ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಕಣ ಸಂಗಾತಿ

ಚಾಂದಿನಿ

ಕರೆಂಟೇ ಹೋಗಿಲ್ವಾ….. ಛೇ!

292,867 Power Line Stock Photos, Pictures & Royalty-Free Images - iStock

 ಮೊನ್ನೆ ಈ ಕರೆಂಟಿನಿಂದಾಗಿ ನನಗೆ ಸಕತ್ತ್ ಕಿರಿಕಿರಿ ಆಗೋಯ್ತು. ಕರೆಂಟ್ ಹೋಗಿದ್ದಕ್ಕಲ್ಲ; ಹೋಗದೆ ಇದ್ದುದಕ್ಕೆ. ನನ್ನ ವಾಟ್ಸಾಪ್‌ಗೆ ಬಂದು ಬೀಳುವ ಸುದ್ದಿ ಮಾಧ್ಯಮಗಳ ಸಂದೇಶಗಳಲ್ಲಿ ಶನಿವಾರದಂದು ಬೆಳಿಗ್ಗೆ ಹತ್ತರಿಂದ ಸಂಜೆ ಆರರ ತನಕ ಕರೆಂಟಿಲ್ಲವೆಂಬ ಸುದ್ದಿ ಕಣ್ಣಿಗೆ ರಾಚಿತು. ಆ ಸುದ್ದಿಯನ್ನು ಮತ್ತೊಮ್ಮೆ ಚೆನ್ನಾಗಿ ಗಮನ ಇರಿಸಿ ಓದಿದೆ. ಸ್ವಲ್ಪವೇ ಹೊತ್ತಿನಲ್ಲಿ ಇನ್ನೊಂದು ಮೀಡಿಯಾ ಗುಂಪಿನಲ್ಲೂ ಇದೇ ಸುದ್ದಿ ಬಂದು ಬಿದ್ದಿತು. ಸಂಜೆಯ ನಮ್ಮ ವಾಕಿಂಗ್ ಸಮಯದ ಮೀಟಿಂಗ್‌ನ ಮುಖ್ಯ ಅಜೆಂಡಾವೂ ನಾಳೆ ಕರೆಂಟಿಲ್ಲ ಎಂಬುದೇ ಆಗಿತ್ತು.

ನಮ್ಮ ಚಿಕ್ಕಮ್ಮ ನಂಗೆ ಎರಡು ನುಗ್ಗೆ ಕೋಡು ಕೊಟ್ಟಿದ್ದರು. ಇದನ್ನೂ ಕಸಕ್ಕೆ ಹಾಕೋದು ಬೇಡ ಸಾರು ಮಾಡಿ ತಿನ್ನುವಾ ಅಂತ ಅಕ್ಕನ ಮಗನಿಗೆ ಅಂಗಡಿಯಿಂದ ಎರಡು ಬದನೆ ತರುವಂತೆ ತಾಕೀತು ಮಾಡಿದೆ. ನುಗ್ಗೆ-ಬದನೆ ಭಯಂಕರ ಕಾಂಬಿನೇಶನ್. ಉರುಟಿರುವ ಹಸಿರು ಕಲರಿನ ‘ಗುಳ್ಳಬದನೆ’ ಅಂತ ಆತನಿಗೆ ವಿವರಿಸಿ ಶನಿವಾರ ನುಗ್ಗೆ-ಬದನೆ ಸಾಂಬಾರು ಅಂತ ತೀರ್ಮಾನ ಮಾಡಿದ್ದಾಗ ಕರೆಂಟಿಲ್ಲವೆಂಬ ಸುದ್ದಿ. ನಾಳೆ ಬೆಳಿಗ್ಗೆ ಬೇಗನೆ ಎದ್ದು, ಎದ್ದ ತಕ್ಷಣ ಮೊದಲಿಗೆ ಮಸಾಲೆ ಅರೆದಿಡಬೇಕು ಎಂದು ಯೋಜಿಸಿ ಆ ದಿನವನ್ನು ಸಂಪನ್ನಗೊಳಿಸಿದೆ.

