ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—51 ಅಘನಾಶಿನಿಯಲ್ಲಿ ಪಾರಾದೆ, ಪುತ್ರೋದಯದ ಸಂತಸದಲ್ಲಿ ಮುಳುಗಿದೆ ಕುಮಟಾ ತಾಲೂಕಿನ ಮಿರ್ಜಾನಿನಲ್ಲಿ ಒಂದು ಆಟ. ನಾನು ‘ಗದಾಪರ್ವ’ ಪ್ರಸಂಗದಲ್ಲಿ ಕೌರವನ ಪಾತ್ರ ನಿರ್ವಹಿಸಬೇಕಿತ್ತು. ಮಿರ್ಜಾನ್‌ನಂಥ ಊರಿನಲ್ಲಿ ನನ್ನ ಮೊದಲ ಪಾತ್ರವಾದ್ದರಿಂದ ಸರಿಯಾದ ಸಿದ್ಧತೆಯೊಂದಿಗೆ ಪ್ರದರ್ಶನ ನೀಡಿ ಜನರ ಮನಗೆಲ್ಲುವ ಅನಿವಾರ್ಯತೆಯೂ ಇತ್ತು. ಥಿಯೇಟರ್ ಆಟ ಬೇರೆ. ಹಣ ಕೊಟ್ಟು ಬರುವ ಪ್ರೇಕ್ಷಕರಿಗೆ ಸಂತೋಷವಾಗುವಂತೆ ಪಾತ್ರ ನಿರ್ವಹಣೆ ಸಾಧ್ಯವಾಗದಿದ್ದರೆ ಅವರ ಟೀಕೆಗಳನ್ನು ಸಹಿಸಲೇ ಬೇಕಾಗುತ್ತದೆ. ನಾನು ಕಾಳಜಿ ಪೂರ್ವಕವಾಗಿ ಪಾತ್ರಕ್ಕೆ ಬೇಕಾದ ಸಾಧ್ಯವಾದಷ್ಟೂ ಸಿದ್ಧತೆ ಮಾಡಿಕೊಂಡಿದ್ದೆ. ಪತ್ನಿ ನಿರ್ಮಲಾ ಮೊದಲ ಹೆರಿಗೆಗಾಗಿ ತವರೂರು ಹುಬ್ಬಳ್ಳಿಗೆ ಹೋಗಿದ್ದಳು. ನಮ್ಮೂರು ಮಾಸ್ಕೇರಿಗೆ ಹೊರಟು ಅಲ್ಲಿನ ನನ್ನ ಯಕ್ಷಗಾನ ಪ್ರೇಮಿಗಳಾದ ಬಾಲ್ಯದ ಗೆಳೆಯರನ್ನು ಕೂಡಿಕೊಂಡು ಆಟಕ್ಕೆ ಹೋಗಲು ನಿರ್ಧರಿಸಿ ಊರಿಗೆ ಬಂದೆ. ಹೇಗೂ ಎರಡನೆಯ ಪ್ರಸಂಗದಲ್ಲಿ ನನ್ನ ಪಾತ್ರವಿದೆ. ಅವಸರವೇನೂ ಇಲ್ಲವೆಂದು ರಾತ್ರಿಯ ಊಟ ಮನೆಯಲ್ಲೇ ಮುಗಿಸಿ ಗೋಕರ್ಣ ಬಸ್ಸು ಹಿಡಿದು ಗೆಳೆಯರೊಂದಿಗೆ ಹೊರಟೆ. ಅದಾಗಲೇ ನುರಿತ ಭಾಗವತನೂ ಆಗಿದ್ದ ಕೃಷ್ಣ ಮಾಸ್ಕೇರಿ, ಮಾಸ್ತರಿಕೆಯೊಂದಿಗೆ ‘ಚಿನ್ನದ ಪೆಟ್ಟಿಗೆ’ಯ ಸಣ್ಣ ವ್ಯವಹಾರ ಆರಂಭಿಸಿದ್ದ ಭಾವ ಹೊನ್ನಪ್ಪ ಮಾಸ್ತರ, ನನ್ನ ಸಹೋದರ ಶಿಕ್ಷಕ ನಾಗೇಶ ಗುಂದಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಎನ್.