ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಲೇಖನ

ಬಣ್ಣದ ಛತ್ರಿ( ಕೊಡೆ)

ಸರೋಜಾಶ್ರೀಕಾಂತಅಮಾತಿ

color umbrellas urban decoration

ಮಳಿ ಅಂತ ಅಂದ ಕೂಡಲೇ ನನಗ ಮೊದ್ಲು ನೆಂಪಾಗುದು ಆ ಬಣ್ಣದ ಛತ್ರಿ!….ಹೌದು  ಆ ಸರ್ತಿನೂ ಪ್ರತಿ ವರ್ಷದಂಗ ಸೂಟಿಗಿ ನಮ್ಮೂರಿಗಿ  ನಮ್ಮ ಮಿಲಿಟರಿ ಕಾಕಾ( ಚಿಕ್ಕಪ್ಪ) ಬಂದಿದ್ರು .ಆಗ ಅವರು ಜಮ್ಮು ಕಾಶ್ಮೀರದಾಗ ಡೂಟಿ ಮಾಡ್ತಿದ್ರು  ಕಾಕಾ ಬಂದ್ರು ಅಂತದ್ರ ನಂಗ ಭಾಳ ಖುಷಿ ಅಕ್ಕಿತ್ತು.ಅವರು ಬರುವಾಗ ಅಲ್ಲಿಂದ ತರು ಗೊಂಬಿ,ಆಟಗಿ ಸಾಮಾನ ,ತಿಂಡಿ ತಿನಸ ಅಲ್ಲಿ ಸಿಗೋ ಬ್ಯಾರೆ ,ಬ್ಯಾರೆ ಜಾತಿ ಹೂವಿನ ಬೀಜ ,ಗಿಡ ಹಿಂಗ ಅವರ ಬಂದ್ರ ಹಬ್ಬನ ಬಂದಂಗಕ್ಕಿತ್ತು.ನಾ ಅವಾಗ ಐದನೇತ್ತೆನೊ,ಆರನೆತ್ತೇ  ಇದ್ನಿ ಕಾಕಾ ಬರತಾರಂತ ಗೊತ್ತಾದ ಕೂಡಲೇ ರಸ್ತೆ ಕಾಯುದ ನನ್ನ ಕೆಲಸ ಎವಾಗ ಮಧ್ಯಾಹ್ನ  ಆಕ್ಕೆತೋ…. ಕಾಕಾ ಬೆಳಗಾವಿ ಬಸ್ ಬಿಟ್ಟು ನಮ್ಮೂರಿಗಿ ಇಳಿತಾರೋ ಅಂತ ಚಡಪಡಸ್ತಿದ್ದೆ. ಕಾಕಾ ಬಸ್ ಇಳದ್  ಕೂಡ್ಲೆ ಅವರ ಕೈ ಹಿಡಕೊಂಡು ಊರ ಮುಂದಿನ ಮನಿಗೊಳ ದಾಟಗೊಂದು ಹಣಮಪ್ಪನ ಗುಡಿ ಮುಂದ ಹಾದು ತ್ವಾಟದ ಮನಿಗೆ ಹೋಗುದಂದರ ಅದೊಂದ ಸಂಭ್ರಮ ಇದ್ದಂಗ ಇರ್ತಿತ್ತು.ಕಾಕಾ ಅರ್ಧ ತ್ವಾಟಕ್ಕೆಲ್ಲ ಕೇಳಸುವಂಗ ಟೇಪ್ ರೆಕಾರ್ಡ್ ದಾಗ ಹಚ್ಚುವ  ಹಿಂದಿ ಬಾರ್ಡರ್ ಪಿಚ್ಚರ್ ದ “ಸಂದೇಸೆ ಆತೇ ಹೈ,ಹಮೆ ತಡಪಾತೆ ಹೈ…… ಮೈ ವಾಪಸ್ ಆವುಗಾಂ! ” ಆ  ಹಾಡಾ ಕೇಳುದಂದರ ಮತ್ತಷ್ಟು ಹುಮ್ಮಸ್ಸ ಬರ್ತಿತ್ತು. ಆ ಸರ್ತಿ ಕಾಕಾ ನಂಗೊಂದ ಸಣ್ಣದೊಂದು ಬಣ್ಣದ ಛತ್ರಿ ತಂದಿದ್ರು.ಯಾವಾಗ್ಲೂ ಕಪ್ಪಗಿರು ದೊಡ್ಡ ದೊಡ್ಡ ಛತ್ರಿ ನೋಡಿದ್ದ ನಂಗ ಕಾಕಾ ಆ ಛತ್ರಿ ಪ್ಯಾಕ್ ಬಿಚ್ಚಿ ನನ್ ಕೈಯಾಗ ಇಟ್ಟ ಕೂಡ್ಲೆ ನನಗ ಅದೇಸ್ಟ್ ಆನಂದ ಆತ ಅಂದ್ರ ಅವತ್ತೆಲ್ಲ ಅದನ್ನ ಕೈಯಿಂದ ಕೆಳಗ ಇಟ್ಟಿರಲಿಲ್ಲ. 

