ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶೂನ್ಯದೆಡೆಗೆ ಪಯಣ

ಡಾ. ನಾಗರತ್ನ ಅಶೋಕ ಭಾವಿಕಟ್ಟಿ

ಬಾನ ಬಯಲ ಕಡೆಗೆ ಬದುಕಿನ ಪಯಣ
ಕಂಡ ಕಡೆಗೆಲ್ಲ ಶೂನ್ಯ ಗಗನ
ನಭ ಒಂದಾಗಿದೆ ಭುವಿಯ ಸೇರಿ
ಅದುವೆ ನಮ್ಮ ಕೊನೆಯ ಪಯಣ

ಬದುಕಿನಲ್ಲಿ ಬಿಟ್ಟುಹೋದ
ಜೀವನದ ಹೆಜ್ಜೆ ಗುರುತುಗಳು
ತಿರುಗಿ ನೋಡಿದಾಗಲೊಮ್ಮೆ
ಮಸುಕು ನೆನಹುಗಳು
ತಿದ್ದಿ ನಡೆಯಲು ಇರುವ ಅನುಭವಗಳು

ಎಲ್ಲ ಇಲ್ಲಗಳ ನಡುವೆಯೂ
ತೊರೆದು ಹೊರಟೆವು ಇರುವುದನು
ಸತ್ಯದ ಮುಕ್ತಿ ಮಾರ್ಗ ಅರಸುತ
ಹೊಸಬೆಳಕಿನ ಭರವಸೆಯ ಕಡೆಗೆ
ನೆನಪುಗಳ ಬುತ್ತಿಯ ಜೊತೆಯಲಿ

ಯಾರಿಗೆ ಯಾರಿಲ್ಲ ಕಷ್ಟಸುಖಗಳಲಿ
ಜೊತೆಯಿಲ್ಲ ಒಂಟಿ ಹೆಜ್ಜೆ ಹೆಜ್ಜೆಯಲಿ
ಬದುಕಿನ ಸತ್ಯ ಅರಿತ ಕ್ಷಣ
ಎಲ್ಲ ನಿರ್ವಾಣ ನಶ್ವರ ವೈರಾಗ್ಯ
ಆಗಲೇ ಮೂಡುವದು ಬುದ್ಧನಾಗುವ
ಛಲವು

ಸ್ವಚ್ಛಂದದಾಗಸದಿ ಹಕ್ಕಿಗಳ ಇಂಚರವು
ಎಳೆಸುತಿದೆ ಮನವ ಮತ್ತೆ ಜೀವನದೆಡೆಗೆ
ನಡೆದ ದಾರಿಯಲ್ಲೇ ಮರಳಿ ನಡೆಯದೆ ತಿರುಗಿ ನೋಡದಿರು ಮತ್ತೆ ಮತ್ತೆ
ಪುನಃ ಬೀಳದಿರು ಬದುಕಿನ ಕಂದಕಕ್ಕೆ


About The Author

Leave a Reply

You cannot copy content of this page

Scroll to Top