ಮರುದಿನ ಮುಂಜಾನೆ ಎದ್ದವಳೇ ಮುಖಕ್ಕೆ ಒಂಚೂರು ನೀರು ಸೋಕಿಸಿ, ಅಡುಗೆ ಮನೆಗೆ ನುಗ್ಗಿದಾಗಲೇ ಕರೆಂಟ್ ಪುಸ್ಕ ಹೋಯಿತು. ತುತ್, ಇವರ ಹತ್ತು ಗಂಟೆ ಅಂದು ಇವಾಗಲೇ ತೆಗೆದುಬಿಟ್ಟರಾ, ಇವರಿಗೊಂದು ಹೊತ್ತುಗೊತ್ತಿಲ್ಲವೇ ಅಂತ ಮೆಸ್ಕಾಂನವರಿಗೆ ಬಯ್ಯುತ್ತಾ ಮತ್ತೆ ಬಾತ್‌ರೂಂ ಹೊಕ್ಕು ಶಾಸ್ತ್ರೀಯವಾಗಿ ಹಲ್ಲುಜ್ಜುವಾಂತ ಬ್ರಶ್ಶ್‌ಗೆ ಪೇಸ್ಟ್ ತಾಕಿಸಿದ್ದಷ್ಟೆ, ಪುಳ್ಕ ಅಂತ ಕರೆಂಟ್ ಬಂತು. ಯಬ್ಬ! ಕರೆಂಟ್ ಬಂದ ಖುಷಿಗೆ ಬ್ರಶ್ಶನ್ನು ಅಲ್ಲೇ ಇರಿಸಿ, ಛಂಗನೆ ಹಾರಿ ಅಡುಗೆ ಮನೆಗೆ ಬಂದು ಸಾಂಬಾರ ಪದಾರ್ಥಗಳನ್ನು ಜೋಡಿಸಿ, ತೆಂಗಿನಕಾಯಿ ತುರಿದು ಹೇಗಾದರೂ ಒಂಬತ್ತು ಮುಕ್ಕಾಲರ ಹೊತ್ತಿಗೆ ಮಿಕ್ಸಿಯ ಕೆಲಸವೆಲ್ಲ ಮುಗಿಯಿತು. ಇನ್ನು ನಾನು ‘ಸತ್ತ ನಾಯಿಗೂ’ ಹೆದರಲಾರೆ ಎಂಬ ಸಂತೋಷಕ್ಕೆ ಒಂದು ಚಿಕ್ಕ ರೌಂಡ್ ಹಾರಿಯೇ ಬಿಟ್ಟೆ. ದೊಡ್ಡ ರೌಂಡ್ ಹಾರಲು ಅಡುಗೆ ಮನೆಯಲ್ಲಿ ಜಾಗವಿಲ್ಲ.

Electric poles damaged in illegal granite blasting | Hyderabad News - Times  of India

