ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಲ್ಲಿನಾಥ್ ರವರ ಗಜಲ್ ಗಳು

ಗಜಲ್ -ಒಂದು

ಹೋದವನು ತಿರುಗಿ ಬರದಿದ್ದರೆ ಯಾರೂ ಕೇಳುತ್ತಾರೆ ನನ್ನನ್ನು
ದುಡ್ಡು ಕೊಟ್ಟು ಹೋಗದಿದ್ದರೆ ನಮ್ಮವರೂ ಕೇಳುತ್ತಾರೆ ನನ್ನನ್ನು

ಟೀಕೆ-ಟಿಪ್ಪಣಿಗಳು ಬೇಡವಾಗಿವೆ ಈ ಜಗದ ತುಂಬೆಲ್ಲ ಗಾಲಿಬ್
ಪ್ರತಿ ಮಾತಿನಲಿ ಹೊಗಳದಿದ್ದರೆ ಅವರೂ ಕೇಳುತ್ತಾರೆ ನನ್ನನ್ನು

ಮೌಲ್ಯಗಳು ಬೆತ್ತಲಾಗಿ ಮನೆಯ ಮೂಲೆಯನ್ನು ಅಲಂಕರಿಸಿವೆ
ಮನ ಮೆಚ್ಚುವಂತೆ ಓಲೈಸದಿದ್ದರೆ ಇವರೂ ಕೇಳುತ್ತಾರೆ ನನ್ನನ್ನು

ಎದೆ ಸೆಟೆಸಿ ನಡೆಯುವುದು ಅಪರಾಧವಾಗಿದೆ ಬುದ್ಧಿವಂತರಲ್ಲಿ
ಕುರಿಯಂತೆ ಬಾಗಿ ನಡೆಯದಿದ್ದರೆ ದೊಡ್ಡವರು ಕೇಳುತ್ತಾರೆ ನನ್ನನ್ನು

ಮೇಣದ ಬತ್ತಿ ಯಾವಾಗಲೂ ಉರಿಯುತ್ತಿರಬೇಕು ಸಮಾಜದಲ್ಲಿ
ಏಕಾಂತದಿ ಮೌನವಾಗಿ ಕುಳಿತಿದ್ದರೆ ಚಿಕ್ಕವರೂ ಕೇಳುತ್ತಾರೆ ನನ್ನನ್ನು

ಲೇಖನಿಯ ಮಸಿ ತುಂಬ ಆತ್ಮರತಿಯೆ ನುಲಿಯುತ್ತಿದೆ ‘ಮಲ್ಲಿ’
ಕುಣಿಯುವಂತೆ ಬರೆಯದಿದ್ದರೆ ಎಲ್ಲರೂ ಕೇಳುತ್ತಾರೆ ನನ್ನನ್ನು

***

ಗಜಲ್-ಎರಡು

ಪ್ರೀತಿಗೆ ನಿರಾಸೆಯನು ಕರಗಿಸಲು ಆಗಲಿಲ್ಲ
ಪ್ರೇಮಕ್ಕೆ ಆನಂದವನು ಕೊಡಲು ಆಗಲಿಲ್ಲ

ಬಾಳೊಂದು ಕಲ್ಪನೆಯ ಚಂದದ ಗೋಪುರ
ಸ್ನೇಹಕ್ಕೆ ದುಃಖವನು ತಡೆಯಲು ಆಗಲಿಲ್ಲ

ಮಾತುಗಳು ಆಲಿಸುತಿದ್ದರಷ್ಟೆ ಖುಷಿ ಮನಕೆ
ಮಮತೆಗೆ ನೆಮ್ಮದಿಯನು ನೀಡಲು ಆಗಲಿಲ್ಲ

ಏನು ಮಾಡಲಿ ಎದೆಯಲ್ಲಿದೆ ಒಲವಿನಾಗರ
ಅನುರಾಗಕ್ಕೆ ನೋವನು ತಣಿಸಲು ಆಗಲಿಲ್ಲ

ಭಾವನೆಗಳಿಗಿಂತಲೂ ದೊಡ್ಡದು ಈ ಬದುಕು
ಮಲ್ಲಿಗೆ ಮಲ್ಲಿಗೆಯನು ಅರಳಿಸಲು ಆಗಲಿಲ್ಲ

***

ಗಜಲ್-ಮೂರು

t

ನಿನ್ನ ಕಾಳಜಿಗೆ ಏನೆನ್ನಲಿ ಐ ಲವ್ ಯೂ ಬಿಟ್ಟು
ನಿನ್ನ ಮಮತೆಗೆ ಏನೆನ್ನಲಿ ಐ ಲವ್ ಯೂ ಬಿಟ್ಟು

ಪ್ರೀತಿ ಬಗ್ಗೆ ಜನ ಬೇಕಾದಂತೆ ಮಾತಾಡಿಕೊಳ್ಳಲಿ
ನಿನ್ನ ಒಲವಿಗೆ ಏನೆನ್ನಲಿ ಐ ಲವ್ ಯೂ ಬಿಟ್ಟು

ಭೌತಿಕವಾಗಿ ಜೊತೆ ಜೊತೆಗೆ ಹೆಜ್ಜೆ ಹಾಕಲಾಗದು
ನಿನ್ನ ಚೆಲುವಿಗೆ ಏನೆನ್ನಲಿ ಐ ಲವ್ ಯೂ ಬಿಟ್ಟು

ಆಸೆಗಳಿಗೇನೂ ಬರವಿಲ್ಲ ಬೆಟ್ಟದಷ್ಟಿವೆ ಮನದಲ್ಲಿ
ನಿನ್ನ ಮನಸಿಗೆ ಏನೆನ್ನಲಿ ಐ ಲವ್ ಯೂ ಬಿಟ್ಟು

ಮಲ್ಲಿಗೆ ಹೂವಿನ ಮಾಲೆ ಹಿಡಿದು ಕಾಯುತಿರುವೆ
ನಿನ್ನ ನಂಬಿಕೆಗೆ ಏನೆನ್ನಲಿ ಐ ಲವ್ ಯೂ ಬಿಟ್ಟು


ರತ್ನರಾಯಮಲ್ಲ

About The Author

1 thought on “ಮಲ್ಲಿನಾಥ್ ರವರ ಗಜಲ್ ಗಳು”

Leave a Reply

You cannot copy content of this page

Scroll to Top