ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸಂತೆಬೆನ್ನೂರು ಫೈಜ್ನಟ್ರಾಜ್

ಕಾಲಿಗೆ ಸಿಕ್ಕ ಕಲ್ಲು

ಕಾಡ ಮುಳ್ಳುಗಳ ಆರಿಸಾರಿಸಿ ತೆಗೆವೆ
ಎಂದು ಹೊರಟವ ಜಾಣ
ನಲ್ಲ ಸ್ವಾಮಿ ,ಚಪ್ಪಲಿ ಹಾಕಿ ನಡೆದರೆ ಅದೋ ಕಾಡೊಳಗೂ
ನಾಡೊಳಗೂ ಬೆಳಕು!

ನೂರು ಕಾಲುಗಳು ನಡೆದ ದಾರಿಗೆ
ಯಾವುದೋ ಕಾಲೆದುರು ಬಂದ
ಕಲ್ಲು ದೂರ ಪಯಣಕೆ ಅಡ್ಡಿಯಾಗಲಹುದೇ?
ಬೇಕಾದರೆ ಸಾರ ಕರಿಬೇವು ತಿನ್ನು
ಒಲ್ಲೆಯಾದರೆ ಪಕ್ಕಕ್ಕಿರಿಸು
ನಡೆ ನಡೆ ನಡೆ ಕಲ್ಲು ನಿನ್ನ ಗುರಿಯಲ್ಲ!

ಎಷ್ಟೆಲ್ಲಾ ಬರೆದಿದ್ದಾರೆ
ಮತ್ತೇನು ಬರೆಯುವೆ ಹೊಸದಾಗಿ
ಅಮ್ಮ ಮಾಡಿದಡಿಗೆಗೆ ಮಗಳ ಒಗ್ಗರಣೆ ಅಷ್ಟೇ ಈ ಬದುಕು ;ಹೊಸತೆಂದರೆ ಸೃಷ್ಟಿಸುವುದಲ್ಲ…ಕಂಡುಕೊಳ್ಳುವುದು.
ಹುಡುಕಿ ಹೋದ ಬುದ್ಧನಿಗೆ ಸಿಕ್ಕಿದ್ದು ಅಂಗುಲಿಮಾಲ
ಕಾಲಿಗೆ ಸಿಕ್ಕ ಕಲ್ಲಲ್ಲ ಅವನು
ಕಲ್ಲೆಂದುಕೊಂಡ ಅವರಿವರಿಗೆ ಬುದ್ಧ ಹೂವಾಗಿ
ಜಗದೆದುರು ತಂದಿದ್ದು ಇತಿಹಾಸ!

ಗುಲಾಬಿ ಪಕ್ಕೆಗಿರುವ ಮುಳ್ಳ
ಲೆಕ್ಕಕ್ಕಿಟ್ಟಿಲ್ಲ ಜಗತ್ತು
ಹಗಲ ಸೂರ್ಯನಿಗಿಂತ ರಾತ್ರಿ ತಾರೆಗಳೇ ಮನಕೆ ಮುದ
ಬೆಂಕಿಯ ಬೆಳಕಾಗಿಸಿ ಹೊರಟ ಸಂತರೆದುರು ಕಾಲಿಗೆ
ಸಿಕ್ಕ ಕಲ್ಲು ಸಾಧನೆಯ ಮೈಲಿಗಲ್ಲು!

ಅನವರತ ದುಡಿವ ಜೇಡ ಮರಳಿ ಯತ್ನದಲ್ಲಿಯೇ ಬಾಳಪಥ ದರ್ಶನ
ಬಂದು ಬಂದು ಹೋಗೋ ಅಲೆಗೂ ದಡದ
ಕಲ್ಲಿಗೂ ಒಲವೆಂದರೆ ತಪ್ಪೇನು? ಹಾದಿಯ ಕಲ್ಲು ಕಾಲಿಗೆ ಅಡ್ಡಿ ಅಲ್ಲ!

ಬದುಕು ಇಷ್ಟೇ ಸ್ವಾಮಿ
ಕಸ ರಸ ಮಾಡಿ ಬದುಕು
ಮುನಿಸಲ್ಲೂ ಒಲವ ಹುಡುಕು!

*******

About The Author

4 thoughts on “ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆ-ಕಾಲಿಗೆ ಸಿಕ್ಕ ಕಲ್ಲು”

  1. Jarina navilehal

    ಚಿಕ್ಕದೊಂದು ಘಟನೆಯಲ್ಲಿಯೂ ಮಹತ್ತರ ಸಂದೇಶವನ್ನು ಸಾರುವ ನಿಮ್ಮ ಕವಿತೆಗಳು ಪದೇ ಪದೇ ಓದುವಂತೆ ಮಾಡುತ್ತವೆ ಸರ್ ತುಂಬಾ ಚನ್ನಾಗಿದೆ

  2. ಪ್ರಭು ಗೊಲ್ಲರಹಳ್ಳಿ

    ಅರ್ಥಗರ್ಭಿತ ಕಾವ್ಯ ಹುಡುಕಲೊರಟ ಬದುಕಿನ ತಿರುಳು

Leave a Reply

You cannot copy content of this page

Scroll to Top