ಗಾಢ ಗುಲಾಬಿ ಬಣ್ಣದ ಆ ಛತ್ರಿ ಬಾರ್ಡರ್ಕ್ ಸಣ್ಣ ಸಣ್ಣ ನೀಲಿ,ಬಿಳಿ ಹಳದಿ ಹೂವಿನ ಚಿತ್ತಾರ ಅಲ್ಯೊಂದ ಇಲ್ಯೊಂದ ಎಳದಿದ್ದ ಹಸರ ಬಳ್ಳಿ  ಡಿಸೈನ್ ಸುತ್ತಲೂ ತಿರಗಿಸಿದರ ಆ ಹುವ್ವಾ ,ಹಸರ ಬಳ್ಳಿ ಎಲ್ಲಾ ಓಡಾಟ ನಡಸ್ಯಾವೆನು ಅಂತ ಕಾಣತಿತ್ತು. ಗುಲಾಬಿ  ಕಲರ್ ದ  ಹಿಡಕೈಯಿ,ಮ್ಯಾಲ ತುದಿಗಿ ಅದ್ ಬಣ್ಣದ ಪ್ಲಾಸ್ಟಿಕ ಬಟನ್ ಅದರ ನಡು ಬಳಸು ಸಣ್ಣ ಪಟ್ಟಿ  ಹಿಂಗ ಮತ್ ಮತ ನೋಡಿದ್ರು ನೋಡ್ಬೇಕ ಅನ್ನುವಂಗ ಅಕ್ಕಿತ್ತು.ಕಾಕಾ ಜಮ್ಮುನಿಂದ ತಂದ ಸೇಬು ಹಣ್ಣ ಎಲ್ಲ ಬಳಗದವರಿಗಿ ಕೊಡು ಜಿಮ್ಮೆದಾರಿ ನಾನ ತಗೊಂಡಿದ್ನಿ ಯಾಕ ಅಂದ್ರ ಆ ನೆವಾದಾಗಾ ಮತ್ ಛತ್ರಿ ಹಿಡ್ಕೊಂಡು ಹೊರಗ ಹೊಕ್ಕೆನಲ್ಲ ಅಂತ.”ಆ ದೊಡ್ಡ ಅಜ್ಜಾಗೊಳಿಗಿ ಇನ್ನು ಸೇಬು ಹಣ್ಣ ಕೊಟ್ಟಿಲ್ಲ!?… ಮತ್ತ ಆ ತ್ವಾಟದ ಮನಿ ದೊಡವ್ವಗೊಳಿಗಿ ಕೊಡುದುಲ್ಲಾ ಬೇ” ಅಂತ ಕಾಕಾನ ಖಾಸಾ ದೋಸ್ತಗೊಳ ಹಿಡಕೊಂಡು ನಮ್ಮ ಬಂಧು ಬಳಗದವರ ಹೆಸರಿನ ಲಿಸ್ಟ್ ಎಲ್ಲಾ ಅವ್ವನ ಮುಂದ ಕಂಠ ಪಾಠ ಮಾಡಿದಂಗ ಹೇಳ್ಕೊಂತ ಹೊಕ್ಕಿದ್ದೆ.ಆಗ ಅವ್ವ ” ಅವರು ಮೊನ್ನಿ ನಿಮ್ಮ ಕಾಕಗ ಭೆಟ್ಟಿ ಆಗಾಕ ಅಂತ ಮನಿಗಿ ಬಂದಿದ್ರು ಅವರ ಕೈಯ್ಯಾಗನ ಸೇಬು ಹಣ್ಣ ಕೊಟ್ಟನಿ” ಅಂತ  ಅಂದ ಕೂಡಲೇ ಮಾರಿ ಸಣ್ಣ ಮಾಡ್ಕೊಂಡು ಒಂದ ಚಾನ್ಸ ಮಿಸ್ ಆತಲ್ಲಾ ಅಂತ ಅನಕೊಳ್ಳಕ್ಕಿ. ಸಾಲಿಗೂ ತುಗೊಂದ ಹೋಗಿ ಗೆಳತ್ಯಾರೆಲ್ಲರಿಗೂ ಹೆಮ್ಮಿಯಿಂದ ನಮ್ ಕಾಕಾ ಜಮ್ಮು ಇಂದ ತಂದಾರು ಅಂತ ಹೇಳ್ತಿದ್ನಿ.

