ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಭೂತಳದ ಮೃತ್ಯು ನರ್ತನ

ಬೆಂಶ್ರೀ ರವೀಂದ್ರ

Mountains are not calling
Please don’t come

ಭವದ ಬೇರುಗಳು ಕಳಚುತ್ತಿವೆ
ಬಿಟ್ಟುಬಿಡು ನನ್ನ
ಅಮ್ಮ ಕರೆಯುತಿಹಳು
ನಿಡಿದೋಳ್ಗಳ ತೆರೆದಿಹಳು
ಬಂಧು ಬಿಡು ಬಂಧ ಬಿಡು ಬಂದುಬಿಡೊಳಗೆಂಬ ಆರ್ತತೆಯ‌ ಒರಲು
ಬಯಸಿ ಬಂದವಳಿಗಗ್ನಿ ಸ್ನಾನವನಿತ್ತು
ಬೀಸಿದರಲ್ಲವೆ ನುಡಿಬರಲು ಬೀಸಣಿಗೆ

ಹಿಮಗಿರಿಯ ಕಂದರಗಳೊಳಗೆ
ಜಗದ ಅಟ್ಟಣಿಗೆಯೊಳಗೆ
ಅಪ್ಪಿ ಕುಳಿತಿದ್ದೆ ಬೆಚ್ಚಗೆ
ಬಿರುಸು ಬಿರುಗಾಳಿ ಛಳಿಮಳೆಯೊಳಗೆ
ಹಾರಿಕೆ ಜಾರಿಕೆಯ ಸರಿಗಮದೊಳಗೆ ರಮಿಸಿ

.

ಬೇಡ ಬೇಡವೆಂದರೂ ಏರಿ ಮೇಲೇರಿ ಬಂದೆ
ಪಿಸುನುಡಿಯೂ ಸದ್ದೆಂಬ ಸೂಕ್ಷ್ಮತೆಯ
ಧಿಕ್ಕರಿಸಿ ಕುಣಿದೆ ಬಗೆದೆ ಬಗೆಬಗೆಯಲಿ
ಅಗೆದೆ ಅಗಿದು ಭೋಗಿಸಿದೆ
ರಂಗ ಸುರಂಗವ ಕೊರೆದೆ
ಅಬ್ಬರದಿ ಎದೆಮೇಲೆ ಜಿಗಿದಾಡಿದೆ
ಕಟ್ಟಿದೆ ಇಂದ್ರಭವನಗಳ
ಎಸೆದಾಡಿ ನೋಟ ನೋಟಗಳ ಕಂತೆ
ಕಟ್ಟಿ ಕಟ್ಟೆ ಸಾವಿರ ಸಂತೆ

ಬರೆಯೆಳೆದೆ ಬರಿದಾಗಿ ಬತ್ತಲಾದೆ
ಹರಿದೆ ಹರಿಹರರ ತಾವೆಂದು ಮರೆತು
ಮಲೆತು ಹೋಗಿದೆ ಬದುಕು
ಇ‌ನ್ನು ಮರಳುವುದೆಂತು
ಹಿಮಗಿರಿಯ ಕಂದರದಲಿ ನಾ ಮರಳಾಗುವೆ
ಬೇಡವೆಂದರೂ ನೀ ಮಣ್ಣಾಗುವೆ

ಕೊತಕೊತ ಕುದಿವ ಅಂತರಾಳದರಿವು
ಕಳೆದ ಭೂಪತಿಯೆ
ಅಟಾಟೋಪದ ನಿನ್ನ ತೋರ್ಗಾಣಿಕೆಯೀಗ ಬಾಂದಳದ ಬರಸಿಡಿಲಾಗಿ ಬರೆದಿದೆ
ಭೂತಳದ ಮೃತ್ಯುನರ್ತನದ ಒಕ್ಕಣಿಕೆ

ಹಿಂದೆ ಶತಶತಮಾನಗಳು
ನೀನೇನೋ ಅರಸುತ್ತ ಬಂದಾಗ
ಇದ್ದುದೆಲ್ಲವ‌ ಕಳಚಿಟ್ಟು ನಿಂತಾಗ
ನಶ್ವರ ಬಿಟ್ಟು ಈಶ್ವರನೆಂದಾಗ
ಗೌರಿಶಂಕರದತ್ತ ನೋಟ ನಿಮಗ್ನನಾದಾಗ
ಹೇಳು
ನಾನೋಲವಿಂದ ನಿನ್ನನಪ್ಪಿ ಮುದ್ದಿಸಲಿಲ್ಲವೆ
ಅಕ್ಷರದ ದಾಹಕ್ಕೆ ದಾಸೋಹ ನಡೆಸಲಿಲ್ಲವೆ
ಗುಹೆಗಳೊಡಲಲ್ಲಿ ನಿನ್ನದೆಗೆ ಗುರುವಾಗಿ
ಉಚ್ಛಾಸ ನಿಃಶ್ವಾಸಕೆ ಲಯ ಹಿಡಿಯಲಿಲ್ಲವೆ
ಕುಳಿತೆಡೆಯಿಂದ ಶಿವನೆಡೆಗೆ ಏರಲು ನಿಚ್ಚಣಿಕೆಯ ನೀಡಲಿಲ್ಲವೆ

ಈಗ
ಎಲ್ಲರೊಡನೊಂದಾಗದ
ನಿನ್ನದೊಂದೇ ಆದ ದೊಂದಿಗೆ ಎಣ್ಣೆಯುಣಿಸುವರೆಲ್ಲ ಮಸಣ ಸೇರಿಹರು
ಕೂಡಿ ಬೆಳೆವನೆಂಬ ಬಣ್ಣದನುಡಿಯ ಬಡಿವಾರ ಈಗ ಕರಕಾಗಿದೆ
ಎಚ್ಚರಿಕೆಯ ಗಡಿಯೆಂದೋ ಮುರಿಯಿತು
ಸಾಧ್ಯವಿದ್ದರೆ ನೀನು ನೀನೆಂದೆಣಿಸದೆ
ನಾವಾಗುವ ಕಾಲ ಬಂದಿತೋ ನೋಡು
ನಾಶ ತಡೆದಿತೋ ಅರಿಯೆ

ಬರಬೇಡ ಬರಬೇಡ ನನ್ನಡೆಗೆ
ಸಾಕಿನ್ನು ನಿನ್ನ ಸಹವಾಸ ವಿಶ್ವಾಸ ವಿಕಾಸ
ನಾನು ಕುಸಿಯುತ್ತಿರುವೆ
ಮರಳಿ ತಾಯಿಯ ಉಡಿಗೆ
ಸಮಾಧಿಯನೂ ಕಟ್ಟಲಾಗದು ಕಡೆಗೆ
ಇಲ್ಲದಂಬರಕೆ ಮುತ್ತಿಡುವ ನಿನ್ನ ಚಟಕೆ


About The Author

1 thought on “ಬೆಂಶ್ರೀ ರವೀಂದ್ರ ಕವಿತೆ-ಭೂತಳದ ಮೃತ್ಯು ನರ್ತನ”

  1. Ravindra kumar elvi

    ವಿಕಾಸ – ವಿನಾಶ, ಭೂಮಿ – ಸಹನೆ, ಆಸೆ – ದುರಾಸೆ, ರೀತಿ -ನೀತಿ, ಇತಿ – ಮಿತಿ ಎಲ್ಲವೂ ಚೆನ್ನಾಗಿ ಧ್ವನಿತವಾಗಿವೆ.

Leave a Reply

You cannot copy content of this page

Scroll to Top