ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ತುಮುಲಗಳು

ಪುಸ್ತಕ ಸಂಗಾತಿ ತುಮುಲಗಳು ಹಿರಿಯ ಗೆಳೆಯರಾದ ಪ್ರೇಮಸಾಗರ ಕಾರಕ್ಕಿಯವರ ಕವನ ಸಂಕಲನವಾದ ” ತುಮುಲಗಳು ” ಹೆಸರೇ ತಿಳಿಸುವ ಹಾಗೆ ಅಂತರಾಳದ ಬೇಗುದಿಗಳನ್ನ, ತಳಮಳವನ್ನ ಹೊರ ಹಾಕುವ ಪ್ರಕ್ರಿಯೆಯಾಗಿ ಮೂಡಿ ಬಂದ ಸಂಕಲನವಾಗಿದೆ. ಅವರೇ ಬರೆದ ಹಾಗೆ ನನ್ನನ್ನು ಪ್ರೀತಿಸಿದ, ದ್ವೇಷಿಸಿದ, ಜೊತೆಯಾದ, ತೊರೆದ, ಗೌರವಿಸಿದ, ಅವಮಾನಿಸಿದ, ಪ್ರೋತ್ಸಾಹಿಸಿದ, ಹೀಗಳೆದ ಎಲ್ಲರಿಗೂ ಕೃತಜ್ಞನಾಗಿದ್ದೇನೆ ಎಂದು ಹೇಳುವುದರಲ್ಲೇ ಅವರ ತುಮುಲಗಳನ್ನ ಅರ್ಥೈಸಿಕೊಳ್ಳಬಹುದು. ಸ್ನೇಹಿತರಾದ ಪ್ರೇಮಸಾಗರ ಕಾರಕ್ಕಿಯವರ ಕೆಲವು ಬರಹಗಳನ್ನ ಫೇಸ್ಬುಕ್ ನಲ್ಲಿ ಗಮನಿಸುತ್ತಲೇ ಬಂದಿರುವ ನಾನು ಅವರು ಆಲ್ಬರ್ಟ್ ಕಾಮೂ ಅವರ The Fall – “ಪತನ” ಕೃತಿಯನ್ನ ಕನ್ನಡಕ್ಕೆ ತಂದಿದ್ದನ್ನ ಗಮನಿಸಿ ಪುಸ್ತಕ ತರಿಸಿಕೊಂಡ ನನಗೆ “ತುಮುಲಗಳು” ಅಚ್ಚರಿಯಾಗೆ ಬಂದಿತ್ತು. ಆಮೇಲೆ ತಿಳಿಯಿತು ಇವರು ಕಾಮೂ ಅವರ ಕೃತಿಯನ್ನೇ  ಅನುವಾದಿಸಿಸಲು ಆಯ್ಕೆ ಮಾಡಿಕೊಂಡಿದ್ದಕ್ಕೂ ಅವರ ಕವನ ಸಂಕಲನಕ್ಕೂ ಅವಿನಾಭಾವ ಸಂಬಂಧವನ್ನ ಗುರುತಿಸಿದೆ.    ವೈಯುಕ್ತಿಕವಾಗಿ ಕವಿತೆಗಳಲ್ಲಿ ಪ್ರೀತಿ-ಪ್ರೇಮಗಳ ಹೊರತಾಗಿ ಏನಾದರೂ ಇದೆಯೇ ಎಂಬುದನ್ನ ಹುಡುಕುವ ಮನೋಭಾವದವನಾದ ನನಗೆ “ತುಮುಲಗಳು” ಮೋಸ ಮಾಡಿಲ್ಲ. ವಾಸ್ತವದ ಜೊತೆ ಜೊತೆಗೆ ಅಸಂಗತ ಬದುಕಿನ ನೆಲೆಗಳನ್ನ ಶಬ್ದಗಳಲ್ಲಿ ಹಿಡಿದಿಡುವ ಕವಿತೆಗಾಗಿ ಹಾತೊರೆವ ಮನಸ್ಸುಗಳಿಗೆ ಈ ಸಂಕಲನದ ಕವಿತೆಗಳು ಮೋಸ ಮಾಡಲಾರವು.   ಬದುಕನ್ನ ಬೆರಗಿನಿಂದ ನೋಡುವ, ಅಲ್ಲಿನ ಸಂಗತಿಗಳನ್ನ ಅಂತರಾಳದಲ್ಲಿ ಒರೆಗೆ ಹಚ್ಚಿ ಅವಲೋಕಿಸುವ, ನಿರ್ಭೀತಿಯಿಂದ  ಅಭಿಪ್ರಾಯಗಳನ್ನ ವ್ಯಕ್ತಪಡಿಸುವ ಗುಣ, ಪೂರ್ವಾಗ್ರಹಕ್ಕೆ ಒಳಗಾಗದೇ ವಿಚಾರಗಳನ್ನ ಗ್ರಹಿಸುವ, ಶಾಶ್ವತವಾದವನ್ನ ಅಲ್ಲಗಳೆಯುತ್ತಲೇ ಒಂಟಿತನ, ಸಾವನ್ನ ಕುರಿತಾದ ಕೆಲವು ಭಾವನೆಗಳು  ನಾನೇ ಬರೆಯಬೇಕಂದುಕೊಂಡಿದ್ದ ಆದರೆ ಗೆಳೆಯರಾದ ಪ್ರೇಮಸಾಗರ ಕಾರಕ್ಕಿಯವರು ಬರೆದಿದ್ದಾರೆ ಎಂಬ ನಿರಾಳ ಭಾವ ಇಲ್ಲಿನ ಕವಿತೆಗಳದ್ದು.   ಮೊದಲ ಕವಿತೆಯಲ್ಲೇ ನಮ್ಮನ್ನು ಮೂಕ ವಿಸ್ಮಿತರನ್ನಾಗಿ ಮಾಡುವ ಸಾಲುಗಳನ್ನ ಕಾಣಬಹುದು. ” ನನಗೆ ಹುಚ್ಚು ಹಿಡಿದ ದಿನ ಎಲ್ಲ ಸ್ಪಷ್ಟವಾಗಿತ್ತು ಅಲ್ಲಿಯವರೆಗೆ ನಾನು ಬದುಕಿನ ಅರ್ಥ ಹುಡುಕುತ್ತಿದ್ದೆ ಒಳತು–ಕೆಡುಕುಗಳನ್ನ ತೂಗಿ ನೋಡುತ್ತಿದ್ದೆ ಬೇಕು ಬೇಡಗಳನ್ನ ಅಳೆದು ನೋಡುತ್ತಿದ್ದೆ ….ಲೆಕ್ಕ ಅಳತೆಗಳೆಲ್ಲ ತಪ್ಪಿ ನನ್ನನ್ನು ಗೇಲಿ ಮಾಡತೊಡಗಿದ್ದವು … ಬದುಕನ್ನ ಇಡಿಯಾಗಿ ಅಪ್ಪಬೇಕೆಂದು ಅಂದು ತೋಳಗಲಿಸಿನಿಂತೆ ಆಮೇಲೆ ನನಗೆ ಹುಚ್ಚು ಹಿಡಿಯಿತು…” ಇಲ್ಲಿ ಬದುಕನ್ನ ಇಡಿಯಾಗಿ ಅಪ್ಪಬೇಕೆಂದು ಕೈ ತೋಳುಗಳನ್ನ ಅಗಲಿಸಿ ಹೊರಟ ಕವಿಗೆ ಕೊನೆಗೆ ಹುಚ್ಚುತನದ ಬದುಕಿನಿಂದ ಬಿಡುಗಡೆ ಹೇಗೆ ಅಸಾಧ್ಯವಾಯಿತು ಎಂಬುದನ್ನ ಮಾರ್ಮಿಕವಾಗೇ ಹೇಳುತ್ತದೆ. ಹೀಗೆ ಕವಿಯ ಮನಸ್ಸಿನ ಒಂದು ನಿರ್ದಿಷ್ಟ ಘಟನೆಯ ಸಾಲುಗಳು ಸಾರ್ವರ್ತ್ರಿಕ ಬದುಕನ್ನೇ ಬಿಂಬಿಸುವ ವಸ್ತುನಿಷ್ಠತೆಯನ್ನ ಪ್ರತಿನಿಧಿಸುತ್ತವೆ. ಇದು ಇವರ ಕವಿತೆಗಳ ಹೆಚ್ಚುಗಾರಿಕೆ. ಮತ್ತೊಂದು ಕವನದಲ್ಲಿ, ” ನಡೆಯಬಾರದ ಹಳೆಯ ದಾರಿಗಳಲ್ಲಿ, …ಕನಸುಗಳ ಬಂಡಿ ಮುಗ್ಗರಿಸಿ ಮುಕ್ಕಾದ, ಆ ಕ್ರೂರ ತಿರುವುಗಳಲ್ಲಿ ಹೊಂಚು ಹಾಕಿ ಕುಳಿತ ನೆನಪುಗಳ ಪ್ರೇತಗಳೆದುರು ನಿಲ್ಲಬಾರದು ಹೋಗಿ ಲಜ್ಜೆಗೆಟ್ಟು ಬಗ್ಗಿ, ಹೀಗೆಂದುಕೊಳ್ಳುತ್ತೇನೆ ಪ್ರತೀ ಸಾರಿ, ಅದೇ ಹಾದಿಗಳ ಅದೇ ತಿರುವುಗಳಲ್ಲಿ, ಅವೇ ಪ್ರೇತಗಳು ಸುತ್ತಲೂ ಕುಣಿವಾಗ ನೋವಿನಲಿ ಕುಗ್ಗಿ…”   ಹೀಗೆ ಬದುಕಿನಲ್ಲಿ ಅನಿವಾರ್ಯವಾಗಿ ಬರುವ ಬವಣೆಗಳನ್ನ ಎದುರಿಸಲು ಮನಸ್ಸಿನ ತಲ್ಲಣಗಳನ್ನ ಪ್ರತಿಮೆಗಳ ಮೂಲಕ ಚಿತ್ರಿಸುವುದು ಸುಲಭವೂ ಅಲ್ಲ.  