ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶ್ರೀನಿವಾಸ.ಎನ್.ದೇಸಾಯಿ,

ಭರವಸೆಯೇ ಸಾಧನೆಯ ಬೆಳಕು…!

ಇಂದಿನ ಆದುನಿಕ ಜಗತ್ತಿನಲ್ಲಿ ಸಾಧನೆಗೆ ನೂರಾರು ಅವಕಾಶವಿದೆ, ಸಾವಿರಾರು ದಾರಿಗಳಿವೆ. ಕೈಯಲ್ಲಿಯೇ ಜಗತ್ತನ್ನು ನೋಡಬಹುದಾದಷ್ಟು ಅದು ಕಿರಿದಾಗಿದೆ ಎಂದೆನಿಸುತ್ತದೆ. ಹಿಂದಿನ ಕಾಲದಲ್ಲಿ ಒಂದು ಸುದ್ದಿಯನ್ನು ತಲುಪಿಸಲು ತಿಂಗಳಾನುಗಟ್ಟಲೇ ಸಮಯ ಬೇಕಾಗುತ್ತಿತ್ತು. ಇಂದಿನ ವೈಜ್ಞಾನಿಕ ಯುಗದಲ್ಲಿ ವಿದೇಶದಲ್ಲಿರುವ ವ್ಯಕ್ತಿಗಳನ್ನು ಕ್ಷಣಾರ್ಧದಲ್ಲಿಯೇ ನೋಡಬಹುದಾದ ಪ್ರಬಲವಾದ ಸಂಪರ್ಕ ಸೇತು ಇಂದು ನಮ್ಮಲ್ಲಿದೆ.
ಆಗಿನ ಕಾಲದಲ್ಲಿ ಯಾವುದಾದರೊಂದು ವಿಷಯದ ಬಗ್ಗೆ ತಿಳಿದುಕೊಳ್ಳಲು ಗ್ರಂಥಾಲಯಗಳಿಗೆ ಅಥವಾ ವಿಷಯ ತಜ್ಞರ ಮೊರೆ ಹೋಗಬೇಕಾಗುತ್ತಿತ್ತು. ಆದರೆ ಇಂದು ಗೂಗಲ್ ಎಂಬ ತಂತ್ರಾಂಶವು ಎಲ್ಲಾ ಮಾಹಿತಿಯನ್ನು ನೀಡುತ್ತಿದೆ. ಅದರೂ ಕೂಡಾ ಸಾಧಿಸುವ ತೀವ್ರತೆ ಹಿಂದೆಂದಿಗಿಂತಲೂ ಇಂದು ಕ್ಷೀಣವಾಗುತ್ತಿದೆ ಎಂಬ ಅಂಶ ಆತಂಕಕಾರಿ. ಇದಕ್ಕೆ ಕಾರಣ ಹುಡುಕುತ್ತಾ ಹೋದಾಗ ಸಿಕ್ಕ ಒಂದು ವಿಶ್ಲೇಷಣೆಯ ಪ್ರಕಾರ ನಾವು ಇನ್ನೊಬ್ಬರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಸ್ಪಷ್ಟವಾಗುತ್ತಿದೆ.
ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬೇಕು. ನಮ್ಮ ಭವಿಷ್ಯವನ್ನು ಇನ್ನೊಬ್ಬರು ಬಂದು ಬದಲಾಯಿಸುತ್ತಾರೆ ಎಂಬ ಭ್ರಮೆಯಲ್ಲಿ ಕುಳಿತರೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ.
ಅನಂತ ಭವಿಷ್ಯ ನಮ್ಮೆದುರಿಗೇ ಇದೆ. ಪ್ರತಿಯೊಂದು ಮಾತು, ಆಲೋಚನೆ, ಕೆಲಸ ಮಾಡುವ ಕ್ರಮಗಳೆಲ್ಲವನ್ನೂ ಧನಾತ್ಕವಾಗಿ ತೆಗೆದುಕೊಂಡಾಗ ಅವು ನಮಗಾಗಿ, ನಮ್ಮ ಅವಕಾಶಕ್ಕಾಗಿ ಕಾದುಕುಳಿತಿರುತ್ತವೆ.
ಕೆಟ್ಟ ಆಲೋಚನೆ, ಕೆಟ್ಟ ಕೆಲಸ ಇವು ರಕ್ಕಸರಂತೆ ನಮ್ಮ ಮೇಲೆ ಬೀಳಲು ಕಾಯ್ದುಕೊಂಡಿರುತ್ತವಂತೆ. ಆದ್ದರಿಂದ ನಾವು ಒಳ್ಳೆಯ ಆಲೋಚನೆ, ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಹೋದರೆ ಇವು ಸಾವಿರಾರು ದೇವದೂತರ ಶಕ್ತಿಯೊಂದಿಗೆ ನಮ್ಮನ್ನು ಎಂದೆಂದಿಗೂ ರಕ್ಷಿಸಲು ಕಾಯ್ದುಕೊಂಡಿರುತ್ತವೆ ಎನ್ನುವ ಅಂಶವೇ ಉತ್ತೇಜನಕಾರಿಯಾದ ಭರವಸೆಯಾಗಿ ಸಾಧನೆಗೆ ಸ್ಪೂರ್ತಿಯಾಗುತ್ತದೆ. ಹಾಗಾಗಿ ಒಳ್ಳೆಯ ಕೆಲಸಕ್ಕೆ ಮುಂದಾಗಿ ಯಶಸ್ಸು ಪಡೆಯಿರಿ.
ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ವಿದ್ಯಾರ್ಥಿಗಳು ಹೇಡಿಯಂತೆ ಆತ್ಮಹತ್ಯೆಯಂಥಹ ಹೀನ ಕೃತ್ಯಕ್ಕೆ ಎಂದೆಂದಿಗೂ ಮನಸ್ಸು ಮಾಡಬೇಡಿ. ಸಾದಿಸುವ ಛಲವನ್ನು ರೂಡಿಸಿಕೊಂಡು ನಾವು ನಿರಂತರ ಪ್ರಯತ್ನವನ್ನು ಮಾಡುತ್ತಲೇ ಇರಬೇಕು. ಅದು ಕ್ಷಣಮಾತ್ರದಲ್ಲಿಯೇ ದುತ್ತೆಂದು ಸಿಕ್ಕುಬಿಡುವ ನಿಧಿಯಲ್ಲ. ಹಾಗಾಗಿ ಸಾಧನೆಯ ಹಾದಿ ಸುಗಮವಾಗಲು ಭಗಿರಥ ಪ್ರಯತ್ನವು ಪ್ರಾಥಮಿಕ ಹಂತದಿಂದಲೇ ತೀವ್ರವಾಗಿ ಪ್ರಾರಂಭವಾಗಬೇಕು. ಆಗ ಮಾತ್ರ ಸಾಧನೆಯ ಶಿಖರವನ್ನೇರುವುದು ಸುಲಭವಾಗುತ್ತದೆ. ಅದುವೇ ನಮ್ಮಯ ಜೀವನದ ಭರವಸೆಯ ಬೆಳಕಾಗುತ್ತದೆ..!!!


About The Author

Leave a Reply

You cannot copy content of this page

Scroll to Top