ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಲೇಖನ

ಅಮ್ಮಂದಿರ ದಿನದ ವಿಶೇಷ

ಜಗದ ಕಣ್ಣು ನೀನಮ್ಮಾ…

ಲೇಖನ

ಶಿವಲೀಲಾ ಹುಣಸಗಿ

ಅಮ್ಮಾಯೆಂದರೆ ಏನೋ ಹರುಷವು,ನಮ್ಮ ಪಾಲಿಗೆ ಅವಳೇ ದೇವರು.ಎಷ್ಟೊಂದು ಆದ್ರತೆ,ಭದ್ರತೆ ಅಮ್ಮನ ಸೆರಗ ಹಿಡಿದು ಹೊರಟರೆ ಅದೆಂತಹುದೋ ಶಕ್ತಿ ನಮ್ಮ ಕಾಯ್ದಂತೆ.ದೇವರಿಗೆ ಎಲ್ಲರ ಕೋರಿಕೆ ಪೂರೈಸಲು ಆಗದೆಂದೆ ಅಮ್ಮನನ್ನು ತನ್ನ ಪ್ರತಿನಿಧಿಯಾಗಿ ಕಳಿಸಿರುವ ವಿಷಯ ಹಿರಿಯರಿಂದ ಕೇಳಿ ತಿಳದು ಅರಗಿಸಿಕೊಂಡ ಮಹಾನುಭಾವರು ನಾವು. ಒಂಬತ್ತು ತಿಂಗಳು ಹೊತ್ತು ಹೆತ್ತು ಎದೆಯಾಮೃತ ನೀಡಿ ಸಲುಹಿ ಸೀರೆಯ ಜೋಳಿಗೆಯಲ್ಲಿ ಮಲಗಿಸಿ ಲಾಲಿ ಹಾಡುವ ಅವಳ ಅಂತರಂಗದ ಬೆಳಗು ಜಗತ್ತಿಗೆ ಮಾದರಿ.

ಆಕಾಶದ ನೀಲಿಯಲ್ಲಿ

ಚಂದ್ರ ತಾರೆ ತೊಟ್ಟಿಲಲ್ಲಿ

ಬೆಳಕನಿಟ್ಟು ತೂಗಿದಾಕೆ

ನಿನಗೆ ಬೇರೆ ಹೆಸರು ಬೇಕೆ?

ಸ್ತ್ರೀ ಎಂದರೆ ಅಷ್ಟೇ ಸಾಕೆ?

ಇತಿಹಾಸದ ಪುಟಗಳು ನಮ್ಮ ಜ್ಞಾನ ಭಂಡಾರಕೆ  ಪೂರಕವೆಂಬಂತೆ ಅನೇಕ ಮಹಾಪುರುಷರ ಉದಯ ಹಾಗೂ ಶೌರ್ಯ ಸಾಹಸಗಳನ್ನು ವಿವರಿಸುವಲ್ಲಿ ತಾಯಿಯ ತ್ಯಾಗ ಬಲಿದಾನದ ಕುರುಹುಗಳು ಕಾಣಸಿಗುತ್ತವೆ.ಅಮ್ಮನ ಕರುಳು ಮಿಡಿಯುವುದು ಮಕ್ಕಳ ಶ್ರೇಯಸ್ಸು, ಅಭಿವೃದ್ಧಿ ಹಾಗೂ ಬದುಕಿನಲ್ಲಿ ಯಾವುದೇ ಸಂಕಷ್ಟಕ್ಕೆ ಸಿಲುಕಬಾರದೆಂದು ಹೆತ್ತ ಕರುಳ ಬಳ್ಳಿಗೆ ಒಳಿತು ಬಯಸುವ ಕೊಂಡಿಯೆಂದರೆ ಅವ್ವ.

ನೂರು ಕಷ್ಟಗಳು ಎದುರಾದರೂ ಅವಳ ಅಚಲ ನಿರ್ಧಾರ ಎಂದಿಗೂ ಬದಲಾಗದು.

ಒಂದು ಕಾಲದಲ್ಲಿ ಹೆಣ್ಣು ಮಗುವನ್ನು ಸ್ವೀಕರಿಸುವ  ಹಾಗೂ ಅದರ ಬಗ್ಗೆ ಹೆಮ್ಮೆ ಪಡುವ ಕ್ಷಣಗಳು ಅಲ್ಲಲ್ಲಿ ಕಂಡು ಬಂದರೂ,ಪೂರ್ಣ ಮನಸ್ಸಿನಿಂದ ಮಗಳನ್ನು ಅಪ್ಪಿಕೊಳ್ಳುವ ಸ್ಥಿತಿ ಇರಲಿಲ್ಲ.ಪರಧನವೆಂಬ ಮೌಡ್ಯ ಹೊತ್ತು ಬೆಳೆಸುವ ಪರಿ ಒಮ್ಮೊಮ್ಮೆ ಶೋಚನೀಯ ಸ್ಥಿತಿಗೆ ತಲುಪುತ್ತಿದ್ದುದನ್ನು ಯಾರು ಮರೆಯಲಾರರು. ಭ್ರೂಣ ಹತ್ಯೆ ಲಿಂಗ ತಾರತಮ್ಯವನ್ನು ಹುಟ್ಟು ಹಾಕಲು ನಾಂದಿಯಾದುದು ಹೆಣ್ಣು ಹುಣ್ಣೆಂಬ ದೃಷ್ಟಿ ದೋಷ ಸರಿಪಡಿಸುವ ಶಸ್ತ್ರಚಿಕಿತ್ಸೆ ಹಾಗೂ ಹುಟ್ಟುವ ಮಗು ಹೆಣ್ಣಾಗಲಿ,ಗಂಡಾಗಲಿ ದೈಹಿಕ ವ್ಯತ್ಯಾಸವಾದರೂ ಉಸಿರಾಡುವ ಗಾಳಿ,ನೋವಿಗೆ ಮಿಡಿಯುವ ಹೃದಯ ತನ್ನದೆಂಬ ಭಾವ ಇಬ್ಬರಲ್ಲೂ ಭಗವಂತ ಸಮನಾಗಿ ಹಂಚಿಕೆ ಮಾಡಿರುವುದು ಪ್ರಕೃತಿಯಲ್ಲಿ ಸಾಬಿತಾದರೂ ಹೆಣ್ಣು ಮಕ್ಕಳ ಬದುಕು ಕಷ್ಟ ನಷ್ಟದಲ್ಲಿ ಅರಳಿದ ಕಮಲದಂತೆ.

ತಲೆ ಮೇಲೆ ಇಟ್ಟಂಗಿ ಪುಟ್ಟಿ,ಬೆನ್ನಿಗೆ ಕೂಸು,ಕೈಯಲಿ ಬುತ್ತಿ ಚೀಲ ನೂರು ಕನಸು ಹೊತ್ತು ನಡೆವವಳ ನೆನೆದರೆ ಕೂಸು,ಹಸಿವು ಎಲ್ಲವೂ ಅರ್ಪಿಸಿ ಕಂದಮ್ಮಗಳ ಭವಿಷ್ಯ ರೂಪಿಸುವ ಛಲಗಾತಿಯೆಂದರೆ ಅಮ್ಮ..ಜಗತ್ತು ವಿಶಾಲವಾಗಿದೆ.ಮಾನವೀಯ ಮೌಲ್ಯ ಕೂಡ ಅಲ್ಲಲ್ಲಿ ಜೀವಂತವಾಗಿದೆ.ಅದು ಸಕಾರಾತ್ಮಕ ಚಿಂತನೆಯ ಹೊತ್ತ ಮನೋಭಾವದೊಂದಿಗೆ.ಅದರ ಸೆಲೆಯ ಕೇಂದ್ರ ತಾಯಿ..ಪ್ರಾಣಿ,ಪಕ್ಷಿ,ಎಲ್ಲ ಜೀವ ಜಂತುಗಳ ಕರುಳು ತನ್ನ ಮರಿಗಾಗಿಯೇ ಹೊರತು ಬೇರಾವುದಕ್ಕೂ ಅಲ್ಲ.