ಮಸಾಲೆ ನುಣ್ಣಗೆ ರುಬ್ಬಿದ್ದಕ್ಕೆ ಇಷ್ಟೊಂದು ಬಿಲ್ಡಪ್ಪಾಂತ ನಿಮಗೆ ಅನಿಸಬಹುದು. ಆದರೆ ನಮ್ಮ ಸುಳ್ಯದಲ್ಲಿ ಕರೆಂಟ್ ಹೋಗುವ ಬರುವ ವಿಚಾರದಲ್ಲಿ ಇದಂತು ಚಿಕ್ಕ ವಿಷಯವೇ ಅಲ್ಲ. ಎಷ್ಟೊತ್ತಿಗೆ ಹೋಗುತ್ತೋ, ಎಷ್ಟೊತ್ತಿಗೆ ಬರುತ್ತೋ ದೇವರಿಗೂ ಗೊತ್ತಿಲ್ಲ. ಮಸಾಲೆ ಅರೆಯುತ್ತಿರುವಾಗ ಅರ್ಧಕ್ಕೆ ಹೋದ ಕರೆಂಟ್ ಮತ್ತೆ ಬಾರದೇ ಅರೆಬರೆ ಅರೆದ ಮಸಾಲೆಯಲ್ಲಿ ಸುಧಾರಿಸಿ ಒಳ್ಳೊಳ್ಳೆ ಖಾದ್ಯಗಳನ್ನು ಲಗಾಡಿ ತೆಗೆದದ್ದುಂಟು. ನೀರುದೋಸೆಗೆಂದು ನೆನೆಹಾಕಿದ ಅಕ್ಕಿ ಎರಡು ಹಾತ್ರಿ, ಒಂದು ಹಗಲು ನೆನೆದದ್ದೂ ಉಂಟು. ಪ್ಯಾಂಟಿನ ಒಂದು ಕಾಲಿಗೆ ಇಸ್ತ್ರಿಹಾಕಿ ಎರಡನೇ ಕಾಲಿಗಾಗುವ ವೇಳೆಗೆ ಹೋದ ಕರೆಂಟು ಅತ್ತಲೇ ಹೋಗಿ ಇತ್ತಬರದೇ ಇದ್ದಿದೆ ಎಷ್ಟೋ ಬಾರಿ. ಇಂತಹ ಪರಿಸ್ಥಿತಿಯಲ್ಲಿ ಮಸಾಲೆ ಬೇಕಾದಂತೆ ಅರೆದು ಮುಗಿಸಿದಾಗ ನನ್ನಂತ ಸಕ್ಸಸ್‌ಫುಲ್ ವುಮನ್ ವಿಶ್ವದಲ್ಲೇ ಇಲ್ಲ ಎಂಬ ಫೀಲಿಂಗ್ ಹುಟ್ಟಿ ನೆಲದಿಂದ ಒಂದು ಗೇಣು ಮೇಲೆ ತೇಲಿ, ಹಾಡೊಂದನ್ನು ಗುಣುಗುಣಿಸುತ್ತಾ ಅಕ್ಕಿತೊಳೆದು ಕುಕ್ಕರಿಗೆ ಹಾಕಿ ಉಳಿದ ಕೆಲಸಗಳತ್ತ ಗಮನ ಹರಿಸಿದೆ.