ಹಿಂಗ ಒಂದ ಎರಡ ವಾರಾ ಕಳದ್ರೂ ನಂಗ ಆ ಬಣ್ಣದ ಛತ್ರಿ ಮ್ಯಾಲಿನ ಮೋಹ ಇನ್ನೂ ಹೋಗಿರ್ಲಿಲ್ಲ. ಅಂದ ಸಂಜಿ ಮುಂದ ಮುಗಿಲ್ನ್ಯಾಗಿನ ಸೂರ್ಯನು ತನ್ನ ಡ್ಯೂಟಿ ಮುಗಿಸಿ ಮನಿಗಿ ಹೊಂಟಿದ.ಸಣ್ಣಕ ಜಿಟಿ ಜಿಟಿ ಮಳಿ ಅವನ ವಿದಾಯ ಬ್ಯಾಡ ಅಂತೇನೊ ಏನೋ ಹನಿ ಹನಸಾಕತ್ತಿದ್ವು ಅಂತ ಅನಸ್ತತಿ. ಏನಾದ್ರೇನು ಆ ಸೂರ್ಯ ತನ್ನ ಕಾಯಕಾನ ಚಾಚು ತಪ್ಪದಂಗ ಮಾಡಾ0ವ್ ನೋಡ್ರಿ…. ನೀವ ಎಷ್ಟರ ಕಣ್ಣೀರ ಹಾಕ್ರಿ ನಾ ಏನ ನಿಂದ್ರುದಿಲ್ಲ ಅಂತ ಹೇಳಿ ಹೋಗೇ ಬಿಟ್ಟ! ದುಃಖ ತಡಿಲಾರದ ಮುಗಿಲ ಮತ್ತಿಷ್ಟ ಜೋರಾಗಿ ಮಳಿ ಸುರಿಯಾಕ ಚಾಲು ಮಾಡ್ತ ಏನೋ….ಅಂದ ಪುಸ್ತಕ ತಗೋಳಾಕ  ಅಂತ ನಮ್ಮನಿಗಿ ಬಂದ ನನ್ನ ಗೆಳತಿನ ಅವರ ಮನಿ ತನಕ ಕಳಸು  ಬೀಳ್ಕೊಡು ಸಮಾರಂಭಕ ನಾನು ಮತ ನನ್ನ ಬಣ್ಣದ ಛತ್ರಿ ಭಾಳ ಹುರುಪಿಲಿ ಸಜ್ಜಾದ್ವಿ.ಮೊದ್ಲ ಸಣ್ಣ ಛತ್ರಿ!…. ಇನ್ನ ಅವರ ಮನಿನೋ ನಮ್ಮನಿಂದ ದೂರ ಇತ್ತು ಪುಸ್ತಕ ತೋಯ್ಯಬಾರದು ಅಂತ ಅದನ್ನ ಸಂಭಾಳಿಸಿಕೊಂಡ ಗೆಳತಿ ಮತ್ತ ಪುಸ್ತಕನ್ನ ಅವರ ಬಿಟ್ಟು ನಮ್ಮನಿಗಿ ಬರೋದ್ರಾಗ ನಾ ಮತ ಛತ್ರಿ ತಪ್ಪ ಅಂತ ತೋಸ್ಗೊಂದ ಥಂಡಿ ಹತ್ತಿ ನಡಗಾಕತ್ತಿದ್ವಿ. ಕತ್ತಲೂ ಆಗಾಕತ್ತಿತ್ತು.ಛವಣಿ ಒಳಗ ಆ  ಛತ್ರಿ ತೂಗ ಹಾಕಿದೆ. 