ಬಿ.ಗಣಪತಿ, ನಿರಕ್ಷರಿ ಗೆಳೆಯ ನಾರಾಯಣ ಮತ್ತು ನಮ್ಮ ದಾಯಾದಿ ಚಿಕ್ಕಪ್ಪ ನಾರಾಯಣ ಎಂಬ ಹಿರಿಯರು ಸೇರಿ ಆಟಕ್ಕೆ ಹೊರಟೆವು. ನಾವು ಗೋಕರ್ಣದಿಂದ ತದಡಿ ಎಂಬ ಊರಿಗೆ ಇನ್ನೊಂದು ಬಸ್ಸಿನಲ್ಲಿ ಪ್ರಯಾಣಿಸಿ ಅಲ್ಲಿಂದ ಅಘನಾಶಿನಿ ನದಿಯನ್ನು ನಾವೆಯ ಮೂಲಕ ದಾಟಿ ಆಚೆ ದಂಡೆಯ ಮೇಲಿರುವ ಮಿರ್ಜಾನ ಎಂಬ ಊರು ಸೇರಬೇಕಿತ್ತು. ಆದರೆ ನಾವು ತದಡಿಗೆ ಬಂದಿಳಿಯುವಾಗ ರಾತ್ರಿ ಒಂಭತ್ತರ ಮೇಲಾಗಿತ್ತು. ಅಷ್ಟು ಹೊತ್ತಿಗೆ ಪ್ರಯಾಣಿಕರನ್ನು ಅಘನಾಶಿನಿ ನದಿ ದಾಟಿಸುವ ಮಶಿನ್ ಬೋಟ್ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಹೇಗಾದರೂ ನಮ್ಮನ್ನು ನದಿ ದಾಟಿಸಲು ವಿನಂತಿಸೋಣವೆಂದರೆ ಮಶಿನ್ ಬೋಟ್ ಆಚೆ ದಡವನ್ನು ಸೇರಿ ಲಂಗರು ಹಾಕಿತ್ತು. ನದಿ ಸಮುದ್ರ ಸೇರುವ ಸ್ಥಳವಾದುದರಿಂದ ನದಿಯ ವಿಸ್ತಾರವೂ ಅಧಿಕವಾಗಿತ್ತು. ನಾವು ಧ್ವನಿಗೈದು ಕರೆದರೂ ಕೇಳುವ ಸ್ಥಿತಿ ಇರಲಿಲ್ಲ. ಇನ್ನು ನಮಗಿರುವ ದಾರಿಯೆಂದರೆ ಮರಳಿ ಹೊರಟು ಸಾಣಿಕಟ್ಟಾ, ಮಾದನಗೇರಿ, ಹಿರೇಗುತ್ತಿ ಮೊದಲಾದ ಊರುಗಳನ್ನು ಸುತ್ತಿ ಮಿರ್ಜಾನ್ ಸೇರುವುದು. ಇದು ಬಹಳ ಸುತ್ತಿನ ದಾರಿ ಮಾತ್ರವಲ್ಲದೆ ನಮಗೆ ಸಕಾಲದಲ್ಲಿ ವಾಹನಗಳು ದೊರೆಯುವುದೂ ದುಸ್ತರವಾದ ಸಮಯ. ನಾವು ಯೋಚನೆಗೆ ಒಳಗಾದೆವು. ಉಳಿದವರ ಮಾತು ಅಂತಿರಲಿ ನಾನು ಆಟವನ್ನು ತಪ್ಪಿಸಿಕೊಳ್ಳುವಂತೆಯೇ ಇರಲಿಲ್ಲ. ಯಾವ ಸಬೂಬು ಹೇಳಿದರೂ ಹಣಕೊಟ್ಟು ಬಂದ ಪ್ರೇಕ್ಷಕರು ತಗಾದೆ ಮಾಡದೇ ಇರುವುದಿಲ್ಲ. ಸಂಘಟಕರಿಗೆ ಇದು ತುಂಬಾ ತೊಂದರೆಗೆ ಈಡು