ಸಾವಿನ ಸಾಂಗತ್ಯದಲಿ
ಸಾವೆಂಬ ಬುಟ್ಟಿಯಲಿ
ಕಣ್ಕಟ್ಟಿನ ಯಕ್ಷಿಣಿಕಾರನ
ಯಕ್ಷಿಣಿ ಕೋಲಿನ
ಮಂತ್ರಕೆ ಅತಳ ಸುತಳ ಪಾತಾಳ ಸೇರುವವರೆಷ್ಟೋ
ಬಲ್ಲವರು ಯಾರು
ಸಾವೆಂಬ ಬುಟ್ಟಿಯಲಿ
ಕಣ್ಕಟ್ಟಿನ ಯಕ್ಷಿಣಿಕಾರನ
ಯಕ್ಷಿಣಿ ಕೋಲಿನ
ಮಂತ್ರಕೆ ಅತಳ ಸುತಳ ಪಾತಾಳ ಸೇರುವವರೆಷ್ಟೋ
ಬಲ್ಲವರು ಯಾರು
ಕೃತಿ: ಕನ್ನಡಿ ಮುಂದಿನ ನಗ್ನ ಚಿತ್ರಗಳು (ಗಜಲ್ ಸಂಕಲನ)
ಲೇ: ಪ್ರಶಾಂತ ಅಂಗಡಿ (ಶ್ವೇತಪ್ರಿಯ)
ಪ್ರಕಾಶಕರು: ನೇರಿಶಾ ಪ್ರಕಾಶನ
ಪುಟಗಳು: ೧೦೪
ಬೆಲೆ: ೧೧೦/-
8147403964
ಕನ್ನಡಿ ಮುಂದಿನ ನಗ್ನ ಚಿತ್ರಗಳು Read Post »
ಲೇಖನ ಪಕ್ಷಿಗಳೋ… ಪಕ್ಷಿವೀಕ್ಷಕರೋ ಸಂಧ್ಯಾ ಕೋಟೇಶ್ವರ “ಸರ್ ಸರ್, ನನ್ನ ಫೋಟೋನೂ ತೆಗೀರಿ ಸರ್. ಮೇಡಂ, ನಾನು ಪ್ರತಿದಿನದ ಹಾಗೇ ಇವತ್ತೂ ತುಂಬಾ ಕಲರ್ ಫುಲ್ ಆಗಿ ಬಂದಿದೀನಿ. ನನ್ನ ಫೋಟೋ ತೆಗೀರಿ. ಇವಾಗ ತಿರುಗಿ ನಿಲ್ಲುತ್ತೇನೆ. ಈ ಕಡೆ ಕ್ಲಿಕ್ ಮಾಡಿ”. ಹೀಗೇ ಬೇಡಿಕೆಗಳ ಪಟ್ಟಿ ಮುಗಿಯದಷ್ಟು. ಎಷ್ಟು ಫೋಟೋ ಹೊಡೆದರೂ ಹೊಡೆಯುವವರಿಗೆ ಬೇಜಾರಾಗುತ್ತಿಲ್ಲ. ಹೊಡೆಸಿಕೊಳ್ಳುವವರಿಗಂತೂ ಒಂದು ಚೂರು ಮುಲಾಜಿಲ್ಲ. ಇದು ಯಾವ ಸ್ಟುಡಿಯೋ ಅಂದುಕೊಳ್ತಾ ಇದ್ದೀರಾ? ಚಳಿಗಾಲ ಬಂತೆಂದರೆ ಸಾಕು, ಫೋಟೋಗಾಗಿ ಬೇಡಿಕೆ ಇಡುವವರು ರಂಗುರಂಗಿನ ವಲಸೆ ಪಕ್ಷಿಗಳು. ಹುಚ್ಚು ಹಿಡಿದಂತೆ ತಲ್ಲೀನರಾಗಿ ಕ್ಲಿಕ್ಕಿಸುವವರು ಪಕ್ಷಿವೀಕ್ಷಕರು. ಒಂದು ವಿಶೇಷ ಪಕ್ಷಿಯ ಕರೆ ಕೇಳುತ್ತಲೇ ಏನೇನೋ ಚರ್ಚೆ ಮಾಡುತ್ತಾ ಕೂತವರೆಲ್ಲಾ ಒಂದೇ ಸಮನೆ ತಂತಮ್ಮ ಕ್ಯಾಮರ ಬಳಿ ಓಡುತ್ತಾರೆ. ಎಲ್ಲರ ಎದೆ ಬಡಿತ ಜೋರಾಗುತ್ತದೆ. ಏದುಸಿರು ಬಿಡುತ್ತಾರೆ. ಆ ಬಣ್ಣ , ಮೈಕಟ್ಟು ಸುಮ್ಮನೆ ನಿಂತು ಆನಂದಿಸುತ್ತಾರೆ. ಎಷ್ಟು ನೋಡಿದರೂ ತೃಪ್ತಿ ಇಲ್ಲ. ಅದು ಓಡಿದ ಕಡೆ ಎಲ್ಲಾ ಓಡಿ, ಬೇರೆ ಬೇರೆ ಅಂಗುಲಗಳಲ್ಲಿ ಅದರ ಅಂದ ಸವಿಯುತ್ತಾರೆ. ತಮಗೆ ಬೇಕಾದಷ್ಟು ಕ್ಲಿಕ್ಕಿಸಿ ಮತ್ತೆ ಬಂದು ಸುಮ್ಮನೆ ಕುಳಿತು ಬಿಡುತ್ತಾರೆ. ಇದು ಈಗ ಅಂತಲ್ಲ. ಪ್ರತಿ ಬಾರಿ ಹೊಸ ಪಕ್ಷಿ ನೋಡಿದಾಗಲೂ ಇದೇ ಧಾವಂತದಿಂದ ಪಕ್ಷಿ ವೀಕ್ಷಕರು ಧಾವಿಸುತ್ತಾರೆ. ಮುಂಜಾವಿನ ಸರ‍್ಯೋದಯದ ಮುಂಚೆ ಗಾಢ ಮೌನದಲ್ಲಿರುವ ಪ್ರಕೃತಿ, ಚಿಲಿಪಿಲಿ ನಿನಾದದಲಿ ಎಲ್ಲರ ಉಸಿರು ಬಿಗಿ ಹಿಡಿಸಲು ತಯಾರಿ ನಡೆಸುತ್ತಿದೆಯೋ ಅನ್ನಿಸುತ್ತದೆ. ತಂಪಾಗಿರುವ ಮೌನಕ್ಕೆ, ನಿದ್ರಿಸುತ್ತಿರುವ ಗಿಡ ಗಂಟಿಗಳಿಗೆ, ಬಿದಿರು ಕಡ್ಡಿಗಳಿಗೆ, ಪೊದೆಗಳಿಗೆಲ್ಲ ಚಲನೆ ಕೊಡುವುದೇ ಈ ಪಕ್ಷಿಗಳ ಚಟುವಟಿಕೆ. ಇವುಗಳ ಅಂದ ಅನುಭವಿಸುವವನೇ ಬಲ್ಲ. ಒಂದಕ್ಕೆ ಮೈ ತುಂಬಾ ಒಂದೇ ಬಣ್ಣ; ಇನ್ನೂ ಕೆಲವು ಒಂದೊಂದು ಇಂಚಿಗೂ ಚಂದದ ಒಂದೊಂದು, ಬಣ್ಣ, ವಿನ್ಯಾಸವನ್ನು ಬಳಿದುಕೊಂಡಿರುತ್ತದೆ. ಕೆಲವಕ್ಕೆ ಯಾರೋ ಅದ್ಭುತ ಕಲಾವಿದ, ಕುಂಚವನ್ನು ದಟ್ಟ ಶ್ರೀಮಂತ ಬಣ್ಣಕ್ಕದ್ದಿ ರಾಚಿ ಬಿಟ್ಟಿರಬೇಕು. ಕೆಲವು ಪಕ್ಷಿಗಳು ಎದುರು ಬಂದು ಕುಳಿತಾಗಲಂತೂ ಸೃಷ್ಠಿಕರ‍್ತ ಎಷ್ಟು ರಸಿಕನಿರಬಹುದು ಎನಿಸುತ್ತದೆ. ಪಕ್ಷಿಗಳ ಲಗುಬಗೆ ಒಂದೆಡೆಯಾದರೆ ಇನ್ನು ಪಕ್ಷಿ ವೀಕ್ಷಕರ ಸಂಭ್ರಮ ನೋಡಬೇಕು. ಪಕ್ಷಿಗಳನ್ನು