ಮಾರನೆ ದಿನ ಮುಂಜಾನಿ ಎದ್ದ ಕೂಡಲೇ ಕಣ್ ತಿಕ್ಕೊಂತ ಛತ್ರಿಗೆ ಭೆಟ್ಟಿ ಆಗಾಕ ಅಂತ ಛಾವಣಿಗೆ ಬಂದೆ. ಅಂಗಳದಾಗ ತಣ್ಣಗ ಬೀಸು ತಂಗಾಳಿಗೆ  ಛವಣ್ಯಗ  ತೂಗಾಕತ್ತಿದ್ದ ಆ ನನ್ನ ಛತ್ರಿ ನನಗ ಶುಭೋದಯ ಹೇಳಿದಂಗ ಅನ್ನಸ್ತು.ಅದನ್ನೊಮ್ಮಿ ಮುಟ್ಟಿ, ಎದಿಗಿ ಅಮಚಿಕೊಂಡು  ಸಾಲಿಗಿ ಹೋಗಾಕ ತಾಯಾರಾಗಿ ಪಾಟಿ ಚೀಲ ಹೆಗಲಿಗಿ ತಾಗಿಸಿಕೊಂಡು ನನ್ನ ಬಣ್ಣದ ಛತ್ರಿ ಕೈಯಾಗ ಹಿಡಕೊಂಡು ಹೋಗಾಕತ್ತೆ. ಮಳಿ ಇಲ್ಲಂದ್ರು ಛತ್ರಿ ಬಿಚ್ಚಿ ಆಟ ಆಡ್ಕೊಂತ ರಸ್ತೆದಾಗ ನಡಿಯು ಮುಂದ ಒಂದ ಕ್ಷಣ ಅಲ್ಲೇ ನಿಂತು ಆ ಛತ್ರಿ ಹೊಳ್ಳಿಸಿ ನೋಡೀನಿ ಛತ್ರಿ ತುದಿಗಿ ಹಾಕಿರು ಆ ಪ್ಲಾಸ್ಟಿಕ್ ಬಟನ ಕಾಣತಿದ್ದಿಲ್ಲ.ಅಯ್ಯೋ ಎಲ್ಲಿ ಹೋತು!?….. ಅಂತ ನಿಂತ ಜಗಾದಾಗನ ನೆಲದ ಮ್ಯಾಲೆಲ್ಲ ಅತ್ತಾಗ, ಇತ್ತಾಗ ಎಲ್ಲಾ ಕಡೇನೂ ನೋಡಿದೆ ಎಲ್ಲೂ ಅದರ ಸುಳಿವ ಇರ್ಲಿಲ್ಲ.ಮನಸಿಗ್ಯಾಕೋ ಭಾಳ ಬೇಜಾರ ಆತು….. ಏನೋ ಕಳಕೊಂಡವರಂಗಾಗಿ ಮತ್ತ ಮನೀ ತನಕ ಹೋಗಿ ದಾರಿ ಉದ್ದಕ್ಕ ಹುಡುಕಿದರೂ ಆ ಸಣ್ಣ ಬಟನ್ ಎಲ್ಲೂ ಸಿಗಲಿಲ್ಲ.ಸಾಲಿಗಿ ಬ್ಯಾರೆ ಟೈಮ ಆಗಿತ್ತು ಏನ ಮಾಡುದು ಅಂತ ಗೊತ್ತಾಗದ ಸುಮ್ಮನ ಸಾಲಿ ಕಡೆ ಹೊಂಟನಿ.