ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ನಂಬಿ ಕೆಟ್ಟವರಿಲ್ಲವೋ

ಸ್ಮಿತಾ ಭಟ್‍

ನಂಬಿ ಕೆಟ್ಟವರಿಲ್ಲವೋ

ನಂಬಿಕೆ ಬದುಕಿನ ಅತ್ಯಮೂಲ್ಯ ಸ್ಥಿತಿ. ಈ ನಂಬಿಕೆ ಎನ್ನುವ ಮೂರಕ್ಷರದ ಮೇಲೆ ಜಗತ್ತೇ ನಿಂತಿದೆ ಎಂದರೆ ತಪ್ಪಾಗಲಾರದು. ಕೈಮುಗಿವ ದೈವ, ಕಾಣದ ಭೂತ,  ತಾರೆಗಳಲ್ಲಿ ತುಂಬಿಕೊಂಡ ಜೀವ. ಎಲ್ಲವೂ ನಂಬಿಕೆಗಳೇ.ಒಂದು ನಂಬಿಕೆಯಿಂದಲೇ ಕರ್ಣನನ್ನು ನೀರಿಗೆ ಬಿಟ್ಟ ಕುಂತಿ. ಮತ್ತದೇ ನಂಬಿಕೆಯಲ್ಲಿ ಅರ್ಜುನನ ಜೀವ ಭಿಕ್ಷೆ ಬೇಡುತ್ತಾಳೆ.  ಮಾನ ಕಾಪಾಡುತ್ತಾನೆ ಕೃಷ್ಣ ಎಂದು ನಂಬಿದ ದ್ರೌಪದಿ. ಧರ್ಮ ಗೆಲ್ಲುತ್ತದೆ ಎಂದು ನಂಬಿದ ಭೀಷ್ಮ.  ಭಕ್ತಿಯನ್ನು ಮಾತ್ರ ನಂಬಿದ ಹನುಮ. ರಾಮ ಬರುವಿಕೆಯ ಕಾದು ನಂಬಿದ ಭರತ. ಹದಿಬದೆತನವನ್ನೇ ನಂಬಿದ ಸೀತೆ. ಅಹಂಕಾರವನ್ನೇ ನಂಬಿದ ರಾವಣ. ನಿದ್ದೆಯನ್ನೇ ನಂಬಿದ ಕುಂಭಕರ್ಣ. ಪ್ರತೀಕಾರ ನಂಬಿದ ಅಂಬೆ. ಪ್ರೇಮವನ್ನಷ್ಟೇ ನಂಬಿದ ರಾಧೆ.

ಎಲ್ಲವೂ ಇಲ್ಲಿ ಬಲವಾದ, ಘಟ್ಟಿ ಅಡಿಪಾಯದ ನಂಬಿಕೆಗಳೇ.ಕಾರಣವಿಲ್ಲದೆ ಯಾರೂ ಯಾರನ್ನೂ ನಂಬುವುದಿಲ್ಲ. ನಂಬಿದ್ದಾರೆ ಎಂದರೆ ಅಲ್ಲೊಂದು ವಿಶೇಷತೆ ಇದೆ ಅಂತಲೇ ಅರ್ಥ.ಸಿಂಹಕ್ಕೆ ತನ್ನ ಶಕ್ತಿಯ ಮೇಲೆ ನಂಬಿಕೆ. ಆನೆಗೆ ತನ್ನ ದೇಹದ ಮೇಲೆ ನಂಬಿಕೆ. ಹಕ್ಕಿಗೆ ರೆಕ್ಕೆ ಮೇಲೆ ನಂಬಿಕೆ. ನಾಯಿಗೆ ತನ್ನ ಒಡೆಯನ ಮೇಲೆಯೇ ನಂಬಿಕೆ. ಎಷ್ಟೊಂದು ಬಗೆಯ ನಂಬಿಕೆಗಳು