ಹುಡುಕಿಕೊಂಡು ಹೋಗುವ ಒಂದು ಗುಂಪಿದೆ. ಅವರನ್ನು ಬರ್ಡರ್ಸ ಅಥವಾ ಪಕ್ಷಿವೀಕ್ಷಕರು ಅಂತ ಕರೀತಾರೆ. ಇವರಲ್ಲಿ ವೃತ್ತಿಪರರು ಹಾಗು ಹವ್ಯಾಸಿಗಳು ಇರುತ್ತಾರೆ. ಪಕ್ಷಿಗಳನ್ನು ಗಮನಿಸುವುದು, ಅವರ ಚಲನವಲನ ಕಂಡು ಆನಂದಿಸುವುದು ಎಷ್ಟು ಖುಷಿ ಕೊಡುತ್ತದೋ , ಈ ಪಕ್ಷಿವೀಕ್ಷಕರನ್ನು ನೋಡುವುದು ಅಷ್ಟೇ ಮಜಾ ಕೊಡುತ್ತದೆ. ಅವರಿಗೆ ಪ್ರಕೃತಿಯ ಚಿಕ್ಕ ಚಿಕ್ಕ ಬದಲಾವಣೆಗಳು ಪ್ರಚೋದಿಸುತ್ತವೆ. ಸಾಮಾನ್ಯರಿಗೆ ಬಹುಶಃ ಕಾಗೆ,ಮೈನಾ, ಕೊಕ್ಕರೆ, ಬಾತುಕೋಳಿ , ಇಂತಹ ಕೆಲವು ಪಕ್ಷಿಗಳ ಹೆಸರು ತಿಳಿದಿರುತ್ತದೆ. ಬೇರೆ ಎಲ್ಲಾ ಪಕ್ಷಿಗಳೂ ಒಂದೇ ತರಹ ಕಾಣಿಸುತ್ತದೆ. ಆದರೆ ಇವರಿಗೆ ಪಕ್ಷಿಯ ಮೇಲಿನ ಒಂದು ಚಿಕ್ಕ ವಿವರವೂ ಮುಖ್ಯವಾಗುತ್ತದೆ. ಪಕ್ಷಿಯ ಆವಾಸ, ಗಾತ್ರ, ಆಕಾರ, ಬಣ್ಣ, ಕೂಗು ಇವೆಲ್ಲದಕ್ಕೂ ಸೂಕ್ಷ್ಮ ಗ್ರಾಹಿಗಳಾಗಿರುತ್ತಾರೆ. ಆಗಸದ ಅಂಚಲ್ಲಿ ಎಷ್ಟೋ ಎತ್ತರದಲ್ಲಿ ಹಾರುವ ಪಕ್ಷಿಯ ಹೆಸರನ್ನು ಥಟ್ ಅಂತ ಹೇಳುತ್ತಾರೆ. ಇಷ್ಟೇ ಅಲ್ಲ, ಪಕ್ಷಿಗಳ ನಡವಳಿಕೆಗಳು ಕೂಡಾ ಮುಖ್ಯವಾಗುತ್ತದೆ. ಪಕ್ಷಿಗಳನ್ನು ನೋಡಿದಂತೆ ತಮ್ಮ ದಾಖಲೆ ಯ ಪಟ್ಟಿಗೆ ಸೇರಿಸುತ್ತಾರೆ. ಅದರಲ್ಲಿ ಒಂದು ಹೊಸದು ಸರ‍್ಪಡೆಯಾದರೂ ಏನೋ ಖುಷಿ. ಈಗ ಚಳಿಗಾಲ ಶುರುವಾಗಿದೆ ನೋಡಿ, ಈಗಂತೂ ಹಬ್ಬ. ದೇಶ ವಿದೇಶಗಳಿಂದ ಪಕ್ಷಿಗಳು ವಲಸೆ ಬಂದಿರುತ್ತವೆ. ತಾವು ನೋಡದೆ ಇರುವ ಪಕ್ಷಿ ಒಂದು ಜಾಗದಲ್ಲಿ ಇದೆ ಎಂದು ತಿಳಿದು ಬಂದರೆ ಸಾಕು, ಮಳೆ, ಗಾಳಿ, ಧೂಳು,ಕೊಚ್ಚೆ ಯಾವುದನ್ನೂ ಲೆಕ್ಕಿಸದೆ ಅದನ್ನು ನೋಡಲು ಅಣಿಯಾಗಿ ಹೊರಟುಬಿಡುತ್ತಾರೆ. ಇನ್ನೇನಾದರೂ ಅವರನ್ನು ಗಮನಿಸಲು ತೊಡಗಿದರೆ ಮೊದಲ ಸಲ ನೋಡಿದರೆ ಕಿರಿಕಿರಿಯಾಗುತ್ತದೆ. ನಂತರ ಹುಚ್ಚು ಅನಿಸುತ್ತದೆ ! ಇದೊಂಥರಾ ಪ್ರಕೃತಿಯೊಂದಿಗೆ ಬೆರೆಯುವ ಹುಚ್ಚು. ನಿರ‍್ಗದ ಮಡಿಲಲ್ಲಿ ಲೀನವಾಗುವ ಹುಚ್ಚು. ಯಾವುದೋ ಪಕ್ಷಿ ನೀರ ಸೆಲೆಯಲ್ಲಿ ಮಿಂದು ಮೈ ಕೊಡವಿ ಎದ್ದರೆ ಇವರ ಮೈ ಎಲ್ಲಾ ರೋಮಾಂಚನ. ಹಕ್ಕಿಯೊಂದು ಆಹಾರಕ್ಕಾಗಿ ಮೀನೋ, ಕೀಟವನ್ನೋ ಬಾಯಲ್ಲಿ ಹಿಡಿದರೆ ಆ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವ ತವಕ. ಬಯಲಿನ ಮೂಲೆಯಲ್ಲಿ ಒಂದು ಕೂಗು ಕೇಳಿದರೂ, ಅತೀವವಾದ ಆನಂದದಿಂದ ಅದನ್ನು ಹುಡುಕಿ ಅಲೆಯುತ್ತಾರೆ. ಅವರ ಕಣ್ಣ ಮುಂದೆ ಒಂದೊಂದು ಸುಯ್ನ್ ಅಂತ ಸುಳಿದಾಗಲೂ ವಿಚಿತ್ರವಾದ ಕೌತುಕವೊಂದು ಅವರ ಕಣ್ಣಂಚಲಿ ಮೂಡುತ್ತದೆ. ಆ ಪಕ್ಷಿಯ ಬರುವಿಕೆಗಾಗಿ, ಒಂದು ನೋಟಕ್ಕಾಗಿ ದಿನವಿಡೀ ಕಾಯುತ್ತಾರೆ. ಬಹುಶಃ ಆ ತಾಳ್ಮೆಯನ್ನೂ ಪ್ರಕೃತಿಯೇ ಕಲಿಸಿರಬೇಕು. ಪಕ್ಷಿವೀಕ್ಷಕರ ನಿರ‍್ಗದ ಬಗೆಗಿನ ಕಳಕಳಿಯೂ ಶ್ಲಾಘನೀಯ. ಮರ ಕಡಿಯುವುದರಿಂದ, ಕೆರೆಗಳ ನಾಶದಿಂದ, ಜನರ ಹಾವಳಿಯಿಂದ ಪಕ್ಷಿಗಳ ವಾಸಸ್ಥಾನಕ್ಕೆ ತೊಂದರೆಯಾಗುವುದರ ಬಗ್ಗೆ ದನಿಯೆತ್ತುತ್ತಾರೆ. ಕಟ್ಟಿರುವ ಗೂಡು ನಾಶವಾಗದಂತೆ ಕಾಳಜಿ ವಹಿಸುತ್ತಾರೆ. ಅಪಾಯದ ಅಂಚಿನಲ್ಲಿರುವ ಸಂಕುಲದ ಬಗ್ಗೆ ಮರುಗುತ್ತಾರೆ. ಇವರ ಆಸಕ್ತಿಯಿಂದ ಪಕ್ಷಿಸಂಕುಲ ಉಳಿದು ಪರಿಸರ ಸಮೃದ್ಧಿಯಾಗಿರಲಿ ಎಂಬುದೇ ಆಶಯ.