ಮತ್ತೊಂದು ಕವನದಲ್ಲಿ,  “ಬದುಕು ಕುಸಿದು ಕಣ್ಣೆದುರಿನಲ್ಲೇ ಮಣ್ಣಾಗುತ್ತಿರುವಾಗ ಮತ್ತೇನೂ ಮಾಡಲಾಗದೆ ನಾನು ಕುಣಿಯುತ್ತ, ಹೊರಳಾಡುತ್ತ, ಕೇಕೆ ಹಾಕುತ್ತಾ, ಮಕ್ಕಳಂತೆ, ಮಣ್ಣಾಡತೊಡಗಿದೆ…”    ಈ ಸಾಲುಗಳು ಪ್ರತಿಯೊಬ್ಬನ ಬದುಕಿನಲಿ ಧುತ್ತೆಂದು ಎಗರಿ ಬರುವ  ಸಂಗತಿಗಳಿಗೆ ಮನುಷ್ಯ ಹೇಗೆ ಅಸಹಾಯಕನಾಗಿರುವನು ಎಂಬುದನ್ನ ಮನೋಜ್ಞವಾಗಿ ಬಿಂಬಿಸುತ್ತವೆ. ಕೊನೆಗೆ ‘ಮಕ್ಕಳಂತೆ ಮನ್ನಾಡತೊಡಗಿದೆ’ ಎಂಬ ಮಾತುಗಳೇ ನಮ್ಮನ್ನ ಮಗುವಿನಂತಹ ಅಸಹಾಯಕತೆಯನ್ನ ಅನಿವಾರ್ಯವಾಗಿ ಮೈಗೂಡಿಸಿಕೊಳ್ಳಬೇಕಾದ ಪರಿಸ್ಥಿತಿಗೆ ತಂದೊಡ್ಡುತ್ತವೆ. ಮತ್ತೊಂದು ಕವಿತೆಯಲ್ಲಿ  ಬದುಕಿನ ಬಗ್ಗೆ ಇದೇ ಭಾವವನ್ನ ಮೂಡಿಸುವ ಅದ್ಭುತ ಸಾಲುಗಳಿವೆ. ಜೊತೆಗೆ ಗ್ರೀಕ್ ಪೌರಾಣಿಕತೆಯಲ್ಲಿ ಕಂಡುಬರುವ ನಾಟಕಗಳ ವಿಚಿತ್ರ ಪಾತ್ರವಾದ ಟೈರಿಶೀಯಸ್ ಎಂಬುವವನನ್ನು ಈ ಅಸಂಗತ ಪರಿಸ್ಥಿತಿಗಳಿಗೆ ತಗೆದುಕೊಂಡಿರುವುದು ಅವರ ಕವನ ಮತ್ತಷ್ಟು ಗಮ್ಯವಾಗಿ ಮೂಡಿಬರಲು ಕಾರಣವಾಗಿದೆ. ” ಹತಾಶೆಯ ಬಿಸಿಲಿನಲಿ ಒಣಗಿ ಬಿರಿದಿದೆ ನೆಲ ತೇವಗೊಳಿಸಲು ಭರವಸೆಯ ಒಂದು ಹನಿಯೂ ಇಲ್ಲ.. ಬಾ ಇಲ್ಲಿ  ಮತ್ತೊಮ್ಮೆ ಟೈರಿಶೀಯಸ್, ಜಗದ ಒಗಟುಗಳನ್ನೆಲ್ಲ ಬಿಡಿಸುವವ ನೀನು, ಆದಿ ಅಂತ್ಯಗಳನ್ನೆಲ್ಲ ಮೊದಲೇ ಕಂಡವನು….” ಮಗದೊಂದು ಕವಿತೆಯಲ್ಲಿ ಕವಿಯ ಮನಸ್ಸಿನ ತಲ್ಲಣಗಳನ್ನು ಸ್ಪಷ್ಟವಾಗೇ ಅರಿಯಹುದು – “ಪ್ರಶಾಂತ ಸರೋವರದಲ್ಲಿಯೂ ಏಳುವವು ಒಮ್ಮೊಮ್ಮ ಬಿರುಗಾಳಿ, ಸುತ್ತಿ ಸುಳಿವ ಅಲೆಗಳು ಮುಸ್ಸಂಜೆಯಲಿ ಕಾಗೆಗಳ ಗದ್ದಲದ ಹಾಗೆ– ಏನು ಕೂಗುವೆ, ಏಕೆ ಕೂಗುವೆ, ಕಾಗೆಗೂ ತಿಳಿಯದೇನೋ…! “ ಇನ್ನೂ ಕೆಲವು ಕವಿತೆಗಲ್ಲಿ ಕವಿಯು  ತನ್ನ ಸಮಾಜಕ್ಕೆ ಏನೋ ಹೇಳಲೇಬೇಕು ಎಂಬ ಇರಾದೆಯಿಂದ ಪೆನ್ನು ಹಿಡಿದು ಕೂತಿದ್ದಾನೆ ಎಂಬ ಭಾವನೆ ಕಾಣುವುದು, ” ಮಧ್ಯರಾತ್ರಿಯ ಖಾಲಿರಸ್ತೆಗಳ ಬೀದಿದೀಪಗಳ ಬೆಳಕಿನಲ್ಲಿ ಪ್ರೇತಗಳ ನೆರಳು ಸುಳಿದಾಡುವಂತೆ ಇತಿಹಾಸದ ದಟ್ಟ ನಿರ್ಜನ ಹೆದ್ದಾರಿಯಲ್ಲಿ ಮಾಯೆಯ ನೆರಳು ಮೂಡುತ್ತದೆ… ಸತ್ಯಕ್ಕೆ ದನಿಯಾದ ಗಂಟಲುಗಳು ರಸ್ತೆಯಲ್ಲೆಲ್ಲೋ ಕಳೆದು ಹೋದರೂ ಮೊಳಗುತ್ತಲೇ ಇರುವ ಕೂಗು… ಓಗೊಡಲು ಬಾಯಿ ತೆರೆದರೆ ಗಂಟಲುಬ್ಬುತ್ತದೆ… ಕಣ್ಣಿನ ದುಗುಡ ನೀರಾಗಿ ಸತ್ಯ ಅಗೋಚರವಾಗುತ್ತದೆ.. ಪ್ರೇತಗಳ ನೆರಳು ಸುಳಿದಾಡುತ್ತದೆ…” ಇನ್ನೊಂದು ಕವಿತೆಯಲ್ಲಿ ನಾಯಿಯ ರೂಪಕವನ್ನ ಸೂಚ್ಯವಾಗಿ  ಮನುಷ್ಯನಿಗೆ ಅನ್ವಯವಾಗುವಂತಹ ಸಾಲುಗಳನ್ನ ಕಾಣಬಹುದು, ” ಕೊಳಕು ಚರಂಡಿಗಳಲ್ಲಿ ಕುಂಟುತ್ತ ಓಡುವ ನಾಯಿ ಮೂಸುತ್ತಿದೆ ಕೇಸರನ್ನು ಕಸದ ತೊಟ್ಟಿಗಳಲ್ಲಿ ಹಳಸಿದ ನಿಧಿಗಳಿಗಾಗಿ ಕೆದಕಿ ನೋಡುತ್ತಿದೆ ಪಿಸುರುಗಟ್ಟಿದ ಕಣ್ಣಿನಿಂದ ….ನಾಳೆ ಸಾಯುವ ನಾಯಿಗೆ ಇಂದು ರೊಟ್ಟಿ ತಿನ್ನುವ ಆಸೆ “ ಇನ್ನೊಂದು ಕವನದ ಸಾಲುಗಳಲ್ಲಿ ಬೆತ್ತಲು ಮನಸ್ಸಿನ ಹಸಿ ಹಸಿ ಭಾವಗಳು ಮನೋಜ್ಞನವಾಗಿ ಮೂಡಿಬಂದಿವೆ ಈ ಸಲುಗಳಂತೂ ನನಗೆ ತುಸು ಹೆಚ್ಚೇ ಇಷ್ಟವಾಗಿವೆ. ಕಾರಣ ನಮ್ಮ ‘ಮನಸ್ಸು ಸತ್ತಿರುವ ಕನಸುಗಳ ರುದ್ರಭೂಮಿಯಾಗಿದೆ’ ಎಂದು ಹೇಳಬೇಕಾದರೆ ಮನುಷ್ಯನ ಬದುಕು ಇಷ್ಟು ಅಸಹನೀಯವೇ ಎಂಬ ಬೆರಗು ಮೂಡದೇ ಇರದು. “ಮನದ ಮೂಲೆಗಳಿಂದ ಹೊರಹೊಮ್ಮುವುದು ಆಗಾಗ ಉಸಿರುಗಟ್ಟುವ ದುರ್ಗಂಧ, ಅಲ್ಲಿ ಆಳಗಳಲ್ಲಿ ಕೊಳೆತು ನಾರುತ್ತಿರುವ ಕನಸುಗಳ ಕಳೇಬರಗಳಿಂದ; ಆಗ ಅರಿವಾಗುವುದು, ನಗುವ ಹೂಗಳ ನಂದನವಲ್ಲ ಮನಸು ಇಂದು ಸತ್ತ ಕನಸುಗಳ ರುದ್ರಭೂಮಿ…” ಇನ್ನೂ ಕೆಲವು ಸಾಲುಗಳು ಮನಸ್ಸಿಗೆ ಮುದ ನೀಡುವ ಹಾಗೇ ದೇಹಕ್ಕೂ ಮನಸ್ಸಿಗೂ ವಯಸ್ಸಿನ ಅರಿವನ್ನ ಮೂಡಿಸುವ ಜೊತೆಗೆ ನೆನಪುಗಳ ಹಾವಳಿಗಳನ್ನ ತೆರೆದಿಡುತ್ತ ತುಟಿಯಂಚಲಿ ನಗು ಮೂಡಿಸುತ ಹೌದು ಹೌದು.. ನಂದೂ ಅದೇ ಕತೆ ಅಂದುಕೊಂಡ ಸಾಲುಗಳು ಕಾಣುತ್ತವೆ.. ” ದಟ್ಟ ಕಪ್ಪಿನ ನಡುವೆ ಅಲ್ಲಲ್ಲಿ ಎದ್ದು ಕಾಣುವ, ಕಂಡು ನಗುವ ಹೀಗೆ ಅನೇಕ ಹೇಳಲೇಬೇಕಾದ ಸಾಲುಗಳು ಹಲವಿವೆ ಈ ಸಂಕಲನದಲ್ಲಿ. ಒಮ್ಮೆ ಕೊಂಡು ಓದಿಬಿಡಿ. ಜೊತೆಗೆ ನಮ್ಮದೇ ಭವಾನುರಾಗದಲ್ಲಿ ಮೀಯುವ ಅವಕಾಶವನ್ನೂ ಕಳೆದುಕೊಳ್ಳಬೇಡಿ. ಕವಿ ಬರೆದ ಮೇಲೆ ಅದರ ಭಾವಗಳು ನಮ್ಮವೇ ಆಗಿರುವ ಕೆಲವು ಸಲುಗಳೂ ಎಲ್ಲರ ಕವಿತೆಗಳಲ್ಲಿ ಬಂದರೂ ಈ ಅಸಂಗತ ಬದುಕಿನ ತುಮುಲಗಳನ್ನ ಹಿಡಿದಿಡುವ ಸಾಲುಗಳು ಕಾಣುವುದು ಅಪರೂಪ.  ಈ ಸಂಕಲನಕ್ಕೆ ಚಂದದ ಮುನ್ನುಡಿ ಬರೆದವರು ಮೂಡ್ನಾಕೋಡು ವಿಶ್ವನಾಥ್ ಹಾಗೇ  ಬೆನ್ನುಡಿ ಬರೆದ ಶೌರಿ ಬಿ. ಪಿ. ಅವರು ಹೇಳುವ ಹಾಗೆ ಇಂದು ನಮ್ಮನ್ನು ಆವರಿಸಿರುವ ಸಾಮಾಜಿಕ ಹಾಗೂ ಬೌದ್ಧಿಕ ವಿಷಾದದ ಸ್ಥಿತಿಯನ್ನು ಈ ಕವಿತೆಗಳು ಮಾತಾಡುತ್ತವೆ ಎಂಬುದು ಉತ್ಪ್ರೇಕ್ಷೆ ಏನೂ ಅಲ್ಲ. ಹಾಗಾಗಿ ಅಲ್ಬರ್ಟ್ ಕಾಮೂ ಪುಸ್ತಕದ ಜೊತೆಗೆ ಅಮೂಲ್ಯ ಕವಿತೆಗಳ ಗುಚ್ಚವನ್ನ ಕಳಿಸಿಕೊಟ್ಟಿದ್ದಕ್ಕೆ ಮತ್ತೊಮ್ಮೆ ಸ್ನೇಹಿತರಾದ ಪ್ರೇಮಸಾಗರ ಕಾರಕ್ಕಿಯವರಿಗೆ ಧನ್ಯವಾದಗಳು. ಡಾ. ವಸಂತಕುಮಾರ ಎಸ್. ಕಡ್ಲಿಮಟ್ಟಿ