“ನಂಬಿಕೆಟ್ಟವರಿಲ್ಲವೋ ರಂಗಯ್ಯನ ನಂಬದೇ ಕೆಟ್ಟರೆ ಕೆಡಲಿ” ಎಂದಿದ್ದಾರೆ ದಾಸರು. ಇಲ್ಲೆಲ್ಲ ನಂಬಿಕೆ ಎಂದರೆ, ತಲೆ ಎರಡು ಹೋಳಾದರೂ, ಆಕಾಶ ಕಳಚಿ ಬಿದ್ದರೂ, ಭೂಮಿ ಬಾಯಿ ಬಿರಿದರೂ, ನಂಬಿಕೆಯ ತಳಪಾಯ ಹಾಗೆಯೇ ಗಟ್ಟಿಯಾಗಿ ನಿಲ್ಲುತ್ತಿದ್ದವು. ಆದರೆ ಈಗೆಲ್ಲ ನಮ್ಮ ನಿತ್ಯದ ಬದುಕಿನಲ್ಲಿ ಗಳಿಗೆಗೊಮ್ಮೆಯಾದರೂ ಬಂದು ಹೋಗುವ ಭಾವ ಎಂದರೆ ನಂಬಿಕೆಯ ಬೆನ್ನಿಗಂಟಿದ ಅಪ ನಂಬಿಕೆಯದ್ದು. ಇದು ಎರಡು ಮುಖದ ಒಂದೇ ನಾಣ್ಯ. ನಮ್ಮಿಂದ ಹೆಚ್ಚು ಚಲಾಯಿಸಲ್ಪಡುವುದು ಮಾತ್ರ ಅಪನಂಬಿಕೆಯ ಮುಖ. ಬೆಳ್ಳಂ ಬೆಳಿಗ್ಗೆ ಏಳುತ್ತಲೇ ನಾವು ಒಂದು ಅಪ ನಂಬಿಕೆಯ ಭಾವವನ್ನು ಹೊತ್ತು ಕಣ್ತೆರೆಯುತ್ತೇವೆ. ಇಂದು ಹಾಲಿನವನು ಬರುತ್ತಾನೋ ಇಲ್ಲವೋ, ಕೆಲಸದವಳು ಬರುತ್ತಾಳೋ ಇಲ್ಲವೋ, ಸ್ಕೂಲಿನ ವ್ಯಾನು ಕೈ ಕೊಟ್ಟರೆ! ಹೀಗೆ ಅಪನಂಬಿಕೆಯ  ಬೆಳಗು ಶುರುವಾಗುತ್ತದೆ. ಹೆಂಡತಿ ಮನೆಗೆ ಬರುವುದು ಲೇಟಾದರೆ ಗಂಡನಿಗೆ ಅಪ ನಂಬಿಕೆ, ಗಂಡನ ಮಾತಿನಲ್ಲಿ ಸ್ವಲ್ಪ ವ್ಯತ್ಯಾಸ ಕಂಡರೂ ಹೆಂಡತಿಗೆ ಅಪ ನಂಬಿಕೆ. ಮಕ್ಕಳ ವರ್ತನೆಯಲ್ಲಿ ಪಾಲಕರಿಗೆ ಅಪನಂಬಿಕೆ. ಹಿರಿಯರವರ್ತನೆಯಲ್ಲಿ ಕಿರಿಯರಿಗೆ ಅಪನಂಬಿಕೆ. ಒಟ್ಟಿನಲ್ಲಿ ನಂಬಿಕೆಯ ಅಡಿಪಾಯದಲ್ಲಿ ಬದುಕಬೇಕಾದ ಸಂಬಂಧಗಳೆಲ್ಲ, ಅಪನಂಬಿಕೆ ಎಂಬ ತೂತು ತಳದ ಮೇಲೆ ಬದುಕುತ್ತಿರುವುದು ಇವತ್ತಿನ ವಾಸ್ತವ ಸತ್ಯ. ನನ್ನ ನಂಬಿ ಪ್ಲೀಸ್, ಟ್ರಸ್ಟ್ ಮಿ, ಎಂದೆಲ್ಲ ಸಲ್ಲು ಸಲ್ಲಿಗೆ ಅಲವತ್ತು ಕೊಂಡರೂ ನಂಬುವವರು ಬಹಳ ಕಡಿಮೆ ಇವತ್ತಿನ ಕಾಲಕ್ಕೆ. ಯಾಕೆಂದರೆ ನಂಬಿಕೆ ತನ್ನ ಮೌಲ್ಯ ಕಳೆದು ಕೊಂಡಿದೆ.  ಅಥವಾ ನಾವೇ ನಂಬಿಕೆಯ ಮಾನ ಕಳೆದಿದ್ದೇನೆ. ನಿರಾತಂಕವಾಗಿ ಒಂದು ಸಂಬಂಧವನ್ನು ನಂಬುವ ಗಟ್ಟಿತನ ನಮ್ಮಲ್ಲಿ ಇಂದು ಉಳಿದುಕೊಂಡಿಲ್ಲ.