ಮಕ್ಕಳು ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ಸೋಲುತ್ತಿರುವುದು ವಿಪರ್ಯಾಸವೆಂದರೆ ತಪ್ಪಿಲ್ಲ. ಬಡತನವಿರಲಿ,ಸಿರಿತನವಿರಲಿ ಸಾಕು ಸಲುಹಿದ ಪ್ರತಿ ಕ್ಷಣಗಳು ಎಲ್ಲವನ್ನು ತ್ಯಾಗ ಮಾಡಿ ಜೀವನ ಸಾಗಿಸಿದವಳು ಇಂದು ಅನಾಥವಾಗಿದ್ದಾಳೆ.ಅವಳ ನೋವಿಗೆ,ಕಣ್ಣೀರಿಗೆ ಯಾವ ಬೆಲೆಯು ಇಲ್ಲ.ಹತ್ತು ಮಕ್ಕಳ ಸಲುಹಿದಾಕೆಯನ್ನು,ನಿತ್ರಾಣದ ಗಳಿಗೆ, ಖಾಯಿಲೆ ಕಸಾಲೆಗೆ ಒಳಗಾದವಳನ್ನು ಅಂಗೈಯಲ್ಲಿಟ್ಟು ಸಾಕುವ ಮಕ್ಕಳನ್ನು ಭೂತಗನ್ನಡಿಯಲ್ಲಿಟ್ಟು ಹುಡುಕಬೇಕಿದೆ.ಮುದುಕರಾದರೆ ಅವರು ಉಪಯೋಗವಿಲ್ಲವೆಂವ ಅಹಂ ಹೊತ್ತು ಮೆರೆಯುವ ಕರುಳಿಗೆ ತಾನು ಮುಂದೊಂದಿನ ಈ ಸ್ಥಿತಿ ನನಗೂ ಬರುವುದು ಖಚಿತವೆಂಬ ಸತ್ಯ ಮರೆಯಲುಂಟೆ? ಅದ್ರೂ ಕ್ಷಣಿಕ ಆಸೆಗೆ, ತಾನು ಕೆಡುವುದಲ್ಲದೇ ತನ್ನ ಪರಿವಾರವನ್ನು ವಯಸ್ಸಾದವರಿಗೆ ಪ್ರೀತಿ, ಆರೈಕೆ, ಭರವಸೆ,ನಂಬಿಕೆ ತುಂಬದೆ ಮನೆಯಾಚೆ ದೂಡುವ ಪೀಳಿಗೆಗೆನೂ ಕೊರತೆಯಿಲ್ಲ..ಅಂತವರ ಎದೆಯಲಿ ತನ್ನಂತೆ ಪರರೆಂಬ ಸತ್ಯ ಗೋಚರಿಸುವುದು. ವಯಸ್ಸಾದಾಗಲೇ.

ಮುಕ್ಕೋಟಿ ದೈವಕೆ ಶರಣೆಂಬ ಭಾವ.ದೇವತೆಗಳು ಸೋತು ಶರಣಾದ ದೇವತೆಯೆಂದರೆ ಅಮ್ಮ.ನಾವು ಕಳೆದ ಗಳಿಗೆಗಳ ನೆನೆಸುತ್ತ.ಅವರಿಗೆ ಗೌರವ ನೀಡುತ್ತ ಮಕ್ಕಳಾಗಿ,ಸೊಸೆಯಾಗಿ,ಮೊಮ್ಮಕ್ಕಳಾಗಿ ಅವರ ಮನ ನೋಯಿಸದೆ ತಮ್ಮೊಟ್ಟಿಗೆ ಪ್ರೀತಿಯಾದರದಿಂದ ಕಾಣುವ ಮನಸ್ಥಿತಿ ಈಗ ಉಳಿಸಿಕೊಂಡು ಹೋಗುವುದು ಬಹುಮುಖ್ಯ.ಅವಿಭಕ್ತ ಕುಟುಂಬಗಳು ಹೆಚ್ಚಾಗಬೇಕು.ವಿಭಕ್ತ ಕುಟುಂಬಗಳು ಸಂಕುಚಿತ ಮನೋಭಾವದಿಂದ ಹೊರ ಬರಬೇಕು.ಹಿರಿಯರು ಹೊರೆಯಲ್ಲವೆಂಬ ಸತ್ಯ ಅರಿಯಬೇಕು. ಗೌರವಾಧರಗಳೊಂದಿಗೆ ಸಂರಕ್ಷಿಸಿ ಅನಾಥರೆಂಬ ಪ್ರಜ್ಞೆ ಯಿಂದ ಹೊರತಂದು ಬದುಕುವುದು ಹೊಸ ಮನ್ವಂತರಕೆ ಅಡಿಯಿಟ್ಟಂತೆ….