ತುಮುಲಗಳು Read Post »

ಪುಸ್ತಕ ಸಂಗಾತಿ

ಪುಟ್ಟನ ಕನಸು’

ಮನೆ ಬೀದಿ ದೇಗುಲದಲಿ ನಿರುತ ಸೇವೆಯು ಪ್ರತಿಪಲಾಕ್ಷೆ ಇಲ್ಲದಿರುವ ನಿಸರ್ಗ ದೈವವು’ ಪೊರಕೆಯನ್ನು ಎಲ್ಲಂದರಲ್ಲಿ ಬಳಕೆಯಾಗುವ ಮೌನವಾಗುವ ಪರಿಯನ್ನು ಸೂಚಿಸಿದ್ದಾರೆ. ಇದಲ್ಲದೆ ತಮ್ಮೂರಾದ ಜಮಖಂಡಿಯ ವರ್ಣನೆಯನ್ನು ಕವಿತೆಯಲ್ಲಿ ಮನೋಹರವಾಗಿ ಕಟ್ಟಿದ್ದಾರೆ

ಪುಟ್ಟನ ಕನಸು’ Read Post »

ಪುಸ್ತಕ ಸಂಗಾತಿ

ಗಾಂಧಿ ನೇಯ್ದಿಟ್ಟ ಬಟ್ಟೆ

ಪುಸ್ತಕ ಸಂಗಾತಿ ಗಾಂಧಿ ನೇಯ್ದಿಟ್ಟ ಬಟ್ಟೆ ಕೃತಿ: ಗಾಂಧಿ ನೇಯ್ದಿಟ್ಟ ಬಟ್ಟೆ ಲೇ: ರಾಯಸಾಬ ಎನ್ ದರ್ಗಾದವರ ಪೋ:7259791419 ಪ್ರಕಾಶಕರು: ಅನಾಯ ಪ್ರಕಾಶನ, ಕಟ್ನೂರು, ಹುಬ್ಬಳ್ಳಿ(ತಾ). ಪುಟಗಳು: ೮೦ ಬೆಲೆ: ೯0/- _________________________ “ಗಾಂಧಿ ನೇಯ್ದಿಟ್ಟ ಬಟ್ಟೆಯ ಬಿಡಿಸಿದಾಗ….” ರಾಯಸಾಬ ಎನ್. ದರ್ಗಾದವರ ಚೊಚ್ಚಲ ಕೃತಿಯಾದ, *”ಗಾಂಧಿ ನೇಯ್ದಿಟ್ಟ ಬಟ್ಟೆ”* ಎಂಬ ವಿಶೇಷ ಶೀರ್ಷಿಕೆಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿರುವ, ಆಕರ್ಷಕ ಮುಖಪುಟದೊಂದಿಗೆ ಬಿಡುಗಡೆಯ ಮೊದಲೇ ಸದ್ದು ಮಾಡುತ್ತಿರುವುದು ಕುತೂಹಲವನ್ನು ಹುಟ್ಟುಹಾಕಿದೆ. “ನನ್ನವರ ಮನೆಗಳು ಎಂದೆಂದಿಗೂ ಮನೆಗಳಾಗಿರಲಿಲ್ಲ ಹೂತ ಶವಗಳ ದಿಬ್ಬದಂತಿದ್ದವು“ …ಎಂದು ಪ್ರಾರಂಭವಾಗುವ ‘ಬಿಟ್ಟು ಹೋದವರ ಚರಮಗೀತೆ’ ಎಂಬ ಕವಿತೆಯಿಂದ ಆರಂಭವಾಗುವ ಸಾಲುಗಳು, ತುಳಿತಕ್ಕೊಳಪಟ್ಟವರ ಪರವಾಗಿ, ಶೋಷಿಸುವವರ  ವಿರುದ್ಧವಾಗಿ ತಣ್ಣನೆಯ ಬಂಡಾಯದ ಬೂದಿ ಮುಚ್ಚಿದ ಕೆಂಡದಂತಿರುವ, ತಾಕಿದರೆ ಸುಡುವ ಸತ್ಯಗಳನ್ನು ಸಾರುವ, ಬೀಸುವ ಗಾಳಿಗೆ ಎದೆಯೊಡ್ಡಿ ಉರಿವ ಕಂದಿಲಿನಂತೆ ಭಾಸವಾಗುತ್ತದೆ. ಅನನ್ಯ ನುಡಿಗಟ್ಟುಗಳೊಂದಿಗೆ, ವಿಭಿನ್ನ ಶೀರ್ಷಿಕೆಗಳೊಂದಿಗೆ, ಅಂತರಂಗದ ಆಲಯಕ್ಕೆ ಸುಲಭವಾಗಿ ಬಿಟ್ಟುಕೊಳ್ಳುವ ರಾಯಸಾಬರ ಕವಿತೆಗಳು, ಅಷ್ಟು ಸುಲಭಕ್ಕೆ ಹೊರಹೋಗಲು ಬಿಡದೆ ಕಾಯ್ದುಕೊಳ್ಳುತ್ತವೆ, ಕಾಡುತ್ತವೆ, ಮತ್ತು ಚಿಂತನೆಗೆ ಹಚ್ಚುತ್ತವೆ. ಓದುಗನ ಮನದಲ್ಲಿ ಚಿಂತನೆಯನ್ನು ಬಿತ್ತುವ ಇಂತಹ ಕವಿತೆಗಳಿಂದಲೇ ಪ್ರಸ್ತುತ ಸಂಕಲನ ವೈಶಿಷ್ಟ್ಯತೆಯನ್ನು ಪಡೆದುಕೊಳ್ಳುತ್ತದೆ. “ದುಡಿದು ದಣಿದ ದೇಹವೀಗ ಬಿಸಿಲು ಬೆನ್ನ ಮೇಲೆ ಹೊತ್ತು ಊರಾಚೆ ಗುಡ್ಡದಲ್ಲಿ ಮುಳುಗಿಸಿ“ (ದುಡಿಮೆ ದಣಿವು ಸಾರಾಯಿ) ಹಾಗೂ “ಕಾಲು ಮುರಿದು ಬಿದ್ದ ನೆರಳು” ಇಂತಹ ರೂಪಕ, ಪ್ರತಿಮೆಗಳನ್ನು ಕಾವ್ಯದಲ್ಲಿ ಸಮರ್ಪಕವಾಗಿ ಬಳಸುವಲ್ಲಿ ಯಶಸ್ವಿಯಾಗಿದ್ದಾರೆ. “ಕವಿತೆಯು ಎಂದೆಂದಿಗೂ ಸಾಯುವುದಿಲ್ಲ ಬದಲಾಗಿ ಬಸಿರಾಗುತ್ತವೆ“ (ಕವಿತೆಯ ಬಸಿರು) ಕವಿತೆಗಳು ಹುಟ್ಟುವ ಪರಿಯನ್ನು ತನ್ನದೇ ರೀತಿಯಲ್ಲಿ ದಾಖಲಿಸುವ, ರಾಯಸಾಬರವರ ರಚನೆಗಳನ್ನು ಓದುವಾಗ, ಸರಳ ಭಾಷೆ ಬಳಸಿ, ಮಾರ್ಮಿಕವಾಗಿ ಕವಿತೆ ಬರೆದರೆ… ಹೀಗೆ ಬರೆಯಬೇಕು ಅನಿಸಿವುದಂತು ಸತ್ಯ. “ಕನ್ನಡಿಯಲ್ಲಿ ನನ್ನದಲ್ಲದ ಬಿಂಬ ಕೇಕೆ ಹಾಕಿ ಕಣ್ಣೀರು ಬರುವಂತೆ ನಗುತಿದೆ ಆದೆಷ್ಟು ಸಲ ಕನ್ನಡಿಯನ್ನು ಯಾಮಾರಿಸಿದ್ದೇನೆ…” (ಮುಖವಾಡವಿಲ್ಲದ ಆ ದಿನ) ಇಂದಿನ ಜಗತ್ತಿನಲ್ಲಿ ಮುಖವಾಡವಿಲ್ಲದೆ, ಸತ್ಯಸಂಧನಾಗಿ, ನಿಸ್ವಾರ್ಥಿಯಾಗಿ ಬದುಕುವುದು ಎಷ್ಟು ಕಷ್ಟ ಎಂಬುದನ್ನು ವಾಸ್ತವಿಕ ನೆಲೆಯಲ್ಲಿ ಚರ್ಚಿಸುವ, ಅದರ ಕಾರಣ ಪರಿಣಾಮಗಳನ್ನು ವಿಶ್ಲೇಷಿಸುವ, ಬದುಕಿನ ತಲ್ಲಣಗಳಿಗೆ ತುಡಿಯುವ, ಮುಖಾಮುಖಿಯಾಗುವ – ‘ಮಾನವೀಯತೆ ಮಾರಾಟ’, ‘ಆತ್ಮ ನಿವೇದನೆ’, ‘ಬೆಳಕು ಕೊಲೆಯಾದ ರಾತ್ರಿ’, ‘ಒಂದು ಕವಿತೆಯ ಬದಲಾಗಿ’ ಈ ತೆರನಾದ ಸಾಂದರ್ಭಿಕ ಕವಿತೆಗಳು ಅರ್ಥಪೂರ್ಣ ರಚನೆಗಳಾಗಿ ರಾಯಸಾಬರ ಲೇಖನಿಯಿಂದ ಅನಾಯಾಸವಾಗಿ ಹೊರಹೊಮ್ಮಿವೆ. “ಶ್…! ಮತ್ಯಾರೋ ಬಾಗಿಲನ್ನು ಬಡಿಯುತ್ತಿದ್ದಾರೆ ಬರಿದಾಗ ಭಾವನೆಗಳನ್ನು ತುಂಬಬೇಕು ಹೊಸಬಳಂತೆ ನಟಿಸುವುದನ್ನು ಅಭ್ಯಾಸಿಸಬೇಕು ಅತ್ತು ಅತ್ತು ಉಪ್ಪುಗೊಂಡ ಮುಖವನ್ನೊಮ್ಮೆ ತೊಳೆದು ಮೇಕಪ್ಪು ಮೆತ್ತಬೇಕು ನಾನಿನ್ನು ಮತ್ತೆ ತುಂಬ ಬಿಜಿ…” (ದೀಪವಿಲ್ಲದ ಕೋಣೆಯೊಳಗೆ) ಕೇವಲ ಒಬ್ಬ ಹೆಣ್ಣಿಗೆ ಮಾತ್ರ ಬರೆಯಲು ಸಾಧ್ಯವಾಗುವ, ಹೆಣ್ಣಿನ ಮಾನಸಿಕ ತೊಳಲಾಟದ ವಸ್ತುವಿರುವ ಈ ಮೇಲಿನ ಕವಿತೆ, ಕವಿಯ ಸ್ತ್ರಿ ಸಂವೇದನೆಯ ಪರವಾಗಿ, ಅಂತಃಕರಣ ಮತ್ತು ಕಾಳಜಿಗೆ ಸಾಕ್ಷಿಯಾಗಿ…. ‘ಕ್ಯಾಲೆಂಡರಿನ ಕೆಂಪು ಗೆರೆಗಳು’, ‘ಬೀದಿಗೆ ಬಿದ್ದವಳು’ ಇದೆ ಸಂವೇದನೆಯ ಕವಿತೆಗಳ ಸಾಲಿನಲ್ಲಿ ನಿಲ್ಲುತ್ತವೆ. ಪ್ರೇಮ ಎಂಬ ಎರಡೂವರೆ ಅಕ್ಷರದ ಮೋಡಿಗೆ ಈಡಾಗದ ಕವಿಗಳೇ ವಿರಳ. ಪ್ರಾಯಶಃ ಇಲ್ಲದಿರಲೂಬಹುದು. ಅಂತಹ ಪ್ರೇಮದ ಪರಿಭಾಷೆಯ,ಉತ್ಕಟ ಮನೋಭಾವದ, ಹೃದಯ ವೇದನೆಯ,  ನಿದರ್ಶಕ ಕವಿತೆಗಳಾದ ಹಕೀಕತ್ತು, ನಮ್ಮಿಬ್ಬರ ಇತಿಹಾಸ, ಗೋಡೆಗಂಟಿದ ಮಾತುಗಳು, ಆ ಸಂಜೆ, ಮಾನವೀಯತೆ ಮಾತನಾಡಲಿ, ಕಾಲತೀತ, ಸುಳ್ಳು ಸಾಕ್ಷಿ, ರೀಚಾರ್ಜ್ ಖಾಲಿಯಾದ ದಿನ, ರೆಕ್ಕೆಗಳು ಕವಿತೆಗಳ ಮೂಲ ದ್ರವ್ಯವಾದ ಪ್ರೇಮ ಒಂದೆಯಾಗಿದ್ದರೂ, ಸಂಗತಿಗಳು, ಭಾವಗಳು ವಿಧವಿಧವಾಗಿ, ಪಕ್ವ ಪ್ರೇಮದ ಕುರುಹುಗಳಾಗಿ ಸಂಕಲನದ ಉದ್ದಕ್ಕೂ ಕರಚಾಚುತ್ತವೆ. “ಕವಿಯ ಮಾತು ಕೇಳಿ ಕವಿತೆ ಕೆಟ್ಟಿತು ಕವಿತೆ ಬಡೆದುಕೊಂಡ ಡಂಗೂರಕ್ಕೆ ಕವಿಪಾದ ಸೆರೆವಾಸ ಇಣುಕಿತು ಇದೆಲ್ಲವನ್ನು ಬರೆದ ಪೆನ್ನು ಮಾತ್ರ ನಿನ್ನೆ ಬರೆದು ಮುಚ್ಚಿದ ಕವಿತೆಯ ಒಡಲು ಹೊಕ್ಕು ಜೊಂಪು ಹತ್ತಿತು…” (ಕವಿತೆಗೇನು ಕೆಲಸ) ಸಮಾಜದ ಒರೆಕೋರೆಗಳನ್ನು ತಿದ್ದಲು ಹೋರಾಟ ಕವಿಯ ಇಂದಿನ ದಾರುಣ ಪರಿಸ್ಥಿತಿಯನ್ನು ಕವಿತೆ ಸೂಕ್ಷ್ಮವಾಗಿ ಸಾರಿದೆ. ಸಂಕಲನಕ್ಕೆ ಶೀರ್ಷಿಕೆಯಾದ ‘ಗಾಂಧಿ ನೇಯ್ದಿಟ್ಟ ಬಟ್ಟೆ‘ ಎಂಬ ಕವಿತೆ… “ಬಣ್ಣಗಳೀಗ ಜಾತಿಗಳಾಗಿ ಮಾರ್ಪಟ್ಟಿವೆ ಹೊತ್ತು ಮುಳುಗುವ ಹೊತ್ತಿನಲಿ ನೆತ್ತಿ ಮೇಲೆ ಇಟ್ಟ ಕತ್ತಿಗೂ ಒಂದು ಜಾತಿಯ ನಂಟಿದೆ…” ….ಎನ್ನುತ್ತ, ಗಾಂಧಿ ನೇಯ್ದಿಟ್ಟ ಬಟ್ಟೆಗೂ ಜಾತಿಯ ಬಣ್ಣ ಮೆತ್ತಿದೆ. ಇಂದಿನ ಧರ್ಮಗಳ ಕಲುಷಿತ ವಾತಾವರಣದ ಕುರಿತಾದ ವಿಡಂಬನೆ ಇಲ್ಲಿ ಕಂಡುಬಂದರೆ, ‘ಈ ದೇಶಕ್ಕೆ ಏನಿದ್ದರೇನು? – ನೀನೆ ಇಲ್ಲವಲ್ಲ ಗಾಂಧಿ!’ ಎಂದು, ಬಾಪುವಿನ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ, ಪಟವನ್ನು ಮೊಳೆಗೆ ತೂಗು ಹಾಕಿ, ಸತ್ಯ-ನ್ಯಾಯ-ನೀತಿಗಳ ಕೊಲೆಗೈದು, ಅಂಧಕಾರ ಕವಿದ ವ್ಯಥೆಯ ಚಿತ್ರಣವನ್ನು ಕಾಣಬಹುದು. ‘ಅವನನ್ನು ಕ್ಷಮಿಸಿ’ ಎಂಬ ಕವಿತೆ ಮುಸ್ಲಿಮೇತರರನ್ನು ಸ್ವರ್ಗ ನರಕಗಳ ಖುರಾನಿನ ವಿವರಣೆಗಳೊಂದಿಗೆ ಸಂವಾದಿಸುತ್ತ, ಸಮರ್ಥಿಸಿಕೊಳ್ಳುತ್ತ, ಡೋಂಗಿ ಮುಸಲ್ಮಾನರ ವಿಡಂಬಿಸುತ್ತ …. “ನಿಮಗಿಂತ ಮೊದಲೇನಾದರೂ ಸತ್ತರೆ ನನ್ನನ್ನು ಖಬರಸ್ಥಾನಕ್ಕೆ ಹೊತ್ತೊಯ್ಯಬೇಡಿ ಮಣ್ಣಲ್ಲಿ ಆಡಲು ಬಿಡದ ನನ್ನಮ್ಮ ಮೈಮೇಲೆ ಮಣ್ಣು ಹಾಕಲು ಒಪ್ಪಲಾರಳು ಮಣ್ಣಲ್ಲಿ ಕೊಳೆತು ಹೋಗುವ ಭಯವೋ ನನ್ನಲ್ಲಿಯೂ ಇದೆ ಅಮ್ಮನ ಹೆರಿಗೆಯಾದ ಆಸ್ಪತ್ರೆಗೆ ನನ್ನನ್ನು ಕಳುಹಿಸಿ ಬಣ್ಣ ಗುರುತಿಸದವನ ಕಣ್ಣಾಗಿ ಇರುತ್ತೇನೆ ಕಲಿಯಲು ಬಂದವರಿಗೆ ನಿತ್ಯ ಪಾಠವಾಗುತ್ತೇನೆ“ ….ಎಂದು, “ದೇಹ ದಾನ”ದ ಮಹತ್ತರ ಸಂದೇಶ ನೀಡುವ ಕವಿತೆ ಮಹತ್ವ ಪಡೆದುಕೊಳ್ಳುತ್ತದೆ. ಬಹುಶಃ ಬುದ್ಧನನ್ನು ಇಷ್ಟಪಡದವರು ಯಾರೂ ಇರಲಿಕ್ಕಿಲ್ಲ. ಅಂತೆಯೇ, ಬುದ್ಧನ ಬಗೆಗೆ ಕವಿತೆ ಬರೆಯದ ಕವಿಯೂ ಇರಲಾರರೇನೊ! ಅದಕ್ಕೆ ರಾಯಸಾಬರು ಹೊರತಾಗಿಲ್ಲ. “ರಾಮಕೃಷ್ಣ ಪರಮಹಂಸರು” ಹೇಳುವಂತೆ: ದರ್ಶನಾದಿ ಶಾಸ್ತ್ರಗಳಿಗಿಂತ ಸಂಗೀತ ಮಹತ್ತರವಾದುದು, ಸಂಗೀತಕ್ಕಿಂತ ಮೋಹಕವಾದುದು ಯುವತಿಯ ಮುಖದರ್ಶನ. ಆದರೆ ಹಸಿವು ಕಾಡಿದಾಗ ಮನುಷ್ಯನಿಗೆ ಶಾಸ್ತ್ರ, ಸಂಗೀತವಾಗಲಿ, ಸೌಂದರ್ಯವಾಗಲಿ ಮುಖ್ಯ ಎನಿಸದು. ಹೀಗೆ, ಬುದ್ಧನನ್ನು ನೆಪವಾಗಿಸಿ ಹಸಿವನ್ನು ಸಾಕ್ಷಾತ್ಕರಿಸುವ ಕವಿತೆ ಮಾನವೀಯ ನಿಲುವನ್ನು ಹೊಂದಿದೆ. ‘ಜೇಡರ ಬಲೆಯ ದಿಗ್ಬಂಧನ’ ದಂತಹ ಕವಿತೆ, ಹೆಣ್ಣಿನ ಮೇಲಿನ ಅತ್ಯಾಚಾರದ ಕರಾಳ ಛಾಯೆಗೆ ಹಿಡಿದ ಕನ್ನಡಿಯಾಗಿ ಬಿಂಬಿತವಾಗಿದೆ. “ಹಾರುತ್ತೇವೆಂದು ರೆಕ್ಕೆ ಕತ್ತರಿಸಬೇಡಿ, ನಾವು ಈಗೀಗ ಮೈ ಮುರಿದು ಈಜುವುದನ್ನೂ ಕಲಿತಿದ್ದೇವೆ.” ಒಟ್ಟಾರೆಯಾಗಿ, ರಾಯಸಾಬ ದರ್ಗಾದವರ ಕವಿತೆಗಳಲ್ಲಿ “ಖಲೀಲ್ ಗಿಬ್ರಾನ್” ನ ಕಾವ್ಯಸತ್ವ ಮತ್ತು “ಸಾದತ್ ಹಸನ್ ಮಾಂಟೋ” ವಿನ ಕತ್ತಿಯ ಅಲುಗಿನ ಪ್ರಖರತೆ ಪ್ರಕಾಶಿಸುತ್ತದೆ ಎಂದರೆ, ಅತಿಶಯೋಕ್ತಿ ಆಗಲಾರದು. ಉಪಸಂಹಾರ: “ಸಂಜೆಗತ್ತಲಿನಲ್ಲಿ ಹುಟ್ಟಿಕೊಂಡ ಕವಿತೆಯು ಅದೇ ಬಣ್ಣದಿಂದ ಬರೆದುಕೊಳ್ಳುತ್ತಿತ್ತು ಓದುವವ ಮಾತ್ರ ಅಸಹಾಯಕ ಆಗತಾನೆ ಮೂಡುತ್ತಿದ್ದ ನಕ್ಷತ್ರಗಳ ಮಿನುಗು ಸಂಜೆ ಕವಿತೆಯಲ್ಲೂ ಭರವಸೆ ಹುಟ್ಟಿಸಿರಬೇಕು.” ಹೌದು! ನಿಜಕ್ಕೂ ಗಾಂಧಿ ನೇಯ್ದಿಟ್ಟ ಬಟ್ಟೆ ಸಂಕಲನದ ಕವಿತೆಗಳು ಭರವಸೆ ಮೂಡಿಸಿವೆ. ರಾಯಸಾಬ ಎನ್. ದರ್ಗಾದವರು, ಮತ್ತಷ್ಟು ಸತ್ವಯುತ, ಜೀವಂತಿಕೆವುಳ್ಳ ಗಟ್ಟಿ ಕಾವ್ಯವನ್ನು ರಚಿಸುವುದರ ಮೂಲಕ ಉತ್ತಮ ಕವಿಯಾಗಬಲ್ಲ ಭರವಸೆಯನ್ನು ಹುಟ್ಟುಹಾಕಿದ್ದಾರೆ. “ಕರ್ನಾಟಕ ಸರ್ಕಾರದ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನ ಸಹಾಯ ಪಡೆದ ಕೃತಿ” ಇದಾಗಿದ್ದು, ಭವಿಷ್ಯದಲ್ಲಿ ಬೆಳಗಬಲ್ಲ ಶುಭ ಕೋರುತ್ತಾ… =========================  ಜಬೀವುಲ್ಲಾ ಎಮ್. ಅಸದ್.

