ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಕಥಾ ಸಂಗಾತಿ ನಿರ್ಧಾರ ವಿಜಯಾಮೋಹನ್ ನಿರ್ಧಾರ ಮನೇಲಿ ಇಂಗೆ ನನ್ನ ತಾಯಿಯ ಸಲುವಾಗಿ,ಒಬ್ಬರಿಂದ ಒಬ್ಬರಿಗೆ ಹುಟ್ಟಿಕೊಂಡಿದ್ದ  ಮಾತುಗಳು, ಅವು ಬರೀ ಮಾತಾಗಿರದೆ, ನನ್ನ ಹೃದಯವನ್ನ ಘಾಸಿ ಮಾಡುವಂತೆ ಮಸಿಯುತ್ತಿದ್ದವು. ಅವು ಇಷ್ಟೊಂದು ವಿಕೋಪಕ್ಕೆ ತಿರುಗುತ್ತವೆ ಎಂದು, ನಾನು ಕೂಡ ಯಾವತ್ತು ಎಣಿಸಿರಲಿಲ್ಲ. ಇಂಗೆ ಬದುಕಿನ  ಸಂದರ್ಭಗಳು ಒಂದೆ ಸಮವಾಗಿರುವುದಿಲ್ಲ, ಅಥವ ನಾವಂದುಕೊಂಡಂತೆ ಸುಲಭವಾಗೂ ಇರುವುದಿಲ್ಲ, ಈಗ ಮೂರು ದಿವಸದಿಂದ ಮನೇಲಿ, ನನ್ನ ಮತ್ತು ಅಮ್ಮನ ವಿರುದ್ದ  ಮಾತನಾಡುತ್ತಿರುವ ದ್ವನಿಗಳು.ಎಗ್ಗು ಸಿಗ್ಗಿಲ್ಲದೆ ನನ್ನ ವಿರುದ್ದ ಎದ್ದು ನಿಂತಿರುವುದರಿಂದ. ನಾನು ಯಾರ ಜೊತೆ ಮಾತಾಡ್‌ದಂಗೆ ಇದ್ದು ಬಿಟ್ಟಿದ್ದೆ,  ನೆನ್ನೆ ಸಂಜೇಲಿ ಮನೆಯ ಡೈನಿಂಗ್ ಟೇಬಲ್ಲಿನ ಮ್ಯಾಲಿದ್ದ. ನಾಕು ತುತ್ತು ಅನ್ನ ತಿಂದಿದ್ದು ಬಿಟ್ಟರೆ. ಬೆಳಿಗ್ಗೆಯಿಂದ ಒಂದು ತೊಟ್ಟು ರಸಾ ಅನ್ನೋದು ಇಳಿದಿರಲಿಲ್ಲ, ನೀನು ತಿನ್ನು ಬಾ ಅನ್ನುವವರೆಲ್ಲ, ಬಿಂಕವಾದ ಮುಷ್ಕರಕ್ಕೆ ತಿರುಗಿಕೊಂಡಿದ್ದರು. ಅಂಗಾಗೆ ನನ್ನೊಳಗೆ ನಾನಿರಲಾಗದೆ, ಕಾರು ತಗೊಂಡು ಸೀದ ಊರಿನ ಕಡೆ ಹೊರಟೆ, ಮೊದಲಿನಿಂದಲು ನಾನು ಹಸಿವು ತಡಕೊಂಡವನಲ್ಲ. ಒಂತರಾ ಹಾಳೂರ ದೆವ್ವಿನಂಗೆ ಉಂಡವನು,ಅಂತ ಹಸಿವನ್ನು ಅದುಮಿಕೊಂಡು. ಕಾರಿನಲ್ಲಿ ಬರುತ್ತಿದ್ದವನಿಗೆ.ನಮ್ಮೂರ  ಹೋಬಳಿ ಹೆಡ್‌ಕ್ವಾರ್ಟರ್ ಸಿಕ್ಕಿತ್ತು, ಕೂಡ್ಲೆ ಬಸ್‌ಟಾಪಿನ ಪಕ್ಕ ಎರಡು ದೊಡ್ಡ ವಿಶಾಲವಾದ, ಕೆಂಖೇಸರಿ ಮರದ ಕೆಳಗೆ. ನನ್ನ ಕಾರನ್ನು ನಿಲ್ಲಿಸಿದೆ, ಸೀದಾ ಹೋಟೆಲ್ ಶಾರದಾ ಎಂಬಲ್ಲಿಗೆ ಹೋಗಿ ಕುಂತು ಕೊಂಡೆ, ಹೋಟೆಲ್ ಸರ್ವರ್‌ನತ್ತಿರ ಅಲ್ಲಿರುವ ತಿಂಡಿಗಳ ವಿವರವನ್ನು ತಿಳುಕೊಂಡು, ಒಳ್ಳೆದೊಂದು ದೋಸೆ ಕೊಡಪ್ಪ ಎಂದೇಳಿ ಕಾಯುತ್ತ ಕುಂತು ಕೊಂಡೆ. ಒಳಗೆ ಹೋದ ಸರ್ವರ್ ಎಷ್ಟೊತ್ತಾದರು ಬರಲೇ ಇಲ್ಲ,  ನನಗೆ ಬರಬೇಕಿರುವ ದೋಸೆಗೋಸ್ಕರ ಕಾಯ್‌ತಾ ಕೂತಿದ್ದೆ, ಅಷ್ಟೊತ್ತಿಗಾಗಲೆ ನಮ್ಮೂರಿನ ವಾಡೆ ಮನೆಯ ನಾಗನೆಂಬೋನು ಬಂದು, ನನ್ನ ಪಕ್ಕಕ್ಕೆ ಕುಂತುಕೊೊಡು. ಯಣ ಯಾಕಣ ಇಂಗ್ ಬಡವಾಗಿದ್ದೀಯ? ಅಂದ, ಅವನ ಕೆನ್ನೆಗಳ ಮೇಲಿದ್ದ ಕಣ್ಣುಗಳು ರೋಡು ಪಕ್ಕದಲ್ಲಿನ ಗುಂಡಿಗಳಂತೆ ಒಳಕ್ಕೋಗಿದ್ದವು. ತಲೆ ಅಲ್ಲಲ್ಲಿ ಬಿಳಿ ಪುಕ್ಕದಂತೆ ತರಕಲಾಗಿ ಬೆಳ್ಳಗಾಗಿತ್ತು, ನನಗೊಂದು ಗಳಿಗೆ ಇವನ್ಯಾರಪ್ಪ ಅಂಬೊ ತಬ್ಬಿಬ್ಬಿನಲ್ಲಿ. ಅವನನ್ನೆ ಬಿಟ್ಟ ಕಣ್ಣು ಬಿಟ್ಟಂತೆ ದಿಟ್ಟಿಸಿ ನೋಡಿದೆ. ಯಾಕಣ ನನ್ ಗುರುತ್ ಸಿಗಲಿಲ್ಲವೆ? ನಾನ್ ಕಣಣ ವಾಡೆ ಮನೆ ನಾಗ ಅಂದ, ತಟಕ್ಕನೆ ನನ್ನ ಮನಸ್ಸಿಗೆ ಅರಿವಾಯಿತು, ನಾಗ ಚೆನ್ನಾಗಿದ್ದೀಯೇನೊ ಅಂದೆ ಕಕ್ಕುಲಾತಿಯಿಂದ. ಏನ್ ಚಂದ್‌ವೊ ಏನ್ ಚಾರ್‌ವೊ? ನಿಮ್ಮಂಗೆ ನೆರಳು ಮರೇಲಿ ನಾವು ಬದುಕೋರಲ್ಲ, ಸುಖುವಾಗಿ ಉಣ್ಣೋರಲ್ಲ, ಬೆಳಗೆದ್ರೆ ಬಿಸಿಲು ಬ್ಯಾಗೆ ಅನ್ನದಂಗೆ ಕೂಲಿ ಕೆರೀಬೇಕು  ಹಿಟ್ಟುಣ್ಣಬೇಕು. ತಗಿಯಣ ನನ್ ಚೆಂದಾನ ಏನಂತ ಕೇಳ್‌ತ್ತಿಯಾ? ಎಂದು ಮುಖ ಕಿವುಚಿಕೊಂಡು ಹೇಳ್‌ದ. ನನಗು ಅವನನ್ನು ನೋಡಿ ಪೆಚ್ಚೆನಿಸಿತು, ಎಂಗೊ ಮನೇಲೆಲ್ಲಾ ಚೆನ್ನಾಗವರೇನಪ್ಪ ಅಂದೆ. ಊನಣ ಎಲ್ಲಾ ಚೆನ್ನಾಗವರೆ ಅಂದವನು ಬಾಯಿಗೆ ಬಿಡುವು ಕೊಡದೆ. ನಿಮ್ಮನೇಲಿ  ಗಂಗಮ್ಮಜ್ಜಿ ಎಂಗ್ಯೆತಣ? ಅಂದ ಅವನು ತಟ್ಟೆಂದು ಕೇಳಿದ ಪ್ರಶ್ನೆಗೆ. ಯಾವುದನ್ನು ಸಲೀಸಾಗಿ ಹೇಳಲಾಗಲಿಲ್ಲ. ಯಾಕೆಂದರೆ ನನ್ನ ಮಾತಿಗೆ ಅವನು ಅವಕಾಶ ಕೊಡದಂಗೆ, ಕೂಡಲೆ ನೀವೆಂಗಾ ಇರ‍್ರಪ್ಪ, ಗಂಗಮ್ಮಜ್ಜೀನ್ ಮಾತ್ರ ಸೆಂದಾಕ್ ನೋಡ್‌ಕಳಪ್ಪ. ನಿಮಗೆಲ್ಲಾ ಹಿಟ್ಟು-ಬಟ್ಟೆ ಹೊಂಚಾಕಾಗಿ, ನೀವು ಈ ಮಟ್ಟಕ್ಕೆ ಬರಾಕಾಗಿ, ಆವಮ್ಮ ಬಾಳಾ ಕಷ್ಟ ಬಿದ್ದೈತೆ ಕಣ್ರಪ್ಪ. ಅವಮ್ಮನೆ ಇಲ್ಲದಿದ್ರೆ ನೀವು ಇಷ್ಟು ಮಾತ್ರಕ್ಕೆ ಬರ್‌ತಿರಲಿಲ್ಲ ಕಣಪ್ಪ, ಅಂತ ಅವನ ಜೇಬಲ್ಲಿದ್ದ ಮೋಟು ಬೀಡಿಯೊಂದನ್ನ ತಡಕಿ ತಡಕಿ ತಗದ, ಪಕ್ಕದ ಟೇಬಲ್ಲಿನವನ ಕಡೆಗೆ ತಿರುಗಿ. ಯಣ ಬೆಂಕಿ ಪಟ್ನ ಇದ್ರೆ ಕೊಡು ಅಂದ, ಇರೊ ನಾಗ ತಿಂಡಿ ತಿನ್ನಿವಂತೆ,ಬೀಡಿ ಆಮೇಲ್ ಸೇದೀವಿ ಅಂದೆ ಉನ್ನಾರವಾಗಿ. ಬ್ಯಾಡ್  ಕಣಣ  ಮನೆಯಾಗೆ ಸಪ್ಪೆಸರು, ಬಿಸಿ ಮುದ್ದೆ ಉಂಡು ಬಂದಿದ್ದೀನಿ. ನನಗೆ ತಿಂಡಿ ಬ್ಯಾಡ ಕಣಪ್ಪ, ಒಂದ್ ಲೋಟ ಟೀ ಕುಡಿಯಾನ ಅಂತ ಒಳಕ್ ಬಂದೆ ನಿರ್ವಿಕಾರವಾಗಿ  ಮಾತಾಡದ. ಅವನ ಆ ಮಾತಿಗೆ ನಾನು ಏನೊಂದು ಉತ್ತರಿಸಲಿಲ್ಲ, ಎಂಗೋ ನೀನ್ ಸಿಕ್ಕಿದ್ದಕ್ಕೆ ಬಾಳ ಖುಷಿಯಾತು ಅಂದ, ಯಾಕಪ್ಪ ನನ್ ಬಗ್ಗೆ ನಿನಗೆ ಅಂತಾ ಖುಷಿ ಮನಸ್ಸು ಉಬ್ಬಿಸಿಕೊಂಡು ಕೇಳಿದೆ, ಇನ್ನೇನಪ್ಪ ಎಲ್ಲೊ ಹೋಗಿ ಆ ಮಾಯಾ ನಗರದಲ್ಲಿ ಸೇರ್‌ಕಂಡಿದ್ದಿರಾ. ನಿಮ್ಮಂತವರ ಮುಖಾನ  ನಾವು ವರ್ಷಾನುಗಟ್ಲೆ ನೋಡಾಕಾಗಲ್ಲ. ಯಾಕಂದ್ರೆ ನಮ್ಮವರು, ತಮ್ಮವರು, ಕುಲೊಸ್ತರು, ಅಣ್ಣತಮ್ಮಂದ್ರು, ಹಬ್ಬ ಹರಿದಿನಗಳು, ಅನ್ನುವಂತ ಕಕ್ಕುಲಾತಿ ಅಂಬೋದು. ನಮ್ಮನ್ನ ಬಾದ್‌ಸಂಗೆ ನಿಮ್ಮುನ್ನ ಬಾದ್‌ಸಲ್ಲ ಕಣಣ್ಣ, ಅದಿಕ್ಕೆ ನಾನು ಈ ಮಾತೇಳ್‌ದೆ. ನೀವೆಲ್ಲ ನೆರಳು ಮರೇಲಿರೋರು ಸುಖಪುತ್ರರು, ನಿಮಗೆ ದುಡ್ಡೊಂದಿದ್ರೆ ಸಾಕು,  ನಿಮ್ಮನ್ನ ಯಾವುದು ಬಾದ್‌ಸಲ್ಲ ಅಂದ. ಇಷ್ಟು ಮಾತುಗಳನ್ನ ನನಗೆ ಅವಕಾಶವಿಲ್ಲದಂಗೆ. ಅವನೊಬ್ಬನೆ ಲೇವಡಿ ಮಾಡುತ್ತ ಮಾತಾಡ್ ಬುಟ್ಟ  . ಮುಖ ಕಿವುಚಿಕೊಂಡಿತ್ತು. ನಾನು ಏನೊಂದು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅವನ ಹರಿತವಾದ ಮಾತುಗಳಿಗಾಗಿ, ನನ್ನ ಮುಖವು ನನಗರಿವಿಲ್ಲದಂಗೆ ಕಳಾ ಹೀನವಾಗಿತ್ತು. ಮುಂದಿದ್ದ ತಟ್ಟೆಯೊಳಗಿನ ದೋಸೆಯು ಕೂಡ, ಕಾವು ಕಳೆದುಕೊಂಡು ತಣ್ಣಗೆ ಮೈ ಚಾಚಿಕೊಂಡಿತ್ತು.ಅವನು ಸುತಾರಾಂ ನನಗೆ ತಿಂಡಿ ಬ್ಯಾಡವೇ ಬ್ಯಾಡಂದ, ನಾನು ದೋಸೆಯ ಚೂರನ್ನ ಮುರಿದು ಬಾಯಿಗಿಟ್ಟು ಕೊಂಡಾಗ. ಅದರ ರುಚಿಯೆ ಸರಿಯಾಗ್ಲಿಲ್ಲವೊ? ನನ್ ಬಾಯೆ ರುಚಿಕಳಕಂತೊ? ನಾಗನ  ಬಾಯಿಂದ ಬಂದ ಎಲ್ಲ ಮಾತುಗಳು, ನನ್ನ ಮನಸ್ಸನ್ನ ಅಪ್ಪಟವಾಗಿ ಕುಕ್ಕಿದವು.   ಅದು ಯಾಕೆಂದರೆ ಊರಲ್ಲಿ ನಮ್ಮ ದೊಡ್ಡಣ್ಣಯ್ಯನ ಹೊಲವೊಂದನ್ನ, ಈ ನಾಕೈದು ವರ್ಷದಿಂದ ಇದೇ ನಾಗನೆ ಕೋರಿಗೆ ಮಾಡುತ್ತಿದ್ದ. ಮೈಸೂರಿನಲ್ಲಿದ್ದ ನಮ್ಮಣ್ಣ, ಸರಿಯಾಗಿ ಬೆಳೆಯ ಖರ್ಚು ಕೊಡಲಾರದೆ, ಕಿತಾಪತಿ ಮಾಡ್‌ತ್ತಿದ್‌ನಂತೆ. ನೀನಿಷ್ಟೇನೆ ಬೆಳೆಯೋದು? ನಮಗಿಷ್ಟೇನೆ ಕೊಡೊದು? ಯಾಕೋ ಈಗೀಗ ಗಾಂಚಾಲಿ ಜಾಸ್ತಿ ಮಾಡ್‌ತ್ತೀಯ? ಎಂದು ಸಿಕ್ಕಾಗಲೆಲ್ಲ, ಏನಾದ್ರು ಒಂದನ್ನು ಕೊಂಕಿಸಿಕೊಂಡು ಬೈಯ್ಯುತ್ತಿರುತ್ತಾನಂತೆ. ನಾಗನಿಗು ಕೇಳಾತಂಕ ಕೇಳಿ ಬೇಜಾರಾಗಿತ್ತೆಂದು, ನಮ್ಮೂರಿನ ಜನ ಅಂಗು ಇಂಗು, ಇವನ ಮತ್ತು ನಮ್ಮಣ್ಣಯ್ಯನ ವಿಚಾರವನ್ನ ಹೇಳ್‌ತ್ತಾನೆ ಇದ್ರು. ಈ ಸಲವಂತು ನಾಗ ಮುಂಗಾರಿಗೂ ಮುಂಚೆಯೆ ಕಲ್ಲು ಮುಳ್ಳು ಹಾಯಿದು. ಹಸನು ಮಾಡಿಕೊಂಡಿದ್ದ ಹೊಲವನ್ನ, ನಮ್ಮಣ್ಣ ನಿಷ್ಟುರವಾಗಿ ಬಿಡಿಸಿ, ಬೇರೆಯವರಿಗೆ ಕೊಡಿಸಿದನೆಂದು, ನಾಗನಿಗೆ ಬಾಳ ಸಂಕಟವಾಗಿತ್ತು. ಇಂತದ್ದೊಂದು ವಿಷಯವನ್ನ, ನಮ್ಮೂರಿನ ಮನೆ ಪಕ್ಕದ ಎಂಕಟೇಶಿ ಎಂಬೋನು ಫೋನು ಮಾಡಿ. ಯಣ ನಿಮ್ಮಣ್ಣಯ್ಯ ವಾಡೆ ನಾಗನಿಗೆ. ಬಾರಿ ಅನ್ಯಾಯ ಮಾಡ್‌ಬುಟ್ಟ ಕಣಣ. ಅಂತ ಊರಲ್ಲಿ ನಡೆದ ವಿದ್ಯಮಾನವನ್ನೆಲ್ಲ. ಈಗ ಆರು ತಿಂಗಳ ಮುಂಚೆಯೆ ಹೇಳಿದ್ದು ನೆನಪಾಯಿತು. ಜೊತೆಗೆ ಇವತ್ತು ನನ್ನನ್ನ ಚುಚ್ಚಿ ಮಾತಾಡುತ್ತಿರುವ. ಮರ್ಮದ ಬಗ್ಗೆಯು ಅರಿವಾಗತೊಡಗಿತು. ಯಣ ಟೀ ಹೇಳಾನೊ? ಕಾಫಿ ಹೇಳಾನೊ? ಇನ್ನೊಂದು ಸಲ ವಾಡೆನಾಗನ ದ್ವನಿಗೆ, ನನ್ನ ತಟ್ಟೇಲಿದ್ದ ದೋಸೆ ಖಾಲಿಯಾಗಿ, ಕೊನೆ ಚೂರೊಂದು ಉಳುಕಂಡಿದ್ದು. ನನ್ನ ನಿಗಕ್ಕೆ ಬಂತು. ನಾನು ಅವನ ಪ್ರಶ್ನೆಗೆ ಉತ್ರ ಹೇಳಾಕ್ ಮುಂಚೆಯೆ. ಏ ರಾಜ ಒಳ್ಳೆವೆರೆಡು ಗಟ್ಟಿ ಟೀ ತಗಂಬಾರಲ, ಅನುತ ಕೂಗಿ ಅವನೆ ಆಡ್ರು ಮಾಡ್ ಬುಟ್ಟ. ನಾನೀಗ ಊರಿಗೆ ಬರುತ್ತಿರುವ ವಿಚಾರವನ್ನಾಗಲಿ. ಇವನ ಮತ್ತು ನಮ್ಮಣ್ಣಯ್ಯನ ಮದ್ಯೆ ನಡೆದಿರುವ ವಿಚಾರವನ್ನಾಗಲಿ. ಕೆದಕಲು ತಯಾರಿಲ್ಲದವನಾದೆ. ಕಳ್ಳನ ಮನಸ್ಸು ಉಳ್ಳುಳ್ಳಗೆ ಎಂಬಂತೆ, ಮತ್ತೆ ಮಾತಿಗೆ ಮಾತಿನ ಚರ್ಚೆ ಯಾಕೆಂದು. ಇಬ್ಬರು ಮೌನವಾಗಿ ಟೀ ಕುಡುದ್‌ವಿ. ಕೊನೆಗೆ ನನಗಿಂತ ಮುಂಚೆ ಎದ್ದೋಗಿ, ದೋಸೆಯ ಬಿಲ್ಲನ್ನು ಸೇರಿಸಿ, ಅವನೆ ದುಡ್ಡು ಕೊಟ್ಟು ಬಂದ. ಯಾಕೊ ನಾನ್ ಕೊಡುತ್ತಿರ್‌ಲಿಲ್ಲವೇನೊ, ನಿನ್ ಋಣ ನನಗ್ಯಾಕಪ್ಪ ಅಂದೆ. ಓ ಬಾರಪ್ಪ ಇದೇನ್ ಋಣ? ನೀವು ಬೆಂಗಳೂರಿನ್ ಜನವೆ ಇಂಗೆ, ಎಂಜಲು ಕೈಯ್ಯಲ್ಲಿ ಕಾಗೆ ಓಡುಸೊ ಜನ, ಎಂದು ಮುಖಕ್ಕೊಡದಂತೆ ಮಾತಾಡ್‌ಬುಟ್ಟ. ಅಲ್ಲು ಮೌನವಾಗಿದ್ದೆ, ಸರಿ ಊರಾಕ್ ಬರ್‌ತ್ತೀಯ ಕಾರ್ ತಂದಿದ್ದೀಯ? ಎಂದು ಮತ್ತೊಮ್ಮೆ ಮಾತು, ಕೆದಕಿದ ಹೌದೆಂದು ಮೌನವಾಗಿ ಗೋಣಾಡಿಸಿದೆ, ಸರಿ ಇರು ನಾನು ಬರ್‌ತ್ತೀನಿ, ಡಿಬ್ಬಯ್ಯನ ಅಂಗಡೀಲಿ ಎರಡು ಗೊಬ್ಬರದ ಚೀಲ ಮಡಗಿದ್ದೀನಿ, ತಗಂಡೋಗಾನ ಅನುತ, ಬಿರ ಬಿರನೆ ಕೆಳಗಡೆ, ಬೀದಿಯ ಕಡೆಗೆ ಇಳಿದು ಹೋದ. ನಾನು ಒಂದೆರೆಡೆಜ್ಜೆ ಮುಂದೆಯಿದ್ದ, ಕೆಂಕೇಸರಿ ಮರದ ಕೆಳಗೆ, ವಿಶಾಲವಾದ ನೆರಳಲ್ಲಿ ನಿಂತುಕೊಂಡು. ಜೇಬಲ್ಲಿದ್ದ ಸಿಗರೇಟೊಂದನ್ನ ಹಚ್ಚಿದೆ. ನಾನು ಓದಿದ, ಹಳೆಯ ಹೈಸ್ಕೂಲೊಂದರ ಗಾಯಗೊಂಡ  ಗೋಡೆಗಳು, ಪಕ್ಕದಲ್ಲೆ ಹೊಸ ಕಟ್ಟಡಗಳ ಕೊಠಡಿಗಳು. ಅಪ್ಪನಿಗೆ ನಾನು ಐಸ್ಕೂಲು ಸೇರಲು ಇಷ್ಟವಿರಲಿಲ್ಲ, ಇದ್ದೂರಲ್ಲಿ ಓದಿದ್ದು ಸಾಕು ಬಿಡೊ, ಬೇರೂರಿನ ಇಸ್ಕೂಲಿನಲ್ಲಿ ಓದಿ, ಬೂದಿ ಉಯ್ಯಾದೇನು ಬ್ಯಾಡ ಬಿಡೊ?ಸುಮ್ಮನತ್ತ ಮನೇಲಿರೊ ಕುರಿಗಳನ್ನ ಮೇಯಿಸ್ ಬಾರಲ, ಅನುತ ಬೆಳಗ ಸಂಜೆ ಸಿಕ್ಕಾ ಪಟ್ಟೆ ತಕರಾರು ಮಾಡುತ್ತಿದ್ದ, ಓದ್ಲಿ ಬಿಡು ಓದಾ ಹುಡುಗರಿಗ್ಯಾಕೆ ಬಾದೆ ಇಕ್‌ತ್ತೀಯಾ? ನಿನ್ ಕುರಿ ಬೇಕಾದ್ರೆ ನಾನ್ ಮೇಸ್‌ತ್ತೀನಿ. ನಾವಂತು ಓದ್‌ಲಿಲ್ಲ, ಅವರಾದ್ರು ಓದ್ಲಿ ಅಂತೇಳಿದ ಅವ್ವ. ಅಪ್ಪ ನೆಚ್ಚಿಕೊಂಡಿದ್ದ ಹತ್ತು ಹದಿನೈದು ಕುರಿಗಳನ್ನ  ಹೊಡುಕಂಡು. ಹೊಲಗಳ ಬದುಗಳಲ್ಲಿ ಮೇಯಿಸಿಕೊಂಡು ಬಂದು, ಮನೇಲಿ ಕಸ-ಮುಸುರೆ, ಹಿಟ್ಟು ಸಾರು, ಅಂತ ಸವೆದು-ಸವೆದು ಸೋತವಳು. ಅಪ್ಪ ದಿನವು ಬೆಳಗ್ಗೆ ಎದ್ದೋಗಿ, ಮರಿ ಮೇವು ತರೋದೊಂದು ಬಿಟ್ರೆ. ಇನ್ನು ಯಾವ ಇಳುವು ಬಳುವೆನ್ನುವ, ಬದುಕನ್ನ ಸೋಕಿಸಿಕೊಳ್ಳದಾದ. ಅಮ್ಮ ಹೊತ್ತೊತ್ತಿಗೆ ಮಾಡಿದ್ದು ಉಂಡುಂಡು, ಊರಾಚೆಯ ವಂಗೆ ತೋಪಿನೊಳಗೆ, ಇಸ್ಪಿಟಾಟ ಆಡಿ ಬರುತ್ತಿದ್ದ. ಅಂಗೆ ಸುಮ್ಮನೆ ಬರುತ್ತಿರಲಿಲ್ಲ. ಕೈಲಿದ್ದ ಪುಡಿಗಾಸನ್ನೆಲ್ಲ ಕಳುಕೊಂಡು ಬರುತ್ತಿದ್ದ, ಮನೆಗೆ ಬಂದವನು ತೆಪ್ಪಗೆ ಸುಮ್ಮನಿರಾಕಾಗ್‌ದೆ. ನಾನೆ ಬದ್ದನೆಂದು, ನಾನೆ ಈಮನೆಗೆ ಗನಂದಾರಿ ಯಜಮಾನನೆಂದು. ನೀವೇ ಅಪರಾದಿಗಳೆಂದು, ಮನೇಲಿ ಅಮ್ಮ ಮತ್ತೆ ನಮ್ಮಗಳ ಮ್ಯಾಲೆಲ್ಲ ಕೂಗಾಡ್‌ತಾ. ಮೈಮ್ಯಾಲೆ ದೇವ್ರು ಬಂದೋನಂಗೆ  ಬಾದೆ ಬೀಳ್‌ತಿದ್ದ. ಇಂತ ತಾಳ್ಮೆ ಇಲ್ಲದ ಗಂಡನ  ಕೂಟೆ. ಕಾಲವರಣೆ ಮಾಡಿದ ಅಮ್ಮನ. ಮತ್ತು ನಮ್ಮ ಮುಂದೆ ಅಪ್ಪ ಅಲ್ಲಿಗೆ ಸುಮ್ಮನಾಗದೆ. ಅಮ್ಮ ಬಾದೆ ಬಿದ್ದು ಮೇಯಿಸುತ್ತಿದ್ದ. ಒಂದೊಂದೆ ಕುರಿಗಳನ್ನು ಕದ್ದು ಮುಚ್ಚಿ ಮಾರಾಟಕ್ಕೆ ನಿಂತು ಬುಟ್ಟ.ಅಷ್ಟಾದರು ಅಮ್ಮ ಕೂಲಿನಾಲಿ ಮಾಡಿ ನಮ್ಮನ್ನು ಚೆನ್ನಾಗಿ ಓದಿಸಿದ್ದಳು. ಅವಳು ಆವತ್ತು ಓದಿಸಿದ ಫಲವೆ, ಅಣ್ಣ ಮೈಸೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದಾನೆ.ಅಲ್ಲೇ ಮನೆ ಗಿನೆ ಕಟ್ಟಿಸಿಕೊಂಡು ನನಗಿಂತ ಚೆನ್ನಾಗಿದ್ದಾನೆ. ನಾನು ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪ್ರಾದ್ಯಾಪಕನಾದೆ. ಇನ್ನೇನು ಬೇಕು ನನಗೆ ಒಳ್ಳೆ ಹೆಂಡತಿ ಮಕ್ಕಳು ಮನೆಯು ಕಟ್ಟಿಸಿದೆ ಮಗ ಈ ವರ್ಷದ ಸೆಮ್‌ಗಳನ್ನೆಲ್ಲ  ಮುಗಿಸಿ, ಒಳ್ಳೆ ಕಂಪನಿಯಲ್ಲಿ ಕೆಲಸಕ್ಕೋಗುತ್ತಿದ್ದಾನೆ.ಮಗಳು ಈಗ ಪಿ ಯು ಸಿ ಗೆಂದು ಕಾಲೇಜಿಗೆ ಸೇರಿಕೊಂಡಳು, ಸದ್ಯಕ್ಕೆ ಯಾವುದೆ ಸಮಸ್ಯೆಯಿಲ್ಲ.ಆದರೆ ನನ್ನ ಹೃದಯಕ್ಕಂಟಿರುವಂತ ನೋವು, ಆ ನೋವನ್ನ ಯಾರು ಬಗೆ ಹರಿಸಲಾರರು. ಅದು ನನಗ್ ನಾನೆ ಪರಿಹರಸ್ಕಳ್‌ಬೇಕು, ನನ್ನನ್ನ ಹೆತ್ತು ಹೊತ್ತು, ಈ ಭೂಮಿಯೆಂಬ ತತ್ವಗಳ ಮ್ಯಾಲೆ, ಒಬ್ಬ ಮನುಷ್ಯನಾಗುವ ತನಕ ಹಪ-ಹಪಿಸಿದ್ದ ಅಮ್ಮನನ್ನು. ಬೆಂಗಳೂರಲ್ಲೆ ನನ್ನ ಮನೆಗೆ ಕರೆದುಕೊಂಡೋಗಿ ಹತ್ತು ವರ್ಷಗಳಾದವು. ಅಂಗೆ ಕರೆದುಕೊಂಡು  ಹೋದ, ಎರಡು ವರ್ಷದ ತನಕ, ಅಮ್ಮ ಮತ್ತು ಹೆಂಡತಿ ಚೆನ್ನಾಗಿದ್ದವರು. ಆಮೇಲಾಮೇಲೆ ಸಣ್ಣ ಪುಟ್ಟದ್ದಕ್ಕೆಲ್ಲಾ, ದೊಡ್ಡ ಅಸಮಾದಾನಗಳ ಗೋಡೆ ಕಟ್ಟಿಕೊಳ್ಳಲಾರಂಬಿಸಿದ್ದರು, ನಾನು ಇಬ್ಬರ ಮಾತುಗಳಿಗು ಕಿವಿ ಕೊಡದಂಗೆ, ಯಾರ ವಿಚಾರವನ್ನು ಅತಿ ಮಾಡ್‌ಕಳದಂಗೆ ಕಾಲವರಣೆ ಮಾಡುತ್ತಿದ್ದವನು. ಇಷ್ಟುದಿನ ಯಾರಿಗು ಹೇಳ್‌ದಂಗೆ ಸುಮ್ಮನಿದ್ದೆ, ಯಾಕೆಂದರೆ ಇತ್ತೀಚೆಗಂತು ನಮ್ಮ ಅಮ್ಮನನ್ನು ಮನೆಯ ಸದಸ್ಯರು ವಿಪರೀತ ತಿರಸ್ಕರಿಸುತ್ತಿದ್ದರು. ಅಮ್ಮ ಏನೊಂದು ಮಾತನಾಡದೆ.ಮೌನವಾಗಿ ನುಂಗುತ್ತಿದ್ದಳು. ಇಂತದ್ದೊಂದು ನೋವನ್ನ ನುಂಗಿಕೊಂಡು ಬಂದಿರುವ ನನ್ನ ಮುಂದೆ. ಈ ನಾಗನ ಮುಲಾಜುಗಳಾಚಿಗೆನ ಮಾತುಗಳನ್ನ ಕೇಳುತ್ತಿದ್ದರೆ.ನಾನೆ ಮಹಾ ದೊಡ್ಡ ಅಪರಾಧಿಯೆನ್ನುವಂತಾಯಿತು.ನನ್ನ ಅಮ್ಮ ತಬ್ಬಲಿಯಾಗುವ