ಅಂದ ಯಾವಾಗ ಮಧ್ಯಾನ್ಹ  ಅಕ್ಕೆತೋ ಮತ್ತ ಆ ಛತ್ರಿ ಬಟನ್ ಹುಡಕಿನೊ ಅಂತ ಬರೇ ಅದ ವಿಚಾರ ತಲ್ಯಾಗಿತ್ತು. ಅಂದ ಸರ್ ಹೇಳಿದ ಪಾಠ ಯಾವುದೂ ತಲೀಗೆ ಹೋಗಲಿಲ್ಲ … ಚಿತ್ತ ಎಲ್ಲಾ ಬಣ್ಣದ ಛತ್ರಿ ಕಡೇನ ಇತ್ತು!  ಢಣ ಢಣ …..ಅಂತ ಮಧ್ಯಾಹ್ನ ಸಾಲಿ ಗಂಟಿ ಹೊಡದು  ಊಟಕ ಬಿಟ್ಟ ಕೂಡ್ಲೆ ಒಂದ ಉಸಿರಿನ್ಯಾಗ ಓಡಿ ಗೆಳತಿ ಮನಿ ದಾರಿ ಗುಂಟ ಛತ್ರಿ ಬಟನ್ ಹುಡಕೊಂತ  ಹೊಂಟನಿ…. ಎಲ್ಲೂ ಸಿಗದ ಮತ್ತು ನಿರಾಶೆ ಆತು. ಮಾನಸನ್ಯಾಗ ಗೆಳತಿಗೊಂದಿಷ್ಟು ಬೈಯಬೇಕು ಅನ್ನುವಾಗ “ಛೇ!…ಛೇ… ಇದರಾಗ ಅಕಿದಾರ ಏನ್ ತಪ್ಪ ಐತಿ, ನಾನ್ ನಿಮ್ಮನಿಗಿ ಬಿಟ್ಟ ಬರ್ತಿನಂತ ಹೇಳಿದ್ನಿ” ಅಂತ ವಾಪಸ ಮನಿಗಿ ಬಂದ ಅವ್ವನ ಮುಂದ ಅಳಕೊಂತ ಛತ್ರಿ ಪುರಾಣ ಹೇಳಿದೆ. “ನಿನ್ನಿ ಸಂಜಿ ಮುಂದ ಚಾಲೂ ಆದ ಮಳಿ ನಸಕಿನ ಐದರ ಮಟ ಬಿಟ್ಟೇ ಇಲ್ಲ… ಇನ್ನ ಆ ಛತ್ರಿ ಬಟನ್ ತೇಲಕೋ0ತ ಹೊಳಿ ಇಲ್ಲ ಅಂದ್ರ ಹಳ್ಳ ಸೇರ್ಕೊಂಡು ಮತ್ ಬ್ಯಾರೆ ಊರಿಗಿ  ಹೋಗಿದ್ರೂ ಹೋಗಿರಬಹುದು” ಅಂತ ಅಂದ್ಲು .ಆದ್ರೂ ನನ್ನ ಮನಸ್ಸ ತಡಿಲಿಲ್ಲ ಹೊಳಿ ದಂಡಿ ಎಲ್ಯಾರ ಸಿಗಬಹುದು ಅಂತೇಳಿ ಓಡಕೊಂತ ಹೊಳಿ ದಂಡಿ ಎಲ್ಲ ಸುತ್ತಿ ಬಂದ್ನಿ ಆದರ ಆ ಬಟನ್ ಮಾತ್ರ ಎಲ್ಲಿ ಸಿಗಲಿಲ್ಲ. ಮಲಪ್ರಭಾ ತಾಯಿನ ನೆನಸ್ಕೊಂತ  ಬಂದ ದಾರಿಗಿ ಸುಂಕ ಇಲ್ಲ ಅಂನ್ನುವಂಗ ಮನಸ ಗಟ್ಟಿ ಮಾಡ್ಕೊಂಡು ಮನಿ ಕಡೆ ಹೆಜ್ಜಿ ಹಾಕಿನಿ.ಊಟ ಮಾಡಾಕು ಮನಸ ಆಗ್ಲಿಲ್ಲ ಅವತ್ತು!….