ಗಾಂಧಿ ನೇಯ್ದಿಟ್ಟ ಬಟ್ಟೆ Read Post »

ಕಥಾಗುಚ್ಛ

ಕಥೆ ಶಾರದ ಭಾಗ-3 ಅನಸೂಯ ಎಂ.ಆರ್ ವಾಣಿ ಕೆಲಸಕ್ಕೆ ಸೇರಿ ವರ್ಷವಾದ ಮೇಲೆ ಶಾರದ ತಮ್ಮಮಂಜುನಾಥನಿಗೆ ವಾಣಿಗೆ ಮದುವೆ ಮಾಡಲು ಗಂಡುಹುಡುಕುವಂತೆ ಹೇಳಿದ್ದನ್ನು ಕೇಳಿಸಿಕೊಂಡ ವಾಣಿ “ಅತ್ತೆಒಂದೆರಡು ವರ್ಷ ನಾನು ಆರಾಮಾಗಿ ಕೆಲಸ ಮಾಡ್ಬೇಕುಅಂತ ಆಸೆ. ಆಮೇಲೆ ಮದ್ವೆ ಆಗೋದು ಇದ್ದೆ ಇದೆಯಲ್ಲ’ಎಂದು ಎಲ್ಲರ ಬಾಯಿ ಮುಚ್ಚಿಸಿದಳು.” ಇವತ್ತು ನಾವುಶುರು ಮಾಡಿದ ತಕ್ಷಣ ಸಿಗಲ್ಲ. ಒಳ್ಳೆ ಹುಡುಗ ಸಿಗೋದುಅಷ್ಟು ಸುಲಭ ಅಲ್ಲ.ನಾವು ಹುಡುಕಿ ಮಾಡೊ ಹೊತ್ತಿಗೆಒಂದು ವರ್ಷವಾದ್ರು ಆಗ್ಬಹುದು, ಎರಡು ವರ್ಷ ಆದ್ರುಆಗ್ಬಹುದು.ನಿಧಾನವಾಗಿ ಹುಡುಕುತ್ತಿರಬೇಕು” ಎಂದನು ಮಂಗಳನ ತಾಯಿಯ ದೂರದ ಸಂಬಂಧಿಕರಿಂದ ಒಂದುಗಂಡಿನ ಪ್ರಸ್ತಾಪ ಬಂದಿತು.ಎಲ್ಲವು ಅನುಕೂಲವಾಗಿಯೆಕಂಡು ಬಂದಿದ್ದರಿಂದ ಗಂಡಿನವರು ಹೆಣ್ಣನ್ನು ನೋಡಲುಬಂದರು. ಗಂಡಿನ ದೊಡ್ಡಪ್ಪ ದೊಡ್ಡಮ್ಮ, ಅವರ ಮಗಳುಮತ್ತು ಗಂಡು ಬಂದರು. ವಾಣಿಯನ್ನು ನೋಡಿ ಒಪ್ಪಿದ ಗಂಡಿನ ಕಡೆಯವರು ತಮ್ಮ ಒಪ್ಪಿಗೆಯನ್ನು ತಿಳಿಸಿದರು “ನಮ್ಮ ಮೋಹನ 8 ನೇ ತರಗತಿ ಓದುವಾಗ ಅವನಪ್ಪಅಮ್ಮಇಬ್ಬರೂ ಬಸ್ ಅಪಘಾತದಲ್ಲಿ ತೀರಿಕೊಂಡರು. ನಂತರ ನಮ್ಮಆಶ್ರಯದಲ್ಲೇ ಬೆಳೆದು ವಿದ್ಯಾವಂತನಾಗಿ ಉಪನ್ಯಾಸಕನಾಗಿರುವುದು ನಮಗೆಲ್ಲ ನೆಮ್ಮದಿಯನ್ನು ತಂದಿದೆ. ಅವರಪ್ಪನ ಆಸ್ತಿಯಿಂದ ಬಂದ ಹಣದಿಂದಲೇಅವನ ವಿದ್ಯಾಭ್ಯಾಸವೂ ಮುಗಿಯಿತು. ನಾವೂ ಅವನ ಕಡೆಯಿಂದ ಏನನ್ನು ನಿರೀಕ್ಷಣೆ ಮಾಡಲ್ಲ. ಅವನ ಸುಖ ಮತ್ತು ನೆಮ್ಮದಿಯಷ್ಟೆ ನಮಗೆ ಮುಖ್ಯ. ನಮ್ಮಿಂದ್ಯಾವುದೆ ಬೇಡಿಕೆಗಳಿಲ್ಲ. ಅವರಮ್ಮನ ಒಡವೆಗಳನ್ನೇ ಹುಡುಗಿಗೆ ಕೊಡುತ್ತೇವೆ.ನಿಮ್ಮಅನುಕೂಲವಿದ್ದಂತೆ ಮದುವೆ ಮಾಡಿ ಕೊಡಿರಿ” ಎಂದು ನೇರವಾಗಿಯೆ ಹೇಳಿದರು.ಅವರ ನೇರ ಮಾತುಗಳು ಎಲ್ಲರಿಗೂ ಇಷ್ಟವಾಯ್ತು. ಎರಡು ಕಡೆಯ ಹಿರಿಯರಿಗೂ ಒಪ್ಪಿಗೆಯಾದ್ದರಿಂದ ವಿವಾಹದ ಮಾತು ಕತೆಗಳು ಹೂವೆತ್ತಿದಷ್ಟು ಸಲೀಸಾಗಿ ಯಶಸ್ವಿಯಾಯಿತು ವಾಣಿಯೊಡನೆ ಮಾತಾಡಬೇಕೆಂದು ಮೋಹನ ತನ್ನಕ್ಕನ ಮೂಲಕ ಹೇಳಿಸಿದಾಗ ಎಲ್ಲರೂ ಒಪ್ಪಿದರು. ಮನೆಯ ಮುಂದಿನ ಕೈ ತೋಟಕ್ಕೆ ಬಂದಾಗ ಮೋಹನ್ “ನಿಮ್ಮ ಸರಳತೆ ನನಗೆ ಇಷ್ಟವಾಯ್ತು. ಮದ್ವೆ ಆದ ಮೇಲೆ ನಾನು ದಾವಣಗೆರೆಯಲ್ಲಿ ಮನೆ ಮಾಡುವೆ. ನಮ್ಮಮ್ಮನ ಒಡವೆ ಹಳೆಕಾಲದ್ದೆಂದು ಕರಗಿಸಿ ಹೊಸ ರೀತಿ ಮಾಡಿಸುವುದು ನನಗಿಷ್ಟವಿಲ್ಲ. ನಮ್ಮಮ್ಮನ ನೆನಪಾಗಿ ಹಾಗೇ ಇರಲೆಂದು ನನ್ನಾಸೆ.ಇದಕ್ಕೆನಿನ್ನ ಒಪ್ಪಿಗೆ ಇದೆಯೇ”ಎಂದಾಗ ವಾಣಿ “ಹಳೆ ವಿನ್ಯಾಸದ ಒಡವೆಗಳು ನನಗೂ ಇಷ್ಟ’ ಎಂದಳು “ನೀವೇನಾದರು ಕೇಳುವುದಿದ್ದರೆ ಕೇಳಿರಿ” ಮೋಹನ್ ಕೇಳಿದಾಗ ‘ನಮ್ಮಿಬ್ಬರ ವೃತ್ತಿ ಒಂದೇ ಆಗಿರುವುದರಿಂದ ಸಮಾನ ಮನಸ್ಕರಾಗಿ ನಮ್ಮ ಜೀವನ ನೆಮ್ಮದಿಯಿಂದ ಕೂಡಿರುತ್ತದೆಂದು ತಿಳಿದಿದ್ದೇನೆ”ಎಂದು ಹೇಳಿದಾಗ “ನನ್ನಆಸೆಯೂ ಅದೇ” ಎಂದು “ಬನ್ನಿ ಒಳಗೆ ಹೋಗೋಣ” ಎನ್ನುತ್ತ ಒಳನಡೆದ ಅವನನ್ನು ವಾಣಿ ಅನುಸರಿಸಿದಳು.ಮದುವೆ ದಿನಾಂಕ ಹಾಗೂ ಛತ್ರದ ಹೊಂದಾಣಿಕೆಯನ್ನುನೋಡಿಕೊಂಡು ಮದುವೆ ದಿನಾಂಕ ನಿರ್ಧಾರ ಮಾಡಲುಮಂಜುನಾಥನಿಗೆ ಹೇಳಿ ಹೊರಟರು. ವರುಣ್ ಮೂಲಕಮೋಹನ್ ವಾಣಿಯ ಮೊ. ನಂ.ಅನ್ನು ಪಡೆದನು.ಎಲ್ಲಾಹೊಂದಾಣಿಕೆಯಾಗುವ ದಿನ ಎರಡು ತಿಂಗಳಾದ ಮೇಲೆಇದ್ದಿದ್ದರಿಂದ ಮದುವೆ ಸಿದ್ಧತೆಗಳು ಚುರುಕಾಗಿ ನಡೆಯತೊಡಗಿದವು. ವಾಣಿ ಮತ್ತು ಮೋಹನ್ ಮೊಬೈಲ್ ನಲ್ಲಿಮಾತಾಡಿಕೊಂಡು ಭವಿಷ್ಯದ ಹೊಂಗನಸು ಕಾಣುತ್ತಲೇಹೊಸ ಸಂಸಾರಕ್ಕೆ ಅಚ್ಚುಕಟ್ಟಾದ ಬಾಡಿಗೆ ಮನೆಯನ್ನುವ್ಯವಸ್ಥೆ ಮಾಡಿದರು. ವಾಣಿ ಕೆಲಸ ಮಾಡುತ್ತಿದ್ದ ಜಿಲ್ಲಾಕೇಂದ್ರಕ್ಕೆ ದಾವಣಗೆರೆ ಹತ್ತಿರವಿರುವುದರಿಂದ ಮೋಹನ್ದಾವಣಗೆರೆಗೆ ಹೋಗಿ ಬರಬಹುದೆಂದು ತೀರ್ಮಾನಿಸಿವಾಣಿ ಕೆಲಸ ಮಾಡುತ್ತಿದ್ದ ಊರಿನಲ್ಲೆ ಮನೆ ಮಾಡಿದರು.ಮುಂದೆ ಮೋಹನ್ ವಾಣಿ ಕೆಲಸ ಮಾಡುತ್ತಿರುವ ಸ್ಥಳಕ್ಕೆವರ್ಗಾವಣೆ ಮಾಡಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು.ಮೋಹನನ ಇಷ್ಟದಂತೆ ಮದುವೆಯು ಸರಳವಾಗಿ ಮತ್ತುಸಾಂಗವಾಗಿ ನೆರವೇರಿತು. ಗಂಡನ ಮನೆಗೆ ಹೋಗುವ ಹಿಂದಿನ ದಿನ “ಅತ್ತೆ. ನೀನುಯಾಕೆ ನಮ್ಮ ಮನೆಗೆ ಬರಬಾರದು. ನಿನ್ನ ಸರ್ವಿಸ್ ಎಲ್ಲಇದೇ ಊರಲ್ಲಿ ಕಳೆದಿದೀಯಾ. ನಾವಿರೋ ಜಾಗದಲ್ಲೇವರ್ಗಾವಣೆ ಮಾಡಿಸಿದರಾಯ್ತು”ಎಂದಳು. “ಏ ಹುಡುಗಿ ಸುಮ್ಮನಿರೆ. ಗಂಡನ ಜೊತೆ ಆರಾಮಾಗಿರು. ಎಲ್ಲದಕ್ಕುತಲೆ ಕೆಡಿಸಿಕೊಳ್ಳ ಬೇಡ” ” ಹೋಗತ್ತೆ ನೀನು ಯಾವಾಗ್ಲು ಹಿಂಗೆ ” ಅಲ್ಲಿಗೆ ಬಂದ ಮಂಗಳ ” ಅತ್ತೆ ಎಲ್ಲೂ ಹೋಗಲ್ಲ ಹೋಗ್ತಿರೋಳು ನೀನು ಗಂಡನ ಮನೆಗೆ “ಆಗ ಮೂವರು ನಕ್ಕರು. ವಾಣಿ ಗಂಡನ ಮನೆಗೆ ಹೋದ ಮೇಲೆ ಇಡೀ ಮನೆಯೇ ಬಿಕೋ ಅನ್ನಿಸತೊಡಗಿತು.ಚುರುಕು ಮಾತುಗಳನ್ನಾಡುತ್ತಪ್ರಶ್ನಿಸುತ್ತ ಸದಾ ಚಟುವಟಿಕೆಯಿಂದಿರುತ್ತಿದ್ದ ವಾಣಿಯು ಮನೆಯ ಕೇಂದ್ರ ಬಿಂದುವಾಗಿದ್ದಳು.ಮಲಗುವಾಗ ನಿದ್ದೆಬರುವ ತನಕ ತನ್ನ ಗೆಳತಿಯರ, ವಿದ್ಯಾರ್ಥಿಗಳ ಹಾಗೂಸಹೋದ್ಯೋಗಿಗಳ ಕುರಿತು ಮಾತನಾಡುತ್ತಿದ್ದ ವಾಣಿಯ ಒಡನಾಟವಿಲ್ಲದೆ ಶಾರದಳಿಗೆ ಬೇಸರವಾಗುತ್ತಿತ್ತು. ಈಗ ಶಾರದ ಹತ್ತನೆ ತರಗತಿಯಲ್ಲಿ ಓದಿನಲ್ಲಿ ಹಿಂದುಳಿದಿರುವ ಮಕ್ಕಳಿಗಾಗಿ ಶಾಲೆ ಮುಗಿದ ಮೇಲೆ ಒಂದು ಗಂಟೆ ಪಾಠಮಾಡಿ ಮನೆಗೆ ಬರುತ್ತಿದ್ದಳು.ಮೊದಲಿಗಿಂತ ಹೆಚ್ಚಾಗಿಯೆ ಅವಳನ್ನು ಒಂಟಿತನ ಕಾಡತೊಡಗಿತ್ತು.ಅವಳು ನಿವೃತ್ತಿಹೊಂದಲು ಇನ್ನು ಒಂದು ವರ್ಷವಷ್ಟೆ ಬಾಕಿ. ಈ ನಡುವೆ ವಾಣಿ ತಾನು ತಾಯಿಯಾಗಲಿರುವ ಶುಭ ಸಮಾಚಾರತಿಳಿಸಿದಳು. ಒಂದು ವಾರ ರಜೆ ಹಾಕಿ ತವರಿಗೆ ಬಂದಳು.ಬಂದ ದಿನವೆ ರಾತ್ರಿ ಮಲಗುವಾಗ “ಅತ್ತೆ, ನೀನು ರಿಟೈರ್ಆದ ಮೇಲೆ ನಮ್ಮ ಮನೆಗೆ ಬಂದು ಬಿಡು. ನಮ್ಮ ಮನೆಗೆಹಿರಿಯಳಾಗಿ ನೀನಿರುವುದು ನಮ್ಮಿಬ್ರುಗೂ’ಇಷ್ಟ’ ಎಂದುಹೇಳಿದಾಗ ಆ ಪ್ರಸ್ತಾಪ ಶಾರದಳಿಗೆ ಇಷ್ಟವಾದರೂ ಸಹಅದನ್ನು ತೋರಗೊಡದೆ ನೋಡೋಣ”ಎಂದಳು.ವಾರದನಂತರ ವಾಣಿ ಊರಿಗೆ ಹೊರಟಳು.