ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಅಂಕಣ ಸಂಗಾತಿ ನೆನಪಿನದೋಣಿಯಲಿ–02 ಕಾಲನ ಸುಳಿಗಾಳಿಯಲ್ಲಿ ಸಿಕ್ಕಿದ ತರಗೆಲೆಗಳು ನಾವು. ಆದರೂ ಸಿಗುವ ಒಂದಿಷ್ಟು ವಿರಾಮದಲ್ಲೇ ಸ್ಮರಣೆಗಳ ಜಾಡನ್ನು ಹಿಡಿದು  ಹೋದಾಗ………. ನೆನಪಿನ ದೋಣಿಯಲಿ ~೨ ಪರಿಪರಿಯ ರೂಪಿನಲಿ ಕಾಂತಿಯಲಿ ರಾಗದಲಿ ನೆರಯಿಸುತ ಪರಿಪರಿಯ ರಸಗಳಂ ಪ್ರಕೃತಿ  ಕೆರಳಿಸುತ ಹಸಿವುಗಳ ಸವಿಗಳನು ಕಲಿಸುವಳು ಗುರು ರುಚಿಗೆ ಸೃಷ್ಟಿಯಲ _  ಮಂಕುತಿಮ್ಮ   ಪ್ರಕೃತಿ ಅನೇಕ ಬಗೆಯ ರಸಗಳನ್ನು ತನ್ನ ಅಗಾಧವಾದ ಸೃಷ್ಟಿಯ ರೂಪಿನಲ್ಲಿ ಕಾಂತಿಯಲ್ಲಿ ಬಣ್ಣದಲ್ಲಿ ತುಂಬಿ ಜೀವದ ಹಸಿವುಗಳನ್ನು ಕೆರಳಿಸುತ್ತಾಳೆ.  ಅದನ್ನು ರುಚಿ ನೋಡಿದರೆ ಆನಂದ ಎಂಬುದನ್ನು ಕಲಿಸುತ್ತಾಳೆ . ಹೀಗೆ ನಮ್ಮ ಎಲ್ಲ ರುಚಿಗಳಿಗೂ ಸೃಷ್ಟಿಯೇ ಪ್ರಕೃತಿಯೇ ಗುರು .  ಹಾಗೆಯೇ ನಮ್ಮ ಆಹಾರಕ್ರಮ, ಅಭ್ಯಾಸ ,ಪಾಕವಿಧಾನಗಳು ಬಾಲ್ಯದಲ್ಲಿ ನಾವು ಏನನ್ನು ತಿಂದಿರುತ್ತೇವೆಯೋ ಅದರ ಮೇಲೆ ನಿರ್ಭರ.  ಅಮ್ಮನ ಅಡಿಗೆ, ಅಮ್ಮನ ಪಾಕ, ಅಜ್ಜಿಯ ಕೈ ತುತ್ತಿನ ರುಚಿ ಇವೆಲ್ಲಾ ನಾವಿರುವವರೆಗೂ ಮನ ಮಂಜೂಷದಲ್ಲಿ ಜತನದಲಿ ಕಾಪಿಟ್ಟ ನವಿಲುಗರಿ.  ಮುಟ್ಟಿ ತಡವಿದಾಗಲೆಲ್ಲ ಸ್ಮೃತಿಯಲೆಯ ಪುಳಕದ ನವಿರು. ಇವತ್ತು ತುಂಬಾ ನೆನಪಿಗೆ ಬರುತ್ತಿರುವುದು ಪಿಡಿಚೆಯನ್ನ.  ದೊಡ್ಡ ದೊಡ್ಡ ಪಂಚತಾರಾ ಹೋಟೆಲುಗಳಲ್ಲಿ ಈಗ ನಾಲ್ಕು ಕೋರ್ಸ್, ೫ ಕೋರ್ಸ್ ಮೀಲ್ಸ್ ಅಂತಾರಲ್ಲ ಹಾಗೆ,  ಮೂವತ್ತು ನಲವತ್ತು ವರ್ಷಗಳ ಹಿಂದೆ ಸಾಮಾನ್ಯ ಮಧ್ಯಮ ವರ್ಗದ ಮನೆಗಳಲ್ಲಿ  ದಿನದ ಊಟ ಹೀಗೆ 4 ಕೋರ್ಸಿನದು.   