ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹೊಸ ಕವಿತೆ

ಜಯಂತಿ ಸುನಿಲ್

ಹೇಳಲೇನಿದೆ ದೊರೆಯೇ…
ನಿಮ್ಮ ವಿರುದ್ಧ ನಮ್ಮ ಪಿರ್ಯಾದು ನಾವೆಲ್ಲಿ ಸಲ್ಲಿಸಬೇಕು?
ನಮ್ಮ ಪರ ವಕಾಲತ್ತು ವಹಿಸುವವರು ಯಾರು?
ನಮ್ಮಯ ಉನ್ಮಾದಗಳನ್ನು ತೀರ್ಮಾನಿಸುವವರು ನೀವಲ್ಲವೇ?

ಅನಾಮತ್ತು ಒಂದು ಇಡಿ ಕರುಣೆಯನ್ನು ನಮ್ಮೆಡೆಗೆ ಎಸೆದು ಬಿಡಿ ಬದುಕಿಕೊಂಡೇವು..
ನಿಮ್ಮ ಕೋಟೆ ಕಟ್ಟಲೆಗಳನ್ನು ಕಾಫಿಟ್ಟವರು ನಾವೆಂದು ಸಾರಿಬಿಡಿ ರುಜುವಾತಾಗಿ ಉಳಿಯಬಲ್ಲೆವು..

ಕೊಟ್ಟಿಹೆವು ತಲೆ ನಿಮಗೆ
ಕತ್ತರಿಸುವಿರೋ? ಕರುಣೆ ತೋರಿ ಉಳಿಸುವಿರೋ?
ನಿಮ್ಮ ಚರಿತ್ರೆಯಲ್ಲಿ ನಮ್ಮದೇ ಕಥೆ ವ್ಯಥೆಗಳಿವೆ
ನಿಮ್ಮ ಇತಿಹಾಸ ನಿರ್ಮಾಣದಲ್ಲಿ ನಮ್ಮದೇ ಕೈಗಳಿವೆ..

ಹೊಸತುಗಳ ಸಾಕ್ಷಾತ್ಕಾರ ನಾಳೆಯಿಂದಲೇ ಶುರುವಾಗಲಿ
ಕಾಲಾಂತರದಲ್ಲಿ ಮಾಗಿ, ಪಕ್ವವಾಗಿ ಹಣ್ಣಾದ ನಮ್ಮ ದುಃಖ ದುಮ್ಮಾನಗಳು,ಶೋಕ, ಶೋಷಣೆಗಳು ಇಂದಿಗೆ ಕೊನೆಯಾಗಲಿ..

ಅರಸೊತ್ತಿಗೆಯ ಅರಾಜಿಕತೆಯ ಬೇರುಗಳನ್ನು ಇಲ್ಲಿಗೆ ಕಿತ್ತೊಗೆಯಿರಿ..
ಕಾಲಚಕ್ರದಡಿ ಸಿಲುಕಿ ಗುರುತೇ ಸಿಗದಷ್ಟು ಹಳೆತಾದ ಆರೋಪಗಳಿವೆ ದಯಮಾಡಿ ಹೊರತೆಗೆಯಿರಿ..

ನೆನಪಿಸಿಕೊಂಡಷ್ಟು ಹೃದಯಕ್ಕೆ ಭಾರ..
ಮತ್ತೊಮ್ಮೆ ಮುಜುಗರವೆನಿಸುವಷ್ಟು ಭಾವುಕತೆ..
ಮಗದೊಮ್ಮೆ ಉಸಿರುಕಟ್ಟಿಸುವ ಕಲಕುವ ಅಂತಃಕರಣ ನನ್ನ ಜನಗಳದ್ದು..