ಮಾಡುತ್ತದೆ. ಹಾಗಾಗಿ ನನಗೆ ಆಟಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಇದೆ. ನಾವು ದಿಕ್ಕುಗಾಣದವರಂತೆ ಯೋಚಿಸುತ್ತ ನಿಂತಿರುವಾಗ ಆಪತ್‌ದ್ಭಾಂದವನಂತೆ ನಾವಿಕನೊಬ್ಬ ನಮ್ಮ ಬಳಿಗೆ ಬಂದ. ಯುವಕನಂತೆ ಕಾಣುವ ಆತ ನಮ್ಮ ಸಮಸ್ಯೆಯನ್ನು ಕೇಳಿ ತಾನು ನದಿ ದಾಟಿಸುವ ಭರವಸೆ ನೀಡಿದ. ಕೊಡಬೇಕಾದ ಹಣಕಾಸಿನ ತೀರ್ಮಾನವಾದ ಬಳಿಕ ಸಮೀಪದಲ್ಲಿಯೇ ಬೇಲೆಯ ಮೇಲೆ ಎಳೆದು ಹಾಕಿದ ಒಂದು ಚಿಕ್ಕ ದೋಣಿಯನ್ನು ನೀರಿಗೆಳೆದು ನಮ್ಮ ಬಳಿಗೆ ತಂದು ನಿಲ್ಲಿಸಿದ. ಆಗಲೇ ನಾವು ಏಳು ಜನರಿದ್ದೆವು. ನಾವಿಕನೂ ಸೇರಿ ಎಂಟು ಜನ ಈ ದೋಣಿಯಲ್ಲಿ ಪ್ರಯಾಣಿಸುವುದು ಕಷ್ಟವೆನ್ನಿಸಿತು. ಆ ಪುಟ್ಟ ದೋಣಿಯಲ್ಲಿ ಒತ್ತಾಗಿ ಕುಳಿತು ನೋಡಿದೆವು. ನಮ್ಮ ದಾಯಾದಿ ಚಿಕ್ಕಪ್ಪ ಮತ್ತು ನಾರಾಯಣ ದೋಣಿಗೆ ಭಾರವಾಗುವುದೆಂದೇ ನಿರ್ಧರಿಸಿ ತಮ್ಮ ಆಟ ನೋಡುವ ಆಸೆಗೆ ತಿಲಾಂಜಲಿ ಇಟ್ಟು ಹಿಂದೆ ಸರಿದರು. ನಾವಿಕನೂ ಸೇರಿದಂತೆ ಆರು ಜನ ಪ್ರಯಾಣ ಹೊರಟೆವು. ಬೆಳದಿಂಗಳು ಹರಡಿ ವಿಸ್ತಾರವಾದ ನದಿಯ ಹರಹನ್ನೂ ತೆರೆಯ ಏರಿಳಿತದ ಭಯಾನಕತೆಯನ್ನು ಕಣ್ಣಿಗೆ ರಾಚುವಂತೆ ಪ್ರದರ್ಶಿಸುತಿತ್ತು. ನಾವಿಕನನ್ನು ಹೊರತುಪಡಿಸಿ ನಾವೆಲ್ಲ ಜೀವ ಕೈಯಲ್ಲಿ ಹಿಡಿದು ಕುಕ್ಕುರುಗಾಲಿನಲ್ಲಿ ಕುಳಿತುಕೊಂಡಿದ್ದೆವು….. ಪಶ್ಚಿಮಕ್ಕೆ ಹೊರಳಿ ನೋಡಿದರೆ ತೀರ ಸನಿಹದಲ್ಲೇ ಭೋರ್ಗರೆಯುವ ಕಡಲು….. ಉತ್ತರ ದಿಕ್ಕಿನಿಂದ ವಿಶಾಲವಾಗಿ ತೆರೆಯನ್ನೆಬ್ಬಿಸುತ್ತ “ಇನ್ನೇನು ಬಂದೇ ಬಿಟ್ಟಿತು ನನ್ನಿನಿಯನ ಅರಮನೆ………” ಎಂಬ ಸಂಭ್ರಮದಲ್ಲಿ ಧಾವಿಸುವ ಅಘನಾಶಿನಿಯ ಪ್ರವಾಹ………..! ನಾವೆಯು ನದಿಯ ಅರ್ಧಭಾಗವನ್ನು ಕ್ರಮಿಸಿರಬಹುದು. ನಮ್ಮ ಅರಿವಿಗೇ ಬಾರದಂತೆ ನಾವೆಯಲ್ಲಿ ನೀರು ತುಂಬುತ್ತಿರುವುದು ನಮ್ಮ ಗಮನಕ್ಕೆ ಬಂದಿತು! ನಾವೆಯ ತಳದಲ್ಲಿ ಸಣ್ಣ ಸಣ್ಣ ರಂಧ್ರಗಳಿರುವುದು ನೀರು ಉಕ್ಕಿ ಬರುವುದನ್ನು ನೋಡಿದಾಗಲೇ ನಮ್ಮ ಗಮನಕ್ಕೆ ಬಂದಿತು. ನಮ್ಮೆಲ್ಲರ ಎದೆಗೂಡಿನಲ್ಲಿ ಅಳಿದುಳಿದ ಧೈರ್ಯವೂ ಒಮ್ಮಿಂದೊಮ್ಮೆಲೇ ಸೋಸಿ ಹೋದಂತೆ ಕಳವಳಗೊಂಡೆವು. ಕ್ಷಣಕ್ಷಣಕ್ಕೂ ನಾವೆಯಲ್ಲಿ ನೀರು ತುಂಬುವುದನ್ನು ಕಂಡಾಗ ನಮ್ಮೆಲ್ಲರ ಜಂಘಾಬಲವೇ ಉಡುಗಿ ಹೋಯಿತು. ತುಂಬಾ ಗಾಬರಿಗೊಂಡಿದ್ದ ಭಾವ ಹೊನ್ನಪ್ಪ ಮಾಸ್ತರ ಮತ್ತು ಗೆಳೆಯ ಗಣಪತಿ ಅಂಜಿಕೆಯನ್ನು ತೋರಗೊಡದೆ ದೋಣೆಯಲ್ಲಿ ತುಂಬಿದ ನೀರನ್ನು ಬೊಗಸೆಯಲ್ಲಿ ಎತ್ತಿ ನದಿಗೆ ಚೆಲ್ಲುತ್ತಿದ್ದರು. ಸಹೋದರ ನಾಗೇಶ ಮಾತೇ ಬಾರದವನಂತೆ ಕುಳಿತಿದ್ದ. ಕೃಷ್ಣ ಭಾಗವತರು ಮಾತ್ರ “ಏನೂ ಆಗುವುದಿಲ್ಲ ಹೆದ್ರಬೇಡಿ” ಎಂದು ಸುಳ್ಳು ಸಾಂತ್ವನ ಹೇಳುತ್ತಿದ್ದರು. ನನಗೆ ಆಚೆ ಕುಣಿಯಬೇಕಿದ್ದ ದುರ್ಯೋಧನ, ಚೊಚ್ಚಿಲ ಹೆರಿಗೆಯ ಸಂಭ್ರಮದಲ್ಲಿ ಹುಬ್ಬಳ್ಳಿಯ ತೌರುಮನೆಯಲ್ಲಿರುವ ಪತ್ನಿ ನಿರ್ಮಲಾ, “ಕೌರವ ಜೋರಾಗ್ಲಿ ಹಾಂ……” ಎಂದು ಹರೆಸಿ ಕಳಿಸಿದ ಅವ್ವ, ಮುಗುಳ್ನಕ್ಕು ಅನುಮೋದಿಸಿದ ಅಪ್ಪ, ಮನೆಯಲ್ಲಿ ಉಳಿದ ತಮ್ಮ-ತಂಗಿಯರೆಲ್ಲ ಸಾಲು ಸಾಲಾಗಿ ನೆನಪಾಗತೊಡಗಿದರು…… ನಾವಿಕ ಮಾತ್ರ ಒಂದೂ ಮಾತನಾಡದೇ ಜೋರಾಗಿ ಹುಟ್ಟು ಹಾಕುವ ಕಾಯಕದಲ್ಲೇ ನಿರತನಾಗಿದ್ದ. “ದೋಣಿಗೆ ತೂತು ಬಿದ್ದದ್ದು ನಿನಗೆ ಗೊತ್ತಿಲ್ವಾಗಿತ್ತೇನೋ?” ಎಂದು