ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಹರದ ಮಳೆ.

ಶೋಭಾ ನಾಯ್ಕ. (ಹಿರೇಕೈಕಂಡ್ರಾ)

ನೆತ್ತಿ ನೆನೆದು
ಹೆರಳು ತೋದು
ಮೂಗ ತುದಿಯಿಂದ
ಹನಿ ಹನಿ ಜಾರಿ ,ತುಟಿ ತಾಕಿ
ಗಲ್ಲದ ಗುಂಟ
ಎದೆ ಕುಳಿಯೊಳಗಿಳಿದು
ಕಚಗುಳಿಯಿಟ್ಟು, ಮೈಯ್ಯ
ಮೆದುವಾಗಿಸಲು ಮಳೆಗೆ
ಅನುವಾಗಿಸದ ಈ ಮಳೆಯಂಗಿಯನ್ನೊಮ್ಮೆ
ಕಳಚಿ ಬಿಡಬೇಕೆನಿಸಿದೆ.

ಹೊತ್ತು ತಂದ ಹನಿಯೊಲವ

Pin on Photography

ಸರ್ರನೆ ಎದೆಯೊಳಗೆ
ಸುರಿದು
ಮೈ ಮನವ ಘಮ್ಮೆನಿಸಿ
ಒಳಗೊಳಗೇ ಹರಿದು
ಇಳೆಯ ಐಕ್ಯಕೆ ಮಳೆಗೆ
ತಡೆಯಾದ
ಈ ಟಾರು ಬೀದಿಗಳ
ಕಿತ್ತೆಸೆಯ ಬೇಕೆನಿಸಿದೆ.

ಮುದ್ದುಪಾದಗಳ ಅದ್ದಗೊಡದ
ಹಾಳೆ ದೋಣಿಗಳ ತೇಲಗೊಡದ
ಮಕ್ಕಳಾಟಕೆ ತಣ್ಣನೆ
ತಿಳಿನೀರ ನೀಡದ
ಇಡೀ ನಗರದ ಮೈ ಕೊಳೆಯ
ಹೊತ್ತು ತರುವ,
ಈ ಚಂಡಿ ಚರಂಡಿಗಳ
ಗಬ್ಬು ಬಾಯಿಗಳನ್ನೆಲ್ಕ
ಮುಚ್ಚಿ ಬಿಡಬೇಕೆನಿಸಿದೆ.

ನೆಲ ನೆನೆಸದ,
ಹಸಿರು ಹುಟ್ಟಿಸದ
ನದಿಯ ಉಕ್ಕಿಸದ
ಕಡಲ ಸೇರಿಸದ
ಮಣ್ಣ ಗಂಧವ ಪಾದಕ್ಕಂಟಿಸದ
ಈ ಶಹರದ ಮಳೆಯಿಲ್ಲಿ
ಬಿಕ್ಕಿ ಬಿಕ್ಕಿ ಅತ್ತಂತೆನಿಸಿದೆ

ನನಗೋ…
ಈ ಮಳೆಯ ಸಂತೈಸುತ್ತ
ತೋಯಬೇಕೆನಿಸಿದೆ.


ಶೋಭಾ ನಾಯ್ಕ. (ಹಿರೇಕೈಕಂಡ್ರಾಜಿ.

About The Author

3 thoughts on “ಶಹರದ ಮಳೆ.”

  1. ಇಬ್ಬನಿ ಇನಿ

    ಶಹರವೇ ಬಂಧನ ಎಂಬುದನ್ನು ಧ್ವನಿಸುವ ಕವಿತೆ ಇದು. ಮಣ್ಣ ಗಂಧವಪಾದಕ್ಕಂಟಿಸದ …ಎಂಬುದು ಕಾವ್ಯದ ಕಸುವನ್ನು ಹೆಚ್ಚಿಸಿದೆ. ಹಾಗೆ ಹೆಣ್ಣಿನ ಸುತ್ತಣ ಇರುವ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ,ಸ್ವಾತಂತ್ರ್ಯದ ಹಂಬಲವನ್ನು ಕವಿತೆ ಗುಟ್ಟಾಗಿ ಹೇಳುತ್ತದೆ.‌
    ಒಳ್ಳೆಯ ಕವಿತೆ.

  2. ನಾಗರಾಜ್ ಹರಪನಹಳ್ಳಿ

    ಕವಿತೆಯ ನಾಲ್ಕನೇ ಪ್ಯಾರಾ ಸೊಗಸು.

Leave a Reply

You cannot copy content of this page

Scroll to Top