ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಿಶೇಷ ಲೇಖನ

ಟಾಗೋರರಿಂದ ಪ್ರೇರಣೆ ಪಡೆದ ಅನಕೃ

         ರವೀಂದ್ರನಾಥ ಟಾಗೋರರ ಬಗ್ಗೆ ಅಪಾರ ಗೌರವವಿದ್ದ ಅ. ನ. ಕೃಷ್ಣರಾಯರು  ಶಾಂತಿನಿಕೇತನಕ್ಕೇ ಹೋಗಿ ಹೆಚ್ಚಿನ ಜ್ಞಾನಾರ್ಜನೆ ಮಾಡಲು ನಿರ್ಧರಿಸಿದರು. ಇಲ್ಲಿಯ ಕಾಲೇಜು ಶಿಕ್ಷಣದಲ್ಲಿ ಅವರಿಗೆ ಆಸಕ್ತಿಯಿರಲಿಲ್ಲ. ” ಸಾರ್ವಜನಿಕ ವಾಚನಾಲಯಗಳೇ ನನ್ನ ವಿಶ್ವವಿದ್ಯಾಲಯಗಳಾದವು; ಕವಿಗಳೇ ನನ್ನ ಗುರುಗಳಾದರು ” ಎಂದು ಅವರು ಹೇಳುತ್ತಿದ್ದರು.

        ಆಗಿನ್ನೂ ಅವರು ಕನ್ನಡ ನಾಡುನುಡಿ ಬಗ್ಗೆ ಅಷ್ಟೊಂದು ಅಭಿಮಾನ ಬೆಳೆಸಿಕೊಂಡವರಾಗಿರಲಿಲ್ಲ. ಆದರೆ ಶಾಂತಿನಿಕೇತನಕ್ಕೆ ಹೋದ ನಂತರ ಅಲ್ಲಿ ಒಂದೆರಡು ಸಲ ಟಾಗೋರರನ್ನು ಭೆಟ್ಟಿಯಾದ ನಂತರವೇ ಅವರಿಗೆ ತಮ್ಮ ಕನ್ನಡ ನಾಡುನುಡಿ ಸಾಹಿತ್ಯ ಕಲೆಗಳ ಬಗ್ಗೆ ಎಚ್ಚರ ಉಂಟಾದದ್ದು.

       ಒಮ್ಮೆ  ರವೀಂದ್ರನಾಥ ಟಾಗೋರ್ ರನ್ನು ಭೆಟ್ಟಿಯಾದಾಗ  ಇವರು ಕರ್ನಾಟಕದಿಂದ ಬಂದವರೆಂದು ಕೇಳಿ ಸಂತೋಷದಿಂದ ” ಅಪ್ಪ ಹೇಗಿದ್ದಾರೆ?” ಎಂದು ಕೇಳಿದರು. ಕೃಷ್ಣರಾಯರು ಗೊಂದಲಕ್ಕೊಳಗಾದರು. ” ಅಪ್ಪ ಎಂದರೆ ಯಾರು?” ಎಂದು ಟಾಗೋರರಿಗೇ ಕೇಳಿದರು.” ನಮ್ಮಲ್ಲಿ ಚಿತ್ರಕಲಾಭ್ಯಾಸ ಮಾಡಿದ ವೆಂಕಟಪ್ಪನವರು  “.

    ಅನಕೃ ಅವರಿಗೆ ಆ ಬಗ್ಗೆ ಏನೂ ಗೊತ್ತಿರಲಿಲ್ಲ. ಅಜ್ಞಾನ ಪ್ರದರ್ಶಿಸಬಾರದೆಂದು‌ ಸುಮ್ಮನೇ   ” ಚೆನ್ನಾಗಿದ್ದಾರೆ”  ಎಂದರು. ” ವೀಣೆ ಶೇಷಣ್ಣನವರು ಚೆನ್ನಾಗಿದ್ದಾರೆಯೇ?” – ಮತ್ತೆ ಕೇಳಿದರು ಟಾಗೋರರು.

      ” ನನಗೆ ಅವರ ಬಗ್ಗೆ ಹೆಚ್ಚು ಗೊತ್ತಿಲ್ಲ. ಹೆಸರು‌ಕೇಳಿದ್ದೇನೆ ” ಎಂದರು ಅನಕೃ.

       ” ಮೈಸೂರಿನವರಾಗಿ ವೀಣೆ ಶೇಷಣ್ಣ ಗೊತ್ತಿಲ್ಲವೆನ್ನುತ್ತೀರಲ್ಲ‌.  ಆತ ಯುಗಪುರುಷ. ನಾಡಿನ ಪುಣ್ಯದಿಂದ ಅಂಥವರು ಹುಟ್ಟುತ್ತಾರೆ” ಎಂದ ಟಾಗೋರರು ವರದಾಚಾರ ಮೊದಲಾದವರ ಕುರಿತೂ ಕೇಳಿದರು.

       ಈ ಭೆಟ್ಟಿ ಅನಕೃ ಕಣ್ಣು ತೆರೆಸಿತು. ನಮ್ಮ ನೆಲದಲ್ಲೇ ಎಂತೆಂತಹ  ಮಹಾನ್ ಪ್ರತಿಭಾವಂತರಿದ್ದಾರೆ. ಅವರ ಬಗೆಗೇ ಮೊದಲು ತಿಳಿದುಕೊಳ್ಳಬೇಕು ಅಂದುಕೊಂಡು ಕರ್ನಾಟಕಕ್ಕೆ ಬಂದವರೇ ‌ಅಂಥವರೆಲ್ಲರ ಬಗ್ಗೆ ಓದಿದರು. ಮುಂದೆ ಅವರು ” ಕನ್ನಡ ಕುಲರಸಿಕರು” ಮತ್ತು ” ಕರ್ನಾಟಕದ ಕಲಾವಿದರು ” ಎಂಬ ಎರಡು‌ಪುಸ್ತಕ ಬರೆದರು.

*

        ಇನ್ನೊಮ್ಮೆ ಟಾಗೋರರು ತಮ್ಮ ಬಂಗಾಲಿ ಹುಡುಗನಿಗೇ ಪ್ರಾಶಸ್ತ್ಯ ಕೊಟ್ಟಿದ್ದನ್ನು ಕಂಡ ಅನಕೃ  ನಂತರ ಕನ್ನಡಿಗರಾಗಿ ನಾವೂ ನಮ್ಮ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕೆಂಬ ಭಾವನೆ ತಳೆದರು. ಮತ್ತು ಕನ್ನಡ ಚಳವಳಿಗೆ ಕಾರಣರಾದರು. ಮೊದಲ ರಾಜ್ಯೋತ್ಸವವನ್ನು ಆಚರಿಸಲು ಕಾರಣರಾದವರೂ ಅನಕೃ ಅವರೇ.


                    –ಎಲ್. ಎಸ್. ಶಾಸ್ತ್ರಿ

About The Author

Leave a Reply

You cannot copy content of this page

Scroll to Top