ಅಂದು ಶಾರದಾಳಿಗೆ ತುಂಬ ತಲೆನೋವಿದ್ದುದರ ಕಾರಣಮಧ್ಯಾಹ್ನ ಶಾಲೆಗೆ ರಜೆ ಹಾಕಿ ಮನೆಗೆ ಬಂದವಳೇ ಕಾಫಿಕುಡಿದು ಮಲಗಿದಳು. ವರುಣ್ ಅಂಗಡಿ ಕೆಲಸದ ಮೇಲೆ ಬೆಂಗಳೂರಿಗೆ ಹೋಗಿದ್ದ.ಸಂಜೆಯ ವೇಳೆಗೆ ಜ್ವರ ಸಹಾ ಬಂದಿತು.ಮಂಜುನಾಥನಿಗೆ ಫೋನ್ ಮಾಡಿ ಬೇಕಾಗಿದ್ದ ಮಾತ್ರೆಗಳನ್ನು ತರಿಸಿಕೊಂಡಳು. ರಾತ್ರಿ ಹಾಲು ಕುಡಿದುಮಾತ್ರೆ ನುಂಗಿದ್ದಷ್ಟೆ ಗೊತ್ತು.ಚೆನ್ನಾಗಿ ಬೆವರು ಬಂದು ಜ್ವರಬಿಟ್ಟಿತ್ತು. ಒಂದು ಹೊತ್ತಿನಲ್ಲಿ ಎಚ್ಚರವಾಗಿ ಟಾಯ್ಲೆಟ್ ಗೆಹೋಗಲು ಎದ್ದು ನಿಂತಾಗ ರೂಮಿನಿಂದ ಮಂಜುನಾಥಮಂಗಳ ಮಾತನಾಡುವ ಧ್ವನಿ ಕೇಳಿಸಿತು.‘ಶಾರದಕ್ಕನ್ನ ವಾಣಿ ಕರ್ಕೊಂಡು ಹೋಗ್ತಾಳಂತೆ. ನೀನೂಅತ್ತೆಯನ್ನು ಒಪ್ಪಿಸಮ್ಮ ಅಂತ ನನಗು ಹೇಳಿ ಹೋದಳು” ಎಂದಳು. ಆಗ ಮಂಜು ‘ ಅಕ್ಕ ಎಲ್ಲೂ ಹೋಗೋದಿಲ್ಲ ನಮ್ಮನೆಯಲ್ಲೆ ಇರಬೇಕು’‘ನಮ್ಮ ವಾಣಿ ಮನೆ ಏನು ಬೇರೆಯವರ ಮನೆ ಅಲ್ಲವಲ್ಲ ಅದ್ಯಾಕೆ ಹಿಂಗೆ ಮಾತಾಡ್ತೀರಾ.ಅಕ್ಕನಿಗೆ ವಾಣಿ ಮಗಳಿದ್ದಹಾಗೆ. ಅವಳನ್ನು ಕಂಡ್ರೆ ಜೀವಬಿಡ್ತಾರೆ’“ಇಷ್ಟ ಇರೋದಕ್ಕೆ ಹೇಳ್ತೀರೋದು. ಅಕ್ಕ ಅವ್ರು ಮನೇಲಿಇದ್ಕಂಡು ಈ ಮನೆ ಎಲ್ಲ ಅವಳ ಹೆಸರಿಗೆ ಬರೆದು ಬಿಟ್ರೆಆಮೇಲೆ ಏನ್ಮಾಡ್ತೀಯ. ಅಕ್ಕ ನಮ್ಮ ಮನೆ ಬಿಟ್ಟು ಬೇರೆಕಡೆ ಎಲ್ಲೂ ಹೋಗ್ಬಾರದು’‘ನಂ ಶಾರದಕ್ಕ ಯಾವತ್ತೂ ಹಂಗ್ಮಾಡಕ್ಕೆ ಸಾಧ್ಯನೇ ಇಲ್ಲ ಅಕ್ಕನ ಬುದ್ಧಿ ನನಗೆ ಚೆನ್ನಾಗಿ ಗೊತ್ತು.ಸುಮ್ಮನೆ ಇಲ್ಲದ್ದೆಲ್ಲ ಹೇಳಬೇಡ್ರಿ.’‘ನಮ್ಮಕ್ಕ ನಮ್ಮನೆಗಿರ್ತಾಳೆ ಅಷ್ಟೆ. ಮುಂದಕ್ಕೆ ಮಾತ್ಬೇಡ’ಒಂದು ನಿಮಿಷ ನಿಂತ ನೆಲವೇ ಕುಸಿದ ಅನುಭವ.ಹಾಗೇಕತ್ತಲಲ್ಲೇ ಹಾಸಿಗೆ ಮೇಲೆ ಕೂತಳು. ಸಾವರಿಸಿಕೊಳ್ಳುತ್ತಲೆಎದ್ದು ಲೈಟ್ ಹಾಕಿದಳು. ಎದ್ದು ಬಂದ ಮಂಗಳ ” ಜ್ವರಕಡಿಮೆಯಾಯ್ತೇನಕ್ಕ’‘ಹೂಂ ಕಣೆ ಮಾತ್ರೆ ನುಂಗಿದ ಮಲಗಿದ್ದಷ್ಟೇಗೊತ್ತು. ಈಗಎಚ್ಚರ ಆಯ್ತು. ನೀನ್ಯಾಕೆ ಎದ್ದು ಬಂದೆ.ಹೋಗಿ ಮಲಗು’ಲೈಟ್ ಆಫ್ ಮಾಡಿ ಮಲಗಲು ಎಂದೂ ಇಲ್ಲದ ಅನಾಥಭಾವ ಆವರಿಸಿ ವರ್ತುಲದಲ್ಲಿ ಒಂಟಿಯಾಗಿ ಸಿಲುಕಿದಂತೆಹೊರಬರಲಾಗದ ಅನುಭವ. ಮಂಜುನಾಥನಿಗ್ಯಾಕೆ ಈ ಅನುಮಾನ ಬಂತು. ವಾಣಿ ಮೇಲೆ ನನಗೆ ಪ್ರೀತಿಯಿದ್ದರುಸಹ ಮಂಜುವನ್ನು ಬಿಟ್ಟು ಬಿಡುತ್ತೀನಾ? ಮಂಗಳನಿಗೇಅರ್ಥವಾಗಿದ್ದು ತನ್ನ ತಮ್ಮನಿಗೇಕೆ ಅರ್ಥವಾಗಲಿಲ್ಲ.ಎಲ್ಲಸಂಬಂಧಗಳು ಹಣ,ಆಸ್ತಿಯ ಮೇಲೆ ನಿಂತಿದ್ಯಾ? ನನಗೆತಮ್ಮನನ್ನು ಬಿಟ್ಟರೆ ಇನ್ಯಾರಿದ್ದಾರೆ? ತನಗರಿವಿಲ್ಲದೆಯೇಒಂದು ರೀತಿ ಬಿಡಿಸಿಕೊಳ್ಳಲಾರದ ವ್ಯೂಹದಲ್ಲಿ ಸಿಲುಕಿಬಿಟ್ಟೆನಾ? ಇದನ್ನು ಬಿಟ್ಟರೆ ಗತ್ಯಂತರವಿಲ್ಲದಾಗಿದೆ.ತಾನು ಮಂಜುನಾಥನ ಜಾಗದಲ್ಲಿ ನಿಂತು ನೋಡಿದರೂ ಅವನಮಾತುಗಳಿಗೆ ಸಮರ್ಥನೆ ದೊರಕುತ್ತಿಲ್ಲ.ಅವನಿಗಿರುವ ಕಡಿಮೆ ಆದಾಯ ಹೀಗೆ ಮಾತನಾಡಿಸಿತ? ಜೀವನವೆಲ್ಲಾಒಡಹುಟ್ಟಿದ ತಮ್ಮನೊಂದಿಗೆ ಬದುಕಿ ಅವನನ್ನು ಬಿಟ್ಟು ಬೇರೆಯವರಿಗೇ ಮನೆಯನ್ನು ಕೊಡಲು ಹೇಗೆ ಸಾಧ್ಯ.ವಾಣಿಯ ಮೇಲೆ ನನಗೆ ಹೆಚ್ಚು ಪ್ರೀತಿಯಿರುವುದರಿಂದ ಅವಳಿಗೂ ಸಹಾ ನನ್ನ ದುಡಿಮೆಯ ಪಾಲಲ್ಲಿ ಒಂದಿಷ್ಟು ಕೊಟ್ಟರೆ ಏನು ತಪ್ಪು? ಅವಳೂ ಅವನ ಮಗಳಲ್ಲವೇ ?ಅಕ್ಕನದೆಲ್ಲಾ ತನ್ನ ಮಗನಿಗೆ ಮಾತ್ರ ಸೇರಬೇಕೆಂಬ ಆಸೆಇರಬಹುದೇ? ಅವನ ಜಾಗದಲ್ಲಿ ನಿಂತು ನೋಡಿದಾಗಅದು ಸರಿಯಿರಬಹುದು. ಒಂದು ದಿನವಾದರೂ ನನಗೆಅಗೌರವ ತೋರದೆ ಮನೆಯ ಹಿರಿಯಳೆಂಬ ಸ್ಥಾನವನ್ನುಕೊಟ್ಟಿಲ್ಲವೇ ? ನನಗಾದರೂ ತಮ್ಮನ ಕುಟುಂಬ ಬಿಟ್ಟರೆ ಇನ್ಯಾರಿದ್ದಾರೆ ? ಈ ಸಮಸ್ಯೆಗೆ ಪರಿಹಾರವೇನು ಎಂದುಚಿಂತಿಸುತ್ತಲೇ ಶಾರದಳಿಗೆ ಯಾವ ಮಾಯದಲ್ಲಿ ನಿದ್ದೆ ಆವರಿಸಿತೆಂಬುದೆ ಅರಿವಾಗಿಲ್ಲ.‘ಅಕ್ಕ,ಅಕ್ಕ”ಎನ್ನುತ್ತ ಮಂಗಳ ಮುಟ್ಟಿದಾಗಲೇ ಎಚ್ಚರ‘ಯಾಕಕ್ಕ,ರಾತ್ರಿ ನಿದ್ದೆ ಬರಲಿಲ್ವೆ’‘ಚೆನ್ನಾಗೇ ನಿದ್ದೆ ಬಂತು” ಎಂದು ಸುಳ್ಳು ಹೇಳಿದಳು.‘ಶಾರದಕ್ಕ ಇವತ್ತು ರಜಾ ಹಾಕಿ ರೆಸ್ಟ್ ತಗೊಳ್ರಿ’‘ರಜಾ ಹಾಕುವಂತದ್ದೇನೂ ಆಗಿಲ್ಲ. ಹೋಗಿ ಬರ್ತೀನಿ’. ಕಾಫಿ ಕುಡಿದು ಸ್ನಾನಕ್ಕೆ ಹೋದಳು. ತನಗೆ ಗಂಡ ಹೆಂಡತಿಮಾತಾಡಿದ ಮಾತುಗಳು ಕೇಳಿಸಿವೆಯೆಂಬುದು ಅವರಿಗೆಗೊತ್ತಾಗದಂತೆ ಎಚ್ಚರ ವಹಿಸಬೇಕೆಂದು ಕೊಂಡಳು. ಎಂದಿನಂತೆ ಮಾಮೂಲಿಯಾಗಿದ್ದು ಶಾಲೆಗೆ ಹೊರಟಳು.ಸ್ಟಾಫ್ ರೂಂಗೆ ಬಂದು ತನ್ನ ಜಾಗದಲ್ಲಿ ಕೂತಾಗ ಪಕ್ಕದ ಚೇರ್ ನಲ್ಲಿದ್ದ ಗೀತಾ ಮೇಡಂ ‘ ಶಾರದ, ಮಲ್ಲಪ್ಪ ಸರ್ ಗೆಹಾರ್ಟ್ ಅಟ್ಯಾಕ್ ಆಗಿ ದಾವಣಗೆರೆಯ ಹಾಸ್ಪಿಟಲ್ ಗೆಸೇರಿಸಿದ್ದಾರೆ. ಐಸಿಯು ನಲ್ಲಿದಾರಂತೆ ‘” ಹೌದಾ,ಎಂಥಾ ಕೆಲ್ಸ ಆಯ್ತು.ಮಗಳಿಗೆ ಮದುವೆ ಮಾಡಬೇಕೆಂದು ಗಂಡು ನೋಡುತ್ತಿದ್ದರು ಅಲ್ವಾ”.ಎಲ್ಲರಲ್ಲೂ ಅದೇ ಮಾತು. ಸೆಕೆಂಡ್ ಪಿರಿಯಡ್ ಮುಗಿಸಿಬಂದಾಗ ಸಾವಿನ ಸುದ್ದಿ ಕೇಳಿ ಬಂತು. ಶಾಲಾ ಮಕ್ಕಳನ್ನು ಸೇರಿಸಿ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಿಶಾಲೆಗೆ ರಜೆ ಘೋಷಿಸಲಾಯಿತು. ಮನೆಗೆ ಬಂದು ಅದೇಬೇಸರದಲ್ಲಿ ಏನನ್ನೋ ಯೋಚಿಸುತ್ತಾ ಸುಮ್ಮನೆ ಮಲಗಿ ಬಿಟ್ಟಳು. ಎದ್ದ ಮೇಲೆ ನಿರಾಳವಾಗಿ ಟಿ.ವಿ.ಯಲ್ಲಿ ಫಿಲಂನೋಡುತ್ತಾ ಕುಳಿತಳು.ಊಟದ ನಂತರ ಮಂಜುನಾಥಹಾಗೂ ಮಂಗಳ ಇಬ್ಬರನ್ನು ಕರೆದಳು.‘ಮಂಜು,ನಾಳೆ ಸಂಜೆ ಲಾಯರ್ ನ ಮನೆಗೆ ಕರ್ಕೊಂಡುಬಾ. ನಾನು ವಿಲ್ ಬರೆಸಬೇಕು’‘ಅದೇನಕ್ಕ ಇದ್ದಕ್ಕಿದ್ದಂತೆ’ ಎಂದು ಮಂಜು ಹೆಂಡತಿಯ ಮುಖ ನೋಡುತ್ತ. ರಾತ್ರಿ ಆಡಿದ ಮಾತುಗಳನ್ನು ಕೇಳಿಸಿಕೊಂಡಳಾ ಎಂಬಂತೆ.“ಇಲ್ಲ ಕಣೋ ನನಗ್ಯಾಕೋ ಮಧ್ಯಾಹ್ನದಿಂದ ಮನಸ್ಸಿಗೆಬಂದಿದೆ. ನೋಡು ಮಲ್ಲಪ್ಪ ಮೇಷ್ಟ್ರುಗೆ ಹೆಂಗಾಯ್ತು. ಈ ಕೆಲಸ ಆಗ್ಲೇಬೇಕು”‘ ನೋಡು ಮಂಜು, ನನ್ನ ಮನಸ್ನಲ್ಲಿರೋದನ್ನ ಹೇಳ್ತೀನಿ.ನನ್ನ ನಂತರ ಈ ಮನೆ ನಿನಗೆ ಸೇರುತ್ತೆ. ಮಂಗಳ , ವಾಣಿ ಇಬ್ಬರೂ ನನ್ನ ಒಡವೆಗಳನ್ನು ಸಮನಾಗಿ ಹಂಚಿಕೊಳ್ಳಲಿನನ್ನ ಹೆಸರಿನಲ್ಲಿರೋ ಹಣವನ್ನು ವಾಣಿ ಮತ್ತು ವರುಣ್ ಇಬ್ಬರೂ ಸಮನಾಗಿ ಹಂಚಿಕೊಳ್ಳಲಿ. ಏನಾದರೂ ನೀನುಹೇಳದಿದ್ದರೆ ಹೇಳು’ ಎಂದು ಹೇಳಿದಾಗ ಒಂದು ರೀತಿಯಸಮಾಧಾನ ಭಾವದಿಂದ ‘ ನಿನ್ನಿಷ್ಟ. ನಿನಗೆ ತಿಳಿದ ಹಾಗೆಮಾಡಕ್ಕ. ನನ್ನದೇನೂ ಇಲ್ಲ’‘ಸರಿ, ನನಗೆ ನಿದ್ದೆ ಬರ್ತಿದೆ. ಮಲಗಬೇಕು ‘ಎನ್ನುತ್ತ ರೂಂಕಡೆ ಹೊರಟಳು.