ಓದಿದಷ್ಟೂ ನಿಗೂಢವಾಗುವ ಪುಸ್ತಕದಂತಿಲ್ಲಾ ನನ್ನವರು
ಈ ಮಧ್ಯೆ ತುಸು ಲಯಕ್ಕೆ ಬಂದಿದ್ದಾರಷ್ಟೇ…
ಹೊಸತನ ಜೀವಂತಿಕೆಯ ಬದಲಾವಣೆಗಳನ್ನು ಬಯಸುತ್ತಿದ್ದಾರಷ್ಟೇ…

ನಿಮ್ಮ ಆಳ್ವಿಕೆಯ ಬಗ್ಗೆ ನಮಗೊಂದಿಷ್ಟು ವಿನಯವಿದೆ
ನಮ್ಮ ಕನಸುಗಳಿಗೆ ಒಂದಿಂಚು ಜಾಗಕ್ಕಾಗಿ ಪರವಾನಗಿ ಬೇಕಿದೆ
ದಯಪಾಲಿಸುವಿರೋ..?
ದರ್ಪ ತೋರಿಸುವಿರೋ?

ಆಕ್ರಮಣವಿಲ್ಲದ ದೃಷ್ಟಿಕೋನದ ಬದಲಾವಣೆ ನಿಮ್ಮಿಂದ ಆಗಬೇಕಿದೆ…
ಠರಾವು ಮರೆತು ತುಸು ಪ್ರೀತಿ ತೋರಿಸಿ ಉಸಿರಾಡುವೆವು…

ನಿಮ್ಮ ಆಳ್ವಿಕೆ ದಾಖಲೆಯನ್ನು ಬಯಸದಿರಲಿ…
ಸದಾ ನ್ಯಾಯ ಧರ್ಮಗಳೇ ನಿಮ್ಮ ಊರುಗೋಲಾಗಿರಲಿ
ಇಷ್ಟೇ…
ಮತ್ತೇನಿದೆ ಹೇಳಲು ದೊರೆಯೇ???


About The Author

3 thoughts on “ಜಯಂತಿ ಸುನಿಲ್-ಹೊಸ ಕವಿತೆ”

    1. ಏನಿಲ್ಲ ,ಯಾರಿಲ್ಲ ಬಿಡು ಜೈ…
      ಇಲ್ಲಾರು ನಮ್ಮ ಬೇಗುದಿಗಳ ಕೇಳಲು ಸಿದ್ಧರಿಲ್ಲ, ನಮ್ಮ ಮೊರೆ ಆರ್ತನಾದ
      ನರಿಯ ಕೂಗು,,,, ಅಷ್ಟೇ!

      ಒಂದಿನಿತಾದರೂ ದಯವಿಲ್ಲ, ದಬ್ಬಾಳಿಕೆಯ
      ದುರಾಡಳಿತ ಇಲ್ಲೆಲ್ಲ, ‘ಗೆದ್ದವ ಸೋತ, ಸೋತವ ಸತ್ತ’ ಎಂಬಂತಾಗಿದೆಯಲ್ಲ..
      ಬಲವಾನ್ ಭಗವಾನ್ ಹೈ…. ಅಷ್ಟೇ!

      ಯಾವ ಕಡಿವಾಣಗಳಿಲ್ಲದ ರಿವಾಜು
      ಇಂದಿನ ಉಪಕಾರಕ್ಕಿಲ್ಲ ಮುಲಾಜು
      ಮರಳಿ ಮಣ್ಣಿಗೆ ಸೊನ್ನೆಗೆ ಹರಾಜು
      ಕೊನೆಗೇನಾದರೂ ಇಲ್ಲಿ… ಅಷ್ಟೇ!

      ಭಾವನಾತ್ಮಕ ಬೆಸುಗೆ ಗೆ ಬೆಲೆಯಿಲ್ಲ
      ಸಂಕಲನಾತ್ಮಕ ಆಲೋಚನೆಗಳಿಲ್ಲ
      ನಕಾರಾತ್ಮಕ ನಿಷ್ಟುರತನದವರೆಲ್ಲ
      ನೊಂದ ಮನಕೆ ಸಾಂತ್ವನ ಬೇಕಷ್ಟೆ.

      ….. ನಿಮ್ಮ ರಾ.ಸು.ತಿಮ್ಮಯ್ಯ
      ಮೊ. 6363691843

  1. Kaviyathriye. Ravige kandu nimage kandithe
    Sthri kuladha Nanda deepave.spoorthiya sikarave.E nimma korikege ysassu sigali. Bhoomi kooda thayoyalleve thayi.

Leave a Reply

You cannot copy content of this page

Scroll to Top