ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಗಜಲ್

ಪ್ರೀತಿ ನೆನಪು ಉಕ್ಕುವ ಕಡಲಲಿ ಕೊಚ್ಚಿಹೋಗುವ ಮುನ್ನ ಬಚ್ಚಿಟ್ಟುಕೋ ಗೆಳೆಯಾ
ಮಾತು ಹೊನಲ ಸಾಗರದಲೆಲಿ ತೇಲಿ ಹೋಗುವ ಮುನ್ನ ಒಪ್ಪಿಕೋ ಗೆಳೆಯಾ//

ಹೃದಯದಿ ಪ್ರೀತಿರಾಗವನು ನುಡಿಸಿ ಹಾಡಿದ ವೈನಿಕನು ನೀನಲ್ಲವೇ
ಒಲವ ಮಿಡಿಯದಾ ಹೃದಯತಂತಿ ಹರಿಯೋ ಮುನ್ನ ಕೂಡಿಕೋ ಗೆಳೆಯಾ//

ಜೀವದುಸಿರು ಕೊರಗಿ ಕೊರಗಿ ಕುಗ್ಗಿ ಹೋಗಿದೆಯೋ ನೀನಿಲ್ಲದೆ
ಮನದ ವಿರಹ ಬಿರುಗಾಳಿಯಂತಾಗಿ ಸುಳಿಗೆ ಸಿಗದ ಮುನ್ನ ಅಪ್ಪಿಕೋ ನನ್ನ ಗೆಳೆಯಾ//

ನಿನ್ನನೇ ಕಂಡ ಕನಸುಗಳ ಹೊತ್ತಿಗೆ ತುಂಬಿತುಳುಕುತಿದೆ
ಬಂದು ಓದಿ ಮೈಮನ ತಣಿಸು ತಲ್ಲಣಗಳಲಿ ಜೀವ ಹೋಗುವ ಮುನ್ನ ಸೆಳೆದುಕೋ ಗೆಳೆಯಾ//

ಜನುಮಜನುಮಗಳ ಅತೀ ಮಧುರ ಬಂದವಿದೆಂದು ನಂಬಿರುವೆ
ನಂಬಿಕೆಯ ಪ್ರೇಮ ಸೇತುವೆ ಕಳಚಿ ಬೀಳುವ ಮುನ್ನ ಹಿಡಿದುಕೋ ಗೆಳೆಯಾ//

ಅಂತರಾತ್ಮದ ಭಾವಗಳು ಬಿಸಿಲು ಬುಗ್ಗೆಯಂತೆ ಕುದಿಯುತಿವೆ ಒಳಗೆ
ಹೃದಯದಿ ಕಾಡುತಿಹ ಆಸೆ-ಆಕಾಂಕ್ಷೆಗಳ ಗೋಡೆ ಒಡೆವ ಮುನ್ನ ಸೇರಿಕೋ ಗೆಳೆಯಾ//

ಕಾಣಲು ಸೇರಲು ತವಕಿಸುತಿಹ ಅನುವಿನಂತರಾಳವಿದು ಸೋತಿದೆ
ದೇವರ ನೆನೆದು ಕಾತರಿಸುವ ಜೀವ ಹೋಗುವ ಮುನ್ನ ಉಳಿಸಿಕೊ ಗೆಳೆಯಾ//


ಡಾ ಅನ್ನಪೂರ್ಣ ಹಿರೇಮಠ

About The Author

Leave a Reply

You cannot copy content of this page

Scroll to Top