Read Post »

ಅಂಕಣ ಸಂಗಾತಿ, ನೆನಪಿನ ದೋಣಿಯಲಿ

ಅಂಕಣ ಸಂಗಾತಿ ನೆನಪಿನದೋಣಿಯಲಿ ವರ್ತನೆಯವರು ಪ್ರಲಾಪಿಸಬೇಡ ನೆನೆದು ಹಪಹಪಿಸಿ ಕಳೆದುಹೋದದ್ದನ್ನ  ಕಾಲ ಏಕಾಏಕಿ ಬಂದು ಮೇದದ್ದನ್ನ  ನೆನೆ ಇದನು ಮರೆಯದೆ  ಲುಕ್ಸಾನಿಗೆದೆ ಮರುಗದೆ  ಕಳೆದುಕೊಂಡದ್ದು ನಿನ್ನೊಡನೆ ಇದ್ದಷ್ಟು ದಿನ ಹಿಗ್ಗ ನೀಡಿದ್ದನ್ನ  ಕೆ ಎಸ್ ನಿಸಾರ್ ಅಹ್ಮದ್  ಅಂದು ವಾಯುವಿಹಾರ ಮುಗಿಸಿ ಬಂದ ರವೀಶ್ “ನೋಡು ದಿನಾ ಹಾಲಿನ ಪ್ಯಾಕೆಟ್ ತೊಗೋತಿದ್ನಲ್ಲ ಪಾಪ ಆ  ವ್ಯಕ್ತಿ ಕರೋನಾ ಬಂದು ಹೋಗಿ ಬಿಟ್ನಂತೆ ಪಾಪ” ಎಂದು ಪೇಚಾಡಿಕೊಂಡರು. ಯಾಕೋ ನನಗೆ ಥಟ್ಟಂತ ನನ್ನ ಬಾಲ್ಯ ನೆನಪಾಯಿತು. ಅಂದು ನನ್ನ ಹುಟ್ಟಿದ ಹಬ್ಬ. ಅಂದೇ ಬೆಳಿಗ್ಗೆ ನಮ್ಮ  ಮನೆಗೆ ಮೊಸರು ವರ್ತನೆಗೆ ಹಾಕುತ್ತಿದ್ದವಳ ಮರಣದ ಸುದ್ದಿಯೂ ಬಂತು.ಅಮ್ಮ ಹುಟ್ಟುಹಬ್ಬವನ್ನೇ ಮರುದಿನಕ್ಕೆ ಪೋಸ್ಟ್ ಪೋನ್ ಮಾಡಿ ಅವಳ ಮರಣದ ಶೋಕಾಚರಣೆ ಆಚರಿಸಿದರು. ನನ್ನ ಮುಖ ಕೊಂಚ ಗಡಿಗೆ ಗಾತ್ರ ಆಗಿದ್ದು ಸುಳ್ಳಲ್ಲ. ವರ್ತನೆಯೆಂದರೆ ನಿಘಂಟಿನಲ್ಲಿ ನಡವಳಿಕೆ ರೂಢಿ ಎಂದು ಅರ್ಥ . ಆದರೆ ಜನಸಾಮಾನ್ಯರ ಭಾಷೆಯಲ್ಲಿ ದಿನವೂ ಅಥವಾ ನಿಯಮಿತವಾಗಿ ವಸ್ತುಗಳನ್ನು ಸರಬರಾಜು ಮಾಡಿ ತಿಂಗಳಿಗೊಮ್ಮೆ ಹಣ ಪಡೆಯುವವರಿಗೆ ವರ್ತನೆಯವರು ಎಂದು ಕರೆಯುವ ಅಭ್ಯಾಸ. ಪ್ರತಿಯೊಂದಕ್ಕೂ ಅಂಗಡಿಯನ್ನು ಅವಲಂಬಿಸದ ಕಾಲ ಅದು.  ಮನೆಯ ಬಾಗಿಲಿಗೆ ಹಾಲು ಮೊಸರು ಹೂವು ತರಕಾರಿ ಎಲ್ಲವನ್ನೂ ಒದಗಿಸುತ್ತಿದ್ದರು.  ಒಮ್ಮೊಮ್ಮೆ ಈಗಿನ ಆನ್ ಲೈನ್ ಸೇವೆಗಳನ್ನು ನೋಡಿದಾಗ ಅದೇ ನೆನಪಾಗುತ್ತದೆ .ಆದರೆ ಆಗಿನ ಆತ್ಮೀಯತೆ ಪರಿಚಯದ ಭಾವ ಇಂದಿನ ತಲುಪಿಸುವ ವ್ಯವಸ್ಥೆಗಳಿಗೆಲ್ಲಿ ಬರಬೇಕು?  ಹಾಲಿನ ಗಡಿಗೆಗಳನ್ನು ಬಿದಿರಿನ ಬುಟ್ಟಿಯಲ್ಲಿ ಇಟ್ಟುಕೊಂಡು ಬರುತ್ತಿದ್ದ ಹಾಲಿನ ಮಹದೇವಮ್ಮ ನನ್ನ ನೆನಪಿನಿಂದ ಏಕೋ ಇನ್ನೂ ಮರೆಯಾಗಿಯೇ ಇಲ್ಲ .ಹಸಿರು ಅಥವಾ ಕೆಂಪು ಚೌಕಳಿಯ ಹತ್ತಿ ಸೀರೆ ಎಲ್ಲದಕ್ಕೂ ಬಿಳಿ ರವಿಕೆಯನ್ನೇ ತೊಟ್ಟು ಹಣೆತುಂಬ ಕಾಸಗಲ ಕುಂಕುಮ ಇಟ್ಟ ನಲ್ವತ್ತೈದು ಐವತ್ತರ ಆಸುಪಾಸಿನ ಮಹಿಳೆ.  ಸಾಸಿವೆ ಎಳ್ಳು ಬೆರೆಸಿದಂಥ ಬಣ್ಣದ ನೆರೆತಲೆ. ಕಾಡು ಹೂವಾದರೂ ಸರಿ ಹೂ ಮುಡಿಯದೆ ಇರುತ್ತಿರಲಿಲ್ಲ. ಕೈತುಂಬಾ ಜರುಗಲು ಸಾಧ್ಯವಿರದಷ್ಟು ಗುತ್ತನಾಗಿ ಹಸಿರುಬಳೆ ತೊಡುತ್ತಿದ್ದಳು .ತಪ್ಪದೆ ರೇಡಿಯೋದ 7 ಮೂವತ್ತೈದರ ಕನ್ನಡ ವಾರ್ತೆಯ ಸಮಯಕ್ಕೆ ಹಾಲು ತರುತ್ತಿದ್ದ ಅವಳ ಸಮಯಪಾಲನೆ ನಿಜಕ್ಕೂ ಆಶ್ಚರ್ಯ . ಆಗ ಲೀಟರ್ ಕಾಲ ಅಲ್ಲ ಪಾವು ಸೊಲಿಗೆ ಗಳಲ್ಲಿ ಅಳತೆ.  ಹೆಚ್ಚು ಹಾಲು ತೆಗೆದುಕೊಂಡ ದಿನ ಒಂಟಿಕೊಪ್ಪಲ್ ಕ್ಯಾಲೆಂಡರ್ನಲ್ಲಿ + ಚಿಹ್ನೆ ಹಾಕಿ ಎಷ್ಟು ಹೆಚ್ಚು ಎಂದು ಬರೆಯುವ ಕೆಲಸ ಹಾಗೆಯೇ ತೆಗೆದುಕೊಳ್ಳದ ,ಕಡಿಮೆ ತೆಗೆದುಕೊಂಡಾಗ _ ಚಿಹ್ನೆ ಹಾಕಿ ಗುರುತು ಮಾಡುತ್ತಿದ್ದುದು . ತಿಂಗಳ ಕೊನೆಯಲ್ಲಿ ಅವಳು ಹೇಳಿದ ಲೆಕ್ಕ ನಮ್ಮದಕ್ಕೆ ತಾಳೆಯಾಗುತ್ತಿತ್ತು ಅಷ್ಟೊಂದು ಮನೆಗಳ ಲೆಕ್ಕಾಚಾರ ಬಾಯಿಯಲ್ಲೇ ನೆನಪಿಡುವ ಅವಳ ಬುದ್ದಿವಂತಿಕೆ ನಿಜಕ್ಕೂ ಶ್ಲಾಘನೀಯವೇ.  ಮಕ್ಕಳ ಮದುವೆ ಮಾಡಿದಾಗಲೆಲ್ಲ ನವವಧುವರರನ್ನು ಕರೆದುಕೊಂಡು ಬಂದು ಆಶೀರ್ವಾದ ಕೊಡಿಸುತ್ತಿದ್ದಳು . ವಾರದಲ್ಲಿ ಒಂದೋ ಎರಡೋ ದಿನ ಹನ್ನೊಂದು ಗಂಟೆಗೆ ವಾಪಸ್ಸು ಹೋಗುವಾಗ ಅಮ್ಮ ಕೊಟ್ಟ ತಿಂಡಿ/ಊಟವನ್ನು ಮಾಡಿ ಹೋಗುತ್ತಿದ್ದಳು. ಬೆಳಿಗ್ಗೆ ಬಂದಾಗ ಒಮ್ಮೊಮ್ಮೆ ಕೇಳಿ ಕಾಫಿ ಕುಡಿಯುತ್ತಿದ್ದಳು. ನಾನು ದೊಡ್ಡವಳಾದಾಗ ಕೊಬ್ಬರಿ ತುಪ್ಪ ಆರೈಕೆಗೆಂದು ಅಕ್ಕರೆಯಿಂದ ತಂದುಕೊಟ್ಟದ್ದು ಇನ್ನೂ ಹಸಿರು . ನನ್ನ ಕಡೆಯ ತಂಗಿಗೆ 1ಪುಟ್ಟ ಗಿಂಡಿಯ ತುಂಬಾ ಹಾಲು ಕೊಡುತ್ತಿದ್ದಳು; ಅದಕ್ಕೆ ಲೆಕ್ಕವಿಡುತ್ತಿರಲಿಲ್ಲ. ಮೊಸರಿನ ಗಂಗಮ್ಮ ಇವಳಿಗಿಂತ ಭಿನ್ನ  ಸ್ವಲ್ಪ ನಾಜೂಕಿನ ನಾರಿ ..ಆಗಿನ ಕಾಲದ ಲೆಕ್ಕದಲ್ಲಿ ಸ್ಟೈಲ್ ವಾಲಿ . ಮೂವತ್ತರ ಒಳಗಿನ ವಯಸ್ಸು .ಮಧ್ಯಾಹ್ನ ಹನ್ನೊಂದು ಗಂಟೆ ಸಮಯಕ್ಕೆ ಬರುತ್ತಿದ್ದಳು .ನಾವು ಶಾಲೆಗೆ ಹೋಗದ ದಿನಗಳಲ್ಲಿ ಮಾತ್ರ ಅವಳ ದರ್ಶನ ಭಾಗ್ಯ . ಮೊಸರು ಮಜ್ಜಿಗೆಯ ಗಡಿಗೆಗಳನ್ನು ಬಿದಿರಿನ ಬುಟ್ಟಿಯಲ್ಲಿ ಒಪ್ಪವಾಗಿ ಇಟ್ಟು ಕೊಂಡು ಬಂದು ಅಚ್ಚುಕಟ್ಟಾಗಿ ಅಳೆದುಕೊಡುತ್ತಿದ್ದಳು.  ಇವಳಿಗೋ ಲೆಕ್ಕದ ಗಂಧವೇ ಇಲ್ಲ .ಅದನ್ನು ಮುಚ್ಚಿಟ್ಟುಕೊಳ್ಳಲು “ನೀವು ಕೊಟ್ಟಷ್ಟು ಕೊಡಿ ಮೋಸ ಮಾಡೋರಲ್ಲ ಬಿಡಿ” ಅಂದುಬಿಡುತ್ತಿದ್ದಳು. ಪಾಪ 9 ತಿಂಗಳು ತುಂಬುವವರೆಗೂ ಗರ್ಭಿಣಿ ಹೆಂಗಸು ಬಂದು ಮೊಸರು ವ್ಯಾಪಾರ ಮಾಡ್ತಿದ್ದಳು. ಹೆರಿಗೆಯಲ್ಲಿ ಕಷ್ಟವಾಗಿ ಸತ್ತುಹೋದಳು. ಈ ಪ್ರಸಂಗವನ್ನೇ ನಾನು ಮೇಲೆ ಹೇಳಿದ್ದು. ಮನೆಯ ತೋಟದಲ್ಲಿ ರಾಶಿ ಹೂ ಬಿಟ್ಟಿದ್ದರಿಂದ ಹೂವಿಗೆ ವರ್ತನೆಯವರಿರಲಿಲ್ಲ . ಆದರೆ ಒಬ್ಬ ಹಣ್ಣು ಮುದುಕಿ ಹತ್ತಿರದ ಹಳ್ಳಿಯಿಂದ ಸಂಪಿಗೆ ಕೆಂಡ ಸಂಪಿಗೆ ಹೂ ತರುತ್ತಿದ್ದರು. ಬಂದಾಗಲೆಲ್ಲ ಅಮ್ಮ ಬೋಣಿ ಮಾಡಬೇಕು ಕಾಫಿ ತಿಂಡಿ ತೀರ್ಥ ಕೊಡಬೇಕು ಅವರಿಗೆ .ಪೈಸೆಗೆ 1ಸಂಪಿಗೆ ಹೂವು ಹತ್ತು ಇಪ್ಪತ್ತು ಸಂಪಿಗೆ ಹೂಗಳನ್ನು ಪೋಣಿಸಿ ದಿಂಡೆ ಮಾಡಿ ಮುಡಿದು ಕೊಳ್ಳುತ್ತಿದ್ದೆವು.   ಆಕೆಯ ಹೆಸರೇನೋ ಮರೆತು ಹೋಗಿದೆ . ಆದರೆ ಏಕವಚನದಲ್ಲಿ ಮಾತನಾಡಿಸಿ ಆನಂತರ ನಮ್ಮ ತಂದೆಯಿಂದ ಬೈಗುಳ ಮತ್ತು ಹಾಗೆ ಮಾಡಬಾರದೆಂಬ ಧೀರ್ಘ ಲೆಕ್ಚರ್ ಕೇಳಿದ್ದು ಮರೆತಿಲ್ಲ. ಭಿಕ್ಷುಕರನ್ನೂ ಬಹುವಚನದಿಂದ ಮಾತನಾಡಿಸುವ ನನ್ನ ಅಭ್ಯಾಸಕ್ಕೆ ಇದು ನಾಂದಿಯಾಗಿತ್ತು.   