ಪಕ್ಷಿಗಳೋ… ಪಕ್ಷಿವೀಕ್ಷಕರೋ Read Post »
ಸಂತೆಯೊಳಗೆ ನಿಂತ ಕಬೀರ: ಅಕ್ಷರ ಸಂತ ಹಾಜಬ್ಬ ಒಬ್ಬ ಮನುಷ್ಯ ಸಮಾಜಮುಖಿಯಾಗಿ ಚಿಂತಿಸಲು ಒಂದು ಕಾರಣ, ಘಟನೆ ಆತನೊಳಗೆ ಅಡಗಿರುತ್ತದೆ. ಪ್ರತಿಯೊಬ್ಬ ಮನುಷ್ಯನು ಶಿಕ್ಷಣವಂತನಾಗಬೇಕು, ಯಾರೂ ಕೂಡ ಶಿಕ್ಷಣದಿಂದ ವಂಚಿತನಾಗಬಾರದು ಎಂದು ಶಿಕ್ಷಣಕ್ಕಾಗಿಯೇ ದುಡಿಯುತ್ತ ಅದರ ಸೇವೆಯಲ್ಲಿಯೇ ನಿರತರಾಗಿರುವ ಹರೇಕಳ ಹಾಜಬ್ಬರು ಸರ್ಕಾರಕ್ಕಲ್ಲದೆ ಜನ ಸಾಮಾನ್ಯರಿಗೂ ಮಾದರಿ. ಮಂಗಳೂರು ತಾಲ್ಲೂಕಿನ ಹರೇಕಳ ಗ್ರಾಮದವರಾದ ಹಾಜಬ್ಬರು ತೀರಾ ಹಿಂದುಳಿದ ಗ್ರಾಮೀಣ ಪ್ರದೇಶದವರು. ಬೀದಿಬದಿಯಲ್ಲಿ ಬುಟ್ಟಿಯೊತ್ತು ಕಿತ್ತಲೆ ಹಣ್ಣನ್ನು ಮಾರಿ ಅದರಿಂದಲೇ ತಮ್ಮ ಕುಟುಂಬದ ಜೀವನ ನಡೆಸುವ ಕಾಯಕ ಯೋಗಿ. ಔಪಚಾರಿಕವಾದ ಶಿಕ್ಷಣವನ್ನೆ ಹೊಂದಿರದ ಇವರು ತುಳು ಮತ್ತು ಬ್ಯಾರಿ ಭಾಷೆಗಳ ಬಗ್ಗೆ ಮಾತ್ರ ತಿಳುವಳಿಕೆಯುಳ್ಳವರು. ಹೀಗೆ ಒಂದು ದಿನ ಕಿತ್ತಲೆ ಮಾರುತ್ತ ಒಂದು ಕೈಯಲ್ಲಿ ಬುಟ್ಟಿ ಹಿಡಿದು, ಮತ್ತೊಂದು ಕೈಯಲ್ಲಿ ಕಿತ್ತಲೇ ಹಿಡಿದು ಮಾರುತ್ತ ಸಾಗುವಾಗ 68 ವರ್ಷದ ವೃದ್ಧ ಇಂಗ್ಲೀಷ್ ದಂಪತಿಗಳು ಕಿತ್ತಲೇ ಹಣ್ಣನ್ನು ಕೊಂಡುಕೊಳ್ಳಲು “How Much” ಎಂದು ಕೇಳುತ್ತಾರೆ. ವರ್ಷಾನುಗಟ್ಟಲೆ ವ್ಯಾಪಾರ ಮಾಡುತಿದ್ದರು ಅದಕ್ಕೆ ಪ್ರತಿಕ್ರಿಯಿಸಲು ಸಾಧ್ಯವಾಗದೆ ಮುಜುಗರಕ್ಕೊಳಗಾಗುತ್ತಾರೆ. ಇದಕ್ಕೆ ಮೂಲಕಾರಣ ನಾನು ಶಿಕ್ಷಣದಿಂದ ವಂಚಿತನಾಗಿರುವುದು ಎಂಬುದನ್ನು ಮನಗಾಣುತ್ತಾರೆ. ಈ ಘಟನೆಯೆ ಅವರ ಶಿಕ್ಷಣಕ್ರಾಂತಿಯ ತಿರುವು. ಹಾಜಬ್ಬರ ಹರೇಕಳ ಗ್ರಾಮದಲ್ಲಿ ಶಾಲೆಯೆ ಇರಲಿಲ್ಲ. ಈ ಕಾರಣಕ್ಕಾಗಿಯೆ ಅವರು ಶಿಕ್ಷಣವನ್ನೆ ಕಾಣಲಿಲ್ಲ. ಅಲ್ಲದೆ ಹಾಜಬ್ಬರು ಆ ಊರಿಗೆ ಶಾಲೆ ತರುವ ತನಕ ಅಲ್ಲಿನ ಮಕ್ಕಳು ಶಿಕ್ಷಣವಿಲ್ಲದೆ ಮೂಲಭೂತ ಹಕ್ಕಿನಿಂದ ವಂಚಿತರಾಗಿದ್ದರು. ನನಗಂತೂ ಶಿಕ್ಷಣ ಸಿಗಲಿಲ್ಲ, ಆದರೆ ಇಂದಿನ ಪೀಳಿಗೆ ಶಿಕ್ಷಣದಿಂದ ವಂಚಿತರಾಗಬಾರದೆಂದು, ಆ ಕಡುಬಡತನ ಜೊತೆಗೆ ಕಿತ್ತಲೆ ಹಣ್ಣು ವ್ಯಾಪಾರದ ನಡುವೆ ಸರ್ಕಾರಿ ಕಛೇರಿ, ಸಂಬಂಧಪಟ್ಟ ಅಧಿಕಾರಿಗಳ ಬಳಿಗೆ ಅಲೆದಾಡಿದರು. ಅವರ ಅಲೆದಾಟದ ಪರಿಶ್ರಮಕ್ಕೆ 17 ಜೂನ್ 2000 ನೇ ಇಸವಿಯಲ್ಲಿ ಹರೇಕಳಕ್ಕೆ ಪ್ರಾಥಮಿಕ ಶಾಲೆ ಮಂಜೂರಾಯಿತು. ಸರ್ಕಾರ ಶಾಲೆಯನ್ನೆನೊ ಮಂಜೂರು ಮಾಡಿದೆ, ಆದರೆ ಮಕ್ಕಳಿಗೆ ಪಾಠ ಮಾಡಲು ಕಟ್ಟಡವಿಲ್ಲ. ಹೀಗಿರುವಾಗ ಹಾಜಬ್ಬರು ತಾವು ಕಿತ್ತಲೆ ಹಣ್ಣು ಮಾರಿ ಉಳಿತಾಯ ಮಾಡಿದ್ದ 25.000 ರೂ ಜೊತೆಗೆ ಇತರೆ ದಾನಿಗಳಿಂದ ಹಣ ಸಂಗ್ರಹಿಸಿ ಒಂದು ಎಕರೆ ಭೂಮಿ ಖರೀದಿಸಿ ಮಕ್ಕಳಿಗೆ ಕಟ್ಟಡ ನಿರ್ಮಾಣ ಮಾಡಿಸಿಕೊಟ್ಟರು. ಇದೀಗ ಆ ಶಾಲೆ ಪ್ರಾಥಮಿಕದೊಂದಿಗೆ ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿದೆ. ಇಂದಿಗೂ ಸಹ ತನಗೆ ಬರುವ ಲಕ್ಷಾಂತರ ರೂ ಪ್ರಶಸ್ತಿ ಮೊತ್ತವನ್ನು ತಮಗಾಗಿ ಬಳಸದೆ ಶಾಲೆ ಅಭಿವೃದ್ಧಿಗಾಗಿಯೇ ಬಳಸುತ್ತಾರೆ. ವಿವಿಧ ದಾನಿಗಳಿಂದ ಈ ವರೆವಿಗೂ 70 ಲಕ್ಷ ರೂ ದೇಣಿಗೆ ಸಂಗ್ರಹಿಸಿ ಅದನ್ನು ಶಾಲೆಯ ಅಭಿವೃದ್ಧಿಗೆ ಬಳಸಿ ಯಶಸ್ವಿಯಾಗಿ ಅಕ್ಷರ ಸಂತನಾಗಿ ಜನಮಾಸದಲ್ಲಿ ನೆಲೆಸಿದ್ದಾರೆ. ಅಕ್ಷರ ಸಂತ ಹಾಜಬ್ಬರ ಕುರಿತು ಇರ್ಸತ್ ಪಜೀರ್ ರವರು ‘ಹರಕೇಳ ಹಾಜಬ್ಬ ಜೀವನ ಚರಿತ್ರೆ’ ಎಂಬ ಪುಸ್ತಕವನ್ನು ಬರೆದರು. ಅನಂತರ ಹಾಬಜ್ಜರ ಜೀವನ ಚರಿತ್ರೆಯನ್ನು ಮಂಗಳೂರು ವಿಶ್ವವಿದ್ಯಾನಿಲಯ ಪಠ್ಯಕ್ರಮದಲ್ಲಿ ಸೇರಿಸಿತು. ಇವರ ಸಮಾಜ ಸೇವೆಯನ್ನು ಮೆಚ್ಚಿ ಬ್ರಿಟಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್ (BBC) 2012 ರಲ್ಲಿ ‘ಅಕ್ಷರವಿಲ್ಲದ ಹಣ್ಣು ಮಾರಾಟಗಾರನ ಭಾರತೀಯ ಶಿಕ್ಷಣ ಕನಸು’ ಎನ್ನುವ ಶೀರ್ಷಿಕೆಯಡಿ ಲೇಖನ ಪ್ರಕಟಿಸಿತು. CNN, IBN ಮತ್ತು Relaince Foundation ನವರು ‘The Real Hero’ ಪ್ರಶಸ್ತಿ ನೀಡಿದರು. ಇದೀಗ ಅವರಿಗೆ ಭಾರತೀಯ ಸರ್ಕಾರ ಕೊಡಮಾಡುವ 2020 ರ ನಾಗರೀಕ ಪ್ರಶಸ್ತಿಯಾದ ಪದ್ಮಶ್ರೀ ಭಾಜನರಾಗಿದ್ದಾರೆ. ಪ್ರಶಸ್ತಿ ತೆಗೆದುಕೊಳ್ಳುವಾಗಲೂ ರಾಷ್ಟ್ರಪತಿ ಭವನಕ್ಕೆ ಬರಿಗಾಲಿನಲ್ಲಿಯೇ ತೆರಳಿ ಸ್ವೀಕರಿಸಿದ ಇವರು ಶಿಕ್ಷಣ ಕ್ರಾಂತಿಯ ಕಣ್ಣಂತೆಯೆ. ತಾನು ಒಂದಕ್ಷರವನ್ನು ಕಲಿಯದೆ ಈ ತಲೆಮಾರಿನ ಮಕ್ಕಳಿಗೆ ಅರಿವಿನ ದೀಪವನ್ನು ಬೆಳಗಿಸುತ್ತಲೆ, ತಾನು ಮಾತ್ರ ಎಡಗೈಯಲ್ಲಿ ಬುಟ್ಟಿಯೊತ್ತು ಬಲಗೈಯಲ್ಲಿ ಕಿತ್ತಲೆ ಹಣ್ಣಿಡಿದು ಶಾಲೆ ಮತ್ತು ಮಕ್ಕಳ ಓದಿನ ಬಗೆಯೆ ಧ್ಯಾನಿಸುತ್ತಿರುವ ಅಕ್ಷರ ಸಂತ ಹರೇಕಳ ಹಾಜಬ್ಬರು ಈ ಕಾಲಮಾನದಲ್ಲಿ ಸಂತೆಯೊಳಗೆ ನಿಂತ ಕಬೀರ. ಹಾರೋಹಳ್ಳಿ ರವೀಂದ್ರ
ಸಂತೆಯೊಳಗೆ ನಿಂತ ಕಬೀರ: ಅಕ್ಷರ ಸಂತ ಹಾಜಬ್ಬ Read Post »
You cannot copy content of this page