ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ನೆನಪಾಗಲಿಲ್ಲ

ನೆನಪಾಗಲಿಲ್ಲ
ಹಳಕಟ್ಟಿ ಫಕೀರಪ್ಪನವರೇ
ನಮಗಂದು
ನೀವು ತೊಟ್ಟ ಹರುಕು ದೋತುರ
ತೂತು ಬಿದ್ದ ಅಂಗಿ ಕೋಟು
ಮಾಸಿದ ರುಮಾಲು
ಮನೆ ಮಾರಿ
ಹಾಕಿದಿರಿ ಮುದ್ರಣಾಲಯ
ವಚನಗಳ ತಾಡೋಲೆಗೆ
ಕಸಿದುಕೊಂಡರು ನಿಮ್ಮಿಂದ
ಉಂಗುರ ಚೈನು ವಾಚು
ಹಾಕಿರಲಿಲ್ಲ ನೀವು
ಒಡೆದ ಕನ್ನಡಕದ ಕಾಚು
ಬಸವಣ್ಣ ಶರಣರ ದಿವ್ಯ ಸಂಕಲನ
ಕಣ್ಣ ಮುಂದೆ ಸರದಿ ಮಕ್ಕಳ ಸಾವು
ಜೋಲಿ ಹೋಗದಿರಲೊಂದು
ಹಳೆಯ ಬೈಸಿಕಲ್ಲು
ಉಂಡರೆ ಹಬ್ಬ
ಇಲ್ಲದಿರೆ ಉಪವಾಸ
ಮಡದಿ ದೂರಾದಳು
ಹಸಿವು ಬಡತನದ ಗೋಳು
ಕಟ್ಟಿದಿರಿ ವಚನ ಗುಮ್ಮಟ
ಬದುಕು ಏಳು ಬೀಳು
ನಿಮ್ಮ ಹೆಸರಿನಲ್ಲಿ
ಶಾಲೆ ಕಾಲೇಜು ಬ್ಯಾಂಕು
ಈಗ ಎಲ್ಲವೂ ನಡೆದಿವೆ
ಪ್ರತಿ ಕಾರ್ಯಕ್ರಮ ಭಾಷಣದಲ್ಲಿ
ನಿಮ್ಮ ಗುಣಗಾನ
ಅಂದು ನೀವು ಬಳಲಿ ಬೆಂಡಾದಾಗ
ಸಂಕಷ್ಟದಿ ಒದ್ದಾಡಿದಾಗ
ನಮಗೆ ನೆನಪಾಗಲಿಲ್ಲ
ಇಂದು ನಿಮ್ಮ ಗೋರಿಗೆ ಪುಷ್ಪನಮನ


About The Author

6 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ನೆನಪಾಗಲಿಲ್ಲ”

  1. mahadevi patil

    ಮನ ಕಲಕುವ ಸಾಲುಗಳು …ಎಷ್ಟೋ ಜನ ಸಾಧಕರು ಬದುಕಿದ್ದಾಗಿನ ಅವರ ಕಷ್ಟ ನಮಗೆ ಕಾಣುವುದಿಲ್ಲ ..ಕಂಡರೂ ನಾವು ಅಂತವರಿಗೆ ಸಹಾಯ ಮಾಡುವ ಮನಸ್ಥಿತಿ ಇರಿವುದಿಲ್ಲ ಅವರು ಅಗಲಿದ ಮೇಲೆ ಕಾಡುವ ನೆನಪುಗಳ ಪರಿ ಬಹಳ ಖೇದದಾಯಕ….ಗೋರಿಗೆ ಹೂವಿನ ಶೃಂಗಾರ ಮಾಡುವ ಬದಲು ಅವರು ಬದುಕಲು ಏನು ಬೇಕೋ ಮಾಡಿದರೆ ಅದು ಮಾನವಧರ್ಮ…

  2. Dr.Mahabaleshwara Reddy

    ಸರ್ ಶಶಿಕಾಂತ್ ಪಟ್ಟಣ ರವರಿಗೆ ನಿಮ್ಮ ಮನ ಕಲಕುವ ಕವಿತೆಗೆ ಹೃದಯ ಪೂರ್ವಕ ಧನ್ಯವಾದಗಳು. ಸಾಧಕರ ನೆನಪು ಎಲ್ಲರ ಮನದಲ್ಲಿ ಚಿರಸ್ಥಾಯಿ ಉಳಿಯಲಿ ಎಂಬುದೆ ನಮ್ಮ ಆಶೆ. ಶರಣ ಹಲಕಟ್ಟೆ ಫಕೀರಪ್ಪ ನವರ ಸ್ಮರಣೆಗೆ ತುಂಬಾ ಧನ್ಯವಾದಗಳು.

Leave a Reply

You cannot copy content of this page

Scroll to Top