ಹಾಗೆಯೇ ದೂರದ ಎಲೆತೋಟದ ಬಳಿಯಿಂದ ತಂದು ವಿಳ್ಳೆಯದೆಲೆ ಕವಳಿಗೆ ಲೆಕ್ಕದಲ್ಲಿ ಕೊಡುತ್ತಿದ್ದ ಎಲೆಯ ನಂಜಮ್ಮ ಸಹ ಒಬ್ಬರು ವರ್ತನೆಯವರು . ಅವರ ಕಿವಿಯ ತೂತು ತುಂಬಾ ದೊಡ್ಡದಾಗಿದ್ದು ಈಗ ನಾವು ಗೌರಿ ಬಾಗಿನಕ್ಕೆ ಇಡುವ ಬಳೆಬಿಚ್ಚೋಲೆಯನ್ನೇ ಕಿವಿಗೆ ಧರಿಸಿಕೊಳ್ಳುತ್ತಿದ್ದುದು ನಮ್ಮ ಬೆರಗಿಗೆ ಆಗ ಕಾರಣವಾಗಿತ್ತು.  ಆಕೆಯೂ ಬಂದಾಗಲೆಲ್ಲಾ ಕಾಫಿ ಕೇಳಿ ಕುಡಿಯುತ್ತಿದ್ದರು. ಒಮ್ಮೊಮ್ಮೆ ಮಾತ್ರ ಊಟ ಮಾಡುತ್ತಿದ್ದರು.  ಇನ್ನೊಬ್ಬ ವ್ಯಕ್ತಿ ಸೈಕಲ್ ನಲ್ಲಿ ಬೇರೆ ಬೇರೆ ಡಬ್ಬಗಳನ್ನು ಕಟ್ಟಿಕೊಂಡು ಬಂದು ಎಣ್ಣೆ ಮಾರುತ್ತಿದ್ದುದು ನೆನಪು . ಕಡಲೆಕಾಯಿ ಎಣ್ಣೆ, ಎಳ್ಳೆಣ್ಣೆ, ಕೊಬ್ಬರಿಎಣ್ಣೆ, ಹರಳೆಣ್ಣೆ ಇದೆಲ್ಲಾ ಆತನ ಬಳಿಯೇ ತೆಗೆದುಕೊಳ್ಳುತ್ತಿದ್ದುದು.  ಪ್ರತೀ ಶನಿವಾರ ಬರುತ್ತಿದ್ದರು ಅನ್ನಿಸತ್ತೆ . ಆತನ ತಿಳಿನೀಲಿ ಷರಟು ಹಾಗೂ ತಲೆಗೆ ಕಟ್ಟಿಕೊಳ್ಳುತ್ತಿದ್ದ ಟವಲ್ ಇನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇದೆ .  ಇನ್ನೊಬ್ಬಾತನೂ ಹಾಗೆ ಸೈಕಲ್ಲಿನಲ್ಲಿ ಬರುತ್ತಿದ್ದರು. ಆಯಾ ಕಾಲದಲ್ಲಿ ಸಿಗುವ ಹಣ್ಣುಗಳನ್ನು ತಂದು ಮಾರುತ್ತಿದ್ದರು . ಆಗೆಲ್ಲಾ ಕೆಜಿಯ ಲೆಕ್ಕವೇ ಇಲ್ಲ ಇಡೀ ಹಲಸು,  ಗೂಡೆಗಟ್ಟಲೆ ಮಾವು ಕಿತ್ತಳೆ, ಗೊನೆಬಾಳೆ ಹೀಗೆಯೇ. ತೆಂಗಿನಕಾಯಿಯಂತೂ ಪ್ರತಿ ಬಾರಿಯೂ ತರುತ್ತಿದ್ದರು . ಸೊಪ್ಪು ತರಕಾರಿಯ ತಾಯಮ್ಮ, ಪೌರಕಾರ್ಮಿಕ ನಾಗಿ, ತೋಟದ ಕೆಲಸ ಮಾಡಲು ಬರುತ್ತಿದ್ದ ರಂಗಯ್ಯ ಎಲ್ಲರೂ ನೆನಪಿನಲ್ಲಿದ್ದಾರೆ .ಮನೆಗೆ ಬರುವ ಅತಿಥಿಗಳಿಗೆ ಕೊಡುವಂತೆ ಕಾಫಿ ತಿಂಡಿ ಊಟ ಕೊಟ್ಟು ಆದರಿಸುತ್ತಿದ್ದ  ಅಮ್ಮ ಅವರಿಗೆಲ್ಲಾ ಅನ್ನಪೂರ್ಣೆಯೇ. ಹಬ್ಬಗಳ ವಿಶೇಷ ಭಕ್ಷ್ಯಗಳು, ಗೋಕುಲಾಷ್ಟಮಿ ತಿಂಡಿ, ಸಂಕ್ರಾಂತಿಯ ಎಳ್ಳು ಎಲ್ಲದರಲ್ಲೂ ಅವರಿಗೆ ಪಾಲು ಇದ್ದೇ ಇರುತ್ತಿತ್ತು. ಅದರ ಜೊತೆಗೆ ಮಕ್ಕಳನ್ನು ಚೆನ್ನಾಗಿ ಓದಿಸಿರಿ ಎಂಬ ಬೋಧನೆಯೂ ಕೂಡ. ಹಳೆಯ ಬಟ್ಟೆಗಳು, ಉಪಯೋಗಿಸಿದ ವಸ್ತುಗಳು ಇವನ್ನೆಲ್ಲಾ ನೆನಪಿನಲ್ಲಿಟ್ಟುಕೊಂಡು ಇವರಿಗೆ ಇವರಿಗೆ ಎಂದು ವಿತರಿಸುತ್ತಿದ್ದುದು, ಅವರ ಮನೆಯ ಸಮಾರಂಭಗಳಿಗೆ ಉಡುಗೊರೆ ಹಣ ಕೊಡುತ್ತಿದ್ದುದು ಆಗ ಏನೂ ಅನಿಸದಿದ್ದರೂ ಈಗ ಅಮ್ಮ ಅಪ್ಪನ ವಿಶಾಲ ಮನೋಭಾವದ ಅರಿವಾಗಿಸುತ್ತಿದೆ.  ತೀರ ಬಡತನದ ಹಾಲು ಕೊಳ್ಳಲು ಶಕ್ತಿಯಿರದ ಕುಟುಂಬವೊಂದಿತ್ತು.   ಆ ಮನೆಯ ಮಗುವಿಗೆ ಅಂತ 1 ಲೋಟ ಹಾಲು ಕೊಟ್ಟು ಹೋಗ್ತಿದ್ದರು ವರ್ತನೆಯವರು ಆಗೆಲ್ಲಾ. ಈಗ ಆ ರೀತಿಯ ಜನರನ್ನು ಕಾಣಲು ಸಾಧ್ಯವೇ? ಈಗಿನ ಹಾಗೆ ಸದಾ ಕೈಯಲ್ಲಿ ಹಣ ಓಡಾಡದ ಅಂದಿನ ದಿನಗಳಲ್ಲಿ ಸಂಬಳ ಬಂದ ಕೂಡಲೇ ಇವರಿಗೆಲ್ಲ ಹಣಪಾವತಿ .ಒಮ್ಮೆ ಹೆಚ್ಚು ಲೆಕ್ಕವಾದಾಗ ಸ್ವಲ್ಪ ಉಳಿಸಿಕೊಂಡು ಮುಂದಿನ ತಿಂಗಳಿಗೂ ಕ್ಯಾರಿ ಫಾರ್ವರ್ಡ್ ಮಾಡುತ್ತಿದ್ದುದು.  ಸಾವು ಮದುವೆ ಊರಿನ ಓಡಾಟ ಅಂತ ಹೆಚ್ಚುವರಿ ಖರ್ಚುಗಳು ಇದ್ದಾಗಲೂ ಅಷ್ಟೇ. ಎಲ್ಲ ಸಮಯಕ್ಕೂ ಫ್ಲೆಕ್ಸಿಬಲ್. ಹಾಗೆಯೇ ಅವರಿಗೆ ಹೆಚ್ಚಿನ ಅಗತ್ಯವಿದ್ದಾಗ ನಮ್ಮಿಂದ ಮುಂಗಡವಾಗಿ ಹಣ ತೆಗೆದುಕೊಂಡು ತಿಂಗಳು ತಿಂಗಳು ಉತ್ತಾರ ಹಾಕ್ಕೊಳ್ತಾ ಹೋಗುವುದು.  ಆ ಲೆಕ್ಕಾಚಾರಗಳನ್ನು ಕೇಳಿದರೆ ಒಂಥರಾ ಖುಷಿಯ ಅನುಭವ .ಎಲ್ಲಾ ಬಾಯಿಮಾತಿನ ಗಣಿತ ವಿಶ್ವಾಸದ ಲೆಕ್ಕಾಚಾರ .  ಬರೀ ವ್ಯಾವಹಾರಿಕವಾಗಿಯಲ್ಲದೆ ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆಗಳಿಂದ ಕೂಡಿದ ಸಂಬಂಧಗಳು ಅವು. ಒಬ್ಬರಿನ್ನೊಬ್ಬರ ಹರ್ಷಕ್ಕೆ ಸಂತಸಪಟ್ಟು ಸಂಕಟದಲ್ಲಿ ಸಹಾನುಭೂತಿ ತೋರುತ್ತಿದ್ದ ಅಂದಿನ ಕಾಲ ಸಮರಸದ ಪಾಠವನ್ನು ಸೋದಾಹರಣ ಕಲಿಸುತ್ತಿತ್ತು.  ನಿಜ! ಜಾತಿಯ ಕಟ್ಟುಪಾಡುಗಳು ಆಗ ಸಮಾಜದಲ್ಲಿ ಇನ್ನೂ ಬಿಗಿಯಾಗಿತ್ತು. ಅದನ್ನು ಮೀರದೆಲೆಯೇ ಸೌಹಾರ್ದದ ನಂಟಿತ್ತು ಮಿಡಿಯುವ ತುಡಿತವಿತ್ತು. ಜಾತಿಯ ಬೇಲಿಯನ್ನೂ ಮೀರಿ ಅಂತಃಕರಣದ ಸರಿತೆ ಹರಿಯುತ್ತಿತ್ತು . ಬರುಬರುತ್ತಾ ಅಂಗಡಿಗಳು ಮಾಲ್ ಗಳು ಹೆಚ್ಚಿದಂತೆಲ್ಲಾ ವರ್ತನೆಯವರು ಕಡಿಮೆಯಾಗಿದ್ದಾರೆ . ಇದ್ದರೂ ಮೊದಲಿನಂತೆ ವ್ಯವಧಾನದಿಂದ ಕೂತು ಮಾತನಾಡುವಷ್ಟು ಕಷ್ಟಸುಖ ವಿಚಾರಿಸುವಷ್ಟು ಸಮಯ ತಾಳ್ಮೆ ಯಾರಿಗಿದೆ? ಕಾಲನ ನಾಗಾಲೋಟದಲ್ಲಿ ನಾವೂ ರೇಸಿಗೆ ಬಿಟ್ಟ ಕುದುರೆಗಳಂತೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಓಡುತ್ತಲೇ ಇದ್ದೇವೆ . ವರ್ತನೆಯವರು ಇರಲಿ ಮನೆಯವರ ಜತೆ ತಾನೆ ಸಮಾಧಾನದಿಂದ ಕುಳಿತು ಮಾತನಾಡುವ ಹರಟೆ ಹೊಡೆಯುವ ಕಷ್ಟಸುಖ ಹಂಚಿಕೊಳ್ಳುವ ಪುರುಸೊತ್ತಾದರೂ ನಮಗಿದೆಯೇ?    ವಿಲಾಪಿಸಬೇಡ ಕಳೆದುಕೊಂಡದ್ದಕ್ಕೆ  ನೀನೇ ಕಳೆದು ಹೋಗುವ ಮುನ್ನ  ಮೃತ್ಯು ಹೊತ್ತೊಯ್ದು ಮತ್ತೊಬ್ಬನಿಗೆ ಅರ್ಪಿಸುವ ಮುನ್ನ  ನಿನ್ನ ಜೀವದನರ್ಘ್ಯ ಅಪರಂಜಿಯನ್ನ  ನಿಸಾರ್ ಅಹ್ಮದ್  ನಿಜ!  “ಪುರಾಣಮಿತ್ಯೇವ ನ ಸಾಧುಸರ್ವಂ”  ಎಂಬಂತೆ ನೆನಪಿನ ಭಿತ್ತಿಯ ಹರಳುಗಳನ್ನು ನೋಡಿ ನೆನೆದು ಖುಷಿ ಪಡಬೇಕು.  ಇಲ್ಲದುದಕ್ಕೆ ಪರಿತಪಿಸಬಾರದು. ಕಾಲಪ್ರವಾಹದಲ್ಲಿ ಸಾಗಿಹೋಗುವ ಹುಲ್ಲು ಕಡ್ಡಿಯಂತೆ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಾ ಹಳೆಯ ನೆನಪಿನ ಮೆಲುಕಿನ ಬೇರುಗಳಲ್ಲಿ ಹೊಸ ಅನುಭವದ ಚಿಗುರು ಪಲ್ಲವಿಸುತ್ತಿರಬೇಕು. ಇದುವೇ ಜೀವನ ಇದು ಜೀವ ತಾನೇ? “ಕಾಲಾಯ ತಸ್ಮೈ ನಮಃ “.  ಸುಜಾತಾ ರವೀಶ್  ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ ಬಯಕೆ ಲೇಖಕಿಯವರದು.