ಕೊಟ್ಟ ಮಾತು ಇಟ್ಟ ನಂಬಿಕೆಗಳನ್ನು ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಮುರಿಯದೇ ನಡೆದು ಕೊಂಡು ಬಂದವರು ಇದ್ದಾರೆ, ಆ ಕಾಲವೊಂದು ಇತ್ತು ಅನ್ನುವುದೇ ನಮಗಿಂದು ಸೋಜಿಗದ ವಿಷಯ. ಸುಕಾಸುಮ್ಮನೆ ಯಾರನ್ನೂ ನಂಬುವ ಕಾಲವೂ ಇದಲ್ಲ ಬಿಡಿ. ಆಳವಾದ ಮತ್ತು ಅರ್ಥಪೂರ್ಣ ಸಂಬಂಧಗಳಿಗಾಗಿ ಹಂಬಲಿಸಿದರೂ ಸಹ, ನಾವು ತೆರೆದುಕೊಳ್ಳಲು ಅಥವಾ ಹತ್ತಿರವಾಗಲು ಉತ್ಸುಕರಾಗಿರುವುದಿಲ್ಲ. ಅಲ್ಲೊಂದು ಸಣ್ಣ ಅಪನಂಬಿಕೆ ನಮ್ಮ ಅಡ್ಡ ಗಟ್ಟುತ್ತದೆ.

ನಂಬಿಕೆ ಎಂದರೆ ಯಾರೋ ಅಥವಾ ಯಾವುದೋ ಪಾತ್ರ, ಸಾಮರ್ಥ್ಯ, ಶಕ್ತಿ ಅಥವಾ ಸತ್ಯದ ಮೇಲಿನ ಅವಲಂಬನೆ. ಆರೋಗ್ಯಕರ, ಸುರಕ್ಷಿತ ಮತ್ತು ತೃಪ್ತಿಕರ ಸಂಬಂಧಗಳ ಬೆಳವಣಿಗೆಗೆ ನಂಬಿಕೆ ಅತ್ಯಗತ್ಯ.  ನಂಬಿಕೆಯ ಬಗ್ಗೆ ಗಮನಾರ್ಹವಾದ ಸಂಶೋಧನೆಗಳೂ ಬರಹವೂ ಬಂದ ಈ ಹೊತ್ತಲ್ಲಿ, ಅದೆಷ್ಟು ಅವಶ್ಯಕ ಬದುಕಿಗೆ ಎನ್ನುವುದು ಅರ್ಥವಾಗುತ್ತದೆ. ವ್ಯಕ್ತಿಯ ನಂಬಿಕೆಗಿಂತ ವ್ಯಕ್ತಿತ್ವದ ನಂಬಿಕೆ ಮುಖ್ಯ.ವ್ಯಕ್ತಿತ್ವ ವಿಕಾಸಕ್ಕೆ ಕೆಲವು ಆಚಾರ ವಿಚಾರಗಳನ್ನು ನಿರಾತಂಕವಾಗಿ ನಂಬಿದರೆ ಮನಸಿಗೂ ಬದುಕಿಗೂ ನೆಮ್ಮದಿ. ನಂಬಿಕೆಯಲ್ಲಿಯು ಎರಡು ಬಗೆಗಳಿವೆ ಒಂದು ಕಣ್ಣು ಮುಚ್ಚಿ ನಂಬುವುದು. ಇನ್ನೊಂದು ಪರಿಶೀಲಿಸಿ ನಂಬುವುದು. ದೇವರಿಗೆ ಕೈ ಮುಗಿ ಒಳ್ಳೆಯದಾಗುತ್ತೆ ಅಂತಾರೆ. ಗುರು ಹಿರಿಯರನ್ನು ಗೌರವಿಸು ಕಲಿತ ವಿದ್ಯೆ ಬೇಗ ತಲೆಗೆ ಹತ್ತುತ್ತೆ ಅಂತಾರೆ. ಊಟದ ಬಾಳೆಯಲ್ಲಿ ಬಿಟ್ಟರೆ ಮುಂದಿನ ಜನ್ಮದಲ್ಲಿ ಊಟ ಸಿಗಲ್ಲ ಅಂತಾರೆ. ಇಂಥವುಗಳನ್ನು ಕಣ್ಮುಚ್ಚಿ ನಂಬಬಹುದು. ಯಾರಿಗೂ ಯಾವ ತೊಂದರೆಯೂ ಆಗುವುದಿಲ್ಲ ಬದಲಿಗೆ ಒಂದು ನಿರಾಳತೆ ಸಿಗುತ್ತದೆ. ಅಪರಿಚಿತರನ್ನು ಪರಿಶೀಲಿಸಿ. ಯಾವುದೋ ವಸ್ತು ಕೊಳ್ಳುವಾಗ ಪರಿಶೀಲಿಸಿ. ಸುಳ್ಳು ಮಾತುಗಳನ್ನು ಪರಿಶೀಲಿಸಿ ನಂತರ ನಂಬಿ.