Read Post »

ಇತರೆ

ಡಾ.ಸುಜಾತಾ.ಚಲವಾದಿಯವರ ಪ್ರಬಂಧ

ನಾನು ಅಲ್ಲಿಂದ ಕಾಲು ಕಿತ್ತೆ. ಮಳೆಹನಿ ಹಾಗೆ ಜಿನುಗುತ್ತಿತ್ತು ನನ್ನ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳ ಸುರಿಮಳೆ ಪ್ರಾರಂಭವಾಯಿತು. ಮಳೆ ನಿಂತಿತು ಪ್ರಶ್ನೆಗಳು ಮಾತ್ರ ನಿಲ್ಲಲಿಲ್ಲ. ಮತ್ತೆ ಬುದ್ದರ ಕಡೆ ಧ್ಯಾನಸ್ಥೆಯಂತೆ ಮೂಕಳಾದೆ

ಡಾ.ಸುಜಾತಾ.ಚಲವಾದಿಯವರ ಪ್ರಬಂಧ Read Post »

ಕಾವ್ಯಯಾನ

ನನ್ನ ಗುರುಕುಲ

ಕಾವ್ಯಯಾನ ನನ್ನ ಗುರುಕುಲ ನೇತ್ರಾ ಪ್ರಕಾಶ್ ಹಲಗೇರಿ ಹುಡಿ ಮಣ್ಣಿನ ಹಾದಿ ಗೊರ್ಪಿಕಲ್ಲು, ಮುಳ್ಳಿನ ಮಿಶ್ರಣ,ಮಳೆರಾಯ ಧರೆಗಿಳಿದರೆಕೆಸರು ಮುದ್ದೆ ರಾಡಿ ರಾಡಿಸುತ್ತ ಗದ್ದೆಯ….ನೋಟಕಿರು – ಕಾಲುವೆಗಳ ಜುಳು – ಜುಳು ಪಾಟಿ ಚೀಲ ಹೊತ್ತುಓಡಿದ್ದೇ ಓಡಿದ್ದುಯಾವುದರ ಪರಿವೆ ಇಲ್ಲದೆರಕ್ತ ಮಡುಗಟ್ಟಿದ ಬರೀ ಪಾದದಲ್ಲಿಎಲ್ಲಾ ಮೇಷ್ಟ್ರುಗಳ ಸ್ಪೆಷಲ್ ಕ್ಲಾಸಿಗೆ ಉಸಿರುಗಟ್ಟಿಕನಸಿನ ಕಣ್ಣಿನಲ್ಲಿ… ಸೂರ್ಯಚಂದ್ರರ ಕೋಟಿ ಜೀವ ಜಂತುಗಳು ಆಶ್ರಯ ತಾಣಮಧ್ಯೆ ನಮ್ಮೆಲ್ಲರ ಗುರುಕುಲಬೋಧಿ ವೃಕ್ಷ – ಕಲ್ಪವೃಕ್ಷದ ಬದುಕಿನ ಅಡಿಪಾಯವೇ ಸರಿ ನಮ್ಮೀ ಗೋಪುರದ ಶಿಖರ…. ತಿದ್ದಿ-ತೀಡಿ ಜುಲಪಿ ಏಟಿಗೆ ಬಾಗಿ ಬೆಂಡಾಗಿ ಕಲಿತದ್ದೆ ಕಲಿತದ್ದು ಇಂದು ನಮ್ಮೆಲ್ಲರ ರೂಪಕ ಪ್ರತಿಮೆಗಳ ಪ್ರತಿಭೆಗಳ ಆಗಿದ್ದೇವೆ….. ಮಧ್ಯಾಹ್ನದ ವೇಳೆ ಡಬ್ಬಿಯ ರೊಟ್ಟಿ ಪಲ್ಯ ಅನ್ನ ಮೊಸರು ಉಪಹಾರ ವಂಗೆಮರ ದಡಿಯ ಸವಿಯಲುಕ್ಷಣಗಳ ಎಣಿಕೆ ಹಸಿವಿನ ತಡವರಿಕೆ ವಾಲಿಬಾಲ್ ಕೊಕ್ಕೋ ಬ್ಯಾಡ್ಮಿಂಟನ್ ಹೊಡೆದಾಟ ಒಡನಾಟ ನಮ್ಮೆಲ್ಲರ ನೆಚ್ಚಿನ ಕೈತೋಟದ ಸ್ವಚ್ಛತೆ ಆಗಾಗ ಎರಡು ದಶಕಗಳು ಕಳೆದರೂ ನಾವೆಲ್ಲರೂ ಬೆಳೆದರು ನಮ್ಮೆಲ್ಲರ ಆಪ್ತತೆ ಸ್ನೇಹ ಸ್ಪಂದನ ಈ ಬಂಧನ ಉಳಿದಿದೆ ಮುಗಿಯದಬೆಸುಗೆಯ ಕೊಂಡಿ ಭಾವನೆಗಳ ಬಂಧವಾಗಿ ಬೆಸೆದಿದೆಈ ಗುರುಕುಲ ಸಾಧನೆಯ ಮೆಟ್ಟಿಲುಗಳನ್ನು ಮುಟ್ಟಿಸಿದಜ್ಞಾನ ಮಂದಿರ ಈ ಗುರುಕುಲ

ನನ್ನ ಗುರುಕುಲ Read Post »

