ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಬೆಂಶ್ರೀ ರವೀಂದ್ರ

ನಾ ಬರೆಯದ ಕವನಗಳ ನಿನಗಾಗಿ ಮೀಸಲಿಟ್ಟಿದ್ದೇನೆ
ಒಳಕೋಣೆಯ ಒಳ್ಗುಣಗಳ ಕನಸಿಗಾಗಿ ಮೀಸಲಿಟ್ಟಿದ್ದೇನೆ

ನಾವಿಬ್ಬರೂ ದೂರಸರಿದ ಬವಣೆ ನಿಜವೆ ಆದರೂ
ಹರಿದಿಲ್ಲದ ಭಾವದ ಅಕ್ಷರಗಳಿಗಾಗಿ ಮೀಸಲಿಟ್ಟಿದ್ದೇನೆ

ಕೂಡಿ ನಕ್ಕ ಮುಗುಳು ಉದುರಿತು ನಂಜಾಗಿ ಆದರೂ
ನೀನಾಗಲಿ ನಾನಾಗಲಿ ಅಕಾರಣ ಹಾಗಾಗಿ ಮೀಸಲಿಟ್ಟಿದ್ದೇನೆ

ಆಯತಪ್ಪಿದರೆ ಮನಬಿಚ್ಚಿ ಹಾಡಾಗುವುದೆಂದು ಬೆದರಿಹೆನು
ಅದಕೆ ಅಕ್ಷರಗಳ ಬಾಡದಂತೆ ನಯವಾಗಿ ಮೀಸಲಿಟ್ಟಿದ್ದೇನೆ

ಕೈಗಳ ತೆರೆದು ಬಾಂದಳಕ್ಕೆ ತೆಕ್ಕೆಯ ತೂಗಿ ಬಿಟ್ಟಿದ್ದೇನೆ
ಕಳಚಿ ತಟ್ಟನೆ ತೆಕ್ಕೆಗೆ ಬೀಳುವ ಬಸಿರಿಗಾಗಿ ಮೀಸಲಿಟ್ಟಿದ್ದೇನೆ.

ಬಾಯಾಳಿಗಳ ಭರತಕ್ಕೆ ಪಕ್ಕಾಗದಿರಲೆಂದು ಅವಿಸಿಟ್ಟಿದ್ದೇನೆ
ಮುಂಗಾರು ಹಂಗಾಮದಲಿ ಮತ್ತೆ ಬಿತ್ತುವುದಕಾಗಿ ಮೀಸಲಿಟ್ಟಿದ್ದೇನೆ

ನನ್ನಿನುಡಿಗಳು ನಿನಗಲ್ಲದೆ ಇನ್ಯಾರಿಗೂ ಅರಿವಾಗದು
ರವಿತೇಜ ದಲಿ ಅಮಾವಾಸ್ಯೆ ಹುಣ್ಣಿಮೆಯೆಂದು ನಿನಗಾಗಿ ಮೀಸಲಿಟ್ಟಿದ್ದೇನೆ.


About The Author

Leave a Reply

You cannot copy content of this page

Scroll to Top