 “ಈ ಸಿರಿಯ ನಂಬಿ ಹಿಗ್ಗಲು ಬೇಡ ಮನವೆ ವಾಸುದೇವನ ಭಜಿಸಿ ಸುಖಿಯಾಗು ಮನವೆ”ಎನ್ನುತ್ತಾ ಆಧ್ಯಾತ್ಮಿಕವಾಗಿ ಕೂಡ ನಂಬಿಕೆ ಇನ್ನೊಂದು ಭಾವ ಹೇಳುತ್ತಾರೆ. ನಾಳೆ ನೋಡೋಣ, ನಾಳೆ ಅವಶ್ಯವಾಗಿ ಭೇಟಿಯಾಗೋಣ, ಅಂತೆಲ್ಲ ಅಂದರೆ, ಮನೆಯಲ್ಲಿ ಹಿರಿಯರು ಹೇಳುತ್ತಿದ್ದರು; “ನಾಳೆಯ ಕಥೆ ನಾರಾಯಣ ಬಲ್ಲ” ಎಂದು. ಅಂದರೆ ನಾಳೆಯನ್ನು ನಂಬ ಬಾರದು ಅಂತಲ್ಲ. ಮಾಡುವ ಕೆಲಸದ ಶ್ರದ್ಧೆ, ಮತ್ತು ಕರ್ತವ್ಯ ಅಷ್ಟೇ ನಮ್ಮ ಗುರಿ ಅದನ್ನು ನಂಬು ಮುಂದೂಡಬೇಡ ಎಂದು. ನಂಬಿಕೆಯ ಇಂಬು ಕೊಟ್ಟು ಬದುಕನ್ನು ಅರ್ಥ ಮಾಡಿಸುವ ಬಗೆ ಅದು. ಯಾವತ್ತೋ ಒಂದಿನ ಮಾಡಿದರಾಯಿತು ಎನ್ನುವ ಭಾವ ತೊರೆದು ಈ ಕ್ಷಣದ ಬದುಕನ್ನು ಬದುಕುವ, ನಮ್ಮೊಳಗಿನ ಸಾಮರ್ಥ್ಯವನ್ನು ನಂಬಿ ನಡೆಯುವ ಪರಿ. ಎಷ್ಟೋ ಸಂದರ್ಭಗಳಲ್ಲಿ ನಾವು ನಾಳೆ ಮಾಡೋಣ ಅಂದುಕೊಂಡ ಕೆಲಸ, ಭೇಟಿಗಳು ಕೈಗೂಡುವುದೇ ಇಲ್ಲ ಆ ಹತಾಷೆ ನಮ್ಮ ಬಾದಿಸದಿರಲಿ ನಂಬಿಕೆ ಕುಸಿಯದಿರಲಿ  ಅನ್ನುವುದು ಇಲ್ಲಿ ಹೆಚ್ಚು ಸೂಕ್ತ.

