ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪುಸ್ತಕ ಸಂಗಾತಿ

ಬೇಲಿಯ ಗೂಟದ ಮೇಲೊಂದು ಚಿಟ್ಟೆ-ಡಾ. ನಾ‌ .ಮೊಗಸಾಲೆಯವರ ಕವಿತೆಗಳ ಗುಚ್ಛದ ಬಗ್ಗೆ ಸ್ಮಿತಾ ಅಮೃತರಾಜ್ ಅವರು ಬರೆದಿದ್ದಾರೆ

ಬೇಲಿಯ ಗೂಟದ ಮೇಲೊಂದು ಚಿಟ್ಟೆ

ಡಾ. ನಾ‌ .ಮೊಗಸಾಲೆಯವರ ಕವಿತೆಗಳ ಗುಚ್ಛ

 ಬೇಲಿಯ ಗೂಟದ ಮೇಲೊಂದು ಚಿಟ್ಟೆ

ಡಾ. ನಾ‌ .ಮೊಗಸಾಲೆಯವರ ಕವಿತೆಗಳ‌ ಗುಚ್ಛ’ ಬೇಲಿಯ‌ ಗೂಟದ ಮೇಲೊಂದು ಚಿಟ್ಟೆ’  ಓದುವ ಭಾಗ್ಯ ಇತ್ತೀಚೆಗೆ ನನಗೆ ದೊರಕಿತು. ಪ್ರತೀ ಕವಿತೆ ಓದಿದಾಗಲೂ ಅದರ‌ ಗುಂಗಿನಲ್ಲಿಯೇ ಇದ್ದು ಬಿಡುವ ಅನ್ನುವಷ್ಟು‌ ಮೋಹ ಆವರಿಸಿಕೊಳ್ಳುತ್ತದೆ .  ಮುಂದಿನ ಕವಿತೆ ಹಿಡಿದು ಕುಳಿತರೆ ಹಿಂದಿನ ಕವಿತೆಯ ಗಂಧ, ನವಿರುತನ ಎಲ್ಲಿ  ಮಾಸಿ ಹೋಗಿ ಬಿಡುತ್ತದೆಯೇನೋ ಅನ್ನುವ ಸಣ್ಣ ಕಳವಳ. ಅಷ್ಟು ನವಿರು ಮತ್ತೆ ಸೂಕ್ಷ್ಮ ಕವಿತೆಗಳು ಇಲ್ಲಿನವು. ಮೇಲು ನೋಟಕ್ಕೆ ಇಲ್ಲಿಯ ಕವಿತೆಗಳು ಸರಳ ಅಂತ ಅನ್ನಿಸಿದರೂ ಗಹನವಾದ ಅರ್ಥವನ್ನು ಅದು ತನ್ನ ಒಡಲೊಳಗೆ ಬಚ್ಚಿಟ್ಟುಕೊಂಡಿದೆ. ಬಿಡಿಸಲು‌ ನೋಡಿದಷ್ಟೂ ಹೊಸ ಅರ್ಥ ಸಾದ್ಯತೆಗಳನ್ನು ನಮ್ಮ ಮುಂದೆ ಹರವಿಕೊಳ್ಳುತ್ತದೆ. ಗೂಟದ ಮೇಲಿನ ಚಿಟ್ಟೆಯನ್ನು ಇನ್ನೇನು ಹಿಡಿದೆ ಅನ್ನುವಾಗ ಪಕ್ಕನೆ ರೆಕ್ಕೆ ಬಿಡಿಸಿ ಹಾರಿ ಬಿಡುತ್ತದೆ. ಪ್ರಕೃತ್ತಿಯಲ್ಲಿ ನಾವು ದಿನನಿತ್ಯ ನೋಡುವ ಸಂಗತಿಗಳೇ‌ ಇಲ್ಲಿಯ ಕಾವ್ಯದ ಪರಿಕರಗಳು. ಸಂವಾದದ ಗತಿಯಲ್ಲೇ ಸಾಗುವ ಹೆಚ್ಚಿನ ಕವಿತೆಗಳನ್ನು ಗಮನಿಸಿದಾಗ ಕವಿತೆ ಅನ್ನುವುದು ಬೇರೆಲ್ಲೂ ಇಲ್ಲ, ಅದು ನಮ್ಮೊಳಗೆ ಇದೇ ಅನ್ನುವಂತದ್ದು ವೇದ್ಯವಾಗುತ್ತದೆ. ಒಳಗಣ್ಣು ತೆರೆದು‌ ನೋಡಿದರೆ  ಬದುಕೇ ಒಂದು ಕಾವ್ಯದ ಆಲಾಪದಂತೆ ಅನ್ನಿಸಿ ಬಿಡುತ್ತದೆ. ದಿನಾ ನೋಡುವ ಮಾಮೂಲಿ ಸಂಗತಿಯೊಂದು ಧ್ಯಾನಕ್ಕೆ ಒಗ್ಗಿಕೊಂಡಾಗ ಅದು ಹೇಗೆ ಬೇರೆಯದೇ ಆಗಿ ಕಂಡು ನಮ್ಮೊಳಗೆ ಒಂದು ಹೊಸ ಮಿಂಚನ್ನು  ಮೂಡಿಸುತ್ತದೆ ಅನ್ನುವುದು ಹೇಳಲಾಗುವುದಿಲ್ಲ.‌ ಅದು ಅನುಭವಿಸಿಯೇ ತೀರಬೇಕು. ಪದೇ ಪದೇ ಒಂದೇ ವಸ್ತುಗಳು ಇಲ್ಲಿ ಪುನಾರವರ್ತನೆಯಾದರೂ ಅದು ಬೇರೆಯದೇ ಬಗೆಯಲ್ಲಿ ಕಾಣಿಸಿ ಕೊಳ್ಳುತ್ತದೆ. ಪ್ರಕೃತ್ತಿಯಲ್ಲಿ ಅಡಕವಾದ ವೈವಿಧ್ಯಮಯವಾದ ರೂಪಕ ಶಕ್ತಿ ಇಲ್ಲಿನ ಕವಿತೆ ಸಾಲಿನಲ್ಲಿ ಹುದುಗಿ ಅಚ್ಚರಿ ಹುಟ್ಟಿಸುತ್ತದೆ. ಕವಿತೆ ಅನ್ನುವುದು ಗಂಭೀರವಾದ , ಕ್ಲಿಷ್ಟವಾದ ಪದಗಳ ಮೆರವಣಿಗೆ ಅಲ್ಲ, ಸಣ್ಣ ಸಂಗತಿಯೊಂದು ಸರಳವಾದ ನಿರೂಪಣೆಯಲ್ಲಿ  ಹೇಗೆ ಗಹನವಾಗಿ ತೆರೆದುಕೊಳ್ಳಬಹುದು ಅನ್ನುವುದ ಕಂಡುಕೊಂಡೆ. ಪ್ರತಿನಿತ್ಯದ ಸಂಗತಿಗಳಲ್ಲಿ ಹೊಸತೇನೋ ಹೇಳುವುದು,ಅದನ್ನು ಬದುಕಿಗೆ ಸಮೀಕರಿಸಿ ನೇಯುವುದು ಇಲ್ಲಿಯ ಕವಿತೆಗಳ ವೈಶಿಷ್ಟ್ಯತೆ. ಪ್ರಕೃತ್ತಿಯ ಎಲ್ಲಾ  ವಸ್ತುಗಳು ಒಂದರೊಳಗೊಂದಾಗಿ ಕೊನೆಗೆ ತಾನೇ ಅದು ಆಗಿ‌ ಬಿಡುವ ಪವಾಡ ಇಲ್ಲಿಯ ಕವಿತೆಗಳಲ್ಲಿ ಸಂಭವಿಸುತ್ತದೆ.