ಯಾರೋ ಕೇಳಿದ ಪ್ರಶ್ನೆಗೆ ಉತ್ತರಿಸುವ ಸೌಜನ್ಯವನ್ನೂ ತೋರಲಿಲ್ಲ. ನದಿಯ ಅರ್ಧಕ್ಕಿಂತ ಹೆಚ್ಚು ಭಾಗ ಕ್ರಮಿಸಿದ್ದೆವು. ಮರಳಿ ಹಿಂದೆ ಸಾಗುವ ಪ್ರಶ್ನೆಯೇ ಇಲ್ಲ. ಇನ್ನೂ ಅರ್ಧದಷ್ಟು ನದಿಯನ್ನು ದಾಟಬೇಕಿದೆ. ಸುಲಭದ ಮಾತಲ್ಲ. ಸಂಕಷ್ಟಕ್ಕೆ ನಾವೆಲ್ಲ ಮುಖಾಮುಖಿಯಾಗಿರುವುದು ಸ್ಪಷ್ಟವಾಗಿತ್ತು. ಅಂಜತ್ತಲೇ ಹೊರಳಿ ನೋಡಿದೆ. ಸಮುದ್ರದ ಮೀನುಗಾರಿಕೆಗೆ ಹೊರಟು ಬಂದು ದಂಡೆಯ ಕೊಂಚ ದೂರ ಲಂಗರು ಹಾಕಿ ನಿಂತಿರುವ ಮರ‍್ನಾಲ್ಕು ಬೋಟುಗಳು ಮಸುಕು ಮಸುಕಾಗಿ ಕಾಣಿಸಿದವು. ದಂಡೆಯನ್ನಂತೂ ಸುರಕ್ಷಿತ ತಲುಪುವುದು ಅಸಾಧ್ಯ. ನಡುವೆಯೇ ನಿಂತ ಬೋಟುಗಳನ್ನಾದರೂ ಮುಟ್ಟಬಹುದೇನೋ ಎಂಬ ಯೋಚನೆ ಬಂದದ್ದೇ ನಾವಿಕನಿಗೆ ಸೂಚನೆ ನೀಡಿದೆ, ಎಲ್ಲರೂ ಬೋಟುಗಳನ್ನು ಗಮನಿಸಿದರು. ನಾವಿಕನೂ ಅತ್ತ ಹೊರಳಿಸಿ ದೋಣಿಯನ್ನು ಮುನ್ನಡೆಸತೊಡಗಿದ. ತುಂಬಿದ ನೀರನ್ನು ಮೊಗೆದು ಹಾಕುವ ಕಾಯಕವನ್ನು ಗೆಳೆಯರು ಮುಂದುವರಿಸಿದ್ದರು. ಮಸುಕು ಮಸುಕಾಗಿ ಕಾಣಿಸುತ್ತಿದ್ದ ಬೋಟುಗಳು ಸಮೀಪಿಸುತ್ತಿದ್ದಂತೆ ಸ್ಪಷ್ಟವಾಗತೊಡಗಿದವು. ತೀರ ಸನಿಹಕ್ಕೆ ಬಂದಾಗ ಲಂಗರು ಇಳಿಬಿಟ್ಟ ಹಗ್ಗವನ್ನು ಯಾರೋ ಕೈಚಾಚಿ ಹಿಡಿದುಕೊಂಡ ಕ್ಷಣದಲ್ಲಿ ಎಲ್ಲರೂ ಹೋದ ಜೀವ ಬಂದಂತೆ ಹಗುರಾದೆವು. ಕಷ್ಟಪಟ್ಟು ಹಗ್ಗದೊಡನೆ ಸರ್ಕಸ್ಸು ಮಾಡದೇ ವಿಧಿ ಇರಲಿಲ್ಲ. ನಾವೆಲ್ಲ ಬೋಟುಗಳನ್ನು ಸೇರಿದ ಬಳಿಕ ನಾವಿಕ ಆಚೆ ದಂಡೆಗೆ ಕೂಗು ಹಾಕಿ ಅಲ್ಲಿರುವ ನಾವಿಕರನ್ನು ಕರೆದ. ಯಾರೋ ಪುಣ್ಯಾತ್ಮರು ನಮ್ಮ ಸಂಕಷ್ಟವನ್ನು ತಿಳಿದು ಕನಿಕರ ತೋರಿ ಬೇರೆ ನಾವೆಯನ್ನು ತಂದು