ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ

ಮಾತ್ಸರ್ಯ.!

ಅವನ ನಡೆಯಲ್ಲಿನ ಆ ನಟನೆಗೆ
ಕೆಂಡವಾಗುವುದು ತನು-ಮನವು
ಅವನ ನುಡಿಯಲ್ಲಿನ ಕೃತ್ರಿಮತೆಗೆ
ಕುದಿಯುವುದು ಸಕಲ ನರನರವು.!

ಕಂಬನಿಯಲ್ಲು ಏನೆಲ್ಲ ಬೂಟಾಟಿಕೆ
ನಗೆಯಲ್ಲು ಎಷ್ಟೆಲ್ಲ ನಂಜಿನ ಇಣಿಕೆ
ಗೋಮುಖ ವ್ಯಾಘ್ರನಂತೆ ವಂಚಕ
ಗೋಸುಂಬೆ ಗುಣ ಕರತಲಾಮಲಕ.!

ಅವನ ಒಂದೊಂದು ಸಾಧನೆಯೂ
ಎದೆಯಿರಿದು ನೀಡುವುದು ವೇದನೆ
ಅವನ ಒಂದೊಂದು ಕೀರ್ತಿ ಗೆಲುವು
ನಿತ್ಯನುಂಗಲಾಗದ ಹಾಲಾಹಲವು.!

ಅವನೆಂದರೆನಗೆ ಅದೆಷ್ಟು ಆಕ್ರೋಶ
ನೆನೆದೊಡನೆಯೆ ಅದೆಂತಹ ಆವೇಶ
ಉಕ್ಕುವುದು ಧಮನಿಗಳಲೆಲ್ಲ ರೋಷ
ಬಯಸುವೆ ಪ್ರತಿಕ್ಷಣ ಅವನ ವಿನಾಶ.!

ಒಮ್ಮೆ ಕೇಳಿಕೊಂಡೆ ನಾನೆ ನನ್ನೊಳಗೆ
“ಅವನೆಂದರೆ ಅದೇಕಿಷ್ಟು ದ್ವೇಷ ನಿನಗೆ?
ಈಪರಿ ಹಗೆ ಸಾಧಿಸುವೆಯೇಕೆ ಪ್ರತಿಘಳಿಗೆ
ವಿರೋಧಿಸುವೆಯೇಕೆ ಅವನ ಅಡಿಗಡಿಗೆ?”

ವಿಚಲಿತಗೊಂಡ ಅಂತರಂಗ ಹೇಳಿತು..
“ಅವರಿವರವನ ಬಗ್ಗೆ ಹೇಳಿದ್ದೆ ಪ್ರೇರಣ
ಕ್ಷಣಕ್ಷಣ ದೂಷಿಸುತಿಹೆನು ವಿನಾಕಾರಣ
ದ್ವೇಷಿಸಬೇಕೆಂಬುದೇ ದ್ವೇಷಿಸಲು ಕಾರಣ.!”

ನನಗಿಲ್ಲವನ ಋಣ ಅವನಿಗಿಲ್ಲ ನನ್ನಋಣ
ಮತ್ಸರಕು ಇಲ್ಲವೇ ಇಲ್ಲ ತೃಣ ರೇಣು ಕಣ
ಆದರೂ ಒಮ್ಮೆ ಮೈಹೊಕ್ಕಿದರೆ ದ್ವೇಷಗುಣ
ತಣಿಯದು ಮಣಿಯದು ತಲುಪಿದರು ಮಸಣ.!”


About The Author

Leave a Reply

You cannot copy content of this page

Scroll to Top