ಹೇಗೆ ಅಂತೀರಾ? ಎಲೆಯ ತುದಿಯ ನೆಂಚಿಕೆಗಳು ಉಪ್ಪಿನಕಾಯಿ, ಚಟ್ನಿ, ತೊಕ್ಕು, ವಿವಿಧ ಪುಡಿಗಳು ಅವುಗಳೊಂದಿಗೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಕಲಿಸಿಕೊಳ್ಳುವುದು ಇದೇ ಪಿಡಚೆ ಅನ್ನ ಮೊದಲ ಸುತ್ತು.  ಹುಳಿ ಕೂಟು ಇತ್ಯಾದಿಗಳದು ಎರಡನೆಯ ಸುತ್ತು . ತಿಳಿಸಾರಿನ ಮೂರನೇ ಸುತ್ತು ಮತ್ತು ಕಡೆಯ ಮಜ್ಜಿಗೆ ಅನ್ನದ ನಾಲ್ಕನೆ ಸುತ್ತು . ಆಯ್ತಲ್ಲ ಫೋರ್ ಕೋರ್ಸ್ ಮೀಲ್ಸ್. ಆಗೆಲ್ಲಾ ಬೆಳಿಗ್ಗೆ ಶಾಲೆಗೆ ಹೋಗುವ ಮುನ್ನ ಊಟದ ಅಭ್ಯಾಸವೇ ..ಹೀಗಾಗಿ ಪುಷ್ಕಳ ಭೋಜನ.  ಪಿಡಿಚೆ ಅಂದರೆ ನಿಘಂಟಿನ ಪ್ರಕಾರ ಒಂದು ಹಿಡಿಯಷ್ಟು ಪ್ರಮಾಣದ ಮುದ್ದೆ ಅಥವಾ ಉಂಡೆ . ಹುಳಿ ಸಾರುಗಳಂತೆ ದ್ರವ ರೂಪದಲ್ಲಿರದ ಕಾರಣ ಕಲಸಿದ ಮೇಲೆ ಅಂಗೈಯಲ್ಲಿ ಒತ್ತಿ ಉಂಡೆ ಮಾಡುತ್ತಿದ್ದುದರಿಂದ ಪಿಡಿಚೆ ಅನ್ನ  ಎನ್ನುವುದು ವಾಡಿಕೆ. ಮಿಡಿಕೆ ಅನ್ನ ಎಂತಲೂ ಅನ್ನುತ್ತಿದ್ದರು. ಆದರೆ ಅದು ಅಷ್ಟೊಂದು ರೂಢಿಯಲ್ಲಿರದ ಪದ.  ಇನ್ನು ಈ ಪಿಡಚೆ ಅನ್ನದ ವಿಧಗಳು ಹೇಳುತ್ತಾ ಹೋದರೆ ಹನುಮಂತನ ಬಾಲದುದ್ದದ ಪಟ್ಟಿ . ತರಹ ತರಹದ ಉಪ್ಪಿನಕಾಯಿಗಳು, ಹುಣಸೆ ಮಾವು ಅಮಟೆ ನೆಲ್ಲಿ ಕಾಯಿ ಮೊದಲಾದ ತೊಕ್ಕುಗಳು,  ಪುಡಿಗಳ ವಿಷಯಕ್ಕೆ ಬಂದರೆ ವಿಧವಿಧದ ಚಟ್ನಿಪುಡಿಗಳು, ಅನ್ನದಪುಡಿ, ಮೆಂತೆ ಹಿಟ್ಟಿನ ಪುಡಿಗಳು, ತರಕಾರಿಯ ಸಿಹಿ ಪಲ್ಯಗಳು, ಪುಡಿ ಕುಟ್ಟಿಹಾಕಿದ ಖಾರದ ಪಲ್ಯಗಳು, ಗೊಜ್ಜುಗಳು, ತಂಬುಳಿ, ಹಸಿಮಜ್ಜಿಗೆ ಒಂದೇ ಎರಡೇ ? ವಿಶಿಷ್ಟವಾದದ್ದು ಇನ್ನೊಂದೆಂದರೆ ತಿಳಿಸಾರಿನ (ರಸಂ) ಪುಡಿ ಮಾಡಿದ ಹೊಸದರಲ್ಲಿ ತಾಜಾ ಇರುವಾಗ ಬಿಸಿ ಅನ್ನಕ್ಕೆ ಉಪ್ಪು ಎಣ್ಣೆ ಹಾಕಿ ಇದನ್ನು ಕಲಿಸಿ ತಿಂದರೆ…..!  