Read Post »

ಕಾವ್ಯಯಾನ

ಕಾವ್ಯ ಸಂಗಾತಿ ಅಪ್ಪ ಲೀಲಾ ಅ ರಾಜಪೂತ ಅಪ್ಪ ಎಂದರೆ ತ್ಯಾಗ ಮೂರ್ತಿ.ಭರವಸೆಯ ಪರ್ವತಬದುಕಿನ ದಾರಿಗೆ ಜ್ಯೋತಿಯಾವ ಪದಕೆ ನಿಲುಕದ ಸವ್ಯಸಾಚಿ…..ಮೌನಿಯಾಗಿಯೇನೋವುನುಂಗುವ ಸಾಗರ..ಅಳುವ ನುಂಗಿ ನಗುವ ಜೀವಬೆಟ್ಟದಷ್ಟು ತಪ್ಪು ಮಾಡಿದರೂಕ್ಷಮಿಸುವ ಹ್ರದಯವಂತ…. ಹಿತನುಡಿಗಳಿಂದ ನಮ್ಮನೂತಿದ್ದಿ,ಬಾಳ ರೂಪಿಸುವ ಶಿಲ್ಪಿ.ಅವನ ಭದ್ರ ಕೋಟೆಯಲಿನಾವೆಲ್ಲರೂ ಸುರಕ್ಷಿತ ಪದಗಳಿಗೆಟುಕದ ಮಹಾಕಾವ್ಯ ಮನೆಗೌರವ,ಸ್ವಾಭಿಮಾನಕೆಧಕ್ಕೆ ಬಂದರೆ ಪ್ರಳಯ ಇತದಣಿವೆನ್ನದೇ ದುಡಿದರೂನಮ್ಮ ಮೊಗ ಕಂಡೊಡನೆಎಲ್ಲ ಮರೆತು ನಗುವಾತ…. ಕೋಪತಾಪದಲಿಯೂ ಸಂತೈಸಿಆಸರೆಯಾಗಿ,ಬೆನ್ನು ಸವರುತನಮ್ಮ ಬದುಕಿನ ಛಾವಣಿ ಆತಮಗಳ ಮದುವೆಯಲಿ ದು:ಖಎದೆಯಲಿ ಅವಿತು ಕೊಂಡಾತಯಾರಿಗೂ ಕಾಣದಂತೆ ಅಶ್ರು ಸುರಿಸಿದಾತ….. ನಮ್ಮ ಬದುಕಿನ ಬಂಡಿಯನೊಗ ಎಳೆಯುವಾತನಮ್ಮರಕ್ಷಾ ಕವಚವಾಗಿಅವನಾದ ಹಿಮಾಲಯ ಪರ್ವತ …ಅಪ್ಪ, ನಮ್ಮ ಭಾಗ್ಯ ದಾತಕೋಟಿ ನಮನ ನಿನಗೆ ಜನ್ಮದಾತ,ಜನ್ಮದಾತ

Read Post »

ಅಂಕಣ ಸಂಗಾತಿ, ಸಾಧಕಿಯರ ಯಶೋಗಾಥೆ

ಪುಷ್ಪಲತಾದಾಸ್ ಅವರು ಒಬ್ಬ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ್ತಿ, ಸಾಮಾಜಿಕ ಕಾರ್ಯಕರ್ತೆ, ಗಾಂಧಿವಾದಿ ಮತ್ತು ಅಸ್ಸಾಂನ ಶಾಸಕಿಯೂ ಕೂಡ ಆಗಿದ್ದರು

Read Post »