‌ಕಣ್ಣಿಗೆ ಕಟ್ಟುವ ಹಾಗೆ,ಹೌದಲ್ಲ.. ಅನ್ನುವ ಹಾಗೆ ಮೂರ್ತದಿಂದ ಅಮೂರ್ತದೆಡೆಗೆ‌ ಕೊಂಡೊಯ್ಯ್‌ದುಬಿಡುತ್ತದೆ. ಹಾಗಾಗಿ ಸಂಜೆಯೂ ಒಮ್ಮೊಮ್ಮೆ ಮುಂಜಾನೆಯಾಗಿ ಬಿಡುತ್ತದೆ,ಮುಂಜಾನೆ ಮೊಮ್ಮಗುವಾಗಿ‌ಬಿಡುತ್ತದೆ.‌ ಆರಿ ಹೋದ‌ ನದಿಯ ದಡದಲ್ಲಿ‌ ನಿಂತಾಗ ನೆನಪಿನ ಮಳೆಗೆ‌ ಏಕಾಏಕಿ ಪ್ರವಾಹ ಬಂದು ತುಂಬಿಕೊಳ್ಳುವುದು ಕವಿತೆಗಿರುವ ಶಕ್ತಿ. ಕತ್ತಲಲ್ಲಿ ಝಗ್ಗನೆ ದೀಪ ಬೆಳಗಿದಂತೆ ಬೆರಗು ಹುಟ್ಟಿಸುತ್ತವೆ ಇಲ್ಲಿಯ ಕವಿತೆ ಸಾಲುಗಳು. ಸುಖ ಅನ್ನುವುದು ಸಿಗದೇ ಇರುವ ಸುಖದ ಹುಡುಕಾಟದಲ್ಲಿ  ಅಲ್ಲ,‌ ಇರುವುದರಲ್ಲಿ ಕಂಡುಕೊಳ್ಳುವುದು ಅನ್ನುವ ಸತ್ಯದರ್ಶನ ಇಲ್ಲಿನ ಕವಿತೆಗಳಲ್ಲಿವೆ.

   ಬಾಹುಬಲಿಯ ಪದತಲದಲ್ಲಿ ಇರುವೆಯಾಗಿ ಓಡುವ ಸುಖ ಕರುಣಿಸು ಎನ್ನುವ ಕವಿಯ‌ ಪ್ರಾರ್ಥನೆಯಂತೆ, ಡಾ.ನಾ.ಮೊಗಸಾಲೆಯವರ ಕವಿತೆಗಳ ಓದಿನ ಸುಖ ಸದಾ‌ ನನ್ನದಾಗಲಿ ಅನ್ನುವುದು ನನ್ನ ಸವಿನಯ ಪ್ರಾರ್ಥನೆ.  ಒಂದು ಚೆಂದದ ಓದಿಗೆ ಅನುವು ಮಾಡಿಕೊಟ್ಟ ಹಿರಿಯ ಕವಿಗಳಾದ‌ ಡಾ.ನಾ.ಮೊಗಸಾಲೆಯವರಿಗೆ‌ ನನ್ನ ವಂದನೆಗಳು.ಮತ್ತು ಅಭಿನಂದನೆಗಳು.


  ಸ್ಮಿತಾ ಅಮೃತರಾಜ್. ಸಂಪಾಜೆ

About The Author

2 thoughts on “ಬೇಲಿಯ ಗೂಟದ ಮೇಲೊಂದು ಚಿಟ್ಟೆ-ಡಾ. ನಾ‌ .ಮೊಗಸಾಲೆಯವರ ಸಂಕಲನ”

  1. Shobha hirekai

    ಸಂಕಲನದ ಕುರಿತು ಬರೆದ ನಿನ್ನ ಬರಹ ಕೂಡ ಒಂದು ಕವಿತೆ ಓದಿದಷ್ಟೇ ಖುಷಿ ಕೊಟ್ಟಿತು…

    1. ವಿಜಯ ಅಮೃತರಾಜ್. ನ್ಯಾಯವಾದಿ, ಕೊಪ್ಪಳ.

      ಕವಿಯ ಹೆಸರು ಕೇಳಿದ್ದೆ , ಅವರ ಬಿಡಿ ಕವಿತೆ ಓದಿದ ನೆನಪು ಆದರೆ ತಮ್ಮ ಈ‌ ಬರಹದ ಮೂಲಕ ನನಗೆ ಸಮಗ್ರವಾಗಿ ಕವನ ಸಂಕಲನ ಓದಬೇಕು ಅನಿಸಿತು, ಉತ್ತಮ ಕೃತಿಯನ್ನು ಪ್ರಾದೇಶಿಕತೆಯ ಬೇಲಿ ದಾಟಿಸುವ ತಮ್ಮ ಬರಹದ ಶಕ್ತಿಗೆ ನಮನಗಳು.

Leave a Reply

You cannot copy content of this page

Scroll to Top