ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಸವ ಜಯಂತಿ ವಿಶೇಷ

ರೋಹಿಣಿ ಯಾದವಾಡ.

ಗಜಲ್

ನಿಮ್ಮ ತತ್ವಗಳಿಂದ ವಿಶ್ವಗುರು ಎನಿಸಿಕೊಂಡಿರಿ ಅಣ್ಣ ಬಸವಣ್ಣ
ಕೆಲಸಕ್ಕೆ ಕಾಯಕ ಎಂದು ಹೇಳಿ ಘನತೆ ತಂದಿರಿ ಅಣ್ಣ ಬಸವಣ್ಣ

ದಯವೇ ಧರ್ಮದ ಮೂಲ ಎಂಬುದು ಎಲ್ಲ ಧರ್ಮಗಳ ಸಾರ
ಸಕಲ ಜೀವಾತ್ಮರಿಗೆ ಲೇಸನೇ ಬಯಸಿರಿ ಎಂದಿರಿ ಅಣ್ಣ ಬಸವಣ್ಣ

ಅನ್ಯರ ತಪ್ಪುಗಳನ್ನೆ ಎತ್ತಿ ಆಡಿಕೊಳ್ಳುವುದು ಲೋಕದ ರೂಢಿ
ಲೋಕದ ಡೊಂಕ ತಿದ್ದದೆ ನಿಮ್ಮ ಮನವ ಸಂತೈಸಿಕೊಳ್ಳಿರೆಂದಿರಿ ಅಣ್ಣ ಬಸವಣ್ಣ

ಕೆಲಸದಲ್ಲಿ ತಾರತಮ್ಯತೆ ಕಂಡು ಬೀಗುವುದು ಮನುಜ ಸ್ವಭಾವ
ಕಾಯಕವೇ ಕೈಲಾಸ ಎಂದು ಸಮಾನತೆ ಇರಲೆಂದಿರಿ ಅಣ್ಣ ಬಸವಣ್ಣ

ದೇವರ ಹುಡುಕಲು ನಾನಾ ಕ್ಷೇತ್ರ ಗುಡಿಗುಂಡಾರ ಅಲೆಯುವರು
ನಿಮ್ಮಲ್ಲೆ ದೇವನಿರುವನೆಂದು ದೇಹವೇ ದೇಗುಲವೆಂದಿರಿ ಅಣ್ಣ ಬಸವಣ್ಣ

ತಮ್ಮ ಕುಲವೇ ಶ್ರೇಷ್ಠವೆಂದು ಕಚ್ಚಾಡಿ ಹೋದರು ಇತಿಹಾಸದಲಿ
ಹೊಲಗೇರಿ ಶಿವಾಲಯಕೆ ಒಂದೇ ನೆಲವೆಂದಿರಿ ಅಣ್ಣ ಬಸವಣ್ಣ

ಎನಗೆಯೂ ಗುರು ನಿಮಗೆಯೂ ಗುರುಅಣ್ಣ ಬಸವಣ್ಣ ಎಂದಳಾ ರೋಹಿ
ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲವೆಂದಿರಿ ಅಣ್ಣ ಬಸವಣ್ಣ.


About The Author

Leave a Reply

You cannot copy content of this page

Scroll to Top