ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಜಯಂತಿ ಸುನಿಲ್

ಆಗಸದ ವಿಶಾಲವೆಷ್ಟೆಂದು ಹಾರಾಡಿ ಸೋತರೆಕ್ಕೆಗಳನ್ನೇ ಕೇಳಬೇಕು…
ಕಡಲಿನ ಆಳವೆಷ್ಟೆಂದು ಈಜಾಡಿ ದಡಸೇರಿದವರನ್ನೇ ಕೇಳಬೇಕು..!!

ಹೆಣ್ಣಿನ ಒಳಮನದ ಪರಿಧಿಯೊಳಗೆ ನೂರೆಂಟು ಯಾತನೆಗಳು ಮುಸುಕು ಹೊದ್ದಿವೆ..
ಇರುಳಿನಲ್ಲಿ ದಿಂಬಿಗೆ ಜಾರುವ ಕಣ್ ಹನಿಗಳೆಷ್ಟೆಂದು ಅವಳನ್ನೇ ಕೇಳಬೇಕು..!!

ಕತ್ತಲಲ್ಲಿ ಬೆಳಕು ಮುಳುಗಿದಾಗ ದೀಪದ ಒರತೆ ಗುಡಿಸಿಲಿನಲ್ಲಿ..
ಸವೆದ ಹಾದಿಯುದ್ದಕ್ಕೂ ಎಡವಿದ ಕಷ್ಟದ ಕಲ್ಲುಗಳೆಷ್ಟೆಂದು ಬಡವನನ್ನೇ ಕೇಳಬೇಕು..!!

ನೋವು ಚೀರಿದಾಗಲೂ ನಗುವ ಬೀರಿ ಹೆಗಲ ಮೇಲೆ ನೊಗ ನಲಿದಾಡುತ್ತದೆ…
ಹೇಳಹೆಸರಿಲ್ಲದ ಅನ್ನದ ಹಾಡಿನ ಹಿಂದಿನ ಶ್ರಮವೆಷ್ಟೆಂದು ರೈತನನ್ನೇ ಕೇಳಬೇಕು..!!

ಬದುಕನ್ನು, ಬಂಧನವನ್ನು ಬರಿಗಣ್ಣಿನಿಂದ ನೋಡುವವರೇ ಹೆಚ್ಚು..
ಹಸಿರೆಲೆಗಳ ನಡುವಿನ ಭಾಂಧವ್ಯದ ಹಿತವೆಷ್ಟೆಂದು ಒಣಮರದ ಗಿಳಿಗಳನ್ನೇ ಕೇಳಬೇಕು..!!

ಕಟುಕನಲ್ಲಿ ಪ್ರೇಮವಿಲ್ಲವೆನ್ನಬೇಡಿ…ಅವನೊಳಗೊಂದು ದನಿ ಮಿಸುಕಾಡಬಹುದು…
ಕಸಾಯಿಖಾನೆಯಲ್ಲಿ ನಿತ್ಯ ಬೇಯುವ ಸತ್ತ ಅವನೆದೆಯ ನೋವೆಷ್ಟೆಂದು ಅವನನ್ನೇ ಕೇಳಬೇಕು..!!

ಆಯುಷ್ಯವಿಡೀ ಬೆಳಕಿಗೆ ಬಾರದ ಮಸಣದ ಹೂವಿಗೆ ಹಾರವಾಗುವ ಬಯಕೆಯಿಲ್ಲವೇ..?
ಬದುಕಿನ ಅಸ್ಮಿತೆಗಾಗಿ ಚೆಲ್ಲಿದ ನೆತ್ತರೆಷ್ಟೆಂದು ದಮನಿತರನ್ನೇ ಕೇಳಬೇಕು..!!

ಕವಿತೆಗಿದು ಕಾಲವಲ್ಲ ಕೇಳು ಜಯಾ ಎಂದು ನೀವು ಹೇಳಬಹುದು…
ಕಣ್ಣಮುಂದೆ ಅಡ್ಡಾಡುತ್ತಿರುವ ತಲ್ಲಣಗಳೆಷ್ಟೆಂದು ನಾ ಬರೆದ ಈ ಕವಿತೆಯನ್ನೇ ಕೇಳಬೇಕು..!!


About The Author

Leave a Reply

You cannot copy content of this page

Scroll to Top