ಆಹಾ ವರ್ಣಿಸಲು ಪದಗಳಿಲ್ಲ ಬಿಡಿ.ಇವುಗಳೊಂದಿಗೆ ಬೇಳೆ ಮತ್ತುಮೆಂತೆಸೊಪ್ಪು/ಗೋರಿಕಾಯಿ ಹಾಕಿದ ಮಾಟೋಡಿ ಪಲ್ಯ ಪಿಡಿಚೆಯನ್ನಗಳ ರಾಜ . ನುಚ್ಚಿನುಂಡೆಯನ್ನು ಪುಡಿಮಾಡಿ ಚೂರು ಉಪ್ಪು ಜಾಸ್ತಿ ಎಣ್ಣೆ ಹಾಕಿ ಅನ್ನದೊಂದಿಗೆ ಕಲಸಿ ತಿಂದರೆ ತುಂಬಾ ಸ್ವಾದ . ಮೆಂತ್ಯ ಹಿಟ್ಟನ್ನು ಹುಣಸೆ ರಸದಲ್ಲಿ ಕಲಸಿ ಮೆಣಸಿನಕಾಯಿ ಒಗ್ಗರಿಸಿ ಮಾಡುತ್ತಿದ್ದ ಮೆಂತೆ ಹಿಟ್ಟಿನ ಗೊಜ್ಜು, ತೊಗರಿಬೇಳೆಯ ಅನ್ನದ ಪುಡಿ …..ಪಟ್ಟಿ ಅನಂತ _ಪ್ರಕಾರ ಅಪರಿಮಿತ .   ಆರೋಗ್ಯದ ದೃಷ್ಟಿಯಿಂದಲೂ ಕೆಲವು ಈ ರೀತಿಯ ಪಿಡಚೆ ಮೊದಲ ಮಗಳು ತುಂಬಾ ಉತ್ತಮ ಎಂದು ಪರಿಗಣಿಸಲ್ಪಟ್ಟಿವೆ ಮೊದಲ ಅನ್ನಕ್ಕೆ ತುಪ್ಪ ಹಾಕಿ ಕಲಿಸುವ ದೊಡ್ಡಿ ಪತ್ರೆ ತಂಬುಳಿ , ಹೇರಳೆಕಾಯಿ ಉಪ್ಪಿನಕಾಯಿ ರಸದ ಅನ್ನ  ಇವು ಪಿತ್ತಹಾರಿಗಳು. ಇನ್ನು ಬಾಣಂತಿಯರಿಗೆ ಕೊಡುವ ಬೆಳ್ಳುಳ್ಳಿ ಹಾಗೂ ಮೆಣಸು ಸೇರಿಸಿದ ಪುಡಿಯ ಅನ್ನ ಹೇರಳೆಕಾಯಿ ಹೋಳಿನ ಮೇಲೆ ಉಪ್ಪು ಮೆಣಸು ಪುಡಿ ಉದುರಿಸಿ ಸ್ಟವ್ ಮೇಲೆ ಸ್ವಲ್ಪ ಕಂದಿಸಿ ಹಿಂಡುವ ರಸ ಇವುಗಳನ್ನು ಮರೆಯಲಾದೀತೆ ? ಈ ಪಿಡಿಚೆ ಅನ್ನಗಳನ್ನು ನಂಚಿಕೆ ಮಾತ್ರ ಹಾಕಿ ಕಲೆಸಿದರೆ ಹೊಂದುವುದಿಲ್ಲ . ಎಣ್ಣೆಯೋ ತುಪ್ಪವೋ ಅಂತೂ ಜಿಡ್ಡಿನ ಮಾಧ್ಯಮ ಬೇಕು .