ಪುಸ್ತಕ ಸಂಗಾತಿ

ಮಾನವೀಯತೆ, ಪ್ರೀತಿ-ಪ್ರೇಮ ಹನಿಸುವ ಒಗರು ಕವನಗಳು

ಪುಸ್ತಕಸಂಗಾತಿ ಮಾನವೀಯತೆ, ಪ್ರೀತಿ-ಪ್ರೇಮ ಹನಿಸುವ ಒಗರು ಕವನಗಳು ಡಾ. ರಮೇಶ್ ಕತ್ತಿ ಬಾಲ್ಯದಿಂದಲೂ ಅಳವಡಿಸಿಕೊಂಡಿರುವ ಅಧ್ಯಯನ ಶಿಸ್ತು, ಸಾಹಿತ್ಯ-ಸಾಂಸ್ಕೃತಿಕ ಕೂಟಗಳ ಒಡನೆ ನಡೆಸಿದ ಅನುಸಂಧಾನಗಳು ಈ ಕೃತಿಗೆ ಮೂಲ ಶ್ರೋತವಾಗಿವೆ.      ಈ ಕವನ ಸಂಕಲನದಲ್ಲಿ 27 ಕವನಗಳಿವೆ. ಏನನ್ನು ಹೇಳುವುದಿಲ್ಲ, ಕಲ್ಯಾಣ ಕ್ರಾಂತಿ, ಏನೋ ಹೇಳುವುದಿದೆ, ನೋಟ, ಕಾಡು, ಕುಸುಮ, ಹೂ- ಮುತ್ತು, ಉಪ್ಪಿನ, ಚಿತ್ರ ಪರದೆ, ಕಾಣದ ಚಂದ್ರ, ಹಕ್ಕು, ಮೌನ ಪ್ರಶ್ನೆ, ಗೀಗೀ ಗಾರುಡಿಗನಿಗೆ,ನಲವತ್ತಕ್ಕೆ ಚಾಲಿಸು, ಹುಡುಗಿಯರ ಗುಂಪಿನೊಳಗೆ, ಮಗಳು ಹುಟ್ಟಿದಳು, ಮಹಾಮಳೆಗೆ ನಲುಗಿದವರು, ಬಯಸಲಾರೆ, ಮನೆಯನೆಂದು ಕಟ್ಟದಿರುಯ ಮತ್ತು ಇನ್ನಷ್ಟು ಹನಿಗವನಗಳು ಸಂಕಲನದಲ್ಲಿ ಸಂಗ್ರಹಗೊಂಡಿವೆ.          ಇಂದಿನ ಶಿಕ್ಷಿತ ಜಗತ್ತಿನ ಜನರ ಆತ್ಮವಂಚನೆಯನ್ನು ವಸ್ತುವಾಗಿರಿಸಿಕೊಂಡು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಮತ್ತು ಸಾಮಾಜಿಕ ಅಧೋಗತಿಗೆ ಸಂಕೇತವಾಗಿದೆ ಕವಿತೆ.    ಮೆತ್ತನೆಯ ಸಿಹಿ ಮಾತುಗಳು ನಿತ್ಯಉಗಳುವ    ವಾಗ್ಮಿಗಳ ಮಧ್ಯ    ಕನಿಕರದಿ ಮಾತನಾಡುವವರ ಮಧ್ಯೆ    ತನ್ನ ಇಷ್ಟಕ್ಕೆ ಮಾತು ಕೃತಿ ಎಲ್ಲ ವಿರಬೇಕು    ಎನ್ನುವವರ ಮಧ್ಯೆ    ಮಾತು ಕರಗುತ್ತದೆ.                            (ಏನನ್ನು ಹೇಳುವುದಿಲ್ಲ) ಮೃದು ನುಡಿಗಳು ಮನ ನೋಯಿಸದೆ ಇರಲು, ಎದುರಿಗೆ ಇರುವವರನ್ನು ಸಂತೋಷಗೊಳಿಸಲು ಮಾತ್ರ ಬಳಕೆಯಾಗುತ್ತಿರುವುದು ಮೇಲಿನ ಕವನದಲ್ಲಿದೆ. ಹಾಗೆಯೇ ಮಾತಿನ ದುರುಪಯೋಗ ಆಗುತ್ತಿರುವ ಬಗ್ಗೆ ಕವಿಗಿರುವ ಕಳವಳವನ್ನು ಹೇಳುತ್ತವೆ ಈ ಸಾಲುಗಳು.    ………….. ಎಲ್ಲವನ್ನೂ ಗುತ್ತಿಗೆ    ಪಡೆದವರಲ್ಲಿ ಮಾತು–ಕೃತಿ ಎರಡು ವ್ಯರ್ಥ                              (ಏನನ್ನು ಹೇಳುವುದಿಲ್ಲ)       ಕವಿ ನುಡಿಯ ನಯವಂಚನೆ ಆಗುತ್ತಿರುವ ಬಗ್ಗೆ ಎಷ್ಟು ಸೂಕ್ಷ್ಮಸಂವೇದಿ ಆಗಿದ್ದಾನೆ ಎಂಬುದಕ್ಕೆ ಮೇಲಿನ ಎರಡು ಸಾಲುಗಳು ಸಾಕ್ಷಿ.    ಸುಖವನ ರಿಸಿದ ಬೆಳಕು ಕವಿತೆಯ ಸಾಲುಗಳಲ್ಲಿ          “ಬೆಳಕೆಂಬುದು ಸುಖದ ಸಂಗತಿ            ಈ ಸುಖದ ಸೆಲೆಗೆ ಜೀತ ವಾದವರು“                          (ಸುಖವನ ರಿಸಿದ ಬೆಳಕು) ಎಂಬ ಪ್ರಭಾವಶಾಲಿ ಸಾಲುಗಳ ಮೂಲಕ ಕವಿಯ ಆಂತರ್ಯ ಅಭಿವ್ಯಕ್ತಗೊಳ್ಳುತ್ತದೆ.        ಶರಣ ಚಳುವಳಿಯ ಋಜುತ್ವ ಕ್ಕೆ ಜಗದೇವ ಮಲ್ಲಿಬೊಮ್ಮಯ್ಯರು ಸಾಕ್ಷಿಯಾಗುವ ಸನ್ನಿವೇಶದ ವಸ್ತು ಹೊಂದಿರುವ ಈ ಕವನದ ಸಾಲುಗಳು ಕಲ್ಯಾಣ ಕ್ರಾಂತಿಯ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತವೆ.           ಎಲ್ಲಿದ್ದರೋ ಶರಣ ಭಟರು           ಜಗದೇವ ಮಲ್ಲಿಬೊಮ್ಮಯ್ಯರು           ಬಿಜ್ಜಳನ ಠಾವ ಶೋಧಿಸಿ          ಶರಣರ ಅವಧಿಯ          ಪ್ರತಿಕಾರವನ್ನು ಬಯಸಿ ಬಿಮ್ಮನೆ          ಶರಣರು ಬಂದರು.          ಬಿಜ್ಜಳನ ವಧೆಯ ಪವಡಿಸಿ ಮೆಲ್ಲಗೆ          ದೂರ ಸರಿದರು.                           (ಕಲ್ಯಾಣ ಕ್ರಾಂತಿ).          ಒಂದೆಡೆ ಏನನ್ನು ಹೇಳುವುದಿಲ್ಲ ಎನ್ನುತ್ತಲೇ ಕವಿ ನೆಲದ ನಾಡಿನ ನಾಗರಿಕರಾಗಿ ಮಕ್ಕಳಿಗೆ ಹೀಗೆ ಹೇಳುತ್ತಾರೆ.        “ಮಿತ್ಯ- ಸತ್ಯವಾಗುವ ಸತ್ಯ-ಮಿಥ್ಯವಾಗುವ ಬಗೆಯನ್ನು ಮಕ್ಕಳಿಗಾಗಿ ಬರೆದ “ಏನೋ ಹೇಳುವುದಿದೆ” ಕವನದಲ್ಲಿ ವಿವರಿಸುತ್ತಾರೆ.         ಇಲ್ಲಿ ಪ್ರಸ್ತಾಪಿಸಲೆಬೇಕಾದ ಕವಿ-ಸಹೃದಯ, ವಿಮರ್ಶಕ ಎಲ್ಲರಿಗೂ ಕ್ಷಣಹೊತ್ತು ಹಿಡಿದು ನಿಲ್ಲಿಸುವ ಈ ಕವನದ ಗಮನಾರ್ಹ ಸಾಲುಗಳು ಮುಂದಿವೆ. ಸಾವಿರದ ಗೀಗೀ ಪದಗಳ ಮೋಡಿಕಾರ ಕಡಣಿ   ಕಲ್ಲಪ್ಪನ ಕುರಿತು ರಚಿಸಲಾದ ಈ ಕವನ ಓದಿದವರಿಗೆ, ಕಲ್ಲಪ್ಪ ಕವಿಯ ಪರಿಚಯಸ್ಥರಿಗೆ ಮತ್ತು ಸಹೃದಯರಿಗೆ ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ತನ್ನ ಊರಿನ ಅಭಿಜಾತ ಜಾನಪದ ಕವಿಯ ಕುರಿತು ಲೇಖಕನೊಬ್ಬನಿಗೆ ಇರುವ ಅಭಿಮಾನದ ಹೊಳೆ ಹರಿದು ಕಣ್ಣಂಚಿನಲ್ಲಿ ನೀರೂರಿಸಿಕೊಂಡು ಬರೆದಿರಬಹುದಾದ ಈ ಕವನ ಓದುಗನ ಮನೋಸಾಗರದಲ್ಲಿ ಸಂಚಲನ ಮೂಡಿಸುತ್ತದೆ. “ಪದಗಳ ಗಂಟುಕಟ್ಟಿ, ಗಂಟುಗಳ ರಾಶಿ ಇಟ್ಟವ,   ಸಾವಿರ ಪದಕಟ್ಟಿ ಹಾಡಿದವ ಸಾವಿರದ ಈ   ಪದಗಾರ“                                   (ಗೀ ಗೀ ಗಾರುಡಿಗನಿಗೆ) ಎಂದು ಸಂಬೋಧಿಸಿ ಈ ಜಾನಪದ ಜಂಗಮನಿಗೆ ಅಮರನಾಗಿಸುವ ಪ್ರಯತ್ನ ಮಾಡಿದ್ದಾರೆ. ಪದಗಳ ಸರದಾರ ಕಡಣಿ ಕಲ್ಲಪ್ಪನ ಕುರಿತು ರಚಿಸಲಾದ ಈ ಕವನ ಒಂದು ಬಯೋಪಿಕ್ ನಂತೆ ಭಾಸವಾಗುತ್ತದೆ. ಹೀಗೆ ಹೇಳಿ ಈ ಜಾನಪದ ಜಂಗಮನಿಗೆ ಸಾವು ಇಲ್ಲ ಎಂಬ ಸಂದೇಶ ಕೊಡಲು ಯತ್ನಿಸುತ್ತಾರೆ ಕವಿ.       ಮನೆಯ ಹಿರಿಯಜ್ಜಿಯಿoದಾದಿಯಾಗಿ ಅಪ್ಪ-ಅವ್ವ ಅಷ್ಟೇಕೆ ಅರ್ಧಾಂಗಿ ಕೂಡ ತಾನು ಹೆತ್ತ ಹೆಣ್ಣು ಮಗುವನ್ನು ಕಂಡು ಮುಳು ಮುಳು ಅಳುತ್ತಿದ್ದ ಅಂದಿನ ನೆನಪು ಮಾಡಿಕೊಳ್ಳುತ್ತಾರೆ ಕವಿ. ಆದರೆ ಈಗ ಅದೇ ಮಗಳು ಮನೆಗೆ ನೆಮ್ಮದಿ ತಂದಿದ್ದಾಳೆ.    ಯಾರಿಗೂ ಕಾಡದ ತನ್ನವರಿಗೆ ಪ್ರೀತಿ ಹಂಚಿದ    ನೋಟದಲಿ, ಆಟದಲಿ ಮನಗೆದ್ದು ಸೈ ಎನಿಸಿ    ಸಂಭ್ರಮದಿ ಮನೆಮಾಡಿದ ಮಗಳು.                                      (ಮಗಳು ಹುಟ್ಟಿದಳು)     ಹೆಣ್ಣಿನ ಕುರಿತು ತನ್ನ ಪ್ರಜ್ಞೆ ಸಾಂಪ್ರದಾಯಿಕ ವಲ್ಲ,ಎಂಬುದನ್ನು ಕವಿ ಮೇಲಿನ ಸಾಲುಗಳಲ್ಲಿ ದಾಖಲಿಸುತ್ತಾರೆ.       ತನ್ನ ಕವಿತೆ ಎಂಥದ್ದು? ಎಂಬುದನ್ನು ಕವಿ ಹೀಗೆ ವಿವರಿಸುತ್ತಾರೆ.       ಬಯಲನೆ ಹೂ       ನೀ       ಧರೆಗೆ ಮುತ್ತಿಕ್ಕಿದ       ಧರೆಯ ಹಾಡಿದು                        (ಹೂ–ಮುತ್ತು)     ರಮೇಶ್ ಕತ್ತಿಯವರ “ಏನನ್ನು ಹೇಳುವುದಿಲ್ಲ”ಸಂಕಲನದ ಕವನಗಳ ಕುರಿತು —————-“ಈ ಕವಿತೆಗಳು ಮನುಷ್ಯತ್ವವನ್ನು ಕಳೆದುಕೊಂಡ ಜನರ ಹೃದಯದಲ್ಲಿ ಮಾನವೀಯತೆಯ ಪ್ರೀತಿ-ಪ್ರೇಮದ ಗುಟುಕನ್ನು ಹನಿಸುವ ಗುಣ ಹೊಂದಿವೆ,” ಕಾವ್ಯ ಕಟ್ಟುವ ತಂತ್ರದಲ್ಲಿ ರಮೇಶ್ ಕತ್ತಿಯವರಿಗೆ ಲಭಿಸಿದ ‘ಹದ’ ಅವರ ಲೇಖನಿಯಿಂದ ಇನ್ನಷ್ಟು ಕವನ ಸಂಕಲನ ತರುವ ಭರವಸೆ ಕೊಡುತ್ತದೆ. ಎನ್ನುತ್ತಾರೆ ಮುನ್ನುಡಿ ಬರೆದ ವಿಮರ್ಶಕಿ ಡಾ. ಸಿ. ಸುಜಾತಾ ಅವರು. ಕನ್ನಡ ಸಾರಸ್ವತ ಲೋಕಕ್ಕೆ ಇದುವರೆಗೆ 15 ಕೃತಿಗಳನ್ನು ಕೊಟ್ಟಿರುವ ರಮೇಶ್ ಕತ್ತಿ ಭೀಮಾತೀರದ ಹೆಮ್ಮೆಯ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ ಡಿ.ಎಂ. ನದಾಫ್

ಮಾನವೀಯತೆ, ಪ್ರೀತಿ-ಪ್ರೇಮ ಹನಿಸುವ ಒಗರು ಕವನಗಳು Read Post »

You cannot copy content of this page

Scroll to Top