ನಮ್ಮನ್ನು ಆಚೆ ದಡಕ್ಕೆ ಮುಟ್ಟಿಸಿದರು. ನಮ್ಮನ್ನು ಕರೆದು ತಂದ ನಾವಿಕ ಮಾತ್ರ ತನ್ನ ನಾವೆಯನ್ನು ತನ್ನ ಪಾಡಿಗೆ ಬಿಟ್ಟು ನಮ್ಮೊಡನೆ ಆಟದ ಡೇರೆಯತ್ತ ಹೊರಟಾಗ ಯಾರೋ ಆತನನ್ನು ಪ್ರಶ್ನಿಸಿದರು. “ಹೌದು…….ಎಲ್ಲಿ ಕಟ್ಟ ಹಾಕಿ ಬಂದ್ಯೋ ಇಲ್ವೋ ನಿನ್ನ ದೋಣಿಯ……….. ಅದರ ತಳಕ್ಕೆ ತೂತು ಇರೋದು ಗೊತ್ತಿದ್ರೂ ನಮ್ಮ ಕರಕೊಂಬಂದ್ಯಲ್ಲ ಮಾರಾಯ….” ಎಂದು ಬೇಸರ ತೋಡಿಕೊಂಡರು. ಆತ ಅತ್ಯಂತ ನಿರ್ಭಾವುಕನಾಗಿ “ನಂಗೇನ ಗೊತ್ತಿತ್ರಾ…… ಅದು ನನ್ನ ದೋಣಿ ಅಲ್ಲ…….. ನಿಮ್ಮಂಗೇ ನಾನು ಆಟ ನೋಡುಕ ಬಂದವ…….” ಎಂದು ಉತ್ತರಿಸಿದಾಗ ನಮಗೆಲ್ಲ ಮತ್ತೊಮ್ಮೆ ನೀರಿಗೆ ಬಿದ್ದು ಮುಳುಗಿಯೇ ಹೋದಂಥ ಅನುಭವವಾಯಿತು! ನಡೆದ ಎಲ್ಲ ವಿದ್ಯಮಾನಗಳಿಂದ ಗೊಂದಲಗೊಂಡಿದ್ದ ನಾನು ಈ ಎಲ್ಲ ಅಧ್ವಾನಗಳನ್ನು ಮನಸ್ಸಿನಿಂದ ತೊಡೆದು ಹಾಕಿ ಪಾತ್ರದ ಕುರಿತು ಯೋಚಿಸತೊಡಗಿದೆ. ಸಂಪೂರ್ಣ ತನ್ಮಯನಾಗಿ ಪಾತ್ರ ನಿರ್ವಹಿಸಿದೆ. ಪ್ರದರ್ಶನ ಯಶಸ್ವಿಯಾಯಿತು. ಪ್ರೇಕ್ಷಕರ ಚಪ್ಪಾಳೆ, ಸಿಳ್ಳೆಗಳ ಪ್ರತಿಕ್ರಿಯೆಯಿಂದ ನಾನು ಯಶಸ್ವಿಯಾದೆ ಎಂಬ ಸಮಾಧಾನವಾಯಿತು. ಸಹ ಕಲಾವಿದರೂ ಮುಕ್ತ ಮನಸ್ಸಿನಿಂದ ಪ್ರಸಂಶೆಯ ಮಾತನಾಡಿದರು. ಪಾತ್ರ ಮುಗಿಸಿ ಒಳಗೆ ಬಂದಾಗಲೂ ಚೌಕಿ ಮನೆಗೆ ಬಂದ ಅನೇಕ ಸಹೃದಯರು ಮೆಚ್ಚುಗೆಯ ಮಾತನಾಡಿ ಅಭಿನಂದಿಸಿದರು. ನಾನು ಹೆಮ್ಮೆಯಿಂದ ಬೀಗಿದೆ! ಆದರೆ ಮರುಕ್ಷಣವೇ ತನ್ನ ವೇಷ ಕಳಚುತ್ತಿದ್ದ ಧರ್ಮರಾಯನ ಪಾತ್ರಧಾರಿ ನನ್ನನ್ನು ಉದ್ದೇಶಿಸಿ, “ನೀವು ಹಾಗೆಲ್ಲ ಮಾತಾಡಬಾರದ್ರಿ……….