ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಕಣ ಸಂಗಾತಿ

ಸಕಾಲ

ಶುಭ,ಅಶುಭದ ನಡುವೆ ಆಷಾಢಮಾಸ

ಆಷಾಡ ಮಾಸದ ಬೇಗೆಯ ಅನುಭವಿಸಿದ ಮನಸು ಒಮ್ಮೆ ಮೀನನ್ನು ನೀರಿಂದ ಬೇರ್ಪಡಿಸಿದಾಗ ಅದರ ವಿಲವಿಲ ಒದ್ದಾಟ,ಹೊಯ್ದಾಟದಂತೆ.ಮದುವೆಯಾದ ಹೊಸತರಲ್ಲಿ ಪರಸ್ಪರ ಅರ್ಥೈಸಿಕೊಂಡು ಕಂಗಳ ತಾಪ ಇಡೀ ಮನಸಿಗೆ ಆವರಿಸಿ ಮಳೆ,ಚಳಿಯ ಅಬ್ಬರಕೆ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಗಳಿಗೆಯಲಿ ವಿರಹದಾನುಭವ ಅನುಭವಿಸುವಂತೆ ಮಾಡುವ ಈ ಮಾಸ ನಿಜವಾಗಲೂ ನವದಂಪತಿಗಳಿಗೆ ಶಾಪವೇ ಸರಿ.ಬಿಟ್ಟುಕೊಡದ ಮನಸ್ಸಿಂದ ಹೊರಟುನಿಂತ  ಕಂಗಳಿಂದ ಹನಿಗಳು ಜಾರುತ್ತಿದ್ದಂತೆಯೇ ಬೊಗಸೆಲಿ ಹಿಡಿದು ಕಣ್ಣಿಗೊರಸಿಕೊಂಡು ಒಲ್ಲದ ಮನಸ್ಸಿನಿಂದ ಕಳಿಸಿದ ನನ್ನವನ ಹತಾಶೆ,ಬೇಸರ,ವಿರಹವೇದನೆ,ಪ್ರತಿ ದಿನ ಲೆಕ್ಕ‌ಹಾಕಿ ಕಳೆಯುವುದರೊಳಗೆ ಎಷ್ಟೋ ಶತಮಾನ ದೂರವಿದ್ದ ಕಹಿಅನುಭವ ಆಗದೆ ಇರದು. ಇದೆಲ್ಲ ಯಾಕಾಗಿ? ಇದರ ಹಿಂದಿನ ಮಹತ್ವದ ಅರಿವಿಲ್ಲ.ಕೆಲವುಆಚರಣೆಗಳು ಸೂಕ್ತವಾದರೂ,ಇನ್ನೂ ಕೆಲವು‌ ಮೂಡನಂಬಿಕೆಯ ಪರಾಕಾಷ್ಠೆಯನ್ನು ತಲುಪುತ್ತದೆ.ಯಾವುದು ಹಿತ ಯಾವುದು ಅಹಿತಕರವೆಂದು ಅರ್ಥೈಸಿಕೊಳ್ಳುವ ಸಮಯ ಯಾರಿಗಿದೆ? ಹಿರಿಯರು ಮಾಡಿದ ಕಟ್ಟುಪಾಡುಗಳ ಮರ್ಮದ ಹಿಂದಿರುವ ಕರ್ಮ,ಧರ್ಮ ತಿಳಿದಷ್ಟು ಮನಸ್ಸು ಹಗುರವಾಗದೆ ಇರದು.ಅದು ಕೇವಲ ಭವಿಷ್ಯಕ್ಕೊಸ್ಕರ ಎಂಬುದನ್ನು ತಿಳಿಯುವುದು ತಡವೇ

ಆಷಾಡ ಮಾಸ ಅಶುಭ ಮಾಸ ಎಂಬ ಕಲ್ಪನೆಯಿದೆ. ಶುಭ ಕಾರ್ಯಗಳಾದ ಮದುವೆಯ ಮಾತುಕತೆ, ಮದುವೆ, ಗೃಹಪ್ರವೇಶ, ಉಪನಯನ, ವಾಹನ ಮತ್ತು ಜಮೀನು ಕೊಳ್ಳುವುದು, ಹೊಸ ವ್ಯಾಪಾರ ಪ್ರಾರಂಭ ಮುಂತಾದ ಕಾರ್ಯಗಳೆಲ್ಲಾ ನಿಷೇದವಾಗುವುದು. ಈ ಮಾಸದಲ್ಲಿ ಯಾವುದೇ ಶುಭಕರ ಕೆಲಸಗಳನ್ನು ಮಾಡಿದರು ಅವು ಫಲ ನೀಡುವುದಿಲ್ಲ ಹೀಗಾಗಿ ಈ ಮಾಸದಲ್ಲಿ ಶುಭಕಾರ್ಯಗಳಿಗೆ ಮನ್ನಣೆ ಇಲ್ಲ. ಆದರೆ ಆಷಾಢ ಮಾಸ ಅಶುಭ ಮಾಸ ಎಂದು ಯಾವ ಶಾಸ್ತ್ರಗಳಲ್ಲೂ ಉಲ್ಲೇಖಿಸಿಲ್ಲ.ಉಲ್ಲೇಖವಿಲ್ಲದ್ದನ್ನು ಶಿರಸಾವಹಿಸಿದ್ದೆವೆ.ಅದು ಎಲ್ಲಿಂದು ಯಾರಿಂದ ಹುಟ್ಟಿತೋ ಗೊತ್ತಿಲ್ಲ. ಆದ್ರೂ ಆಚರಣೆಯಲ್ಲಿ ಇದೆ.

ಆಷಾಢದ ಅರ್ಥ : ಭಾರತೀಯ ಮಾಸಗಳಲ್ಲಿ ಜೇಷ್ಠದ ನಂತರ ಮತ್ತು ಶ್ರಾವಣದ ಮೊದಲು ಬರುವ ಮಾಸ ಅದು ಆಂಗ್ಲರ ಮಾಸದಲ್ಲಿ ಜೂನ್ ಮತ್ತು ಜುಲೈನ ಮಧ್ಯದಲ್ಲಿ ಬರುತ್ತದೆ ಉದಾಹರಣೆ : ಆಷಾಢದಲ್ಲಿ ಅತ್ಯಧಿಕವಾದ ಮಳೆಯಾಗುವುದರಿಂದ ರೈತರು ವ್ಯವಸಾಯದ ಕೆಲಸದಲ್ಲಿ ತೊಡಗಿರುತ್ತಾರೆ.

ಸಮಾನಾರ್ಥಕ : ತಿಂಗಳು, ಆಷಾಢಮಾಸ, ಆಸಾಡ, ಆಸಾಡ ಮಾಸ.ಅರ್ಥಗಳೇನೆ ಇದ್ದರು ಆಷಾಢ ಎಲ್ಲರಿಗೂ ಒಂದೇ ಕಾಯಕ ಕಲ್ಪಿಸಿದೆ.

ಇದಕ್ಕೆ ಮುಖ್ಯ ಕಾರಣ ಶತಮಾನಗಳ ಹಿಂದೆ ಆಷಾಢ ಮಾಸದಲ್ಲಿ ಅತಿಯಾದ ಮಳೆಯ ಆರ್ಭಟ,ಒಮ್ಮೆ ಮಳೆ ಸುರಿಯಲು ಆರಂಭಿಸಿದರೆ ರವಿಯ ಕಾಣದ ದಿನಗಳು ಎಷ್ಟೋ, ಮಳೆಯ ಪ್ರಮಾಣ ಹೆಚ್ಚಿರುತ್ತಿತ್ತು. ಮನೆಯಿಂದ ಹೊರಗೆ ಹೋಗುವುದೇ ಬಹಳ ಕಷ್ಟಕರ. ಈ ರೀತಿ ನಿರಂತರವಾದ ಮಳೆ,ಗಾಳಿಯಿಂದ ಸಂಚಾರಕ್ಕೆ ಅಡೆತಡೆ,ಈ ಕಾರಣಗಳಿಂದ ಹೊರಗಿನ ಕೆಲಸಗಳು ಕುಂಟಿತವಾಗುತ್ತಿದ್ದವು. ಅನ್ನದಾತನಿಗೆ ಹೊಲ ಗದ್ದೆಗಳಲ್ಲಿ ವಿಪರೀತ ಕೆಲಸ ಕಾರ್ಯಗಳು ಇರುತ್ತಿತ್ತು.ಈ ಕಾರಣಗಳಿಂದ ಬೇರೆ ವ್ಯವಹಾರಕ್ಕೆ ಸಮಯವೇ ಸಿಗುತ್ತಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಆಷಾಢಮಾಸದಲ್ಲಿ ಶುಭ ಕಾರ್ಯ ಮಾಡಲು ಅನಾನುಕೂಲವಾಗಿದ್ದರಿಂದ ಶುಭಕಾರ್ಯ ಮಾಡುವುದನ್ನು ನಿಷೇಧಿಸಿದ್ದರು.

