ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಬೇಡ್ಕರ್ ಜಯಂತಿ ವಿಶೇಷ

ಡಾ. ಪುಷ್ಪಾ ಶಲವಡಿಮಠ

ಲೋಕ ಬಹಳ ಬದಲಾಗಿದೆ

ನೀ ಹೋದ ದಿನದಿಂದ
ಲೋಕ ಬಹಳ ಬದಲಾಗಿದೆ
ವಿಪರೀತ ಬುದ್ದಿಯವರು
ಹುಟ್ಟಿಕೊಂಡಿದ್ದಾರೆ
ನಿನಗಿಂತ ಬುದ್ದಿವಂತರವರು!

ಅವರು
ಶಬ್ದವಿಲ್ಲದೆ ಯುದ್ಧ ಮಾಡುತ್ತಾರೆ
ಮೌನವಾಗಿಯೇ ಇರಿಯುತ್ತಾರೆ
ಹನಿ ರಕ್ತವೂ ಬೀಳದಂತೆ
ಹತ್ಯೆ ಮಾಡುತ್ತಾರೆ
ನೀ ಹೋದ ದಿನದಿಂದ
ಲೋಕ ಬಹಳ ಬದಲಾಗಿದೆ

ಅವರು
ಹೆಜ್ಜೆಗೊಂದೊಂದು
ಜಾತಿ ಸಸಿ ನಟ್ಟಿದ್ದಾರೆ…
ಅವು ಮರವಾಗುತ್ತಿವೆ….
ಫಲ ಬಿಡುತ್ತಿವೆ…
ಜಾಲಿ ಮರಕ್ಕಿಂತಲೂ
ಭಯಂಕರವಾಗಿ ಮುಳ್ಳು ಚಾಚಿ ನಿಂತಿವೆ
ಈಗ ನಿನ್ನ ನೆಲದ ತುಂಬಾ
ರಕ್ತದ ಹೆಜ್ಜೆಗಳು ಸುಟ್ಟ ಮಾಂಸದ ವಾಸನೆ

ನೀ ಹೋದ ದಿನದಿಂದ
ಲೋಕ ಬಹಳ ಬದಲಾಗಿದೆ
ಎಲ್ಲಿ ನೋಡಿದಲ್ಲಿ
ಚಂದ ಚಂದದ ಮುಖಗಳು
ಅಲ್ಲಲ್ಲಾ!
ಮುಖವಾಡಗಳು..!
ಕ್ಷಣಕಾಲ ನೀನೂ ದಂಗಾಗಿ ಹೋಗುವೆ!
ಅವರಂತರಂಗ ಶೋಧಿಸಿ ನೋಡು
ಅಲ್ಲಿ ದ್ವೇಷಾಸೂಯೆಯ ಜ್ವಾಲಾಮುಖಿ
ಹೃದಯಕುಂಡದಿಂದ ಪುಟಿಪುಟಿದೇಳುತಿದೆ

ನಿತ್ಯವೂ ನಿನ್ನ ನೆಲದಲ್ಲಿ ಓಕುಳಿಯಾಟ!
ಬಣ್ಣಗಳು ಬದಲಾಗಿ ಬಿಟ್ಟಿವೆ
ಅವರ ಮುಖಕ್ಕೆ ಇವರು
ಇವರ ಮುಖಕ್ಕೆ ಅವರು
ಮಸಿ ಬಳಿದುಕೊಳ್ಳುತ್ತಿದ್ದಾರೆ
ಪರಸ್ಪರ ಒಬ್ಬರ ಮೇಲೊಬ್ಬರು
ಕೆಸರೆರಚಾಟದಲ್ಲಿ ಖುಷಿಪಡುತ್ತಿದ್ದಾರೆ

ಎಲ್ಲವೂ ಬದಲಾಗಿ ಬಿಟ್ಟಿದೆ ಸಾಹೇಬಾ
ಶಿಕ್ಷಣ ಸಂಘಟನೆ ಹೋರಾಟಕ್ಕೆ
ಹೊಸ ಹೊಸ ವ್ಯಾಖ್ಯಾನಗಳು ಹುಟ್ಟಿಕೊಂಡಿವೆ
ಬಿತ್ತದೆ ಬೆಳೆ ಬೆಳೆಯುವ ಹುಚ್ಚು ಸಾಹಸ
ಹನಿ ಬೆವರು ಹರಿಸದೆ
ಫಲ ಅನುಭವಿಸುವ ಧಾವಂತ!
ಮುಟ್ಟದೆ ಮುಟ್ಟಿಸಿಕೊಳ್ಳದೆ
ಧಮನಿತರ ವಿಮೋಚನೆ!
ಅಂತಕರಣದ ಸ್ಪರ್ಶವೇ ಇಲ್ಲದ ಧರ್ಮ
ಸಾಕೇ ಬೇಕೇ ಬಾಬಾ ಸಾಹೇಬಾ?!

ಸಂವಿಧಾನದ ಪುಟಗಳೀಗ
ಮಾತಾಡಿಕೊಳ್ಳುತ್ತಿವೆ ತಮ್ಮತಮ್ಮೊಳಗೆ
ಸಾಹೇಬನಿಲ್ಲದ ಕಾಗದಗಳು
ಕಣ್ಣೀರು ಸುರಿಸುತ್ತಿವೆ….
ಬಾಬಾ ಸಾಹೇಬ
ನೀ ಹೋದ ದಿನದಿಂದ…..

ಲೋಕ ಬಹಳ ಬದಲಾಗಿದೆ
ಬಹಳ ಬದಲಾಗಿದೆ…..


About The Author

9 thoughts on “”

  1. Sumangala Attigeri

    ಕವಿತೆ ತುಂಬಾ ಚನ್ನಾಗಿ ಮೂಡಿಬಂದಿದೆ ವಾಸ್ತವಿಕತೆಯನ್ನು ತುಂಬಾ ಸೂಕ್ಷ್ಮವಾಗಿ ಬಿಂಬಿಸುವ ಕವಿತೆ ಮನಸ್ಸುನ್ನು ತಟ್ಟಿತು. ಹೃದಯ ಮುಟ್ಟಿತು. ಸುಪರ್ ಕವಿತೆ ಮೇಡಮ್.

Leave a Reply

You cannot copy content of this page

Scroll to Top