ಇತರೆ

ಸರಣಿ ಬರಹ ಅಂಬೇಡ್ಕರ್ ಓದು ಎಡ್ವಿನ್ ಆರ್.ಎ.ಸೆಲಿಗ್ಮನ್ ಶಿಷ್ಯ ಅಂಬೇಡ್ಕರ್        ಎಡ್ವಿನ್ ಆರ್.ಎ.ಸೆಲಿಗ್ಮನ್ ರವರು ಅಂದಿನ ಕಾಲದ ವಿಶ್ವವಿಖ್ಯಾತ ಆರ್ಥಿಕ ತಜ್ಞರಾಗಿದ್ದರು. ಅಂಬೇಡ್ಕರರು ಅವರ ಅಚ್ಚುಮೆಚ್ಚಿನ ಶಿಷ್ಯರಾದರು. ಎಷ್ಟು ಅಚ್ಚುಮೆಚ್ಚಿನ ಶಿಷ್ಯರೆಂದರೆ ಪ್ರೊ. ಸೆಲಿಗ್ಮನರು ಯಾವುದೆ ವರ್ಗದ ಕೊಠಡಿಯಲ್ಲಿ ಬೋಧಿಸುತ್ತಿರಲಿ ಅಲ್ಲಿ ಅವರ ಬೊಧನೆ ಆಲಿಸಲು ಅಂಬೇಡ್ಕರರು ಹಾಜರಿರುತ್ತಿದ್ದರು. ಒಂದು ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿ ಅದರ ಬಗ್ಗೆ ಚಿಂತನೆ ಮಾಡಿದಾಗ ಸಂಶೋದನೆಯ ಸರಳ ವಿಧಾನ ಯಾವುದೆಂಬುದು ತಿಳಿಯುವುದು ಎಂದು ಅಂಬೇಡ್ಕರರಿಗೆ  ಸಂಶೋದನೆಯ ಸರಳ ವಿಧಾನ ತಿಳಿಸಿ ಕೊಟ್ಟರು. ಅದರಂತೆ ಅಂಬೇಡ್ಕರರು ಅರ್ಥಶಾಸ್ತ್ರ,ರಾಜ್ಯಶಾಸ್ತ್ರ, ಸಮಾಜಶಾಸ್ತ್ರ,ತತ್ವಶಾಸ್ತ್ರ ಮತ್ತು ಮಾನವಶಾಸ್ತ್ರ ವಿಷಯಗಳಲ್ಲಿ ಆಳವಾದ ಅಧ್ಯಯನ ನಡೆಸಿದರು. ಆಳವಾದ ಅಧ್ಯಯನದ ಫಲವಾಗಿ ಅಂಬೇಡ್ಕರರು 1916 ರಲ್ಲಿ ಪ್ರೊ.ಗೋಲ್ಡನ್ ವೈಜರ್ ಅವರ ನೇತೃತ್ವದಲ್ಲಿ ನಡೆದ ವಿಚಾರ ಸಂಕೀರ್ಣದಲ್ಲಿ “ಭಾರತದಲ್ಲಿ ಜಾತಿಗಳ ಉಗಮ ಮತ್ತು ಅವುಗಳ ವಿಕಾಸ “ (Castes in India; Their mechanism, Genesis and development) ಎಂಬ ಎರಡನೆಯ ಪ್ರಬಂಧವನ್ನು ಮಂಡಿಸಿದರು. ಸ್ವ ಗೋತ್ರ ವಿವಾಹವೇ ಜಾತಿಗೆ ಮೂಲ ಮತ್ತು ಅವುಗಳ ವಿಕಾಸದ ಸೂಕ್ಷ್ಮತೆಯನ್ನು ಅಲ್ಲದೆ ಜಾತಿಗೆ ಧಾರ್ಮಿಕ ಸ್ಪರ್ಶವಿದ್ದಲ್ಲಿ ಮಾತ್ರ ಮಾಲಿನ್ಯದ ಪರಿಕಲ್ಪನೆ ಅಂದರೆ ಮಾಲಿನ್ಯ ,ಮೈಲಿಗೆ, ಮಡಿ, ಪರಿಕಲ್ಪನೆಯೊಂದಿಗೆ ಜಾತಿಯ ಹೊರಗಿನವರೊಂದಿಗೆ ಕುಳಿತು ಊಟ ಮಾಡದಿರುವುದು, ಪ್ರತ್ಯೇಕತೆ,ಅಂತರ್ಜಾತೀಯ ವಿವಾಹ ನಿಷೇದ ಮತ್ತು ಸ್ವಕುಲಜನರಿಗೆ ಮಾತ್ರ ತನ್ನೊಂದಿಗೆ ಸದಸ್ಯತ್ವ ಇವು ಜಾತಿಯ ಲಕ್ಷಣಗಳೆಂದು ವಿವರಿಸಿರುವರು.              ಭಾರತದ ಹಿಂದು ಧರ್ಮವು ಮೂಲಭೂತವಾಗಿ ಪುರಾತನವಾದದ್ದು ಎಂದು ನಾಗರಿಕತೆ ಬದಲಾವನೆಯಾಗಿದ್ದರೂ ಸನಾತನ ನಿಯಮಗಳು ಶ್ರೇಷ್ಠವೆಂದು ಇಂದಿಗೂ ಬಲಯುತವಾಗಿ ಜಾರಿಯಲ್ಲಿವೆ. ಅಂತರ್ಜಾತಿ ವಿವಾಹ ಪದ್ಧತಿ ಇದ್ದಲ್ಲಿ ಜಾತಿ ಪದ್ದತಿ ಇರಲು ಸಾಧ್ಯವಿಲ್ಲ. ಅಂತರ್ಜಾತಿ ವಿವಾಹವೆಂದರೆ ಜಾತಿಗಳ ಬೆಸುಗೆ ಎಂದರ್ಥ. ಭಾರತಕ್ಕೆ ಸಂಬಂಧಿಸಿದಂತೆ ಹಿಂದೂ ಧರ್ಮದಲ್ಲಿ ಸ್ವಜಾತಿ ವಿವಾಹವು ಜಾತಿಯ ಉತ್ಪತ್ತಿಗೆ ಕಾರಣವೆಂದು, ಜಾತಿ ಉತ್ಪತ್ತಿ ನಂತರ ಅದನ್ನು ನಿರಂತರ ಹೇಗೆ ಕಾಪಾಡಿಕೊಂಡು ಬರಲಾಯಿತೆಂಬುವುದನ್ನು ಅಂಬೇಡ್ಕರರು ತಮ್ಮ ಈ ಪ್ರಬಂಧದಲ್ಲಿ ಸ್ವಾರಸ್ಯಕರ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ.ನೈಸರ್ಗಿಕ ವಿಕೋಪಗಳನ್ನು ಹೊರತುಪಡಿಸಿ ಗಂಡ ಹೆಂಡತಿ ಒಟ್ಟಿಗೆ ಸತ್ತಾಗ ಮಾತ್ರ ಒಂದು ಗುಂಪಿನ ಜಾತಿ ಸಂಖ್ಯೆಯಲ್ಲಿ ಗಂಡು ಹೆಣ್ಣು ಅನುರೂಪತೆ ಕಾಣಲು ಸಾಧ್ಯ ಆದರೆ ಸ್ವಜಾತಿ ವಿವಾಹ ಪದ್ಧತಿ ಮೂಲಕ ಸಮನಾದ ಸಂಖ್ಯೆ ಅಸ್ತಿತ್ವದಲ್ಲಿರುವಂತೆ ನೋಡಿಕೊಳ್ಳುವುದು ಇಲ್ಲಿ ಆಶ್ಚರ್ಯ ಚಕಿತ ಗೊಳಿಸುವಂತದೆಂದರೆ ಗಂಡ ಸತ್ತಾಗ ಆತನ ಚಿತೆಯಲ್ಲಿ ಹೆಂಡತಿಯನ್ನು ಜೀವಂತ ಸುಡುವುದು. ಇಲ್ಲದಿದ್ದಲ್ಲಿ ಹೆಚ್ಚುವರಿಯಾಗಿ ಉಳಿದ ಹೆಣ್ಣು ಅಂತರ್ಜಾತಿ ವಿವಾಹವಾದಲ್ಲಿ ಅವಳು ಸ್ವಜಾತಿ ವಿವಾಹ ಪದ್ಧತಿಯನ್ನು ಮುರಿದು ಜಾತಿ ಪದ್ಧತಿಯನ್ನು ನಾಶಮಾಡುತ್ತಾಳೆ. ಹಾಗಾಗಿ ಗಂಡ ಹೆಂಡತಿಯ ದೇಹ ಮತ್ತು ಆತ್ಮಗಳ ಪರಿಪೂರ್ಣ ಮಿಲನದ ಸಾಕ್ಷವೆಂದು, ಸಮಾಧಿಯ ಆಚೆಗೆ ಇರುವ ಭಕ್ತಿ ಎಂದು, ಸತಿ ಪದ್ಧತಿಯನ್ನು ಪುರಸ್ಕರಿಸಲಾಗಿದೆ ಎಂಬುದಾಗಿ ಸಾಂಪ್ರದಾಯಿಕ ಸಮರ್ಥನೆ ನೀಡಲಾಗಿದೆ. ಇದೆ ನಿಯಮ ಹೆಂಡತಿ ಸತ್ತ ಗಂಡನಿಗೆ ಕಟ್ಟು ನಿಟ್ಟಾಗಿ ಅಳವಡಿಸಿಲ್ಲ. ಇನ್ನು ಸತಿ ಪದ್ಧತಿಯಿಂದ ಪಾರಾಗಿದ್ದಲ್ಲಿ ಜೀವನ ಪೂರ್ತಿ ಅವಳು ವಿಧವೆಯಾಗಿ ಜೀವಿಸಬೇಕು. ಹೆಂಡತಿಸತ್ತು ಗಂಡ ಉಳಿದಲ್ಲಿ ಅವನು ವಿದುರನಾಗಬೇಕು. ಆದರೆ ಹೆಣ್ಣಿಗೆ ವಿಧಿಸಿದಷ್ಟು ಕಠೋರ ನಿಯಮ ಗಂಡಸಿಗೆ ಇಲ್ಲ. ಅವನು ಮರುಮದುವೆಯಾಗಬಹುದು. ಗಂಡ ಸತ್ತ ಹೆಣ್ಣು ಸತಿ-ಪದ್ಧತಿ ಅನುಸರಿಲ್ಲವಾದರೆ ವಿದವಾ ಪದ್ಧತಿ ಅನುಸರಿಸಲೇಬೇಕು.                 ಬಾಲ್ಯವಿವಾಹ ಪದ್ಧಿತಿಯು, ಸತಿ ಪದ್ದತಿ, ವಿಧವಾ ಪದ್ದತಿಯಂತೆ ಜಾರಿಗೆ ಬಂದಿದ್ದು, ಹೆಣ್ಣುಮಕ್ಕಳಿಗೆ ಬಾಲ್ಯದಲ್ಲಿಯೆ ಮದುವೆ ಮಾಡುವುದು. ತಾನು ಮದುವೆಯಾಗಲಿರುವ ಗಂಡಸಿನ ಹೊರತು ಬೇರೆ ಪುರುಷನಲ್ಲಿ ಪ್ರೀತಿ ಪಡುವಂತಿಲ್ಲ. ಆದರ್ಶ ಶೀಲವಂತಿಕೆ ಕಾಯ್ದುಕೊಳ್ಳಬೇಕು. ಮದುವೆಗೆ ಮೊದಲು ಆಕೆ ಯಾವ ವ್ಯಕ್ತಿಯಲ್ಲೂ ಅನುರಕ್ತಳಾಗಕುಡದು. ಹಾಗೆ ಮಾಡಿದ್ದೆ ಆದರೆ ಅದೊಂದು ಪಾಪ. ಆದ್ದರಿಂದ ಕನ್ಯೆಯು ಲೈಂಗಿಕಪ್ರಜ್ಞೆ ಜಾಗೃತಗೊಳ್ಳುವ ಮೊದಲೆ ಅವಳ ಮದುವೆ ಮಾಡುವುದು ಒಂದು ವೇಳೆ ಕನ್ಯೆಯು ಪ್ರಜ್ಞಾವಂತಳಾದ ಮೇಲೆ ಬೇರೆ ಜಾತಿಯ ವ್ಯಕ್ತಿಯಲ್ಲಿ ಅನುರಕ್ತಳಾಗಿ ವಿವಾಹವಾದಲ್ಲಿ ಜಾತಿ ಪದ್ಧತಿಗೆ ಕಳಂಕ ತರುವಳು ಅದಕ್ಕೆಂದೆ ಬಾಲ್ಯ ವಿವಾಹ.      