ಬೆಳಿಗ್ಗೆ ಹತ್ತಕ್ಕೆ ಕರೆಂಟ್ ಹೋಗುತ್ತೆ. ಮತ್ತೆ ಬರುವುದು ಸಂಜೆ ಆರಕ್ಕೆ ಅಂತ ಇದಕ್ಕೆ ಬೇಕಾದ ಎಲ್ಲಾ ಪೂರ್ವ ತಯಾರಿಗಳನ್ನು ಮಾಡಿದೆ. ಪೂರ್ವ ತಯಾರಿಗಳೆಂದರೆ, ಇನ್ವರ್ಟರ್ ಹೆಚ್ಚು ಖರ್ಚಾಗದಂತೆ ಫ್ಯಾನ್ ಕಡಿಮೆ ಬಳಸುವಂತೆ ಕಿಟಿಕಿ ಬಾಗಿಲುಗಳನ್ನೆಲ್ಲೂ ಸಂಪೂರ್ಣ ತೆರೆದಿರಿಸಿ, ಕರ್ಟನ್‌ಗಳನ್ನು ಸರಿಸಿ,  ಚೆನ್ನಾಗಿ ಗಾಳಿ ಬೆಳಕು ಒಳಬರುವಂತೆ; ಲ್ಯಾಪ್ಟಾಪ್, ಮೊಬೈಲು, ಪವರ್ ಬ್ಯಾಂಕುಗಳೆಲ್ಲ ಹೊಟ್ಟೆ ತುಂಬ ಚಾರ್ಜುಗೊಂಡಿರುವಂತೆ, ಅರ್ಜೆಂಟ್ ಕೆಲಸವೇನಾದರೂ ಬಂದರೆ ಲ್ಯಾಪ್ಟಾಪ್ ಮಾತ್ರ ಫ್ಲಗ್ಗಿನ್ ಮಾಡುವುದೆಂಬಂತೆಲ್ಲ ಪ್ಲಾನ್ ಮಾಡಿ ತಯ್ಯಾರಾದೆ. ಈ ಮಧ್ಯೆ, ಕರೆಂಟ್ ಹೋದರೆ ನನ್ನ ಇನ್ವರ್ಟರ್ ಇಡಿ ಊರಿಗೇ ಕೇಳುವಂತೆ ಗೊಂಯ್ಯೋ…. ಅಂತ ಸೌಂಡ್ ಮಾಡುತ್ತೆ. ಅದಕ್ಕೆ ಸರಿಯಾಗಿ ಒಂದು ಫ್ಯಾನೂ ಕುಂಯ್ಯೋ ಅನ್ನುತ್ತಾ ಅಳುತ್ತಿರುತ್ತದೆ. ಇವುಗಳೆಲ್ಲ ಸೇರಿ ನನ್ನನ್ನು ಸೌಂಡ್ ಪಾರ್ಟಿ ಮಾಡಿಟ್ಟಿವೆ. ಈ ಕಿರಿಕಿರಿ ಸೌಂಡನ್ನೂ ಸಹಿಸಿಕೊಳ್ಳಲು ಮಾನಸಿಕವಾಗಿ ಸಿದ್ಧವಾಗಿ ಕೂತೆ. ಗಂಟೆ ಹತ್ತಾಯಿತು, ಹನ್ನೊಂದಾಯಿತು, ಹನ್ನೆರಡಾಯಿತು. ಕರೆಂಟ್ ಹೋಗಲೇ ಇಲ್ಲ. ಈಗ ಹೋಗುತ್ತೆ, ಇನ್ನೊಂದು ಗಳಿಗೆಯಲ್ಲಿ ಹೋಗುತ್ತೆ ಅಂತ ಕಾದರೆ ಕರೆಂಟ್ ಹೋಗೇ ಇಲ್ಲ.

ಕರೆಂಟ್ ಹೋಗೇ ಹೋಗುತ್ತೆ ಅಂತ ನಾನು ಇಷ್ಟೆಲ್ಲ ತಯ್ಯಾರಿ ನಡೆಸಿ ಕೂತಿದ್ದಾಗ ಕರೆಂಟ್ ಹೋಗದಿದ್ದರೆ ಹೇಗಾಗಬೇಡ? ಕಿರಿಕಿರಿ ಆಗುವುದಿಲ್ಲವಾ. ಈ ಮೆಸ್ಕಾಂನವರು ಹೇಳುವುದೊಂದು ಮಾಡುವುದು ಇನ್ನೊಂದು ಎಂದು ಬಯ್ಯುತ್ತಾ ಫ್ಯಾನಡಿ ಕುಳಿತು ಮಾಡಿದ ಅಡುಗೆಯನ್ನು ಚೆನ್ನಾಗಿ ಉಂಡೆ. ಒಂದೇ ಸ್ಟ್ರೆಚ್ಚಲ್ಲಿ ಕರೆಂಟ್ ಹೋಗದಿದ್ದರೂ ಇಷ್ಟು ಕಿರಿಕಿರಿಯಾದೀತು ಅಂತ ನಾನು ಕನಸು ಮನಸ್ಸಲ್ಲೂ ನೆನೆಸಿದ್ದಿಲ್ಲ.