ಆಷಾಢ ಮಾಸದ ಮಹತ್ವ ಪಡೆಯಲು ದೈವಿಕ ಹಿನ್ನಲೆ ಯು ಕಾರಣವಾಗಿದೆ.ಹಿಂದೂಗಳಿಗೆ ಪೂಜೆ ಪುನಸ್ಕಾರಗಳಿಗೇನು ವರ್ಷವಿಡಿ ಆಚರಣೆಗೆ ಕೊರತರಯಿಲ್ಲ.ಅಮರನಾಥದಲ್ಲಿರುವ ಹಿಮಲಿಂಗ ದರ್ಶನ ಆರಂಭವಾಗುವುದು, ಪ್ರಥಮ ಏಕಾದಶಿ ವ್ರತ ಆರಾಧನೆ ಬರುವುದು ಈ ಮಾಸದಲ್ಲೇ.ಇನ್ನೊಂದು ವಿಶೇಷವೆಂದರೆ ಶಿವನು ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿರುವುದು, ಗಂಗೆಯು ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದು ಇದೇ ಮಾಸದಲ್ಲಿ ಎಂಬ ಪ್ರತೀತಿ ಇದೆ.ಮಹಾ ಪತಿವ್ರತೆ ಅನುಸೂಯಾದೇವಿ ನಾಲ್ಕು ಸೋಮವಾರ ಶಿವ ವ್ರತ ಮಾಡಿದ್ದು,ಶುಕ್ರವಾರ ಲಕ್ಷ್ಮೀಯ ಆರಾಧನೆ ಶ್ರೇಷ್ಠವೆಂದು ಆಚರಣೆಗಳು ಬಿಂಬಿಸಿವೆ.ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತ ಪ್ರಾರಂಭ ಮಾಡಿದ ಉಲ್ಲೇಖವಿದೆ. ಇಂದ್ರನು ಗೌತಮರಿಂದ ಸಹ ಸಾಕ್ಷನಾಗು ಎಂಬ ಶಾಪ ಪಡೆದ ಹಾಗೂ ಅದರ ವಿಮೋಚನೆಗೆ ಆಷಾಢದಲ್ಲಿ ನಾಲ್ಕು ಸೋಮವಾರ ಸೋಮೇಶ್ವರ ಜಯಂತಿ ವ್ರತ ಮಾಡಿ ಶಾಪ ವಿಮೋಚನೆ ಪಡೆದ ಬಗ್ಗೆ ಹೇಳುತ್ತದೆ. ಸುಮಂಗಲಿಯರು ಮಾಂಗಲ್ಯ ಪಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆಯ ಸಂಜೆ ಜ್ಯೋತಿ ಭೀಮೇಶ್ವರ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಆಷಾಢ ಹುಣ್ಣಿಮೆ ದಿನ ಗುರು ಪೂರ್ಣಿಮೆಯನ್ನು ಎಲ್ಲಾ ಮಠ ಮಂದಿರಗಳಲ್ಲಿ ಆಚರಿಸಿ ಚಾತುರ್ಮಾಸ್ಯ ವ್ರತವನ್ನು ಪ್ರಾರಂಭ ಮಾಡುತ್ತಾರೆ. ಆಷಾಢದ ಶುಕ್ಲ ಪಕ್ಷದ ಪಂಚಮಿ ದಿನದಂದು ಅಮೃತ ಲಕ್ಷ್ಮೀ ವ್ರತವನ್ನು ಮಹಿಳೆಯರು ಭಕ್ತಿಯಿಂದ ಆಚರಿಸುತ್ತಾರೆ. ಈ ಎಲ್ಲಾ ಮಹತ್ವಗಳ ಜೊತೆಗೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ಜನ್ಮ ದಿನ.

ಆಷಾಢ ಮಾಸದಲ್ಲಿ ನವದಂಪತಿಗಳು ದೂರ ಇರಬೇಕೆಂಬ ನಿಜವಾದ ಮಹತ್ವ ಹೇಳುವುದರ ಜೊತೆಗೆ ಅದರ ಹಿಂದಿನ ಸಿದ್ಧಾಂತದ ಅರ್ಥ ಬೇರೆ ಇದ್ದು,ಈ ಅವಧಿಯಲ್ಲಿ ಹೆಣ್ಣು ಗರ್ಭಧರಿಸಿದರೆ ಆಕೆ ಚೈತ್ರ ಮಾಸದಲ್ಲಿ ಅಂದರೆ ಬೇಸಿಗೆ ಕಾಲದಲ್ಲಿ ಮಗುವಿಗೆ ಜನ್ಮ ನೀಡುವಂತಾಗುತ್ತದೆ.ಬೇಸಿಗೆ ಅವಧಿಯಲ್ಲಿ ಆಕೆಗೆ ಹೆಚ್ಚು ತೊಂದರೆಗಳು ಬರಬಹುದೆಂದು ಮನಗಂಡ ಹಿರಿಯರು ಆಚರಣೆಗೆ ತಂದರು.ಅದನ್ನು ನಾವುಗಳು ಅಲ್ಲಲ್ಲಿ ಚಾಚು ತಪ್ಪದೆ ನಂಬಲು ಆರಂಭಿಸಿದೆವು ಎಂದರೆ ತಪ್ಪಿಲ್ಲ.

ಅತ್ತೆ ಸೊಸೆ ಒಬ್ಬರ ಮುಖ ಒಬ್ಬರು ನೋಡಬಾರದು

ಮದುವೆಯಾದ ಹೊಸ ವರ್ಷದಲ್ಲಿ ಕೂಡಿ ಒಂದೇ ಮನೆಯಲ್ಲಿ ವಾಸಿಸುವುದು ನಿಷೇಧ ಎಂದು ಕೆಲವು ಕಡೆ ಪದ್ಧತಿ ಇದೆ. ಇದಕ್ಕೆ ಸರಿಯಾದ ಕಾರಣ ಇಲ್ಲವಾದರೂ,ಆಷಾಢದಲ್ಲಿ ಮಳೆ ಹೆಚ್ಚು ಇರುವುದರಿಂದ ಹೊಲ ಗದ್ದೆಗಳಲ್ಲಿ ಮತ್ತು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ಕಾರ್ಯಗಳು ಹೆಚ್ಚಿರುತ್ತವೆ. ಅತ್ತೆಯಾದವರು ಸೊಸೆಗೆ ಹೆಚ್ಚು ಕೆಲಸದ ಒತ್ತಡ ತರಬಹುದು, ಇದರಿಂದ ಅವರಿಬ್ಬರಲ್ಲಿ ವೈಮನಸ್ಸುಂಟಾಗಿ ಜಗಳಕ್ಕೆ ಕಾರಣ ಆಗಬಹುದು ಎಂದು ಒಂದು ತಿಂಗಳ ಕಾಲ ತವರು ಮನೆಗೆ ಕಳಿಸುವ ಸಂಪ್ರದಾಯ ಬಂದಿರಬೇಕು.ಆದ್ರೆ ಆಷಾಢ ಮಾಸ ಇರಲಿ ಬಿಡಲಿ ಅತ್ತೆ ಸೊಸೆ ಕೂಡಿ ಅನ್ಯೊನ್ಯತೆಯಿಂದ ಕೂಡಿ ಬಾಳಿದ ಸಂಗತಿಗಳು ನೂರಕ್ಕೆ ಐದು ಪ್ರತಿಶತ ಇರಬಹುದೆಂದು ಅಂದಾಜಿಸಲಾಗಿದೆ.

