ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ.

ವಿಕ್ಷಿಪ್ತರು..!

ಮಧುರ ನುಡಿಯೋ.. ಸುಂದರ ನಡೆಯೋ..
ಹೊಳೆವ ಅನುಪಮ ಜೀವ ಸೌಂದರ್ಯವೋ
ಸೆಳೆವ ಅಪ್ರತಿಮ ಭಾವ ಮಾಧುರ್ಯವೋ
ಹರಿವ ಅನಂತ ಅಕ್ಕರಾಸ್ಥೆಗಳ ಆಂತರ್ಯವೋ
ಸ್ಫುರಿವ ಅಪೂರ್ವ ಅಂತಃಕರಣ ಔದಾರ್ಯವೋ..

ಸಾಕು ಹೃನ್ಮನ ಸೋತು ಶರಣಾಗಲು ಕ್ಷಣ
ಕಲ್ಲೆದೆಯಲ್ಲು ಮೂಡಬಹುದು ಪ್ರೀತಿ ಸ್ಫುರಣ.!
ನಿಜ ಗೆಳತಿ ಪ್ರೀತಿಸಲಿದೆ ಇಲ್ಲಿ ಸಹಸ್ರ ಕಾರಣ.!
ತೆರೆದು ಈಕ್ಷಿಸಿದರೊಮ್ಮೆ ಒಲವಿನ ಒಳಗಣ್ಣ
ಕಂಡ ಕಂಡಲ್ಲೆಲ್ಲ ಹೊಳೆವ ಪ್ರೀತಿಯ ದರ್ಪಣ.!

ಆದರೂ ಬಹಳಷ್ಟು ಜನರೇಕೆ ಸುಖಾಸುಮ್ಮನೆ..
ಹಗೆಹೊತ್ತು ಹೈರಾಣಾಗುವರು ಒಂದೇಸಮನೆ
ಕಾರಣಗಳೇ ಇಲ್ಲದೆ ದ್ವೇಷಿಸುವರು ಹಲವರ
ದ್ವೇಷಿಸಲೇ ಬೇಕೆಂದು ದ್ವೇಷಿಸುವರು ಕೆಲವರ
ಸಂಬಂಧವಿರದಿದ್ದರು ಹಗೆ ಸಾಧಿಸುವ ಹುನ್ನಾರ.!

ಅರ್ಥವಿಲ್ಲದೆ ಕುದಿವರು ಯಾರದೂ ಏಳಿಗೆಗೆ
ಅನಗತ್ಯ ಸಿಡಿಯುತ್ತಾರೆ ಅವರ ಸಾಧನೆಗಳಿಗೆ
ಹೊಟ್ಟೆಯುರಿದುಕೊಳ್ಳುತ್ತಾರೆ ಪ್ರಗತಿಯ ಪ್ರಭೆಗೆ
ವಿನಾಕಾರಣ ಮತ್ಸರ ಕಾರುತ್ತಾರೆ ಅಡಿಗಡಿಗೆ
ದ್ವೇಷಿಸಲಿಕ್ಕೇ ಬದುಕಿ ಬಿಡುತ್ತಾರೆ ಪ್ರತಿಘಳಿಗೆ.!

ನಿರಂತರ ಪ್ರೀತಿಸಲು ಕೋಟಿ ಕಾರಣಗಳಿದ್ದರೂ
ಎಡೆಬಿಡದೆ ಹಗೆ ಸಾಧಿಸುವ ವಿಕ್ಷಿಪ್ತ ಮನಸ್ಥಿತಿ
ಲೋಕವೇ ಆರಾಧಿಸಿ ಅಭಿಮಾನಿಸುವವರನೂ
ಇಲ್ಲಸಲ್ಲದ ನೆಪಗಳಿಂದ ತೆಗೆಳೆವುದರಲ್ಲೆ ಸಂತೃಪ್ತಿ
ಈಮಂದಿಗೆ ಪ್ರೀತಿಗಿಂತ ದ್ವೇಷವೇ ಹಿತಸಂಗಾತಿ.!


About The Author

1 thought on “ಎ.ಎನ್.ರಮೇಶ್. ಗುಬ್ಬಿ.ಕವಿತೆ-ವಿಕ್ಷಿಪ್ತರು!”

Leave a Reply

You cannot copy content of this page

Scroll to Top