ರುಚಿಗೆ ಅನುಸಾರ ಒಂಚೂರು ಲವಣ ಸೇರಿಸಿದರೆ ಸ್ವರ್ಗಸಮಾನಂ. ಎಣ್ಣೆಗಳಲ್ಲೂ ಹಸಿ ಕಡಲೆಕಾಯಿ ಎಣ್ಣೆ 1 ಭಾಗದವರಿಗೆ ಇಷ್ಟವಾದರೆ ಕರಾವಳಿ ಕಡೆಯವರಿಗೆ ಕೊಬರಿಎಣ್ಣೆ ಪ್ರಿಯ.ಆದರೆ ಉತ್ಕೃಷ್ಟ ರುಚಿಯ ಇರುತ್ತಿದ್ದುದು ಖಾದ್ಯಗಳನ್ನು ಕರಿದು ಉಳಿದ ಕರಿದ ಎಣ್ಣೆಯಲ್ಲಿ. ಕರಿದ ಪದಾರ್ಥಗಳ ರುಚಿ ವಾಸನೆಯನ್ನು ಇಲ್ಲಿಗೆ ವರ್ಗಾಯಿಸಿ ಬೇರೆಯದೇ ವಿಶಿಷ್ಟವಾದ ಸ್ವಾದ.  ಚಕ್ಕುಲಿ ಕರೆದೆಣ್ಣೆಯದು ಒಂದು ಘಮ ಕೋಡುಬಳೆ ಕರೆದೆಣ್ನಮೆ ಕೆಂಪಗೆ ಖಾರ, ಸಿಹಿ ಕರಿದ ಎಣ್ಣೆ ಸೂಸುತ್ತಿದ್ದ ಬೆಲ್ಲದ ಘಮಲು ನಾಲಿಗೆಯಂಚಿನ ಸಿಹಿ. ಆಗೆಲ್ಲಾ ಕರೆದ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ನಮಗೆಲ್ಲ ತಿಳಿದೇ ಇರಲಿಲ್ಲ . ರುಚಿಗೆ ಪರ್ಯಾಯ  ಅಷ್ಟೇ ಅಲ್ಲ ಗೃಹಿಣಿಯರ ಆಪತ್ಕಾಲಕ್ಕೆ ಒದಗಿ ಬರುತ್ತಿದ್ದ ಮಿತ್ರನೂ ಹೌದು. ಹುಳಿ/ಸಾರು ಮಾಡಿಯಾದ ಮೇಲೆ ಅತಿಥಿಗಳು ಬಂದರೆ ಈಗಿನ ಹಾಗೆ ಕ್ಷಣಾರ್ಧದಲ್ಲಿ ಕೆಲಸ ಮುಗಿಸುವ ಗ್ಯಾಸ್ ಕುಕ್ಕರ್ ಮಿಕ್ಸಿ ಇರದಿದ್ದಾಗ  ಇರುವುದರಲ್ಲಿಯೇ ಸವರಿಸಬೇಕಾದ ಅನಿವಾರ್ಯ ಸಮಯದಲ್ಲಿ ಈ ಎಲ್ಲಾ ಪಿಡಿಚೆ ಯನ್ನದ ಪರಿಕರಗಳು ಸಾರು/ಹುಳಿ ಯ ಕೊರತೆ ಸರಿದೂಗಿಸುತ್ತಿದ್ದವು.  ರಾತ್ರಿ ಊಟದಲ್ಲೂ ಅಷ್ಟೇ ಬೆಳಗಿನ ವ್ಯಂಜನಗಳಲ್ಲೇ ಅಡ್ಜಸ್ಟ್ ಮಾಡಲು ಇದೇ ಸಹಾಯಕ್ಕೆ ಬರುತ್ತಿದ್ದುದು . ಮನೆಯಲ್ಲಿ ತುಂಬಾ ಜನರಿದ್ದು ಲೋಕೋ ಭಿನ್ನರುಚಿಃ ಅಂದಾಗ ಮಾಡಿದ ತರಕಾರಿಯನ್ನು ಇಷ್ಟಪಡದವರು ಇನ್ನೊಂದು ಸುತ್ತು ಇವುಗಳಲ್ಲೇ ಊಟ ಮುಗಿಸಿ ಬಿಡಬಹುದಿತ್ತು . ಈಗಿನಂತೆ ಒಬ್ಬೊಬ್ಬರಿಗೆ ಒಂದೊಂದು ತರಹ ಮಾಡುವ ಅಭ್ಯಾಸ, ವ್ಯವಧಾನ, ಮುಚ್ಚಟೆ ಆಗಿನ ಕಾಲದಲ್ಲಿರಲಿಲ್ಲ . ಇನ್ನು ಬ್ರಹ್ಮಚಾರಿಗಳು, ಹೆಂಡತಿ ಮನೆಯಲ್ಲಿರದ ಟೆಂಪರರಿ ಬ್ರಹ್ಮಚಾರಿಗಳು ಬಿಸಿಯನ್ನ ಒಂದು ಮಾಡಿಕೊಂಡು ಇವು ಮತ್ತು ಮೊಸರಿನಲ್ಲಿ ಊಟ ಮುಗಿಸಿ ಬಿಡುತ್ತಿದ್ದರು .ಆಗಲೂ ಈಗಲೂ ಯಾವಾಗಲೂ “ಅವರಿಲ್ಲದ ಊಟ”ದ ಮುಖ್ಯ ಭಾಗ ಪಿಡಚೆ ಅನ್ನ ಅಂದರೆ ನೀವೆಲ್ಲಾ ಒಪ್ಪೇ ಒಪ್ತೀರಿ ಅಲ್ವಾ?  ಹಾಗೆ ಮಕ್ಕಳ ಅಕಾಲದ ಹಸಿವಿಗೆ ಆ ಕಾಲದಲ್ಲಿ ಅಮ್ಮಂದಿರು ಉತ್ತರ ಕಂಡುಕೊಳ್ಳುತ್ತಿದ್ದುದು ಇದರಲ್ಲೇ. ಪಿಡಚೆ ಅನ್ನಗಳ ಒಂದು ಕೈತುತ್ತು ಆ ಸಣ್ಣ ಹಸಿವನ್ನು ನೀಗಿಸಿ ಬಿಡುತ್ತಿತ್ತು. ದೂರದೂರಿನ ಪ್ರವಾಸಗಳು ಕೈಗೊಂಡ ಸಮಯದಲ್ಲೂ ಇವು ಆ ಹೊತ್ತಿನ ಊಟಕ್ಕೆ ಒದಗಿಬರುತ್ತಿದ್ದವು .ಗೃಹಿಣಿಯ ನಾಜೂಕುತನ, ಸಮಯಸ್ಫೂರ್ತಿ, ವಿಶಿಷ್ಟ ಕೈರುಚಿಗೆ ಒಳ್ಳೆಯ ಸಾಕ್ಷ್ಯ ಬರೆಯುತ್ತಿದ್ದವು ಇವುಗಳು. ಇನ್ನು ನಮ್ಮ ಮನೆಯಲ್ಲಿ ಚಿಕ್ಕವರಿದ್ದಾಗ ನಮಗೆಲ್ಲ ಈ ಪಿಡಚೆ ಅನ್ನ ಕಲಿಸಿಕೊಡುತ್ತಿದ್ದದು ಅಣ್ಣನೇ (ನಮ್ಮ ತಂದೆ) ಅವರು ತಿನ್ನಲು ಶುರುಮಾಡುವ ಮೊದಲು ಯಾವುದನ್ನು ಎಲೆಯ ತುದಿಗೆ ಬಡಿಸಿರುತ್ತಾರೋ ಅದರಲ್ಲಿ ಜಾಸ್ತಿ ಅನ್ನ ಕಲೆಸಿ 3 ಜನಕ್ಕೂ ಕೈ ತುತ್ತು ಮಾಡಿ ನಮ್ಮ ತಟ್ಟೆಗಳಿಗೆ ಹಾಕಿದ ನಂತರವೇ ಅವರು ಊಟ ಆರಂಭಿಸುತ್ತಿದ್ದದ್ದು.  ಹದವಾಗಿ ಮೇಲುಪ್ಪು ಸೇರಿಸಿ ಚಟ್ನಿಪುಡಿ, ಮೆಂತೆ ಹಿಟ್ಟು, ಸಿಹಿ ಪಲ್ಯ, ಉಪ್ಪಿನಕಾಯಿ ರಸಗಳಿಗಾದರೆ ಕರಗಿಸಿದ ತುಪ್ಪ, ಅನ್ನದ ಪುಡಿ ತೊಕ್ಕು ಬೇರೆ ಪಲ್ಯ ಗೊಜ್ಜುಗಳಿಗಾದರೆ ಕರಿದ ಎಣ್ಣೆಯೋ ಹಸಿ ಕಡಲೆಕಾಯಿ ಎಣ್ಣೆಯೋ ಹಾಕಿ ಕಲಸಿ ಕೊಡುತ್ತಿದ್ದ ಆ ಘಳಿಗೆಗಳು ಬಾಲ್ಯದ ನೆನಪಿನ ಅನರ್ಘ್ಯ ರತ್ನಗಳು. ನಾವು ಎಷ್ಟೇ ಕಲಸಿ ತಿಂದರೂ ಅಣ್ಣ ಕೊಡುತ್ತಿದ್ದ ಆ ರುಚಿ ಬರುವುದೇ ಇಲ್ಲ.  