ಕರೆಂಟ್ ಹೋಗುವಾಗ, ಬರುವಾಗ ನನ್ನ ಇನ್ವರ್ಟರ್ ಮಾಡುವ ಬೊಬ್ಬೆಗೆ, ಕೆಳಗಡೆ ಮನೆ ಪ್ರತಿಮಾ ಮನೆಯಿಂದ ಹೊರಗೇ ಇದ್ದರೂ ಅವಳಿಗೆ ಕರೆಂಟ್ ಹೋದದ್ದು ಬಂದದ್ದು ಚೆನ್ನಾಗಿ ತಿಳಿಯುತ್ತದೆ. ‘ಕರೆಂಟ್ ಹೋಯ್ತು, ಕರೆಂಟ್ ಬಂತು, ಅಕ್ಕನ ಇನ್ವರ್ಟರ್ ಸೌಂಡ್ ಕೇಳಿತು’ ಅಂತ ಮನೆಯಿಂದ ಹೊರಗಡೆ ಅಂಗಳದಲ್ಲಿದ್ದರೂ, ಬಟ್ಟೆ ಒಗೆಯುತ್ತಿದ್ದರೂ ಅವಳಿಗೆ ಸರಿಯಾದ ಕರೆಂಟ್ ಮಾಹಿತಿ ಇರುತ್ತದೆ.

ನಾನು ಮರಳಿ ಸುಳ್ಯವಾಸಿ ಆದ ಆರಂಭದಲ್ಲಿ ನನ್ನ ಮಾಸ್ಟ್ರು ಭಾವ (ಎರಡನೇ ಅಕ್ಕನ ಗಂಡ) ಅವರ ಬಳಿ ಇದ್ದ ಎಕ್ಸ್‌ಟ್ರಾ ಹಳೆಯ ಇನ್ವರ್ಟರ್ ನನಗೆ ಕೊಟ್ಟಿದ್ದರು. ಅದು ನನಗೆ ಬರಿಯ ಇನ್ವರ್ಟರ್. ಆದರೆ ಅವರಿಗೆ ಅದೊಂದು ‘ಇಮೋಷನ್’. ಅವರ ಊರಿನವರು ಬೆಂಗಳೂರಿನಲ್ಲಿ ಹೋಗಿ ನೆಲೆಸಿ ಫ್ಯಾಕ್ಟರಿ ಮಾಡಿ, ಆ ಫ್ಯಾಕ್ಟರಿಯಲ್ಲಿ ತಯಾರಾದ ಇನ್ವರ್ಟರ್ ಅದು. ಹಾಗಾಗಿ ನನ್ನೂರಿನವರ ಬೆಂಗ್ಳೂರು ಫ್ಯಾಕ್ಟರಿ ಅನ್ನುವ ವೀ ಫೀಲಿಂಗಿಗೆ ಬಿದ್ದ ನನ್ನ ಬಾವ ಅದು ಹಾಳಾದರೂ ಬೆಂಗ್ಳೂರಿಗೇ ಕಳಿಸಿ ರಿಪೇರಿ ಮಾಡಿಸುವುದು. ಇದರ ಬೊಬ್ಬೆ ತಡೆಯಲಾಗುವುದಿಲ್ಲ, ಇದನ್ನು ಕೊಟ್ಟು ಬೇರೆ ಖರೀದಿಸುತ್ತೇನೆ ಅಂತ ಅವರ ಬಳಿ ಸೌಜನ್ಯಕ್ಕಾಗಿ ಪರ್ಮಿಶನ್ ಕೇಳಿದರೆ, ಒಮ್ಮೆಗೆ ಎದ್ದು ನೆಟ್ಟಗೆ ಕುಳಿತ ಭಾವ, ಬೇಡಬೇಡ ಅದನ್ನು ಕೊಡುವುದೇನು ಬೇಡ, ಹಾಳಾದರೆ ರಿಪೇರಿಗೆ ಅಲ್ಲಿಗೇ ಕಳಿಸುತ್ತೇನೆಂದು ಕಡ್ಡಿಮುರಿದಂತೆ ಹೇಳಿದರು.

ಅವರು ಕೆಲವು ವಿಚಾರದಲ್ಲಿ ಖಡಾಖಡಿ ಮನುಷ್ಯ. ಒಂದು ವೇಳೆ ನಾನು ಇನ್ವರ್ಟರ್ ಕೊಟ್ಟು ಬೇರೆ ತರಲು ಹೊರಟರೆ, ಅವರು ಇನ್ವರ್ಟರ್ ಮುಟ್ಟದಂತೆ ಅಡ್ಡಕ್ಕೆ ಮಲಗಿ ಮುಷ್ಕರ ಹೂಡಲೂ ಬಹುದು. ಇಲ್ಲವಾದರೆ ಇನ್ವರ್ಟರನ್ನು ಅಪ್ಪಿ ಹಿಡಿದು ಅಪ್ಪಿಕೋ ಚಳುವಳಿ ಮಾಡಿದರೂ ಮಾಡಿಯಾರು. ನಮ್ಮೂರಿನವರು ಅನ್ನುವ ಅವರ ಆ ಅಭಿಮಾನ ಇನ್ವರ್ಟರ್ ಒಳಗಿನ ಕರೆಂಟಿಗಿಂತಲೂ ಹೆಚ್ಚು ಪವರ್‌ಫುಲ್! ಹಾಗಾಗಿ ಅವರ ಫೀಲಿಂಗಿಗೆ ಬೆಲೆ ಕೊಟ್ಟು ‘ಬಂದಷ್ಟು ಬರಲಿ ಬರಡೆಮ್ಮೆ ಹಾಲು’ ಎಂಬಂತೆ ಕುಂಯ್ಯೋ….. ಅನ್ನುವ ಇನ್ವರ್ಟರಿನೊಂದಿಗೆ ದಿನ ದೂಡುತ್ತಿದ್ದೇನೆ.

ನಮ್ಮ ಸುಳ್ಯದಲ್ಲಿ ಸಾವಿಲ್ಲದ ಮನೆಯ ಸಾಸಿವೆಯಾದರೂ ಸಿಗಬಹುದೇನೋ, ಆದರೆ ಕರೆಂಟಿಗೆ ಬಯ್ಯದ ಮನೆಯ ಸಾಸಿವೆ ಖಂಡಿತಾ ಸಿಕ್ಕದು. ಅಂದೊಮ್ಮೆ ಹೋದ ಕರೆಂಟ್ ಅತ್ತಲೇ ಹೋಗಿತ್ತು. ದಿನವಿಡೀ ಕರೆಂಟಿರಲಿಲ್ಲ. ನಾನು ಕಂಪ್ಯೂಟರಿಗೆ ಮಾತ್ರ ಇನ್ವರ್ಟರ್ ಕರೆಂಟ್ ಬಳಸಿ, ಅಕ್ಷರಶಃ ಬೆವರಿಳಿಸಿ ಹೇಗಾದರೂ ನನ್ನ ಕೆಲಸ ಮುಗಿಸಿ ಇನ್ನೇನು ಫೈಲ್ ಮೇಲ್ ಮಾಡ್ಬೇಕು, ಅಷ್ಟೊತ್ತಿಗೆ ಮೂರು ಬಾರಿ ಜೋರಿನಿಂದ ಕ್ಹೀಂ…. ಕ್ಹೀಂ…. ಕ್ಹೀಂ…. ಕಿರುಚಿದ ಇನ್ವರ್ಟರ್ ಇನ್ನು ನನ್ನಿಂದಾಗದು ಎಂದು ಸತ್ತೇ ಹೋಯಿತು. ಹೇಗಾಗಬೇಡ ನಂಗೆ. ಡೆಡ್‌ಲೈನ್ ಸಮೀಪಿಸುತ್ತಿದೆ. MBಗಟ್ಲೆ ಇರುವ ದೊಡ್ಡ ಫೈಲ್ ತುರ್ತಾಗಿ ರವಾನೆ ಆಗಬೇಕಿದೆ. ಎಲ್ಲ ಬ್ಯಾಟರಿಗಳೂ ಮುಗಿದು ಡಿವೈಸ್‌ಗಳೆಲ್ಲ ನಿಸ್ತೇಜವಾಗಿವೆ. ಏನು ಮಾಡಲಿ? ಕೊನೆಗೆ ಲ್ಯಾಪ್ಟಾಪನ್ನು ಬೆನ್ನಿಗೇರಿಸಿ ಜನರೇಟರ್ ಇರುವಲ್ಲಿಗೆ ಹೋಗಿ ಇಮೇಲ್ ಕಳುಹಿಸಿ ಡೆಡ್‌ಲೈನ್ ಕಾಪಾಡಿಕೊಂಡೆ.