ಮಳೆಗಾಲದ ಆರಂಭ ಆಷಾಢ ಮಾಸದಲ್ಲಿ ಶುಭ ಕಾರ್ಯಗಳು ನಡೆಯದಿದ್ದರೂ ಈ ಪೂಜೆ, ವ್ರತಗಳನ್ನು ಮಾಡಬಹುದು. ಈ ತಿಂಗಳ ಆಚರಣೆಗಳ ಮೇಲೆ ನೀವು ಗಮನಹರಿಸಿದರೆ, ಎಲ್ಲಾ ಆಚರಣೆಗಳು ಒಂದು ವಿಷಯದ ಕಡೆಗೆ ಸೂಚಿಸುತ್ತದೆ ಅದು ಮಳೆಗಾಲ ಆರಂಭವಾಗಿದೆ.ಆದಷ್ಟು ಬೀಜ ಬಿತ್ತನೆ ಭವಿಷ್ಯದ ಚಿಂತನೆ ಜೊತೆಗೆ ದೇಶ ಕುಟುಂಬದ ಸಂರಕ್ಷಣೆ ಹೊಣೆ ನಮ್ಮದೆಂಬ ಭಾವ.ಶುಭ,ಅಶುಭದ ನಡುವೆ ಆಷಾಢವು ಮೇಘ,ಪ್ರಕೃತಿಯ ಮಿಲನಕೆ ಸಾಕ್ಷಿಯೆಂದರೆ ಅತಿಶಯೋಕ್ತಿ,ಭಕ್ತಿ ಎನಿಸಲಾರದು…


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

About The Author

10 thoughts on “”

  1. ಆಷಾಢ ಮಾಸದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಮೇಡಮ್. ನಿಮ್ಮ ಟ್ಯಾಲೆಂಟ್ ಸಮೃದ್ಧಿಯಾಗಿ ಹರಿದು ಬರಲಿ. ಅಭಿನಂದನೆಗಳು.

    1. ಸೂಪರ್ ಮೇಡಂ ಆಷಾಢ ಮಾಸದ ಬಗ್ಗೆ ಸವಿವರ ಮಾಹಿತಿ

  2. ಅಧ್ಭುತ ಲೇಖನ ರೀ ಮೇಡಂ.ಪ್ರಸ್ತುತಕ್ಕೆ ಅವಶ್ಯವಾಗಿ ಬೇಕಾಗಿರೋದನ್ನೇ ನೀಡಿದ್ದೀರೀ.ಅಭಿನಂದನೆಗಳು

  3. shivaleela hunasagi

    ವಿಷಯ ಜ್ಞಾನ, ಸಂಗ್ರಹ, ಪ್ರಸ್ತುತಿ ಚೆನ್ನಾಗಿದೆ. ನಮ್ಮ ಹಿರಿಯರು ಮಾಡಿದ ಹೆಚ್ಚಿನೆಲ್ಲಾ ಆಚರಣೆಗಳು ನಮ್ಮ ಬದುಕಿಗೆ ಪೂರಕ ಎನ್ನುವುದು ವೈಜ್ಞಾನಿಕವಾಗಿಯೂ ದೃಢಪಟ್ಟಿರುವುದು ಅಷ್ಟೇ ಸತ್ಯ. ನಿಮಗೆ ಅಭಿನಂದನೆಗಳು

    Nagraj Achari Ankola

  4. sunandapatankar

    ಆಷಾಢ ಮಾಸದ ಕುರಿತು ಬರೆದ ಲೇಖನ ಚೆನ್ನಾಗಿದೆ.

  5. ಗೊತ್ತಿರದ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು‌ ಸಹಕಾರಿಯಾದ ವೈಜ್ಞಾನಿಕ ಮನೋಭಾವದ ಹಾಗೂ ಸರಳವಾಗಿ ಅರ್ಥೈಸಿಕೊಳ್ಳುವಂತಹ ಲೇಖನ….

  6. ವೆಂಕಮ್ಮ ಗಾಂವಕರ

    ಆಷಾಢ ಮಾಸ ಅಶುಭ ಮೂಡನಂಬಿಕೆಯನ್ನು ವಿವಿಧ ದೃಷ್ಟಾಂತ ಗಳು ಮೂಲಕ ಅತ್ಯಂತ ಸೂಕ್ಷ್ಮಸಂವೇದನೆಯ ಮೂಲಕ ಅರ್ಥೈಸಿದ್ದೀರಿ ಅಭಿನಂದನೆಗಳು.

Leave a Reply

You cannot copy content of this page

Scroll to Top