗಳು ಕಳಚುತ್ತಿವೆಯಿಲ್ಲಿ


ಮಾಲಾ ಚೆಲುವನಹಳ್ಳಿ

About The Author

2 thoughts on “ಮಾಲಾ ಚೆಲುವನಹಳ್ಳಿ ಸಂಬಂಧಗಳು ಕಳಚಿಕೊಳ್ಳುತ್ತಿವೆ”

  1. ಅದ್ಬುತ ಹಾಗೂ ವಾಸ್ತವ ಪರಿಸ್ಥಿತಿ ಅನಾವರಣ ಮಾಡಿದ ನಿಮಗೆ ಧನ್ಯವಾದಗಳು

Leave a Reply

You cannot copy content of this page

Scroll to Top