ಎದುರು ಪಾತ್ರಗಳನ್ನು ಗೌರವಿಸಿ ಮಾತನಾಡಬೇಕು……ಇದು ಒಳ್ಳೆ ಕಲಾವಿದರ ಲಕ್ಷಣವಲ್ಲ……” ಎಂದು ಕಟುವಾಗಿ ಮಾತಾಡಿದ. ಪಾತ್ರ ಯಶಸ್ವಿಯಾಯಿತೆಂದು ಉಬ್ಬಿಹೋದ ನಾನು ಗಾಳಿ ಬಿಟ್ಟ ಬಲೂನಿನಂತೆ ಒಮ್ಮೆಯೇ ಕುಸಿದು ಹೋದೆ. “ಏನು ತಪ್ಪಾಯಿತು?” ಎಂದೆ. “ನಾನು ದೇವಸ್ಥಾನಗಳಲ್ಲಿ ಪೂಜೆ ಮಾಡುವುದಕ್ಕೇ ಯೋಗ್ಯ ಎಂದು ಹಂಗಿಸಿದರಲ್ಲ? ಅದು ಸರಿಯಲ್ಲ” ಎಂದು ಉತ್ತರಿಸಿದ. ನನಗೆ ಏನು? ಏತ್ತ? ಎಂಬುದೇ ತಿಳಿಯದೇ ಗೊಂದಲಗೊಂಡೆ. ಅಷ್ಟೂ ಜನರ ಮುಂದೆ ಅವನ ನಿಷ್ಠುರವಾದ ನುಡಿಗಳು ನನ್ನನ್ನು ಸಿಗ್ಗಾಗಿಸಿದವು. ನಡೆದದ್ದು ಇಷ್ಟೆ.. ಪಾಂಡವರೈವರನ್ನೂ ಒಂದೊಂದು ಬಗೆಯಿಂದ ನಿಂದಿಸಿ ಅವರ ದೌರ್ಬಲ್ಯವನ್ನು ಎತ್ತಿ ಹೇಳುವುದು ದುರ್ಯೋಧನನ ಪಾತ್ರಕ್ಕೆ ಪೂರಕವಾದದ್ದೇ. ಹಾಗೆಯೇ ವಿರಾಟ ನಗರಿಯಲ್ಲಿ ಪೂಜಾರಿಯಾಗಿ ವೇಷ ಮರೆಸಿಕೊಂಡಿದ್ದ ಧರ್ಮರಾಯನ ಮೋಸವನ್ನು ಎತ್ತಿ ಹೇಳಿ ಸಹಜವಾಗಿ ನಾನು ಕೆಣಕಿದ್ದೆ. ಇದರಲ್ಲಿ ಪಾತ್ರಪೋಷಣೆಯಲ್ಲದೆ ನನಗೆ ಬೇರೆ ದುರುದ್ದೇಶವಿರಲಿಲ್ಲ. ಆದರೆ ಧರ್ಮರಾಯ ಪಾತ್ರಧಾರಿ ಇಷ್ಟೊಂದು ಮನಸ್ಸಿಗೆ ಹಚ್ಚಿಕೊಳ್ಳಲು ಕಾರಣವೇನೆಂದು ಸಹಕಲಾವಿದರು ನನಗೆ ತಿಳಿಸಿ ಹೇಳಿದಾಗಲೇ ನನಗೆ ನನ್ನ ತಪ್ಪಿನ ಅರಿವಾಯಿತು……….. ಧರ್ಮರಾಯನ ಪಾತ್ರ ಮಾಡಿದವರು ಬೀರಪ್ಪ ಗುನಗ ಎಂಬುವವರು. ಅವರು ವೃತ್ತಿಯಿಂದ ಗ್ರಾಮ ದೇವತೆಯ ಪೂಜಾರಿಯಂತೆ. ನನಗೆ ಇದು ಗೊತ್ತಿರಲಿಲ್ಲ. ತನ್ನ ವೃತ್ತಿಯನ್ನೇ ಉಲ್ಲೇಖಿಸಿ ಮಾತನಾಡಿದುದ್ದಕ್ಕೆ ಆತ ಬೇಸರಗೊಂಡಿದ್ದ ಎಂಬುದು ನಂತರ ತಿಳಿಯಿತು. ನಾನು ವೇಷ ಕಳಚಿದ ಬಳಿಕ ಆತನಿಗೆ ವಾಸ್ತವವನ್ನು ವಿವರಿಸಿ ಸಾಂತ್ವನ ಹೇಳಿದೆ. ಆತ ಸಮಾಧಾನಗೊಂಡ. ಮಾತ್ರವಲ್ಲದೆ ಬೀರಪ್ಪ ಗುನಗ ಉತ್ತಮ ಪ್ರಸಾದನ ಕಲಾವಿದನೂ ಆದುದರಿಂದ ಮುಂದಿನ ದಿನಗಳಲ್ಲಿ ಹಲವು ಯಕ್ಷಗಾನ ಪ್ರದರ್ಶನಗಳಲ್ಲಿ ನನಗೆ ಮೇಕಪ್ ಮಾಡಿ ಪಾತ್ರವನ್ನು ರೂಪಿಸಿ ನೆರವಾಗಿದ್ದಾನೆ. ಆಗೆಲ್ಲ ತದಡಿಯ ಅಂದಿನ ಘಟನೆಯನ್ನು ಸ್ಮರಿಸಿಕೊಂಡು ನಾವು ನಕ್ಕು ಹಗುರಾಗುತ್ತಿದ್ದೆವು. ಹಗಲು ನಿದ್ದೆ ಮುಗಿಸಿ ನಾಳೆ ಕಾಲೇಜು ಉಪನ್ಯಾಸಕ್ಕೆ ಸಜ್ಜುಗೊಳ್ಳುವ ಅನಿವಾರ್ಯತೆಯಿಂದ ನಾನು ಊರಿಗೆ ಹೋಗದೆ ಗೆಳೆಯರಿಂದ ಬೀಳ್ಕೊಂಡು ಅಂಕೋಲೆಯ ಬಸ್ಸು ಹಿಡಿದೆ. ಮಧ್ಯಾಹ್ನದ ನಾಲ್ಕು ಗಂಟೆಯ ಹೊತ್ತಿಗೆ ನಾನು ಗಾಢ ನಿದ್ದೆಯಲ್ಲಿರುವಾಗ ಟೆಲಿಗ್ರಾಮ ಸಂದೇಶವೊಂದು ನನ್ನನ್ನು ಹುಡುಕಿ ಬಂದಿತು. ನನ್ನ ಭಾವ ಕೃಷ್ಣರಾವ್ ಸುಲಾಖೆ “ಮೇಲ್ ಚೈಲ್ಡ ಬೋಥ್ ದಿ ಮದರ್ ಎಂಡ್ ಚೈಲ್ಡ್ ಆರ್ ಸೇಫ್….” ಎಂಬ ತಂತಿ ಸಂದೇಶ ಕಳುಹಿಸಿದ್ದರು. ಅಂದು ೧೯೮೫ ರ ಏಪ್ರಿಲ್ ಇಪ್ಪತ್ನಾಲ್ಕನೇಯ ತಾರೀಖು. ನನಗೆ ಗಂಡು ಮಗು ಹುಟ್ಟಿದ ಸಂತೋಷ ತಂದ ದಿನ. ಮನೆಯಲ್ಲಿ ನಾನೊಬ್ಬನೇ ಇದ್ದುದರಿಂದ ಸಂತಸ ತಡೆಯಲಾಗದೆ ತಂತಿ ಸಂದೇಶವನ್ನು ಮುದ್ದಿಸಿ ಮತ್ತೊಮ್ಮೆ ದುರ್ಯೋಧನನ ದಿಗಿಣ ಹೊಡೆದೆ! ಅದು ದೇಶದ ನೆಚ್ಚಿನ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಹುಟ್ಟಿದ ದಿನವೇ ಆದುದರಿಂದ ನನ್ನ ಜೇಷ್ಠ ಪುತ್ರನಿಗೂ ‘ಸಚಿನ್ ಕುಮಾರ್’ ಎಂದೇ ಹೆಮ್ಮೆಯಿಂದ ನಾಮಕರಣ ಮಾಡಲಾಯಿತು. ರಾಮಕೃಷ್ಣ ಗುಂದಿ

Read Post »

You cannot copy content of this page

Scroll to Top