ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬೇಸಿಗೆ

ಡಾ. ಅರಕಲಗೂಡು ನೀಲಕಂಠ ಮೂರ್ತಿ

ಮತ್ತೆ ಬಂದೇ ಬರುತ್ತದೆ ಬೇಸಿಗೆ
ಒಮ್ಮೊಮ್ಮೆ ಬಿರುಬೇಸಿಗೆ
ಬಿಸಿಲ ಭಾರೀ ಹೊರೆ ಹೊತ್ತು
ಹಂಚಿ ಹೋಗಲು
ಎಲ್ಲರ ನೆತ್ತಿಯ ಮೇಲೆ
ಒಂದಿಷ್ಟಿಷ್ಟು ಸೆಕೆಯ ಸ್ವತ್ತು!

ಬೇಸಿಗೆಯ ದಿನಮಾನಗಳೇ ಹಾಗೆ
ಝಳಪಿಸುವ ಹರಿತ ಕತ್ತಿಯ
ಬೆಳಕಿನ ಪ್ರತಿಫಲನ
ಸುಣ್ಣ ಬಣ್ಣ ಮೀರಿದ
ಬೆಳ್ಳಂಬೆಳಕ ಬಿಳಿ
ಹೊಳೆವ ಬೆಳಕ ಭರ್ಜಿ
ಇರಿದು ಕಣ್ಣ ಕೊಳಗಳಾಳ
ನಿರ್ದಯೆಯಿಂದ ಇಳಿದು ನೀಳ!

ಜಗದೆಲ್ಲ ಅರಣ್ಯಗಳ ಮಹಾರಾಣಿ
ಅಮೆಜಾನ್ ಮಾತೆಯ
ನೀಳ ಕೇಶ ಮುಂಡನಗೈದ
ಅವಳುಟ್ಟ ಅಚ್ಚ ಹಸಿರ ಸೀರೆಗೆ
ಕೈ ಇಟ್ಟೆಳೆದೆಸೆದ ದುರುಳರು
ಇನ್ನಾವ ವನಸಿರಿಯ
ಗುಡಿಸಿ ಗುಂಡಾಂತರ ಮಾಡದಿಹರು?
ಕೆಂಡ ಉಕ್ಕಿಸುವ ಈ ಬಿಸಿಲೊಲೆಗೆ
ಇದಕಿಂತ ಉತ್ತಮ ಇಂಧನವೆ?

ಮಧ್ಯಾಹ್ನದ ಬಿಸಿಲ ಝಳಕ್ಕೆ
ಕಣ್ಣುಗಳಿಟ್ಟ ತಕ್ಕಡಿಯ ತಟ್ಟೆ
ಕೆಳಗೆಳೆವುದು ನಿರ್ಭರ ತೂಕಕ್ಕೆ
ಜೋಗುಳ ಗುನುಗಿದಂತೆ…

ಬೇಸಿಗೆ ಸಹ್ಯವೋ
ಅಥವ ಘಾತಕವೋ
ಆದರೆ ಜೀವಜಗತ್ತಿನವಶ್ಯ
ಬಿಸಿಲ ಬೆಂಕಿ ಕಾಯಿಸಿ
ನದಿ ಸಾಗರಗಳಾವಿ
ಏಣಿ ಹತ್ತಿ ಆಕಾಶದಟ್ಟ ಮಟ್ಟಸ ಸೇರಿ
ನೀರು ತುಂಬಿದೆಲ್ಲ ಕರಿ ಮಡಿಕೆ ರಾಶಿ
ಠಳಾರ್ ಸದ್ದಿನೊಡನೆ ಚೂರಾಗಿ
ಇಳೆಗಿಳಿಸಿದರದು ಮಳೆ!
ಜಗದೆಲ್ಲ ಜೀವಜಲದ ಕಳೆ…


About The Author

Leave a Reply

You cannot copy content of this page

Scroll to Top