ಒಟ್ಟಿಗೆ ಊಟಕ್ಕೆ ಕುಳಿತಾಗಲೆಲ್ಲಾ ಎಷ್ಟೇ ದೊಡ್ಡವರಾದ ಮೇಲೂ “ಅಣ್ಣಾ” ಅಂದರೆ ಸಾಕು 3 ಜನಕ್ಕೂ ಆಮೇಲೆ ಅಳಿಯಂದಿರಿಗೂ ಅವರೇ ಕಲಿಸಿಕೊಡುತ್ತಿದ್ದುದು. ತಟ್ಟೆಯ ಬದಲು ದೊಡ್ಡ ಪಾತ್ರೆ ಇರುತ್ತಿತ್ತು ಅಷ್ಟೇ ವ್ಯತ್ಯಾಸ . ನಮ್ಮ ತಂದೆಯ ಚಿಕ್ಕಪ್ಪ ಅಂದರೆ ನಮ್ಮ ಚಿಕ್ಕ ತಾತನವರು ಅನ್ನ ಕಲಿಸಲು ಎಣ್ಣೆ ಅಥವಾ ತುಪ್ಪ ಹಾಕಿ ಅನ್ನುವ ಬದಲು “ಜಿಡ್ಡು ಬಿಡಿ” ಅಂತಿದ್ರು .  ಅದನ್ನು ನೆನೆಸಿಕೊಂಡು ನಗುತ್ತಿದ್ದೆವು. ಈರುಳ್ಳಿ ಬಜ್ಜಿ ಅಥವಾ ಪಕೋಡಾ ಈರುಳ್ಳಿ ಸಂಡಿಗೆ ಅಂತಹವುಗಳನ್ನು ಕರೆದು ಮಿಕ್ಕಿದ ಎಣ್ಣೆ ಎಂದರೆ ಮೇಲೆ ಕಲಿಸಲು ತುಂಬಾ ರುಚಿ ಅಂತಿದ್ರು ನಮ್ಮಣ್ಣ .  ಭೌತಿಕವಾಗಿ ಅಣ್ಣಾ ದೂರವಾಗುವ ಸ್ವಲ್ಪ ದಿನಕ್ಕೆ ಮೊದಲು ಅಂದೇ ಮಾಡಿದ ಹುಣಸೆ ತೊಕ್ಕಿನ ಅನ್ನ ಕಲಿಸುತ್ತಿದ್ದರು . ಒಬ್ಬಳೇ ಇದ್ದದ್ದು ಆವತ್ತು.  ಅಣ್ಣನ ಕೈ ತುತ್ತು ತಿನ್ನಬೇಕೆನಿಸಿತ್ತು. ಎಣ್ಣೆ ಒಳಗಿಟ್ಟು ಬರುವುದರಲ್ಲಿ ಅಣ್ಣ ನನಗಾಗಿ ಒಂದು ದೊಡ್ಡ ತುತ್ತು ಮಾಡಿದ್ದರು “ಆಮೇಲೆ ಊಟ ಮಾಡುವೆಯಂತೆ . ಇದೊಂದು ತುತ್ತು ತಿನ್ನು ಎಷ್ಟು ದಿನ ಆಗಿತ್ತು ಹೀಗೆ ತುತ್ತು ಕೊಟ್ಟು” ಎಂದರು. ಅಂದಿನ ಆ ತುತ್ತೇ ಅವರ ಕಡೆಯ ಕೈತುತ್ತಾಗಿ ಬಿಟ್ಟಿತು.  ಈಗಲೂ ಪಿಡಿಚೆ ಅನ್ನ ತಿನ್ನುವಾಗಲೆಲ್ಲಾ ಅಣ್ಣನ ನೆನಪು . ಅಮ್ಮ ಇಲ್ಲವಾದಾಗ ಅಣ್ಣ ಹೇಳ್ತಿದ್ರು ಅಮ್ಮನಿಗೆ ಇಷ್ಟವಾದದ್ದು ಮಾಡಿ ನಾವು ತಿಂದರೆ ಅವರ ಆತ್ಮಕ್ಕೆ ಶಾಂತಿ ಅಂತ. ಹಾಗಾಗಿ ಅಣ್ಣನಿಗೆ ಇಷ್ಟವಾದದ್ದನ್ನೆಲ್ಲಾ ನಾನು ಬಿಟ್ಟಿಲ್ಲ . ಬಾಳ ಪುಸ್ತಕದ ಪುಟ ಪುಟಗಳಲ್ಲಿ ನೆನಪುಗಳ ಬುತ್ತಿ ಆಗಾಗ ತೆಗೆದು ಮೆಲುಕು ಹಾಕುವ ಭಾಗ್ಯವಷ್ಟೇ ಈಗ ಉಳಿದಿರುವುದು.  ಪ್ರತಿಯೊಂದು ಮನೆಯಲ್ಲೂ ಹೀಗೆ ಏನಾದರೂ 1 ವಿಶಿಷ್ಟ ವಿಶೇಷ ಅಭ್ಯಾಸ ಸಂಪ್ರದಾಯ ರೂಢಿಯಾಗಿರುತ್ತದೆ . ಒಟ್ಟಿಗಿನ ಒಡನಾಟದಲ್ಲಿ, ಸಂಸರ್ಗದಲ್ಲಿ ಅಚ್ಚಳಿಯದ ನೆನಪುಗಳು ಸರಪಳಿಯಾಗಿ ಬೆಸೆದುಕೊಂಡಿರುತ್ತದೆ . ಪರಸ್ಪರರ ಬಗೆಗಿನ ಮಮತೆ ವಾತ್ಸಲ್ಯಗಳು ಅಲ್ಲಿ ಪ್ರತಿಬಿಂಬಿತ.  ಅಪ್ಪ ಅಣ್ಣ ಅಜ್ಜ ಅಜ್ಜಿ ಅತ್ತೆ ಮಾವ ಚಿಕ್ಕಪ್ಪ ದೊಡ್ಡಪ್ಪ ಸೋದರ ಸೋದರಿಯರು ಕೆಲವೊಮ್ಮೆ ಕಸಿನ್ ಗಳು ಎಲ್ಲಾ ಸೇರಿ ಒಟ್ಟಿಗಿನ ಸಹಭೋಜನಗಳು ಒಂದಾಗಿ ಕಳೆದ ಘಟನೆಗಳು ಎಲ್ಲವೂ ಸ್ಮೃತಿಪಟಲದ ಹಸಿಗೋಡೆಯ ಮೇಲೆ ಅಂಟಿ ನಿಂತ ಹರಳುಗಳು . ಅವರಿಗೆ ಅದು ಇಷ್ಟ ಇವರಿಗೆ ಇದು ಇಷ್ಟ ಎಂದೆಲ್ಲಾ ಎಷ್ಟು ಚೆನ್ನಾಗಿ ಅರಿತಿದ್ದೆವಲ್ಲ.  ಸಹವಾಸ ಸಹಭೋಜನ ಸಹಅನುಭೂತಿ ಗಳಿಂದಲೇ ನಿಜವಾದ ಸಾಹಚರ್ಯ.  ಈಗ ಸಹಭೋಜನದ ಪರಿಕಲ್ಪನೆಯೇ ಮಾಸಿಹೋಗಿದೆ. ಬೆಳಗಿನ ಅವಸರದ ತಿಂಡಿ, ಮಧ್ಯಾಹ್ನದ ಡಬ್ಬಿಯೂಟ .ರಾತ್ರಿಯಾದರೂ ಒಟ್ಟಿಗೆ ಕುಳಿತು ಊಟ ಮಾಡುವ ಅಭ್ಯಾಸ ಕಾಲನ ಮಯಕದ ಮಬ್ಬಿನಲ್ಲಿ ಮಾಯವಾಗುತ್ತಿದೆ.  ಒಂದಿಷ್ಟು ತಟ್ಟೆಯಲ್ಲಿ ಕಲಸಿ ತಂದು ದೂರದರ್ಶನದ ಮುಂದೆಯೋ ಲ್ಯಾಪ್ ಟಾಪ್, ಮೊಬೈಲ್ ಮೇಲೆ ಕೈಯಾಡಿಸುತ್ತಲೋ ಊಟದ ಶಾಸ್ತ್ರ ಮುಗಿಸುವುದೇ ಹೆಚ್ಚು.  