ಹಸುರನುಟ್ಟ ಬೆಟ್ಟಗಳಲಿ

ಮೊಲೆಹಾಲಿನ ಹೊಳೆಯನಿಳಿಸಿ

ಬಯಲ ಹಸುರ ನಗಿಸಿದಾಕೆ

ನಿನಗೆ ಬೇರೆ ಹೆಸರು ಬೇಕೆ?

ಸ್ತ್ರೀ ಎಂದರೆ ಅಷ್ಟೇ ಸಾಕೆ?

ಅಮ್ಮಾ ನೀನೊಂದು ಆಗಸದ ಸೂರ್ಯ.ನಾನದರ ನಕ್ಷತದಂತೆ ಹಗಲಿರುಳು ಬದುಕಿಗೆ ತಂಪೆರೆವ ಹೊಂಗೆ ನೆರಳಂತೆ.ನನ್ನ ಅಸ್ತಿತ್ವದ ಸತ್ಯವೇ ನೀನು.ಬ್ರಹ್ಮಾಂಡದ ಉಸಿರು ನೀನು.ನಿನ್ನ ಕಡೆಗಣಿಸಿ ಬದುಕಿನಲ್ಲಿ ಯಶಸ್ಸ ಕಂಡವರು ಯಾರಿಲ್ಲ ಜಗದಲಿ..ಇನ್ನಾದರೂ ಅವ್ವನ ಮಹತ್ವ ಅರಿತು ಬದುಕಿದರೆ ಬಾಳು ಹಸನಾದಿತು…

ಲವ್ಯೂ….. ಅಮ್ಮಾ…


About The Author

11 thoughts on “ಅಮ್ಮಂದಿರ ದಿನದ ವಿಶೇಷ”

  1. ಶಿವಲೀಲೆಯ ಅಮ್ಮನ ಭಾವ ಪಲ್ಲಕ್ಕಿಯಲ್ಲಿ ಯ ಮುತ್ತಿನ ಮಣಿಗಳ ಒಂದೊಂದು ಅಕ್ಷರವೂ ಮುಗಿಲೆತ್ತರ. ಅಮ್ಮಾಗೂ. ಮಗಳಿಗೂ ಅನಂತ ಶರಣು ಶರಣು ಮೇಡಂ ರೀ

  2. Shankar nayak

    ತಾಯಂದಿರು ಜಗತ್ತನ್ನು ನಡೆಸುವ ಅಂಬಿಗರಂತೆ…ನೂರು ಕಾಲ ಸುಖವಾಗಿ ಇರಬೇಕು…ಸುಂದರ ಬರೆಹ…

  3. ಶುಭಲಕ್ಷ್ಮಿ ಆರ್ ನಾಯಕ.

    ಸುಂದರವಾಗಿದೆ ಬರಹ. ಅಮ್ಮಂದಿರ ಮನ ತಂಪಾಗಿರಲಿ.ಅವರನ್ನು ಸುಖದಿಂದ ಇಡುವ ಜವಾಬ್ದಾರಿ ಪ್ರತೀ ಕಂದನ ಮೇಲಿದೆ.

  4. Haseena siddapur

    ಅಮ್ಮನ ಮಡಿಲು ಸ್ವರ್ಗ ಅಮ್ಮ ತನ್ನ ಜೀವ ತೆದು ಮಕ್ಕಳಿಗಾಗಿ ತನ್ನ ಸರ್ವಸ್ವವನ್ನು ತ್ಯಾಗ ಮಾಡುವವಳು

  5. ಹೃದಯಸ್ಪರ್ಶಿ ಲೇಖನ.ಅಮ್ಮಾ ನಿನಗೆ ನೂರೊಂದು ನಮನ

Leave a Reply

You cannot copy content of this page

Scroll to Top