ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕೆ:ಪ್ರೇಮಯಾನ

ಅರ್ಚನಾ ಯಳಬೇರು

ಕಾಣದ ಕಡಲಲಿ ಕೇಳಿ ಬರುತಿದೆ ಒಲವ ಗಾನ
ನನ್ನೆದೆಯ ಅಂಬುದಿಯಲಿ ನಿನ್ನದೇ ಪ್ರೇಮಯಾನ
ನಿಡುಸುಯ್ವ ನಿಟ್ಟುಸಿರಲು ನೆನಪುಗಳ ನರ್ತನ
ಪ್ರೀತಿ ಶರಧಿಯಲಿ ತೇಲಿ ಹೋಗುತಿದೆ ನನ್ಮನ

ಮುಂಗಾರಿನ ಸಂಭ್ರಮವು ನನ್ನೊಲವ ತೋಟಕೆ
ಬೆಳದಿಂಗಳ ಹೊಳಪು ನನ್ನಿನಯನ ನೋಟಕೆ
ಚುಕ್ಕಿಗಳ ಚಿತ್ತಾರ ನನ್ನರಸನ ಸಿಂಗಾರಕೆ
ಬದುಕ ಬತ್ತಳಿಕೆಯಲಿ ಪ್ರೇಮ ಶರದ ಹೂಡಿಕೆ

ಜೋಗುಳದ ಲಾಲಿ ಜೀವನದ ತೊಟ್ಟಿಲಲಿ
ಪಿಸುಮಾತಿನ ಪಲ್ಲವಿಯು ನಲ್ನುಡಿಯ ಸ್ಪರ್ಶದಲಿ
ಅರಳುವ ವಾಂಛೆಗಳ ಘಮವು ಚೊಕ್ಕ ಸಹಚರ್ಯೆಯಲಿ
ವಸಂತನ ವೈಭವವು ಪ್ರೇಮ ಪಕ್ಷಿಗಳ ಕಲರವದಲಿ

ಸದ್ದಿಲ್ಲದ ಲಗ್ಗೆಯಲಿ ಸಹಸ್ರ ಕಾಮನೆಗಳ ಲೂಟಿ
ಲಗಾಮು ಹಿಡಿಯುವ ನಾಯಕನೆ ಬಾಳಿನ ಮೇಟಿ
ಮಾಡೋಣ ನಾವು ಹೊಂಗನಸುಗಳ ನಾಟಿ
ಬೀಸುತಲಿ ಸಾಗೋಣ ಪ್ರೀತಿಯ ಛಾಟಿ


About The Author

Leave a Reply

You cannot copy content of this page

Scroll to Top