Laughing woman with umbrella checking for rain

ಆಮ್ಯಾಲ ಆ ಬಣ್ಣದ ಛತ್ರಿ ಒಂದೆರಡ ವರ್ಷದ ಮಟಾನು ನನ್ನ ಅಂತೆಕ್ ಇತ್ತು.ಹಳೆದಾದ್ರು ಆ ಬಣ್ಣದ ಛತ್ರಿ ಮತ್ತ ನನ್ನ ನಡುವಿನ ಸ್ನೇಹ ಮಾತ್ರ ಹೊಸಾದ ಇದ್ದಂಗ ಇತ್ತು.ಇವತ್ತೂ ಮಳಿ ಬಂದ್ರ,….ಯಾವಾಗಾರ ಮತ್ತ  ನಾ ತವರಮನಿಗಿ ಹೋದ್ರ  ಬಾಲ್ಯದಾಗಿನ ಆ “ಬಣ್ಣದ ಛತ್ರಿ” ನೆನಪೆಲ್ಲ ಬಣ್ಣ ಬಣ್ಣದ ಪಾತರಗಿತ್ತಿಹಂಗ ನನ್ನ ಮನಸಿನ ಹೂ ತ್ವಾಟದಾಗ ಹಾರಕೊಂತನ  ಇರತೈತಿ!… ಹಿಂಗ ಈ ಮಳಿ ಅನ್ನುದು ಸೃಷ್ಟಿಗೆಲ್ಲ ಸುರುದು ಹಸರಾಗಿ ಚಿಗುರುವಂಗ,ಒಮ್ಮೊಮ್ಮೆ ಹೆಚ್ಚಾಗಿ ಅನಾಹುತ ಮಾಡುವಂಗ ನಮ್ಮ ಹೃದಯದಾಗೂ ಸಿಹಿ,ಕಹಿ ನೆನಪಿನ ಹನಿಗರದು ಮತ್ತ  ಮರತ ಆ  ದಿನಗಳನ್ನೆಲ್ಲ ಹೊತ್ತ ಬರತೈತಿ!.ಮುಖದ ಮ್ಯಾಲ ಮುಗುಳ್ನಗಿನೂ ಹರಸತೈತಿ…. ಮನದಾಗ ದುಃಖ ಆಗಿ ಕಣ್ಣೀರಾಗಿಸಿ  ಅಳಸೀನೂ ಬಿಡತೈತಿ !.


ಸರೋಜಾ ಶ್ರೀಕಾಂತ ಅಮಾತಿ

About The Author

Leave a Reply

You cannot copy content of this page

Scroll to Top