ಸ್ವಜಾತಿ ವಿವಾಹದಿಂದ ಜಾತಿಯ ಸೃಷ್ಟಿಯಾಗುತ್ತದೆ. ಸತಿಪದ್ಧತಿ, ವಿದವೆ ಅಥವಾ ವಿಧೂರತನ ಮತ್ತು ಬಾಲ್ಯವಿವಾಹ ಈ ರೀತಿ ಸ್ತ್ರೀ ಪುರುಷರ ನಡುವೆ ತಾರತಮ್ಯವನ್ನು ಅನುಕೂಲಕರವಾಗಿ ಉಪಯೋಗಿಸುತ್ತಾ ಬಂದುದ್ದು, ಹಿಂದೂ ಸಮಾಜದಲ್ಲಿ ತನ್ನ ನಡವಳಿಕೆಯಲ್ಲಿ ಸಂಕೀರ್ಣವೆನಿಸಿದರೂ ಮೇಲುನೋಟಕ್ಕೆ ಅತೀರೇಕ ಸಂಪ್ರದಾಯಗಳಾಗಿ ಎದ್ದು ಕಾಣುತ್ತವೆ. ಈ ಮೂರು ಸಂಪ್ರದಾಯಗಳು ಜಾತಿಯ ಸಂರಕ್ಷಣೆಯ ವಿಧಾನಗಳಾಗಿವೆ. ಈಮೂರು ವಿದಾನಗಳಿಂದಲೆ ಜಾತಿ ಶಾಶ್ವತವಾಗಿ ಉಳಿದುಕೊಂಡು ಬರಲು ಸಾಧ್ಯವಾಗಿದೆ. ಈ ಮೂರು ಸಂಪ್ರದಾಯಗಳ ಕರಾಳತೆಯನ್ನು  ಅಂಬೇಡ್ಕರರು ಇಲ್ಲಿ ಅಲ್ಲಗಳೆಯಲಾಗದಂತೆ ವಿಶ್ಲೇಷಿಸಿರುವರು. ಅಂಬೇಡ್ಕರರು ಎರಡು ವರ್ಷಗಳ ಅವಧಿಯಲ್ಲಿ ಎರಡು ಮಹಾ ಪ್ರಬಂಧಗಳನ್ನು ಬರೆದು ಒಪ್ಪಿಸಿದ್ದರಿಂದ ಕೊಲಂಬಿಯಾ ವಿಶ್ವವಿಧ್ಯಾಲಯವು ಅವರಿಗೆ ಎರಡು ಎಂ.ಎ. ಪದವಿಗಳನ್ನು ಅನುಗ್ರಹಿಸುತ್ತದೆ. ಅಮೇರಿಕದಲ್ಲಿ ಅವರಿಗೆ ಅಲ್ಲಿನ ಸಂವಿಧಾನ ಅದರಲ್ಲೂ 14 ನೇ ತಿದ್ದುಪಡಿ,ನೀಗ್ರೋ ಜನಾಂಗಕ್ಕೆ ಕೊಡಮಾಡಿದ ಸ್ವಾತಂತ್ರ್ಯ ಮತ್ತು ಅಬ್ರಾಹಂ ಲಿಂಕನ್ರ ಹೋರಾಟ ನೀಗ್ರೋಗಳಿಗೆ ಅವರು ತಂದುಕೊಟ್ಟ ಸ್ವಾತಂತ್ರ್ಯ,ಅಲ್ಲದೆ ಭೂಕರ ಟಿ ವಾಷಿಂಗಟನ್ ಜೀವನ ಮತ್ತು ಸಾಧನೆ ಅವರು ನೀಗ್ರೋ ಜನಾಂಗಕ್ಕೆ ಕೊಡಿಸಿದ ಸಮಾನತೆ ಅಂಬೇಡ್ಕರರ ಮೇಲೆ ಬಹಳ ಪ್ರಭಾವ ಬೀರುತ್ತದೆ. ಭಾರತದಲ್ಲಿ ತುಳಿತಕೊಳಪಟ್ಟ ನಿಮ್ನ ವರ್ಗದ ಜನರ ಜೀವನ ಸುಧಾರಣೆ, ಕಲ್ಯಾಣ ಸಮಾಜ ಸ್ಥಾಪನೆ ಅವರ ಏಕೈಕ ಗುರಿಯಾಗುತ್ತದೆ. ಬರೋಡಾ ಸಂಸ್ಥಾನದಿಂದ ಬರುತ್ತಿದ್ದ ಶಿಷ್ಯವೇತನದ ಹಣದಲ್ಲಿ ದುಂದು ವೆಚ್ಚಮಾಡದೆ ಮಿತವ್ಯೆಯಮಾಡಿ, ಅರೆ ಹೊಟ್ಟೆಯಲ್ಲಿದ್ದುಕೊಂಡು ದುಡ್ಡು ಉಳಿತಾಯ ಮಾಡಿ ಸಾವಿರಾರು ಪುಸ್ತಕ ಖರೀದಿ ಮಾಡುತ್ತಾರೆ, ಛಲದಿಂದ ಕಠೋರ ಅಧ್ಯಯನ  ಮಾಡುತ್ತಾರೆ, ಪಿ.ಎಚ್.ಡಿ ಪದವಿಗಾಗಿ ಮಹಾಪ್ರಬಂಧ ಬರೆಯಲು ಆರಂಭಿಸುತ್ತಾರೆ. ಕಠಿಣ ಪರಿಶ್ರಮ, ಆಳವಾದ ಅಧ್ಯಯನದಫಲವಾಗಿ 1917 ರಲ್ಲಿ “ರಾಷ್ಟ್ರೀಯ ಡಿವಿಡೆಂಟ್: ಒಂದು ಐತಿಹಾಸಿಕ ಮತ್ತು ವಿಶ್ಲೇಷನಾತ್ಮಕ ಅಧ್ಯಯನ “(National Dividend of India- A Historical and Analytical study) ಎಂಬ ಮಹಾ ಪ್ರಬಂಧವನ್ನು ಬರೆದು ಮಂಡಿಸುವರು. ಈ ಕೃತಿಗೆ “ಬ್ರಿಟಿಷ ಇಂಡಿಯಾದಲ್ಲಿ ಪ್ರಾಂತೀಯ ಹಣಕಾಸು ವ್ಯವಸ್ಥೆಯ, ವಿಕಾಸ” ಎಂಬ ಮೂಲ ತಲೆಬರಹ ಮತ್ತು ಬ್ರಿಟಿಷ ಸಾಮ್ರಾಜ್ಯದ ಹಣಕಾಸು ವ್ಯವಸ್ಥೆ, ವಿಕೇಂದ್ರಿಕರಣ “ ಎಂಬುದಾಗಿ ಎರಡನೆ ತಲೆಬರಹದೊಂದಿಗೆ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತದೆ. ಮಹಾಪ್ರಬಂಧವನ್ನು ತಮಗೆ ಉನ್ನತ ವ್ಯಾಸಂಗಕ್ಕಾಗಿ ಶಿಷ್ಯವೇತನ ಮಂಜೂರಿಸಿದ ಬರೋಡಾ ಮಹಾರಾಜರಾದ ಸಯ್ಯಾಜೀ ಗಾಯಕವಾಡ ರವರಿಗೆ ಅರ್ಪಿಸಿರುವರು. ವಿಶ್ವಪ್ರಸಿದ್ಧಅರ್ಥಶಾಸ್ತ್ರಜ್ಞ ಮತ್ತು ಅಂಬೇಡ್ಕರರ ಅಚ್ಚುಮೆಚ್ಚಿನ ಉಪನ್ಯಾಸಕರಾದ ಪ್ರೋ.ಎಡ್ವಿನ್ ಸೆಲಿಗ್ಮನ್ ರವರು ಪುಸ್ತಕಕ್ಕೆ ಮುನ್ನುಡಿ ಬರೆದಿರುವರು. ಹಣಕಾಸಿನ ಕುರಿತು ಇಷ್ಟೊಂದು ಆಳವಾಗಿ ಅಧ್ಯಯನ ಮಾಡಿ ವಿಶ್ಲೇಷನೆಮಾಡಿ ಬರೆದಂತ ಇಂತಹ ಪ್ರಬಂಧವನ್ನು ಇಲ್ಲಿಯವರೆಗೆ ನೋಡಿಲ್ಲವೆಂದು ಪ್ರೋ. ಸೆಲಿಗ್ಮನ್ ರವರು ಮುಕ್ತಕಂಠದಿಂದ ಹೊಗಳಿರುವರು. ಈ ಮಹಾ ಪ್ರಬಂಧದಲ್ಲಿ ಅಂಬೇಡ್ಕರರು ಭಾರತದ ಅರ್ಥವ್ಯವಸ್ತೆ ಮತ್ತು ಹಣಕಾಸು ವ್ಯವಸ್ಥೆಯನ್ನು ವೈಜ್ಞಾನಿಕ ಮತ್ತು ವಸ್ತುನಿಷ್ಠ ಅಂಕಿ ಅಂಶಗಳೊಂದಿಗೆ ವಿಶ್ಲೇಷಣೆ ಮಾಡಿದ್ದಾರೆ. ಒಳ್ಳೆಯ ಆಡಳಿತ –ಒಳ್ಳೆಹಣಕಾಸಿನ ಮೇಲೆ ಅವಲಂಬಿಸಿರುತ್ತದೆ. ಆಡಳಿತ ಎಂಬ ಇಂಜಿನ್ನಿಗೆ ಹಣಕಾಸು ಎಂಬುದು, ಇಂಧನವಾಗಿದೆ ಎಂದು ಹಣಕಾಸು ಆಡಳಿತವನ್ನು ವಿಮರ್ಶೆ ಮಾಡಿರುವರು. ಭಾರತಕ್ಕೆ ಇಂಗ್ಲೆಂಡ ಕೊಟ್ಟ ಕೊಡುಗೆ ಏನು ಎಂಬುದಕಿಂತಲೂ ಇಂಗ್ಲೆಂಡಗೆ ಭಾರತ ಕೊಟ್ಟ ಕೊಡುಗೆ ಆರ್ಥಿಕವಾಗಿ ಅಪಾರವಾಗಿದೆ. ಅಧಿಕ ತೆರಿಗೆಯಿಂದ ಇಂಗ್ಲೆಂಡ ಭಾರತವನ್ನು ಎಷ್ಟು ಲೂಟಿ ಮಾಡಿತು ಎಂದರೆ ಪ್ರಪಂಚದಲ್ಲಿಯೆಭಾರತವು ಒಂದು ಬತ್ತಿಹೋದ ಸ್ಥಳವಾಗಿದೆ ಎಂಬುದಾಗಿ ಹೇಳುತ್ತಾರೆ. ಬ್ರಿಟಿಷರಿಂದ ಶಾಂತಿಯುತ ಆಡಳಿತ ಪದ್ದತಿ, ನ್ಯಾಯಾಂಗ ಪದ್ದತಿ, ಕೊಡುಗೆಗಳಾದರೂ ಭಾರತವನ್ನು ಬಡತನ, ದಾರಿದ್ರ್ಯ ಕೂಪಕ್ಕೆ ತಳ್ಳಿದ್ದು ಘೋರ ಅನ್ಯಾಯವಾಗಿದೆ ಎಂಬುದಾಗಿ ಬ್ರಿಟಿಷರ ಆಡಳಿತವನ್ನು, ಆರ್ಥಿಕ ನೀತಿಯನ್ನು ಕಟುವಾಗಿ ಟೀಕಿಸುತ್ತಾ ಜಗತ್ತಿಗೆ ಬಹಿರಂಗ ಗೊಳಿಸಿದ್ದಾರೆ. ಬ್ರಿಟಿಷರ ಮುಖಕ್ಕೆ ಹೊಡೆದಂತೆ ಅಂಕಿ ಅಂಶ ಪ್ರಸ್ತೂತ ಪಡೆಸಿದ್ದಾರೆ. ಈ ಕೃತಿ –ಅಂದು ಎಷ್ಟು ಪ್ರಸಿದ್ದಿ ಹೊಂದಿತ್ತು ಎಂಬುದಕ್ಕೆ, ಅಂದಿನ ಸಂಸದರು, ಶಾಸಕರು ಬ್ರಿಟಿಷ ಆಡಳಿತದ ಬಜೆಟ್ ಮಂಡನೆಯ ಸಮಯದಲ್ಲಿ ಆಕರ ಗ್ರಂಥವಾಗಿ ಬಳಸಲಾಗುತಿತ್ತು. ಅಂಬೇಡ್ಕರರುಒಬ್ಬ ಶ್ರೇಷ್ಠ ಆರ್ಥಿಕ ತಜ್ಞರೆಂಬುದು, ಒಬ್ಬ ಅಪ್ಪಟ ದೇಶಪ್ರೇಮಿ ಎಂಬುದನ್ನು ಲೇಖನಿಯ ಮೂಲಕ ತೋರಿಸಿಕೊಟ್ಟಿದ್ದಾರೆ. ಬೇಜವಾಬ್ದಾರಿ ಬ್ರಿಟಿಷರ ಆಡಳಿತ ಪದ್ಧತಿಯನ್ನು ನೇರವಾಗಿ, ದಿಟ್ಟವಾಗಿ ಖಂಡಿಸಿದ್ದು ಯಾವ ಸ್ವಾತಂತ್ರ್ಯ ಹೊರಾಟಗಾರನಿಗಿಂತಲೂ ಕಡಿಮೆಯಾದುದಲ್ಲ ಎಂಬುದನ್ನು ಕೃತಿಯು ಸಾಬೀತು ಪಡಿಸುತ್ತದೆ. ಈ ಕೃತಿಗೆ ಕೊಲಂಬಿಯಾ ವಿಶ್ವವಿದ್ಯಾಲಯವು ಅಂಬೇಡ್ಕರ್ ಅವರಿಗೆ ಪಿಎಚ್ ಡಿ ಪದವಿಯನ್ನು ನೀಡಿತು.                                                  (ಮುಂದುವರೆಯುವುದು)                                          ಸೋಮಲಿಂಗ ಗೆಣ್ಣೂರ        

Read Post »

You cannot copy content of this page

Scroll to Top