ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಆಶಾ ಮಯ್ಯ

ಬಳಿಯಬೇಕಿದೆ ರಂಗು.. ಮಸಿಯನಳಿಸಿ..

ಚದುರಿದ ಬಣ್ಣಗಳು, ಹರಡಿರುವ ಕನಸುಗಳು
ಆಗೊಮ್ಮೆ ಈಗೊಮ್ಮೆ ಧುಮ್ಮಿಕ್ಕುವ ಭಾವಗಳು
ಬಾಳೆಂಬ ಯಾನದಲಿ ಚಿತ್ತಾರವ ಮೂಡಿಸಲು
ಬಳಿಯಬೇಕಿದೆ ರಂಗು…ಮಸಿಯನಳಿಸುತಲಿ..

ನಿನ್ನೆಗಳ ನೆನಪುಗಳು,ನಾಳೆಗಳ ಲಾಲಸೆಗಳು
ಈ ಕ್ಷಣವು ಕಂಡಂಥ ವಾಸ್ತವದ ಮಜಲುಗಳು
ತೋರಿಕೆಯ ಚಿತ್ರಣದ ಹಲವು ಮುಖಗಳಿಗೆ
ಬಳಿಯಬೇಕಿದೆ ರಂಗು…ಕಲೆಯನಳಿಸುತಲಿ..

ಸತ್ಯ ಮಿಥ್ಯದ ನಟನೆ,ಕಲ್ಲು ಮುಳ್ಳಿನ ಪಥವು
ದಟ್ಟ ಮಂಜಿನ ಮುಸುಕು, ತೊಟ್ಟಿಕ್ಕುವ ಜಲವು
ಕಾಣದ ದಾರಿಯಲಿ ಭರವಸೆಯ ಮೂಡಿಸಲು
ಬಳಿಯಬೇಕಿದೆ ರಂಗು…ತಮವನಳಿಸುತಲಿ..

ಭವದ ಬಂಧನದ ಬಿಗಿತ, ಆಸೆಗಳ ಕಾಗುಣಿತ
ವರ್ಣಗಳ ತಕಧಿಮಿತ, ಪ್ರೀತಿಯ ಭೋರ್ಗರೆತ
ಹಿತ ಮಿತದ ಜೀವನ ಸಮರಸದ ಸವಿಭಾಷ್ಯಕೆ
ಬಳಿಯಬೇಕಿದೆ ರಂಗು…ಹುಸಿಯನಳಿಸುತಲಿ..

ಅಂಧಕಾರದ ಕೂಪ, ಅಜ್ಞಾನದ ತಿರುವುಗಳು
ಅರಿವಿರದ ಮೌಢ್ಯತೆಯ ಕರಿದಾದ ನೆರಳುಗಳು
ಚಂಚಲದ ಮನದೊಳಗೆ ಪಕ್ವತೆಯ ಪಡೆಯಲು
ಬಳಿಯಬೇಕಿದೆ ರಂಗು…ಕೊಳೆಯನಳಿಸುತಲಿ..

ಜೀವನದ ಬಣ್ಣಗಳು,ಮೌಲ್ಯಯುತ ಸಾರಗಳು
ರಾಗ ದ್ವೇಷವು ತುಂಬಿ ನಗುತಿರುವ ವದನಗಳು
ನಿತ್ಯದ ಬದುಕಿನಲಿ ಹೊಸತನವ ಮೂಡಿಸಲು
ಬಳಿಯಬೇಕಿದೆ ರಂಗು…ನಶೆಯನಳಿಸುತಲಿ.


About The Author

1 thought on “ಆಶಾ ಮಯ್ಯ ಕವಿತೆ-ಬಳಿಯಬೇಕಿದೆ ರಂಗು.. ಮಸಿಯನಳಿಸಿ..”

  1. S A RAMASHESHA

    ಸುಂದರ ಜೀವನಕೆ ಏನೆಲ್ಲಾ ರಂಗಿನ ಲೇಪನ ಮಾಡಬೇಕಿದೆ ಎಂಬ ಸದಾಲೋಚನೆ ನಿಮ್ಮ ಕಾವ್ಯದಲ್ಲಿ ಚೆನ್ನಾಗಿ ಮೂಡಿಬಂದಿದೆ ಆಶಾ ಮಯ್ಯ.

Leave a Reply

You cannot copy content of this page

Scroll to Top