ಪ್ರತೀ ನಾಳೆಯನ್ನೂ ನಂಬು ಆದರೆ  ಮಾಡುವ ಕೆಲಸ ಮುಂದೂಡ ಬೇಡ. ನಾಳೆ ಇದೆ ಆದರೆ ಯಾರ ಪಾಲಿಗೆ ಎಷ್ಟು ದಕ್ಕುತ್ತದೆ ಅದನ್ನು ಕಾಣಲಾಗದು.  ಯಾವುದನ್ನು ನಂಬಬೇಕು ಹೇಗೆ ನಂಬಬೇಕು ಎನ್ನುವ ನಂಬಿಕೆಯ ಸೂಕ್ಷ್ಮ ತಿಳಿದಿರಬೇಕು. ನೀನು ನಾಳೆಯನ್ನು ನಂಬಬೇಕು ನಿಜ ಆದರೆ ಮನಸು ಚಂಚಲ ಅದನ್ನು ನಂಬಬೇಡ ಅದನ್ನು ತಿದ್ದು ಪಾಠ ಮಾಡು ಅನ್ನುತ್ತಾರೆ ಹಿರಿಯರು.   ನಮ್ಮ ಸುತ್ತಲಿನ ಸಂಬಂಧಗಳು ಮಾಡುವ ಕೆಲಸಗಳು ನಂಬಿಕೆಯ ಕೊರತೆಯಿರುವಾಗ, ನಕಾರಾತ್ಮಕ ಗುಣಲಕ್ಷಣಗಳು, ಅನುಮಾನ ಮತ್ತು ಅಸೂಯೆಯಂತಹ ಹಾನಿಕಾರಕ ಆಲೋಚನೆಗಳು, ಕ್ರಿಯೆಗಳು ಅಥವಾ ಭಾವನೆಗಳ ಸಂಭಾವ್ಯ ಬೆಳವಣಿಗೆಗೆ ಅವಕಾಶ ನೀಡುತ್ತದೆ.  ಕಾಲಾನಂತರದಲ್ಲಿ, ಇದು ಭಾವನಾತ್ಮಕ ಅಥವಾ ದೈಹಿಕ ಸಮಸ್ಯೆಗಳಿಗೂ ಕಾರಣವಾಗಬಹುದು. ಪ್ರತಿಕ್ಷಣವೂ ಮೋಸ ಹೋಗುತ್ತಿರುವ ಯಾರನ್ನು ಏನನ್ನು ನಂಬಲು ಯೋಗ್ಯವಲ್ಲದ ಈ ಕಾಲಘಟ್ಟದಲ್ಲಿ,ಮನಸ್ಥಿತಿಯಲ್ಲಿ ನಂಬಿಕೆಯ ಮಾತುಗಳು ಸ್ವಲ್ಪ ಅತಿಶಯೋಕ್ತಿ ಅನ್ನಿಸುವುದು ಸುಳ್ಳಲ್ಲ. ಆದರೆ ಅದನ್ನು ಅರ್ಥ ಮಾಡಿಕೊಂಡರೆ ಬದುಕು ಕಷ್ಟವಲ್ಲ. ಹಾಗಾಗಿ ನಿರುಮ್ಮಳವಾಗಿ ನಂಬುವ ಪರಿಧಿಯೊಂದನ್ನು ಸೃಷ್ಟಿಸಿಕೊಂಡು ನಿರಾತಂಕವಾಗಿ ಬದುಕಿಬಿಡಬೇಕು.


ಸ್ಮಿತಾಭಟ್

About The Author

Leave a Reply

You cannot copy content of this page

Scroll to Top