ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹುಟ್ಟಿದ ಹಬ್ಬ

ಸುಜಾತ‌ ಲಕ್ಷ್ಮೀಪುರ.

ತುಂಬು ಗರ್ಭಿಣಿಯಂತೆ ಅಡ್ಡಾಡುತ್ತಿದ್ದ
ಕಾರ್ಮೋಡಗಳೆಲ್ಲ ಹೆರಿಗೆ ರಜೆ ಪಡೆದು
ಕಣ್ಮರೆಯಾಗಿ ಗವ್ವನೆ ಕತ್ತಲು ಆವರಿಸಿ
ಅಮ್ಮಾ..ಅಮ್ಮಾ..ಮಿಂಚು ಗುಡುಗಿನ ವೇದನೆ
ಅನುಭವಿಸಿ ಹಡೆದವು
ಸಾವಿರಾರು ಮಕ್ಕಳನು ಇಳೆಯ ಒಕ್ಕಲನು

ಮುದ್ದು ಮುದ್ದಾಗಿ ಮೆಲ್ಲನೆ ಧರೆಗಿಳಿದ
ಹನಿ ಹನಿಯ ಆರೈಕೆಗೆ ಸಿದ್ದ ಇಳೆಯ ಮಡಿಲು.
ಹಸುಗೂಸನು ಹಸಿರಿನ ಮಡಿಲಿನಲಿ ಮಲಗಿಸಿ
ತೂಗಿ ತೂಗಿ ಸಂತೈಸುತಿದೆ ಇಳೆ
ಕೆರೆಕಟ್ಟೆ ಬಾವಿಯಲ್ಲೂ ಜೀವದ ಕಳೆ
ನೀರಾಟಕೆ ಪ್ರಾಣಿ ಪಕ್ಷಿಗಳ ಆಗಮನ
ತೆನೆತೆನೆಗೆ ಹಕ್ಕಿಗಳ ಪಾದಸ್ಪರ್ಶ
ಕುಹು ಕುಹೂ ಟುವ್ವಿ ಟುವ್ವಿ

ಗಾಳಿಯಲ್ಲೂ ಸುಸ್ವರದ ಸುನಾದ ಗಂಧ
ಮಳೆರಾಯನ ಜನನದ ಸಂಭ್ರಮಾಚರಣೆ
ಗುಡುಗು ಸಿಡಲಿನ ಶಿಳ್ಳೆ ಬಿರುಗಾಳಿ ಬೀಸಣಿಗೆ
ಹೆಜ್ಜೆ ಇಟ್ಟಲೆಲ್ಲಾ ತಣ್ಣನೆಯ ಜಲತರಂಗ

ಜೀವ ಚೈತನ್ಯದ ಹೊಸನಗೆಯ ಬಗೆಗೆ
ತುಂಬಿ ತುಳುಕಾಡಿದೆ ಧರೆ ವಸುಂಧರೆ
ಸುಗ್ಗಿ ಹಿಗ್ಗಿ ರಾಶಿರಾಶಿ ಧಾನ್ಯದ ಕಣಕಣವೂ
ಕೈಮುಗಿದಿದೆ ಮುಗಿಲಿಗೆ ಉಧೋ ಉಧೋ ಎಂದು
ಹಸಿದ ಹೊಟ್ಟೆ ತುಂಬಿಸಿದ ಧನ್ಯತೆಯಲಿ ಮಿಂದು


About The Author

Leave a Reply

You cannot copy content of this page

Scroll to Top