ಮತ್ತೊಮ್ಮೆ ಊರ ಜಾತ್ರೆ. ಮನೆತುಂಬ ನೆಂಟರು. ಅತ್ಲಾಗೆ ಕರೆಂಟಿಲ್ಲ, ಇತ್ಲಾಗೆ ನೀರಿಲ್ಲ ಎಂಬ ಪರಿಸ್ಥಿತಿ. ಈ ಎಲ್ಲ ಬವಣೆಗಳನ್ನು ನಾನು ಲಘುದಾಟಿಯಲ್ಲಿ ಬರೆದು ನನ್ನ ಫೇಸ್ಬುಕ್ ಗೋಡೆಗೇರಿಸಿದ್ದೆ. ಅದೊಮ್ಮೆ ಯಾರ ಬಳಿಯೋ ಹೀಗೆ ಸಾಂಪ್ರತಾ ಉಭಯಕುಶಲೋಪರಿ ಮಾತಾಡುತ್ತಿದ್ದ ವೇಳೆ ನಾನು ಆ್ಯಂಟಿ ಗವರ್ನಮೆಂಟಂತೆ ಎಂಬ ಮಾತು ತೇಲಿಬಂತು. ಅರೆ ಯಾವ ಪಂತ ಪಂಗಡಗಳಲ್ಲಿ ಗುರುತಿಸಿಕೊಳ್ಳದೆ ನನ್ನ ಪಾಡಿಗೆ ‘ಬಡವೀ ನೀ ಮಡುಗಿದಂಗಿರು’ ಎಂಬಂತಿರುವ ನಾನು ಯಾವಾಗ ಆ್ಯಂಟಿ ಗವರ್ಮೆಂಟ್ ಆದೇಂತ ಅಂತ ತಿಳಿಯಲಿಲ್ಲ. ಸುಳ್ಯದ ಕರೆಂಟ್ ದುಃಖ ತೋಡಿಕೊಳ್ಳುವುದಕ್ಕೆ ಈ ಮಾತು ಬಂತೋ? ನನ್ನ ಅಣ್ಣ-ಅಕ್ಕಂದಿರ ಮಕ್ಕಳು, ನೆರೆಹೊರೆಯವರು, ನೆಂಟರ ಮಕ್ಕಳಿಗೆಲ್ಲ ನಾನು ಆಂಟಿ. ಈ ಕರೆಂಟಿನ ದೆಸೆಯಿಂದಾಗಿ ನಾನು ಗವರ್ನಮೆಂಟಿಗೇ ಆಂಟಿ ಆಗಿಹೋದೆನೋ??????!!!!!!


ಚಂದ್ರಾವತಿ‌ ಬಡ್ಡಡ್ಕ

ಚಂದ್ರಾವತಿ ಬಡ್ಡಡ್ಕ ಹಿರಿಯ ಪತ್ರಕರ್ತೆ, ಅಂಕಣಕಾರರು ಹಾಗೂ ವೃತ್ತಿಪರ ಅನುವಾದಕಿ

About The Author

Leave a Reply

You cannot copy content of this page

Scroll to Top