ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರಸ್ತುತ

ಕಸಾಪಕ್ಕೆ ಸಾಹಿತಿಗಳೇ ಸಿಗುತ್ತಿಲ್ಲ

ಎಲ್ ಎಸ್ ಶಾಸ್ತ್ರೀ

ಇಂದು ಅಕಸ್ಮಾತ್ ಒಂದು ತಾಲೂಕಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಪರಿಚಯದ ವಿಡಿಯೋ ಬರ್ತಾಇತ್ತು. ಕುತೂಹಲಕ್ಕಾಗಿ ಅದನ್ನು ಕೇಳಿದೆ. ೪೦- ೫೦ ವರ್ಷಗಳಿಂದ ಸಾಹಿತ್ಯಕ್ಷೇತ್ರದಲ್ಲಿದ್ದರೂ ನಾನು ಅವರ ಹೆಸರು ಎಲ್ಲೂ ಕೇಳಿರಲಿಲ್ಲ. (ಈಗಿತ್ತಲಾಗಿ ಬಹಳಷ್ಟು ಸಮ್ಮೇಳನಾಧ್ಯಕ್ಷರ ಬಗ್ಗೆ ಇದೇ ಮಾತು ಹೇಳಬಹುದು‌).
ನಾನು ಅವರ ಪರಿಚಯ ಕೇಳುತ್ತಹೋದೆ. ಅವರು ಕೃಷಿ ಸಮಾಜ ಸೇವೆ ಅದು ಇದು ಎಲ್ಲ ಮಾಡಿದ್ದು ತಿಳಿಯಿತು. ಆದರೆ ಕೊನೆಯ ತನಕ ಅವರ ಸಾಹಿತ್ಯ ಸೇವೆ ಏನು, ಅವರೇನು ಬರೆದಿದ್ದಾರೆ, ಎಷ್ಟು ಪುಸ್ತಕ ಬಂದಿದೆ ಎನ್ನುವ ವಿಚಾರವೇ ನಾಪತ್ತೆ. ಇದ್ದರೆ ತಾನೇ?

ಇದು ನಮ್ಮ ಕನ್ನಡ ಸಾಹಿತ್ಯ ಕ್ಷೇತ್ರದ ಗತಿ! ಸಾಹಿತಿಗಳೇ ಇಲ್ಲವೋ ಅಥವಾ ಕಸಾಪಕ್ಕೆ ಸಿಗುತ್ತಿಲ್ಲವೋ ಒಂದೂ ಅರ್ಥವಾಗುತ್ತಿಲ್ಲ. ಬಹಳಷ್ಟು ಕಡೆ ಇದೇ ಗತಿ. ಬೆಳಗಾವಿಯಲ್ಲಂತೂ ಇದು ನಾಲ್ಕಾರು ವರ್ಷಗಳಿಂದ ನಡೆದಿದೆ. ಸಾಹಿತ್ಯ ಜ್ಞಾನವೇ ಇಲ್ಲದ / ಒಂದು ಲೇಖನವನ್ನು ಬರೆಯದ ಶಾಸಕರು, ಸಂಸದರು , ಯಾರುಯಾರೋ ಇಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುತ್ತಾರೆ. ಅದನ್ನು ಪ್ರಶ್ನಿಸುವವರೂ ಇಲ್ಲಿ ಯಾರಿಲ್ಲ. ಯಾಕೆ ಬೇಕು ದೊಡ್ಡವರ ಉಸಾಬರಿ ಎಂದು ಸುಮ್ಮನಿರುತ್ತಾರೆ. ಸಾಹಿತ್ಯಕ್ಕಿಂತ ದುಡ್ಡು, ಅಧಿಕಾರ, ಜಾತಿ ಮುಖ್ಯವಾದಾಗ ಹೀಗೆ ಆಗುವದು ವಿಶೇಷವೇನಲ್ಲ.

ಬರೆಹಗಾರರಿಲ್ಲವೆಂದೇನಲ್ಲ. ಆದರೆ ಗುರುತಿಸುವ ಕಣ್ಣು ಮನಸ್ಸು ಇಲ್ಲದೇ ಇದ್ದಾಗ ನಿಜವಾದ ಸಾಹಿತಿಗಳು ಹೇಗೆ ಸಿಗಬೇಕು?. ಒಂದು ವೇಳೆ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಗಳೆ ಅಧ್ಯಕ್ಷರಾಗಬೇಕೆಂದಿಲ್ಲ, ಯಾರು ಬೇಕಾದರೂ ಆಗಬಹುದು ಎಂದಿದ್ದರೆ ಆ “ಸಾಹಿತ್ಯ” ಎನ್ನುವ ಶಬ್ದ ತೆಗೆದುಹಾಕಬಹುದಲ್ಲವೇ?

ಅಂದರೆ ೧೦೫ ವರ್ಷಗಳ ಇತಿಹಾಸ ಉಳ್ಳ ಕನ್ನಡ ಸಾಹಿತ್ಯ ಪರಿಷತ್ತು ಇಂದು ಯಾವ ದಾರಿಯಲ್ಲಿ ಸಾಗಿದೆ ಎನ್ನುವದಕ್ಕಿದು ದಿಕ್ಸೂಚಿ. ಈಗ ಬಂದ ಹೊಸ ರಾಜ್ಯಾಧ್ಯಕ್ಷರ ಕಾಲದಲ್ಲಾದರೂ ಇಂತಹ ದರಿದ್ರ ಸ್ಥಿತಿ ಹೋದೀತೇ ಎಂದು ಕಾದುನೋಡಬೇಕಾಗಿದೆ.


About The Author

Leave a Reply

You cannot copy content of this page

Scroll to Top