ಪಿಜ್ಜಾ ಬರ್ಗರ್ ನೂಡಲ್ಸ್ ಗಳ ಮುಂದೆ ಪಿಡಚೆಯನ್ನ ಬಿಡಿ, ಮಾಮೂಲಿನ ಹುಳಿ/ಸಾರಿನ ಊಟಗಳೇ ಇಂದಿನ ತಲೆಮಾರಿನವರಿಗೆ ರುಚಿಸುವುದಿಲ್ಲ .  ಪುಟ್ಟ ಕುಟುಂಬದ ಮುಷ್ಟಿಯಿಂದ ವಸುದೈವ ಕುಟುಂಬಕಂ ಎಂಬ ಸಮಷ್ಟಿಯವರೆಗಿನ ಪಯಣಕ್ಕೆ  ಸಂಸಾರದ ಮಮತೆ ಪ್ರೀತಿಗಳೆಂಬ ಪ್ರಥಮ ಹೆಜ್ಜೆಗಳಿಂದ ಶ್ರೀಕಾರ . ಇಂದಿನ ದಿನಗಳಲ್ಲಿ ಅಪರೂಪವಾಗಿರುವ ಭಾವನೆಗಳು, ಮಾರ್ದವತೆಯ ಬರಗಾಲದಲ್ಲಿ ಮಮತೆಯ ಸಿಂಚನಗಳು ಇಂತಹ ಚಿಕ್ಕ ವಿಷಯಗಳಿಂದಲೇ ಆರಂಭವಾದರೆ ಒಳಿತು . ಈಗಲಾದರೂ ಎಚ್ಚೆತ್ತುಕೊಳ್ಳೋಣ, ಹಳೆಯ ಸಾಂಪ್ರದಾಯಿಕ ಅಡುಗೆ ಊಟದ ವಿಧಾನಗಳನ್ನು ಅನುಕರಿಸೋಣ, ಅನುಸರಿಸೋಣ . ಪದ್ಧತಿಗಳನ್ನು ಮುಂದುವರೆಸಿಕೊಂಡು ಹೋಗೋಣ.  ಏನಂತೀರಿ ? ಸುಜಾತಾ ರವೀಶ್     ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು”

Read Post »

ಅಂಕಣ ಸಂಗಾತಿ, ಸಾಧಕಿಯರ ಯಶೋಗಾಥೆ

ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ

Read Post »

ಇತರೆ

ಸಂಗಾತಿ ಬರಹಗಾರರಿಗೆ ಕಾವ್ಯ ಮಾಣಿಕ್ಯ ಪ್ರಶಸ್ತಿ-2021

ಸಂಗಾತಿಯ ಇಬ್ಬರು ಬರಹಗಾರರಿಗೆ 2021 ನೇ ಸಾಲಿನ ರಾಜ್ಯಮಟ್ಟದ ಕಾವ್ಯ ಮಾಣಿಕ್ಯ ಪ್ರಶಸ್ತಿ ದೊರಕಿದ್ದು ಪತ್ರಿಕೆ ಅವರಿಗೆಅಭಿನಂದನೆ ಸಲ್ಲಿಸುತ್ತದೆ

ಸಂಗಾತಿ ಬರಹಗಾರರಿಗೆ ಕಾವ್ಯ ಮಾಣಿಕ್ಯ ಪ್ರಶಸ್ತಿ-2021 Read Post »

You cannot copy content of this page

Scroll to Top